ಪ್ರೊ. ಸಾಯಿಬಾಬ ವಿಷಯದಲ್ಲಿ ಮಧ್ಯಪ್ರವೇಶಿಸಲು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ

ಸಂಪುಟ: 
11
ಸಂಚಿಕೆ: 
26
Sunday, 18 June 2017

ಈಗ ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಏಕಾಂತ ಜೈಲುವಾಸ ಅನುಭವಿಸುತ್ತಿರುವ ದಿಲ್ಲಿಯ ಅಂಗವಿಕಲತೆ ಇರುವ ಪ್ರೊ. ಸಾಯಿಬಾಬರವರ ಆರೋಗ್ಯ ತ್ವರಿತವಾಗಿ ಹದಗೆಡುತ್ತಿದ್ದು ಈ ವಿಷಯದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಬೇಕು ಎಂದು ದಿಲ್ಲಿ ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷೆ ನಂದಿತಾ ನಾರಾಯಣ್, ಮಹಿಳಾವಾದಿ ಕಾರ್ಯಕರ್ತೆ ಕಲ್ಯಾಣಿ ಮೆನನ್ ಸೆನ್, ಪ್ರೊ.ಸಾಯಿಬಾಬ ಅವರ ಪತ್ನಿ ವಸಂತ ಕುಮಾರಿ ಹಾಗೂ ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಮುರಳೀಧರನ್ ಇದ್ದ ನಿಯೋಗವೊಂದು ಆಯೋಗದ ರಿಜಿಸ್ಟ್ರಾರ್(ಕಾನೂನು) ಅಶೋಕ ಕುಮಾರ್ ಅವರನ್ನು ಜೂನ್ 1ರಂದು ಭೇಟಿ ಮಾಡಿ ಒಂದು ಮನವಿ ಪತ್ರವನ್ನು ಸಲ್ಲಿಸಿದೆ.
 

ಪ್ರೊ. ಸಾಯಿಬಾಬ 90% ಅಂಗವಿಕಲತೆಯಿಂದ ವೀಲ್‍ಚೇರ್ ಬಳಸಬೇಕಾಗಿರುವವರು. ಅವರು ಜೈಲಿನ ಶೋಚನೀಯ ಪರಿಸ್ಥಿತಿಯನ್ನು ಎದುರಿಸಬೇಕಾಗಿರುವುದು ಮಾತ್ರವಲ್ಲ, ಸತತವಾಗಿ ಪೋಲಿಸರು ಮತ್ತು ಜೈಲು ಸಿಬ್ಬಂದಿಯ ದುರ್ವರ್ತನೆಯನ್ನೂ ಎದುರಿಸಬೇಕಾಗಿದೆ.
 

ಅಂಗವಿಕಲತೆ ಮಾತ್ರವಲ್ಲ, ಇವರು ಇತರ ಕೆಲವು ತೀವ್ರ ಕಾಯಿಲೆಗಳಿಗೂ ಗುರಿಯಾಗಿದ್ದಾರೆ, ಅವರಿಗೆ ತಕ್ಷಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಶಿಕ್ಷೆ ಪ್ರಕಟಿಸುವ ಮೊದಲು ಅವರು ಸರ್ಜರಿ-ಪೂರ್ವ ಚಿಕಿತ್ಸೆ ಪಡೆಯುತ್ತಿದ್ದರು.  ಅವರನ್ನು ತೀವ್ರ ಅಂಗವಿಕಲತೆಯಿರುವವರಿಗೆ ಚಿಕಿತ್ಸೆಯ ಸೌಲಭ್ಯ ಇರುವ ಆಸ್ಪತ್ರೆಗೆ ತಕ್ಷಣವೇ ಸೇರಿಸಬೇಕಾಗಿದೆ. ಆದರೆ ಜೈಲಿನಲ್ಲಿ ತೀವ್ರ ದೈಹಿಕ ನೋವುಗಳನ್ನು ಅನುಭವಿಸುತ್ತಿರುವ ಅವರಿಗೆ ಜೈಲು ಡಾಕ್ಟರ ಸೌಲಭ್ಯವನ್ನೂ ನಿರಾಕರಿಸಲಾಗಿದೆ.
 

ಈ ಎಲ್ಲ ಅಂಶಗಳನ್ನು ಆಯೋಗದ ಗಮನಕ್ಕೆ ತಂದಿರುವ ನಿಯೋಗ ಅವರೊಂದಿಗೆ ಜೈಲಿನಲ್ಲಿ ಈ ರೀತಿಯ ವರ್ತನೆ ಅವರ ಜೀವ, ಘನತೆ, ಸಮಾನತೆ  ಹಾಗೂ  ಚಿತ್ರಹಿಂಸೆ, ಕ್ರೌರ್ಯ, ಅಮಾನವೀಯ ವರ್ತನೆಯಿಂದ ರಕ್ಷಣೆ ಹಾಗೂ ಆರೋಗ್ಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಿಯೋಗದ ಕಾನೂನು ರಿಜಿಸ್ಟ್ರಾರ್‍ಗೆ ಮನವರಿಕೆ ಮಾಡಲು ಯತ್ನಿಸಿತು.
 

ಭಾರತ ಅಂತರ್ರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಧಿನಿರ್ಣಯ, ವಿಶ್ವಸಂಸ್ಥೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿರ್ಣಯ ಮತ್ತು ನೆಲ್ಸನ್ ಮಂಡೆಲಾ ನಿಯಮಗಳು ಎಂದು ಪ್ರಸಿದ್ಧವಾಗಿರುವ ಬಂಧಿಗಳೊಂದಿಗೆ ವರ್ತನೆಯ ಕನಿಷ್ಟ ನಿಯಮಗಳಿಗೆ ಸಹಿ ಹಾಕಿದೆ. ಅಲ್ಲದೆ ಇತ್ತೀಚೆಗೆ ಅಂಗವಿಕಲತೆಯ ವ್ಯಕ್ತಿಗಳ ಹಕ್ಕುಗಳ ಕಾಯ್ದೆ (ಆರ್‍ಪಿಡಿ ಆಕ್ಟ್), 2016 ನ್ನು ಕೂಡ ಅಂಗೀಕರಿಸಲಾಗಿದೆ.
 

ಆದ್ದರಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕೂಡಲೇ ಪ್ರೊ. ಸಾಯಿಬಾಬರನ್ನು ಅವರಿಗೆ ಅತ್ಯಗತ್ಯವಾಗಿರುವ ತಜ್ಞರ ವೈದ್ಯಕೀಯ ಸೇವೆ ಲಭ್ಯವಿರುವ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ನಿಯೋಗ ಮನವಿ ಮಾಡಿತು. ಹೀಗೆ ಮಾಡದಿರುವುದು ಅವರಿಗೆ ಒಂದು ಘನತೆಯ ಬದುಕು, ಆರೋಗ್ಯರಕ್ಷಣೆ ಮತ್ತು ಇತರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.