ಕೃಷಿ ಸಾಲಮನ್ನಾ-ರೈತರ ದುರಾಸೆಯ ಪ್ರಶ್ನೆ ಅಲ್ಲ, ದುರ್ದೆಸೆಯ ಪ್ರಶ್ನೆ

ಸಂಪುಟ: 
11
ಸಂಚಿಕೆ: 
27
date: 
Sunday, 25 June 2017
Image: 

ರೈತರು ಸಾಲಮನ್ನಾ ಕೇಳುವ ‘ಅಭ್ಯಾಸ’ ಮಾಡಿಕೊಂಡಿದ್ದಾರೆ ಎಂದು ತರ್ಕಿಸಲಾಗುತ್ತಿದೆ.  ದೇಶದ ಹಿರಿಯ ಮಂತ್ರಿಗಳೊಬ್ಬರು ಇನ್ನೂ ಮುಂದೆ ಹೋಗಿ (ಕೆಳಗೆ ಇಳಿದು?) ಅದೊಂದು ಫ್ಯಾಶನ್ ಆಗಿದೆ ಎಂದಿದ್ದಾರೆ. ಇವೆಲ್ಲ ದುರ್ಭಾವನೆಯ ಮಾತುಗಳು ಹೌದೋ ಅಲ್ಲವೋ, ದೋಷಪೂರಿತ ಮಾತುಗಳಂತೂ ಖಂಡಿತಾ ಹೌದು. ಈ ಮಾತುಗಳನ್ನಾಡುವವರು ಬಂಪರ್ ಬೆಳೆಗಳು ಬಂದಾಗ ಬೆಲೆ ಕುಸಿತವನ್ನು ತಡೆಯಲು ಸೂಕ್ತ ವ್ಯವಸ್ಥೆಯನ್ನು ಏರ್ಪಡಿಸಬೇಕೆಂದು ಏಕೆ ಒತ್ತಾಯಿಸುವುದಿಲ್ಲ?
 

ನಿಜ ಹೇಳಬೇಕೆಂದರೆ, ನವ-ಉದಾರವಾದಿ ಧೋರಣೆಗಳನ್ನು ಜಾರಿಗೊಳಿಸುವ ಮೊದಲು ದೇಶ ಇಂತಹ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಮಾಡಿತ್ತು. ನವ-ಉದಾರವಾದಿ ವ್ಯವಸ್ಥೆ ಅದನ್ನು ಧ್ವಂಸ ಮಾಡಿದೆ.  ರೈತರು ಸದ್ಯದ ದುರ್ದೆಸೆಯಿಂದ ಪಾರಾಗಲು ಸಾಲಮನ್ನಾ ಪಡೆಯಬೇಕು ಮಾತ್ರವಲ್ಲ, ಮುಂದೆಯೂ ಬೆಲೆ ಕುಸಿತಗಳನ್ನು ಎದುರಿಸಲು ಬೆಲೆ-ಬೆಂಬಲವೂ ಅವರಿಗೆ ಬೇಕಾಗಿದೆ, ಅದನ್ನು ನವ-ಉದಾರವಾದ ಧ್ವಂಸ ಮಾಡಿರುವ ವ್ಯವಸ್ಥೆಯನ್ನು ಮತ್ತೆ ರಚಿಸುವ ಮೂಲಕ ಒದಗಿಸಬೇಕು ಎನ್ನುತ್ತಾರೆ ಪ್ರೊ.ಪ್ರಭಾತ್ ಪಟ್ನಾಯಕ್
 

ರೈತಾಪಿ ಜನಗಳು ಕೇಳುತ್ತಿರುವ ಕೃಷಿ ಸಾಲ ಮನ್ನಾ ಬಹಳಷ್ಟು ಅಪಾರ್ಥ ಮಾಡಿಕೊಂಡಿರುವ ಪ್ರಶ್ನೆ. ಇಂತಹ ಮನ್ನಾ ದೇಶದಲ್ಲಿನ ಸಾಲ ಪಾವತಿ ಸಂಸ್ಕೃತಿ ಯನ್ನು ಕುಲಗೆಡಿಸುತ್ತದೆ, ಇನ್ನು ಮುಂದೆ ಜನ ಸಾಲಗಳನ್ನು ಮನ್ನಾ ಮಾಡಲಾಗುತ್ತದೆ ಎಂಬ ನಿರೀಕ್ಷೆಯಿಂದ ಅದನ್ನು ಹಿಂದಿರುಗಿಸುವುದನ್ನು ನಿಲ್ಲಿಸಿ ಬಿಡುತ್ತಾರೆ ಎಂದೂ, ಕೆಲವು ವರ್ಷಗಳ ಹಿಂದೆ ಯುಪಿಎ ಸರಕಾರ ಕೃಷಿ ಸಾಲಗಳನ್ನು ಮನ್ನಾ ಮಾಡಿತ್ತು, ಈಗ ಮತ್ತೆ ಸಾಲಮನ್ನಾದÀ ಬೇಡಿಕೆ ಬಂದಿರುವುದರಿಂದ ರೈತರಿಗೆ ಸಾಲ ಹಿಂದಿರುಗಿಸದಿರುವುದು ಒಂದು ಅಭ್ಯಾಸವಾಗಿ ಬಿಟ್ಟಿದೆ, ಆದ್ದರಿಂದಲೇ ಆಗಾಗ ಸಾಲಮನ್ನಾ ಕೇಳುತ್ತಿದ್ದಾರೆ ಎಂದು ತರ್ಕ ಹೂಡಲಾಗುತ್ತಿದೆ. ಅಲ್ಲದೆ, ಯಾರಾದರೂ ಸಾಲ ಮರುಪಾವತಿಯ ಹೊರೆ ಹೊರಬೇಕಾಗುತ್ತದೆ ತಾನೇ, ರೈತರು ಮಾಡದಿದ್ದರೆ, ಸರಕಾರದ ಬಜೆಟಿನ ಮೇಲೆ ಇದರ ಹೊರೆ ಬೀಳುತ್ತದೆ, ಇದು ಇಡೀ ಸಮಾಜಕ್ಕೆ ಹಾನಿಕಾರಕ ಇತ್ಯಾದಿ, ಇತ್ಯಾದಿ.
 

ಈ ತರ್ಕಗಳನ್ನೆಲ್ಲ ಸದ್ಭಾವನೆಯಿಂದಲೇ ಮುಂದಿಡಲಾಗುತ್ತಿದೆ ಎಂದು ಭಾವಿಸಿದರೂ, ಇವೆಲ್ಲ ಸಂಪೂರ್ಣ ದೋಷಪೂರಿತ ತಿಳುವಳಿಕೆಗಳು. ಇದು ಹೇಗೆ ಎಂದು ನೋಡಲು ಆರ್ಥಿಕ ವ್ಯವಸ್ಥೆಯಲ್ಲಿ ಸಾಲ ಹೇಗೆ ಸಂಚಲಿಸುತ್ತದೆ ಎಂಬುದನ್ನು ನೋಡೋಣ.
 

ಒಬ್ಬ ರೈತ ಬೆಳೆ ಬೆಳೆಯಲು 100ರೂ. ಸಾಲ ತೆಗೆದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಸರಳವಾಗಿ ನೋಡಲು, ಆತನ ಬೆಳೆಯ ಮೌಲ್ಯವೂ ಮೂಲ ಬೆಲೆಗಳಲ್ಲಿ 100ರೂ. ಎಂದಿರಲಿ. ಅದನ್ನು ಮಾರುಕಟ್ಟೆಗೆ ಒಯ್ದಾಗ ಒಬ್ಬ ವ್ಯಾಪಾರಿ ಅದನ್ನು ಖರೀದಿಸಲು 100ರೂ. ಬ್ಯಾಂಕ್‍ನಿಂದ  ಸಾಲ ಮಾಡುತ್ತಾನೆ. ಈ ಹಣ ರೈತನಿಗೆ ಮಾರಾಟ ಮಾಡಿ ಸಿಗುವ ಹಣವಾದ್ದರಿಂದ ಅದನ್ನು ಬ್ಯಾಂಕಿಗೆ ಹಿಂದಿರುಗಿಸುತ್ತಾನೆ.  ಆದ್ದರಿಂದ ಬ್ಯಾಂಕಿನಲ್ಲಿ ಸಾಲ ಬಾಕಿ 100ರೂ. ಆಗಿಯೇ ಉಳಿಯುತ್ತದೆ, ಸಾಲಗಾರನ ಗುರುತು ಮಾತ್ರ ಬದಲಾಗುತ್ತದೆ. ಮೂಲತಃ ರೈತನದಾಗಿದ್ದ ಸಾಲ ಈಗ  ವ್ಯಾಪಾರಿಯದ್ದಾಗುತ್ತದೆ.
 

ಈ ಸಾಲ ಸಂಚಲನೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಾಲಬಾಕಿಗೆ ಎದುರಾಗಿ ಸದಾ ಅಷ್ಟೇ ಮೌಲ್ಯದ ಒಂದು ಸರಕಿನ ದಾಸ್ತಾನು ಇರುತ್ತದೆ. ರೈತ ಬೀಜ, ರಸಗೊಬ್ಬರ ಇತ್ಯಾದಿ ಖರೀದಿಸುವಾಗ ಈ ಲಾಗುವಾಡುಗಳ ಮೌಲ್ಯ ಮಾಡಿದ ಸಾಲಕ್ಕೆ ಸಮನಾಗಿರುತ್ತದೆ ತಾನೇ? ನಂತರ ರೈತನ ಬಳಿ ಬರುವ ಉತ್ಪನ್ನದ ದಾಸ್ತಾನು ಸಾಲಕ್ಕೆ ಸಮನಾಗಿರುತ್ತದೆ. ಆಮೇಲೆ  ವ್ಯಾಪಾರಿ ಬಳಿಯಿರುವ ದಾಸ್ತಾನು ಸಾಲಕ್ಕೆ ಸಮನಾಗುತ್ತದೆ. ಹೀಗೆ ಸಾಲ ಸಂಚಲನೆ ಮಾಡುತ್ತಿರುವಾಗ ಸರಕಿನ ಸ್ವರೂಪ ಮತ್ತು ಸರಕಿನ ಜಾಗ ಬದಲಗುತ್ತದೆ, ಆದರೆ ಅದರ ಮೌಲ್ಯ ಅದೇ ಅಗಿರುತ್ತದೆ. ಆದ್ದರಿಂದ ಬ್ಯಾಂಕುಗಳು ‘ಪ್ರಯಾಸ’ಕ್ಕೆ ಒಳಗಾಗುವ ಪ್ರಶ್ನೆ ಇಲ್ಲ(ಬರ ಮತ್ತು ಇತರ ನೈಸರ್ಗಿಕ  ಅನಹುತಗಳ ಸಮಯದಲ್ಲಿ ಮಾತ್ರ ಬಿಟ್ಟು).
 

ಸರಕಿನ ದಾಸ್ತಾನನ್ನು ಅಂತಿಮವಾಗಿ ಬಳಕೆದಾರನಿಗೆ ಮಾರಿದಾಗ (ಅದನ್ನು ಆತ/ಆಕೆ ತನ್ನ ಆದಾಯದಿಂದಲೇ ಖರೀದಿಸುತ್ತಾರೆ ಎಂದಿಟ್ಟುಕೊಳ್ಳೋಣ) ಮಾರಿ ಬಂದ  ಹಣ ಸಾಲ ಮರುಪಾವತಿಯ ರೂಪದಲ್ಲಿ ಬ್ಯಾಂಕಿಗೆ ಮತ್ತೆ ಹರಿದು ಬರುತ್ತದೆ. ಆದ್ದರಿಂದ ನೈಸರ್ಗಿಕ ಅನಾಹುತಗಳಿಲ್ಲದಿದ್ದಲ್ಲಿ, ಮೂಲಬೆಲೆಗಳು ಹಾಗೆ ಉಳಿದಿದ್ದಲ್ಲಿ,  ಸಾಲಮನ್ನಾದ ಬೇಡಿಕೆಯಾಗಲೀ, ಬ್ಯಾಂಕುಗಳು ‘ಪ್ರಯಾಸ’ಪಡುವುದಾಗಲೀ ಇರುವುದಿಲ್ಲ.ಅಂದರೆ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಉತ್ಪಾದನೆಯಲ್ಲಿ ಮತ್ತು ಬೆಲೆಗಳಲ್ಲಿ ಮಹಾ ಏರುಪೇರುಗಳು ಇಲ್ಲದಿದ್ದರೆ ಬ್ಯಾಂಕ್ ಸಾಲಗಳು ತಂತಾನೇ ವಸೂಲಾಗುತ್ತಿರುತ್ತವೆ.
 

ಈಗ ಸಾಲಮನ್ನಾದ ಬೇಡಿಕೆ ಬರುತ್ತಿರಲು ಪ್ರಾಥಮಿಕ ಕಾರಣ, ಯಾವುದೇ ನೈಸರ್ಗಿಕ ಅನಾಹುತದಿಂದಾಗಿ ಉತ್ಪಾದನೆ ಕುಸಿದಿದೆ ಎಂಬ ಕಾರಣಕ್ಕಾಗಿ ಅಲ್ಲ.  ವಾಸ್ತವವಾಗಿ ಈ ವರ್ಷ ಬಂಪರ್ ಬೆಳೆ ಬಂದಿದೆ. ಆ ಬಂಪರ್ ಬೆಳೆಯಿಂದಾಗಿರುವ ಬೆಲೆ ಕುಸಿದಿರುವುದರಿಂದಾಗಿಯೇ ಸಾಲಮನ್ನಾದ ಬೇಡಿಕೆ ಬಂದಿರುವುದು. ಮೇಲೆ ಹೇಳಿದ ಉದಾಹರಣೆಯಲ್ಲಿನ  ಮೂಲಬೆಲೆ ಹಾಗೆಯೇ ಉಳಿದಿಲ್ಲವಾದ್ದರಿಂದಾಗಿ.
 

ಬೆಲೆ ಕುಸಿದಾಗ ಈ ಉದಾಹರಣೆಯಲ್ಲಿ ಏನಾಗುತ್ತದೆ ನೋಡೋಣ.
 

ನಮ್ಮ ಕೃಷಿಯಲ್ಲಿ, ಸಾಮಾನ್ಯವಾಗಿ, ಬಹುಪಾಲು ರೈತರಿಗೆ ದಾಸ್ತಾನು ಇಡುವ ಸಾಮಥ್ರ್ಯ ಇಲ್ಲವಾದ್ದರಿಂದಾಗಿ, ಉತ್ಪಾದನೆ ಹೆಚ್ಚಿದಾಗ, ಇದು 10% ಎಂದಿಟ್ಟುಕೊಳ್ಳೋಣ, ಬೆಲೆ ಕುಸಿತ 10% ಕ್ಕಿಂತಲೂ ಹೆಚ್ಚಿರುತ್ತದೆ, ಆಮೂಲಕ ಉತ್ಪಾದಕರಿಗೆ ಬೆಳೆಯ ಒಟ್ಟು ಮೌಲ್ಯ ಇಳಿಯುತ್ತದೆ(ತದ್ವಿರುದ್ಧವಾಗಿ, ಉತ್ಪಾದನೆ ಇಳಿದಾಗ ಉತ್ಪಾದಕರಿಗೆ ಹೀಗಾಗುವುದಿಲ್ಲ ಎಂಬುದನ್ನು ಗಮನಿಸಬೇಕು).
 

ಆದ್ದರಿಂದ ಮೇಲಿನ ಉದಾಹರಣೆಯಲ್ಲಿ, ರೈತ ತೆಗೆದುಕೊಂಡ 100ರೂ. ಸಾಲಕ್ಕೆ ಪ್ರತಿಯಾಗಿ, ಆತ ವ್ಯಾಪಾರಿಗೆ ಮಾರುವ ಉತ್ಪನ್ನದ ಬೆಲೆ ಅದಕ್ಕಿಂತ ಕಡಿಮೆಯಾಗುತ್ತದೆ, ಅದು 70ರೂ. ಎಂದಿಟ್ಟುಕೊಳ್ಳೋಣ. ವ್ಯಾಪಾರಿ ಬ್ಯಾಂಕಿನಿಂದ 70ರೂ. ಸಾಲ ಪಡೆಯುತ್ತಾನೆ, ಅದು ರೈತನ ಮೂಲಕ ಬ್ಯಾಂಕಿಗೆ ಹಿಂದಿರುಗಿ ಬರುತ್ತದೆ. 30ರೂ. ಹಿಂದಿರುಗಿ ಬರುವುದಿಲ್ಲ. ಅದನ್ನು ತೆರುವ ದಾರಿ ರೈತನ ಬಳಿ ಇರುವುದಿಲ್ಲ. ಆಗ ಬ್ಯಾಂಕ್ ಮೇಲೆ ಈ ‘ಕಾರ್ಯನಿರ್ವಹಿಸದ ಆಸ್ತಿ’ಯ ಅಂದರೆ ರೈತನ ಸಾಲಬಾಕಿಯ ಹೊರೆ ಬೀಳುತ್ತದೆ.
 

ಆದರೆ ವ್ಯಾಪಾರಿ ರೈತನಿಂದ 70ರೂ. ತೆತ್ತು ಖರೀದಿಸದ ಬೆಳೆಯನ್ನು ಆತ 70ರೂ.ಗೇನೂ, ವಾಸ್ತವವಾಗಿ ಮೂಲಬೆಲೆಯಾದ 100ರೂ.ಗಿಂತ ಕಡಿಮೆಗೇನೂ ಮಾರುವುದಿಲ್ಲ. ಬಂಪರ್ ಬೆಳೆ ಬಂದಾಗ ಆಗುವ ಬೆಲೆ ಕುಸಿತದ ಪ್ರಯೋಜನ ಬಳಕೆದಾರನಿಗೇನೂ  ವರ್ಗಾವಣೆಗೊಳ್ಳುವುದಿಲ್ಲ, ಪೂರ್ಣವಾಗಿಯಂತೂ ಖಂಡಿತವಾಗಿ ಇಲ್ಲ.
 

ಉದಾಹರಣೆಗೆ, ಕೇರಳದಲ್ಲಿ ಕಾಫಿ ಬೆಳೆಯ ಬೆಲೆಕುಸಿದಾಗ, ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್‍ಸ್ಟಂಟ್ ಕಾಫಿಯ ಬೆಲೆ ಸ್ವಲ್ಪವೂ ಇಳಿಯಲಿಲ್ಲ. ಇಂದು ಮೋದಿಯವರ ಸ್ವಂತ ರಾಜ್ಯ ಗುಜರಾತದಲ್ಲಿ ನೆಲಗಡಲೆ ಬೆಲೆಗಳು ಕುಸಿದಿವೆ, ಆದರೆ ಇದರ ಅರ್ಥ ನೆಲಗಡಲೆ ಎಣ್ಣೆ ಬಳಸುವವನಿಗೆ ಅದು ಅಗ್ಗವಾಗುತ್ತದೆಯೆಂದೇನಲ್ಲ.
 

ಉತ್ಪಾದಕ ಮತ್ತು ಬಳಕೆದಾರನ ಮಧ್ಯೆ ಎಲ್ಲೋ ಒಂದೆಡೆಯಲ್ಲಿ ಈ ಕುಸಿತದ ಫಲಿತಾಂಶವನ್ನು ಹೆಚ್ಚಿನ ಲಾಭವಾಗಿ ಹೀರಿಕೊಳ್ಳಲಾಗುತ್ತದೆ. ಈ ಕ್ಷಣದಲ್ಲಿ ನಾನು ಈ ಫಲಾನಭವಿಯನ್ನು ಸೂಚಿಸಲು ‘ವ್ಯಾಪಾರಿ’ ಎಂಬ ಪದವನ್ನು ಬಳಸುತ್ತೇನೆ. ಈ ವ್ಯಾಪಾರಿ ಬ್ಯಾಂಕಿನಿಂದ ಪಡೆದ ಸಾಲ 70ರೂ. ಆಗಿದ್ದರೂ, ಆತನ ಬಳಿಯಿರುವ ಸರಕು ದಾಸ್ತಾನಿನ ಮೌಲ್ಯ 100ರೂ. ಆದ್ದರಿಂದ ರೈತನಿಗೆ ಆಗಿರುವ 30ರೂ. ಕೊರತೆ(ಆಮೂಲಕ ಬ್ಯಾಂಕಿನ 30ರೂ. ಸಾಲಬಾಕಿಯ ಸಮಸ್ಯೆ)ಗೆ ಸಮನಾಗಿ ವ್ಯಾಪಾರಿಯ ನಿವ್ವಳ ಮಾಲ್ಯ ಅಷ್ಟೇ ಪ್ರಮಾಣದಲ್ಲಿ ಉತ್ತಮಗೊಂಡಿರುತ್ತದೆ. ಆದರೆ ಬ್ಯಾಂಕು ತನ್ನ ಸಾಲ  ವಸೂಲಿಗೆ ವ್ಯಾಪಾರಿಯನ್ನು ಮುಟ್ಟುವಂತಿಲ್ಲ, ರೈತ ಕೂಡ ತನ್ನ ಸಾಲ ಮರುಪಾವತಿಗೆ ಸಂಪನ್ಮೂಲ ಪಡೆಯಲು ವ್ಯಾಪಾರಿಯನ್ನು ಮುಟ್ಟುವಂತಿಲ್ಲ (ವ್ಯಾಪಾರಿಯಿಂದ ರೈತ ಸಾಲ ಮರುಪಾವತಿಗೆ ಸಾಕಷ್ಟು ಸಂಪನ್ಮೂಲವನ್ನು ಪಡೆಯದ್ದರಿಂದಲೇ ಈ ಸಮಸ್ಯೆ ಉಂಟಾಗಿದ್ದರೂ ಕೂಡ).
 

ಬ್ಯಾಂಕಿಗೆ ಈಗಲೂ ಸಾಲ ಮೊತ್ತ 100ರೂ., 70ರೂ. ವ್ಯಾಪಾರಿಯದ್ದು ಮತ್ತು 30ರೂ. ರೈತನ ವಸೂಲಾಗದ 30ರೂ. ವ್ಯಾಪಾರಿ ಬಳಿಯಿರುವ ದಾಸ್ತಾನಿನ ಮೌಲ್ಯ ಕೂಡ 100ರೂ.(ಬಳಕೆದಾರನಿಗೆ ಆ ಬೆಲೆಯಲ್ಲೆ ಮಾರುವುದು).  ಆದರೆ ಬ್ಯಾಂಕು ಈ ಸರಕು ದಾಸ್ತಾನಿನ ಮೇಲೆ ದಾವೆ ಹಾಕುವಂತಿಲ್ಲ, ಅದು 70ರೂ. ಮಾತ್ರ ಕೇಳಬಹುದು. ಆದ್ದರಿಂದ ನಾವು ಯಾವುದನ್ನು ಮರುಪಾವತಿಯಾಗದ ಸಮಸ್ಯೆ ಎನ್ನುತ್ತೇವೆಯೋ ಅದು ರೈತನಿಂದ ವ್ಯಾಪಾರಿಗೆ ಆದ ವರ್ಗಾವಣೆಯಲ್ಲದೆ ಬೇರೇನೂ ಅಲ್ಲ. ಈ ವರ್ಗಾವಣೆಯಿಂದ ಬ್ಯಾಂಕಿನ ಸೊತ್ತಿಗೆ ತೊಂದರೆಯಾಗುತ್ತದೆ. ಬ್ಯಾಂಕ್ ಈ 30ರೂ. ವಸೂಲಿಗೆ ರೈತನ ಮೇಲೆ ಒತ್ತಡ ಹಾಕಿದರೆ, ಆತ ದರಿದ್ರನಾಗುತ್ತಾನೆ, ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು, ಈಗ ಆಗುತ್ತಿರುವಂತೆ.
 

ಸಾಲಮನ್ನಾ ಮಾಡಬೇಕೆಂಬ ಪ್ರತಿರೋಧದ ಅಲೆ ಎದ್ದಿರುವುದು ರೈತನ ಇಂತಹ ಹಣೆಬರಹವನ್ನು ತಡೆಯುವ ಒಂದು ಪ್ರಯತ್ನವಾಗಿ ಈ ಸರಳ ಉದಾಹರಣೆಯಿಂದ ಕೆಲವು ತೀರ್ಮಾನಗಳು ತಕ್ಷಣವೇ ಹೊರ ಬರುತ್ತವೆ.
 

ಮೊದಲನೆಯದಾಗಿ, ರೈತ ಸಾಲ ಮರುಪಾವತಿ ಮಾಡದಿರುವುದು ಯಾವುದೇ ಕೆಟ್ಟ ‘ಸಾಲಪ್ರವೃತ್ತಿ’ಯಿಂದ ಅಲ್ಲ;
ಎರಡನೆಯದಾಗಿ, ಈಗ ಸಾಲಮನ್ನಾ ರೈತನನ್ನು ಬ್ಯಾಂಕ್‍ನಿಂದ ಋಣಮುಕ್ತಗೊಳಿಸಿದರೂ ಇಂತಹ ಪರಿಸ್ಥಿತಿ ಮುಂದೆಯೂ ಬರಬಹುದು. ಸಾಲಮನ್ನಾದ ಬೇಡಿಕೆ ಮತ್ತೆ-ಮತ್ತೆ ಬರುತ್ತಿದ್ದರೆ, ಅದು ಒಮ್ಮೆ  ಸಾಲಮನ್ನಾದ ಪ್ರಯೋಜನ ಪಡೆದ ರೈತರು ಮತ್ತೆ-ಮತ್ತೆ ಅದನ್ನು ಬಯಸುತ್ತಾರೆ ಎಂಬುದರಿಂದಾಗಿ ಅಲ್ಲ, ಅಂದರೆ ರೈತರ ದುರಾಸೆಯಿಂದಾಗಿ ಅಲ್ಲ, ಬದಲಾಗಿ ನಮ್ಮ ಆರ್ಥಿಕದಲ್ಲಿರುವ ಸಾಂಸ್ಥಿಕ ರಚನೆಯಿಂದಾಗಿ, ಬಂಪರ್ ಬೆಳೆ ಬಂದಾಗ ಅವರು ಬೆಲೆ ಕುಸಿತ ಕಾಣಬೇಕಾದ ವ್ಯವಸ್ಥೆಯಿಂದಾಗಿ.

 

ಮೂರನೆಯದಾಗಿ, ಬ್ಯಾಂಕಿಗೆ ಕೆಟ್ಟಸಾಲದ ಪ್ರಶ್ನೆ ಎದುರಿಸಬೇಕಾಗಿ ಬಂದಿರುವುದು ಅದು ಕೊಟ್ಟ ಸಾಲ ಗಾಳಿಯಲ್ಲಿ ಮಾಯವಾಗಿದೆ ಎಂಬುದರಿಂದ ಅಲ್ಲ, ಬದಲಾಗಿ ಅದು ವ್ಯಾಪಾರಿಯ ಜೇಬಿಗೆ ವರ್ಗಾವಣೆಯಾಗಿದ್ದರಿಂದ- ಇದನ್ನು ಮುಟ್ಟುವ ಶಕ್ತಿ ರೈತನಿಗಿಲ್ಲ, ಬ್ಯಾಂಕಿಗೆ ಅಂತಹ ಅಧಿಕಾರ ಇಲ್ಲ.
 

ರೈತರು ಸಾಲಮನ್ನಾ ಕೇಳುವ ‘ಅಭ್ಯಾಸ’ ಮಾಡಿಕೊಂಡಿದ್ದಾರೆ ಎಂದು ಅದನ್ನು ವಿರೋಧಿಸುವವರು, ಅದರ ಬದಲು ಬಂಪರ್ ಬೆಳೆಗಳು ಬಂದಾಗ ಬೆಲೆ ಕುಸಿತವನ್ನು ತಡೆಯಲು ಸೂಕ್ತ ವ್ಯವಸ್ಥೆಯನ್ನು ಏರ್ಪಡಿಸಬೇಕೆಂದು ಒತ್ತಾಯಿಸಬೇಕು. ನಿಜ ಹೇಳಬೇಕೆಂದರೆ, ನವ-ಉದಾರವಾದಿ ಧೋರಣೆಗಳನ್ನು ಜಾರಿಗೊಳಿಸುವ ಮೊದಲು ದೇಶ ಇಂತಹ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಮಾಡಿತ್ತು. ಭಾರತ ಆಹಾರ ನಿಗಮ(ಎಫ್‍ಸಿಐ) 22 ಬೆಳೆಗಳ  ಬೆಂಬಲ ಮತ್ತು ಖರೀದಿ ಬೆಲೆಯನ್ನು ಪ್ರಕಟಿಸುತ್ತಿತ್ತು ಮತ್ತು ಅ ಬೆಲೆಗಳು ಪರಿಣಾಮಕಾರಿಯಾಗಲು ಖರೀದಿ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು.

ವಾಣಿಜ್ಯ ಬೆಳೆಗಳಿಗೆ ಸಂಬಂಧಪಟ್ಟಂತೆ ಹಲವು ಸರಕು ಮಂಡಳಿಗಳಿದ್ದವು, ಕಾಫಿ ಮಂಡಳಿ, ಚಹಾ ಮಂಡಳಿ ಇತ್ಯಾದಿ. ಅವು ಮಾರುಕಟ್ಟೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದವು, ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸುವುದೂ ಇದರಲ್ಲಿ ಸೇರಿತ್ತು. ನಿಜ, ಇಂತಹ ಮಧ್ಯಪ್ರವೇಶಗಳು ನಿರೀಕ್ಷಿತ ಮಟ್ಟದಲ್ಲಿ ಇರುತ್ತಿರಲಿಲ್ಲ. ಎಫ್‍ಸಿಐ ಸರಿಯಾದ ಸಮಯದಲ್ಲಿ ಖರೀದಿ ಮಾಡುತ್ತಿರಲಿಲ್ಲ. ಎಫ್‍ಸಿಐ ಏಜೆಂಟರು ಮಾರುಕಟ್ಟೆಯಲ್ಲಿ ಕಾಣಿಸಿ ಕೊಳ್ಳುವ ಮೊದಲೇ ಅತ್ಯಂತ ಕಡಿಮೆ ದಾಸ್ತಾನು ಸಾಮಥ್ರ್ಯ ಹೊಂದಿರುವ  ಬಡ ಮತ್ತು ಕೆಳ ಮಧ್ಯಮ ರೈತರೂ ಕೂಡ ಅಗ್ಗ ದರಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಬೇಕಾಗಿ ಬರುತ್ತಿತ್ತು. ಆದರೂ ಕೂಡ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ, ಸ್ವಲ್ಪಮಟ್ಟಿಗೆ ಅದನ್ನು ನಿಭಾಯಿಸುವ ಪ್ರಯತ್ನಗಳಿದ್ದವು.
 

ಆದರೆ ನವ-ಉದಾರವಾದದೊಂದಿಗೆ ಇವನ್ನೆಲ್ಲ  ‘ಮಡಿಚಿ ಇಡುವ’ ಕೆಲಸವಾಯಿತು. ನಿಜ, ಎಫ್‍ಸಿಐ ಈಗಲೂ ಇದೆ, ಕೆಲವು ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶವನ್ನೂ ಮಾಡುತ್ತದೆ. ಆದರೆ ಅದು ರೈತರಿಗೆ ಅಗತ್ಯವಾಗಿರುವಷ್ಟು ಮಟ್ಟದಲ್ಲಿ ಇಲ್ಲ( ಮುಂದೆ ಇದನ್ನು ಕೂಡ  ಡಬ್ಲ್ಯುಟಿಒ ಒಪ್ಪಂದಕ್ಕೆ ತಲೆಬಾಗಿ ತಡೆಯಬಹುದು). ಆದರೆ ಸರಕು ಮಂಡಳಿಗಳ (ಕಾಫಿ ಮಂಡಳಿ ಇತ್ಯಾದಿ) ಮಾರುಕಟ್ಟೆ ಕೆಲಸ ಸಂಪೂರ್ಣವಾಗಿ ನಿಂತು ಹೋಗಿದೆ. ಆದರೆ ಈ ಮಂಡಳಿಗಳ ವಾಣಿಜ್ಯ ಬೆಳೆಗಳಿÀಗೇ ಸಾಲ ಸೌಲಭ್ಯ ಅತಿ ಅಗತ್ಯವಾಗಿರುವುದು.
 

ಇಂತಹ ಒಂದು ಸಾಂಸ್ಥಿಕ ವ್ಯವಸ್ಥೆ ಮುರಿದು ಬಿದ್ದಿರುವುದೇ ರೈತರ ಸಂಕಟಗಳಿಗೆ, ಆಗಾಗ ಸಾಲಮನ್ನಾ ಕೇಳುವಂತಾಗಿರುವುದು. ಹೀಗೆ ಮುರಿದು ಬಿದ್ದಿರುವುದರ ಫಲಾನುಭವಿಗಳನ್ನು ನಾನು ಇದುವರೆಗೆ ‘ವ್ಯಾಪಾರಿÀ’ಗಳು ಎಂದಿದ್ದೆ. ಇವರಲ್ಲಿ ಈಗ ಬಹುರಾಷ್ಟ್ರೀಯ ಕೃಷಿ ಕಂಪನಿಗಳು, ಮತ್ತು ದೇಶೀ ಕಾರ್ಪೊರೇಟ್-ಹಣಕಾಸು ಕೂಟಗಳು ಸೇರಿರುತ್ತವೆ. ಇವರೆಲ್ಲ ಕೃಷಿ ಸರಕುಗಳ ಮಾರುಕಟ್ಟೆಯನ್ನು ಪ್ರವೇಶಿಸಿದ್ದಾರೆ.
 

ರೈತರು ಸದ್ಯದ ದುರ್ದೆಸೆಯಿಂದ ಪಾರಾಗಲು ಸಾಲಮನ್ನಾ ಪಡೆಯಬೇಕು ಮಾತ್ರವಲ್ಲ, ಮುಂದೆ ಬೆಲೆ ಕುಸಿತಗಳನ್ನು ಎದುರಿಸಲು ಬೆಲೆ-ಬೆಂಬಲವೂ ಅವರಿಗೆ ಬೇಕಾಗಿದೆ, ಅದನ್ನು ನವ-ಉದಾರವಾದ ಧ್ವಂಸ ಮಾಡಿರುವ ವ್ಯವಸ್ಥೆಯನ್ನು ಮತ್ತೆ ರಚಿಸುವ ಮೂಲಕ ಒದಗಿಸಬೇಕು.