ಜಿಡಿಪಿ ಬೆಳವಣಿಗೆಯಲ್ಲಿ ನಿಧಾನಗತಿ ಮತ್ತು ಭಾರತದ ವಿಚಾರಶೂನ್ಯ ಸರಕಾರ

date: 
Wednesday, 21 June 2017
Image: 

ನೋಟುರದ್ಧತಿ ಆರ್ಥಿಕ ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದರಲ್ಲಿ ಏನೂ ಸಂದೇಹ ಉಳಿದಿಲ್ಲ. ಆದರೆ ಜಿಡಿಪಿ ಬೆಳವಣಿಗೆಯಲ್ಲಿ ನಿಧಾನಗತಿಗೆ ಇದೊಂದೇ ಕಾರಣವಲ್ಲ. ನವ-ಉದಾರವಾದಿ ವ್ಯವಸ್ಥೆ ಮುಂದೆ ದಾರಿಗಾಣದಂತಹ ಮಟ್ಟವನ್ನು ತಲುಪಿರುವುದೇ ಮುಖ್ಯ ಕಾರಣ. ಆದರೆ ನವ-ಉದಾರವಾದದ ಈ ಬಿಕ್ಕಟ್ಟಿನ ಎದುರಲ್ಲಿ ಮೋದಿ ಸರಕಾರ ಈ ಬಿಕ್ಕಟ್ಟನ್ನು  ನವ-ಉದಾರವಾದ ಬಯಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ಎದುರಿಸುವ ಬಗ್ಗೆ ಯೋಚಿಸುವ ಬದಲು ಇನ್ನೂ ಉಗ್ರ ನವ-ಉದಾರವಾದಿಯಾಗಿದೆ, ಏಕೆಂದರೆ ಅದು ವಿಚಾರಶೂನ್ಯವಾಗಿದೆ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೂ ಇಂತಹ ವಿಧೇಯ ಸೇವಕರೇ ಬೇಕಾಗಿದೆ. ಏಕೆಂದರೆ ಇಂತಹ ಸರಕಾರಗಳು ಸದಾ ‘ಜಾಗತಿಕ ಹಣಕಾಸು ಸಮುದಾಯ’ವನ್ನೇ ಅವಲಂಬಿಸುವ ವೈಚಾರಿಕ ಪರಾವಲಂಬಿಗಳಾಗಿಯೇ ಉಳಿಯುತ್ತವೆ.
 

ಪ್ರೊ. ಪ್ರಭಾತ್ ಪಟ್ನಾಯಕ್      

ಕೇಂದ್ರ ಅಂಕಿಅಂಶ ಕಚೇರಿ (ಸಿಎಸ್‍ಒ) 2016-17ನೇ ಸಾಲಿನ ಅಕ್ಟೋಬರ್-ಡಿಸೆಂಬರ್ (ನೋಟು ರದ್ಧತಿ ನಡೆದ ಅವಧಿಯ) ತ್ರೈಮಾಸಿಕದ ಜಿಡಿಪಿ ಅಂದಾಜು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದಾಗ ಜಿಡಿಪಿ ಇನ್ನೂ ಶೇ.7ರ ವೃದ್ಧಿ ದರದಲ್ಲಿತ್ತು. ಇದು ಕೇಂದ್ರ ಸರ್ಕಾರದ ಕಾರಿಡಾರ್‍ಗಳಲ್ಲಿ ಬಹಳಷ್ಟು ಹಬ್ಬದ ವಾತಾವರಣಕ್ಕೆ ಕಾರಣವಾಗಿತ್ತು. ಇದನ್ನು ನೋಟುರದ್ಧತಿ ಕುರಿತು ಬಂದಿದ್ದ ವಿಮರ್ಶೆಗಳು ಹೇಳಿದಂತೆ ಆರ್ಥಿಕತೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ತರ್ಕಿಸಲು ಸರ್ಕಾರ ಬಳಸಿಕೊಂಡಿತು.
 

ಈ ಶೇ.7ರಷ್ಟು ಅಭಿವೃದ್ಧಿ ಸಹ 2015-16ನೇ ಸಾಲಿನ ಮೂರನೆ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳನ್ನು ಕೆಳದಿಕ್ಕಿನಲ್ಲಿ ಪರಿಷ್ಕರಿಸಿದ್ದರಿಂದ ಆಗಿತ್ತು ಎಂಬುದು ಆಗಲೇ ಸ್ಪಷ್ಟವಾಗಿತ್ತು.

ಈಗ ನಾಲ್ಕನೆ ತ್ರೈಮಾಸಿಕ (ಜನವರಿ-ಮಾರ್ಚ್) ಅಂಕಿಅಂಶಗಳನ್ನು ಕೆಲವು ದಿನಗಳ ಹಿಂದೆ ಸಿಎಸ್‍ಒ ಬಿಡುಗಡೆ ಮಾಡಿದ್ದು ಇದು ಗಣನೀಯವಾಗಿ ಕುಸಿದು ಶೇ.6.1ಕ್ಕೆ ತಲುಪಿದೆ. ಈ ಅಂಕಿಅಂಶಗಳು ಸಹ ಆರ್ಥಿಕತೆ ಕುಸಿತದ ಸಂಪೂರ್ಣ ಚಿತ್ರಣವನ್ನು ಹೊಂದಿಲ್ಲ. ಜಿಡಿಪಿ ಅಂಕಿಅಂಶಗಳನ್ನು ಮಾರುಕಟ್ಟೆ ದರಗಳ ಆಧಾರದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದು ಸರ್ಕಾರ ವಿಧಿಸುವ ನಿವ್ವಳ ಪರೋಕ್ಷ ತೆರಿಗೆಗಳನ್ನು ಒಳಗೊಂಡಿರುತ್ತದೆ ಮತ್ತು ಇದೂ ಸಹ ಉತ್ಪಾದನಾ ಟ್ರೆಂಡನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ. ಈ ಉತ್ಪಾದನಾ ಟ್ರೆಂಡನ್ನು ಸರಿಯಾಗಿ ತಿಳಿಯಬೇಕಾದರೆ ನಿವ್ವಳ ಮೌಲ್ಯ ಸಂಕಲನ (ಜಿವಿಎ)ದತ್ತ ನೋಟ ಹರಿಸಬೇಕು. ಇದರ ಪ್ರಕಾರ ಕಳೆದ ವರ್ಷದ ನಾಲ್ಕನೆ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಪ್ರಗತಿ ದಾಖಲಿಸಿದೆ. ಮೂರನೆ ತ್ರೈಮಾಸಿಕದಲ್ಲಿ ದಾಖಲಿಸಿದ್ದ ಶೇ.6.7ಕ್ಕಿಂತಲೂ ಕಡಿಮೆ. 2015-16ನೇ ಸಾಲಿನಲ್ಲಿ ಮೂರು ಮತ್ತು ನಾಲ್ಕನೆ ತ್ರೈಮಾಸಿಕ ಅವಧಿಯ ಪ್ರಗತಿ ಕ್ರಮವಾಗಿ ಶೇ.7.3 ಮತ್ತು ಶೇ.8.7ರಷ್ಟಿತ್ತು. ಇದಕ್ಕೆ ಹೋಲಿಸಿದರೆ 2016-17ನೇ ಸಾಲಿನ ನಾಲ್ಕನೆ ತ್ರೈಮಾಸಿಕ ಪ್ರಗತಿ ಶೇ.3.1ರಷ್ಟು ಕುಸಿತ ದಾಖಲಿಸಿದೆ.

ಈ ಅಂಕಿಅಂಶಗಳು ಸಹ ನೋಟು ರದ್ಧತಿಯಿಂದ ಆರ್ಥಿಕ ಪ್ರಗತಿ ಮೇಲೆ ಆಗಿರುವ ನಿಖರ ದುಷ್ಪರಿಣಾಮವನ್ನು ಬಿಂಬಿಸುವುದಿಲ್ಲ. ವಾಸ್ತವವಾಗಿ ನೋಟುರದ್ಧತಿ ಅತಿ ಹೆಚ್ಚು ಭಾದಿಸಿದ್ದು ಸಣ್ಣ ಉತ್ಪಾದನೆ ವಲಯವನ್ನು, ಆದರೆ ಈ ಯಾವುದೇ ಅಂಕಿಅಂಶಗಳು ಈ ವಲಯವನ್ನು ಒಳಗೊಂಡಿಲ್ಲ.
 

ಎರಡು ವರ್ಷ ಸತತ ಬರಗಾಲದಿಂದ ದೇಶ ತತ್ತರಿಸಿದರೂ 2016-17ನೇ ಸಾಲಿನಲ್ಲಿ ಕೃಷಿ ಸ್ವಲ್ಪ ಚೇತರಿಕೆ ಕಂಡಿತು. ಈ ನೋಟು ರದ್ಧತಿ ಕೃಷಿ ವರ್ಷದ ಅಂತ್ಯ ಭಾಗದಲ್ಲಿ ಸಂಕಷ್ಟವನ್ನು ಉಂಟು ಮಾಡಿತ್ತಾದರೂ ಮಳೆ ಅನುಕೂಲಕರವಾಗಿದ್ದರಿಂದ ಕೃಷಿ ಉತ್ಪಾದನೆಯನ್ನು ಉತ್ತಮವಾಗಿರಿಸಿತ್ತು. ನಾಲ್ಕನೆ ತ್ರೈಮಾಸಿಕದಲ್ಲಿ ಕೃಷಿ ಬೆಳವಣಿಗೆ ಶೇ.5.2ರಷ್ಟು ಇತ್ತು. ಇದರ ಹಿಂದಿನ ವರ್ಷ ಇದೇ ಅವಧಿಯಲ್ಲಿ ಈ ಪ್ರಗತಿ ಶೇ.1.5ರಷ್ಟಿತ್ತು. ಒಂದು ವೇಳೆ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಬಿಟ್ಟು ಕೃಷಿಯೇತರ ಕ್ಷೇತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ನೋಟು ರದ್ಧತಿ ಎಷ್ಟು ಭೀಕರವಾದ ಪರಿಣಾಮ ಬೀರಿದೆ ಎಂಬುದು ತಿಳಿಯುತ್ತದೆ. ಅಂದರೆ 2015-16ನೇ ಸಾಲಿನ ನಾಲ್ಕನೆ ತ್ರೈಮಾಸಿಕದಲ್ಲಿ ಶೇ.10.5ರಷ್ಟು ಅಭಿವೃದ್ಧಿ ದಾಖಲಿಸಿದ್ದ ಕೃಷಿಯೇತರ ವಲಯ 2016-17ನೇ ಸಾಲಿನಲ್ಲಿ ಶೇ.5.7ಕ್ಕೆ ಕುಸಿದಿದೆ. ಇದು ಭಾರಿ ಕುಸಿತವಾಗಿದೆ.

ಪ್ರತ್ಯೇಕ ವಲಯಗಳಿಗೆ ಸಂಬಂಧಿಸಿದಂತೆ ನಿವ್ವಳ ಮೌಲ್ಯ ಸಂಕಲನ ಅಂಕಿಅಂಶಗಳು ಭಾರಿ ಹೊಡೆತಕ್ಕೆ ಸಿಲುಕಿವೆ. ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿರ್ಮಾಣ ವಲಯದಲಲಿ ಇದು ಶೇ.3.7ರಷ್ಟು ಕುಸಿದಿದೆ. ತಯಾರಿಕಾ ವಲಯ ಶೇ.5.3ರಷ್ಟು ಮಾತ್ರ ಬೆಳವಣಿಗೆ ದಾಖಲಿಸಿದೆ. ನಾಲ್ಕನೆ ತ್ರೈಮಾಸಿಕದ ಅಂಕಿಅಂಶಗಳು ಇದರ ಹಿಂದಿನ ಎಲ್ಲ ತ್ರೈಮಾಸಿಕ ಅಂಕಿಅಂಶಗಳಿಗಿಂತಲೂ ಗಣನೀಯವಾಗಿ ಕಡಿಮೆ ಇದೆ. ಹಾಗೆಯೇ ಕಳೆದ ಹಣಕಾಸು ಸಾಲಿನ ನಾಲ್ಕನೆ ತ್ರೈಮಾಸಿಕ ಅಂಕಿಅಂಶಗಳಿಗಿಂತಲೂ ಸಹ.

ವಾರ್ಷಿಕ ಅಂಕಿಅಂಶಗಳನ್ನು ತೆಗೆದುಕೊಂಡರೆ 2016-17ನೇ ಸಾಲಿನಲ್ಲಿ ಜಿವಿಎ ಶೇ.6.6ರಷ್ಟು ಏರಿಕೆ ಕಂಡಿದೆ. ಕಳೆದ ಸಾಲಿನಲ್ಲಿದ್ದ ಶೇ.7.9ಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಇದೆ. ಇಲ್ಲಿ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ 2015-16ನೇ ಸಾಲಿನಲ್ಲಿ ಶೇ.0.7ರಷ್ಟು ಮಾತ್ರ ಪ್ರಗತಿ ಕಂಡಿದ್ದ ಕೃಷಿ ವಲಯ 2016-17ನೇ ಸಾಲಿನಲ್ಲಿ ಶೇ.4.9ರಷ್ಟು ಪ್ರಗತಿ ದಾಖಲಿಸಿದೆ. ಇಲ್ಲೂ ಸಹ ಕೃಷಿ ವಲಯವನ್ನು ಹೊರತುಪಡಿಸಿದರೆ 2015-16ರಲ್ಲಿ ಶೇ.9.7ರಷ್ಟು ಪ್ರಗತಿ ಕಂಡಿದ್ದ ಕೃಷಿಯೇತರ ವಲಯ 2016-17ರಲ್ಲಿ ಶೇ.7ಕ್ಕೆ ಕುಸಿದಿದೆ. ಇದು ಭಾರಿ ಕುಸಿತವೇ ಸರಿ.

ಹೀಗಾಗಿ ನೋಟುರದ್ಧತಿ ಆರ್ಥಿಕ ಪ್ರಗತಿ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ನಿಶ್ಚಿತವಾಗಿ ವಿಮರ್ಶಕರು ನಿರೀಕ್ಷಿಸಿದಂತೆಯೇ ಆಗಿದೆ. ಇದೇ ಸಂದರ್ಭದಲ್ಲಿ 2016-17ರಲ್ಲಿ ದೇಶದ ಆರ್ಥಿಕತೆ ಕುಸಿತವನ್ನು ನೋಟು ರದ್ಧತಿಯ ಹಿನ್ನೆಲೆಯಲ್ಲಷ್ಟೇ ನೋಡುವುದು ಗಂಭೀರ ಲೋಪವಾಗಲಿದೆ. ಇದರ ಮೇಲೆ ಹೊಸ ಆರ್ಥಿಕ ನೀತಿಗಳ ಪರಿಣಾಮಗಳು ಗಂಭೀರವಾಗಿದೆ ಎಂಬುದನ್ನು ಕಾಣಬೇಕು. ಈ ಆರ್ಥಿಕ ಕುಸಿತ ಬಹಳ ಹಿಂದೆಯೇ ಆರಂಭಗೊಂಡಿದೆ. ನೋಟುರದ್ಧತಿ ಇದಕ್ಕೆ ಮತ್ತಷ್ಟು ಹಿನ್ನಡೆ ಉಂಟು ಮಾಡಿದೆ. ಮರು ನಗದೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಈ ಕುಸಿತ ನಿಂತಿಲ್ಲ. ಈ ಬೆಳವಣಿಗೆ ದರ ಈ ಹಿಂದಿನ ಮಟ್ಟಕ್ಕೆ ಇನ್ನೂ ತಲುಪಿಲ್ಲ.

ನವ-ಉದಾರವಾದಿ ನೀತಿಗಳು ಮುಂದೆ ದಾರಿಗಾಣದ ಹಂತಕ್ಕೆ ತಲುಪಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹಂತದಲ್ಲಿÉ ಆರ್ಥಿಕ ಸ್ಥಗಿತತೆ ಸಾಮಾನ್ಯ ಸಂಗತಿಯಾಗುತ್ತದೆ. ನಡು-ನಡುವೆ  ಅಪರೂಪಕ್ಕೊಮ್ಮೆ ಆಸ್ತಿ ಸ್ವತ್ತುಗಳ ಕ್ಷಣಿಕ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಭಾರತದಂತಹ ದೇಶಗಳು ಕೂಡ ಈ ನವ-ಉದಾರವಾದಿ ವ್ಯವಸ್ಥೆಯಿಂದ  ಕಳಚಿಕೊಳ್ಳದಿದ್ದರೆ ಅಂದರೆ ಜಾಗತೀಕರಣದಿಂದ ಒಂದು ಮಟ್ಟದ ವರೆಗೆ  ಕಳಚಿಕೊಳ್ಳದಿದ್ದರೆ ಇಂತಹ ಸ್ಥಗಿತತೆಯಲ್ಲಿ ಸಿಲುಕಿಕೊಳ್ಳುತ್ತವೆ.

2016-17ನೇ ಸಾಲಿನ ಪರಿಷ್ಕøತ ತ್ರೈಮಾಸಿಕ ಜಿಡಿಪಿ ದರಗಳು ಕ್ರಮವಾಗಿ ಶೇ.7.9, ಶೇ.7.5, ಶೇ.7.0 ಮತ್ತು ಶೇ.6.1ರಷ್ಟಿದೆ. ಇದನ್ನು ಗಮನವಿಟ್ಟು ನೋಡಿದಾಗ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕುಸಿಯುತ್ತಾ ಸಾಗಿರುವುದು ಕಾಣುತ್ತದೆ.

ಕೃಷಿಯೇತರ ಕ್ಷೇತ್ರಗಳಲ್ಲಿ ಇಲ್ಲಿನ ಉತ್ಪನ್ನಗಳಿಗೆ ಸಿಗುವ ಬೇಡಿಕೆ ಆಧಾರದ ಮೇಲೆ ಜಿಡಿಪಿ ಪ್ರಗತಿ ಅವಲಂಬಿಸಿರುತ್ತದೆ. ಇಲ್ಲಿ ಬೇಡಿಕೆಯೂ ಸಹ ಈ ಕ್ಷೇತ್ರಗಳಲ್ಲಿ ಆಗುವ ಉತ್ಪಾದನೆ ಪ್ರಮಾಣದ ಮೇಲೆ ಅವಲಂಬಿಸಿದ್ದು ಉತ್ಪಾದನೆಯಲ್ಲಿ ತೊಡಗಿಸಿಕೊಂಡವರ ಕೈಗೆ ಹಣವನ್ನು ತಂದುಕೊಡಲಿದೆ. ಇದು ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ತನ್ನಿಂತಾನೆ ಅಥವಾ ಸ್ವಾಯತ್ತ ಬೇಡಿಕೆ ಸೃಷ್ಟಿಸಲಿದೆ. ಇದು ಕೃಷಿಯೇತರ ಕ್ಷೇತ್ರಗಳ ಉತ್ಪಾದನೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.

ಈ ಉತ್ಪನ್ನಗಳಿಗೆ ಒಂದಷ್ಟು ಬೇಡಿಕೆ ಕೃಷಿ ವಲಯದಿಂದಲೂ ಬರಲಿದೆ. ಆದರೆ ಕೃಷಿ ಮೇಲೆ ಅವಲಂಬಿತರ ತಲಾ ಆದಾಯ ಏರಿಕೆ ಕಾಣದಿರುವುದರಿಂದ ಬೇಡಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇತರೆ ಎರಡು ಸ್ವಾಯತ್ತ ಅಂಶಗಳೆಂದರೆ ನಿವ್ವಳ ರಫ್ತು ಮತ್ತು ಸರ್ಕಾರದ ಹೂಡಿಕೆ. ಜಾಗತಿಕ ಆರ್ಥಿಕತೆಯಲ್ಲಿನ ಕುಸಿತ ದೇಶದ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಜೊತೆಗೆ ಡೊನಾಲ್ಡ್ ಟ್ರಂಪ್ ಅವರ ಸ್ವಯಂ ರಕ್ಷಣೆ ನೀತಿಗಳು ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತ ಹೊರೆ ಭಾರತದಂತಹ ದೇಶಗಳ ಮೇಲೆ ಬೀರುತ್ತಿದೆ.

ಮತ್ತೊಂದು ಕಡೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳಲ್ಲಿ ಕಂಡ ಕುಸಿತ ದೇಶದಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಈ ದರ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಅಬಕಾರಿ ಸುಂಕಗಳನ್ನು ಏರಿಸುವ ಮೂಲಕ ಬೊಕ್ಕಸಕ್ಕೆ ಹಣ ಸಂಗ್ರಹಿಸಿತು. ಇದು ನೇರವಾಗಿ ರಫ್ತಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಪ್ರಗತಿಯ ಕುಸಿತವನ್ನು ತಡೆಯಲು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರದಿಂದ ಹೆಚ್ಚಿನ ಹೂಡಿಕೆ ನಿರೀಕ್ಷಿಸುವುದು ಸಹಜ.
 

ಆದರೆ ಮೋದಿ ಅಧಿಕಾರದ ಅವಧಿಯಲ್ಲಿ ಒಟ್ಟಾರೆ ಸರ್ಕಾರಿ ಹೂಡಿಕೆ ಅಲ್ಪವಾಗಿದ್ದು ನಾಮಿನಲ್  (ಹಣದುಬ್ಬರದೊಂದಿಗೆ ಹೊಂದಿಕೆ ಮಾಡದೆ ಲೆಕ್ಕ ಹಾಕುವ ಪ್ರಗತಿ) ಜಿಡಿಪಿ ಪ್ರಗತಿಯ ಪ್ರಮಾಣಕ್ಕಿಂತಲೂ ಕಡಿಮೆ. ಇದರರ್ಥ ಕೇಂದ್ರ ಸರ್ಕಾರ ಆರ್ಥಿಕತೆಗೆ ಉತ್ತೇಜನ ನೀಡುವ ಬದಲು ಮತ್ತಷ್ಟು ಕುಸಿತಕ್ಕೆ ಬೇಕಾದಂತ ಪಾತ್ರವನ್ನು ನಿರ್ವಹಿಸುತ್ತಿದೆ. 2014-15ರಲ್ಲಿ ಕೇಂದ್ರ ಸರ್ಕಾರದ ಒಟ್ಟಾರೆ ವೆಚ್ಚ ಬಜೆಟ್‍ನ ಶೇ.6.7ರಷ್ಟಿತ್ತು, 2015-16ರಲ್ಲಿ ಶೇ.7.6 ಮತ್ತು 2016-17ರಲ್ಲಿ (ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ್ದರಿಂದ) ಶೇ.12.5ರಷ್ಟಿದೆ. 2017-18ನೇ ಸಾಲಿನಲ್ಲಿ ಶೇ.6ರಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಈ ಮಧ್ಯೆ ನಾಮಿನಲ್ ಜಿಡಿಪಿ ಪ್ರಗತಿ ಸರಾಸರಿ ಶೇ.12ರಷ್ಟಿದೆ. ಅಂದರೆ ಸರ್ಕಾರದ ವೆಚ್ಚ ನಾಮಿನಲ್ ಜಿಡಿಪಿ ಪ್ರಗತಿಯೊಂದಿಗೂ ಸರಿಹೊಂದುತ್ತಿಲ್ಲ.

ಒಟ್ಟಿನಲ್ಲಿ, ನವ-ಉದಾರವಾದದ ಈ  ಬಿಕ್ಕಟ್ಟಿನ ಎದುರಲ್ಲಿ ಮೋದಿ ಸರಕಾರ ಈ ಬಿಕ್ಕಟ್ಟನ್ನು   ನವ-ಉದಾರವಾದ ಬಯಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ಎದುರಿಸುವ ಬದಲು ಇನ್ನೂ ಉಗ್ರ ನವ-ಉದಾರವಾದಿಯಾಗಿದೆ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ವಿಧೇಯ ಸೇವಕನಾಗಿದೆ. ನವ-ಉದಾರವಾದಕ್ಕೆ ವಿಚಾರಶೂನ್ಯ ಬದ್ಧತೆ, ಅದರ ಜತೆಗೆ ಆಗಾಗ ನೋಟು ರದ್ಧತಿಯಂತಹ ವಿಚಾರಹೀನ ‘ಗಂಡಸ್ತನ’ದ ಕೃತ್ಯಗಳು (ಇವು ಯಾವ ರೀತಿಯಲ್ಲೂ ನವ-ಉದಾರವಾದಕ್ಕೆ ಸವಾಲು ಹಾಕುವಂತದ್ದಲ್ಲ) ಈ ಸರಕಾರದೆ ಮುಖ್ಯ ಗುಣಲಕ್ಷಣವಾಗಿ ಬಿಟ್ಟಿದೆ. ಇದು ಚಿಮ್ಮಿರುವುದು ಇದೊಂದು ವಿಚಾರಶೂನ್ಯ ಸರಕಾರ, ಅಷ್ಟೇ ಏಕೆ, ವೈಚಾರಿಕತೆಯ ಸಾಮಥ್ರ್ಯವೂ ಇಲ್ಲದ ಎಂಬ ಸಂಗತಿಯಿಂದ. ಎಕೆಂದರೆ ಹೊಗಳುಭಟ್ಟಂಗಿಗಳ ಚಪ್ಪಾಳೆಯನ್ನು ಮಾತ್ರ ಕೇಳುವ ‘ನಾಯಕ’ನಿಗೆ ಇಂತಹ ವೈಚಾರಿಕತೆಯ ಪರಿಕರಗಳ ಕೊರತೆ ಇದೆ. ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಮೂರನೇ ಜಗತ್ತಿನ ದೇಶಗಳಲ್ಲಿ ಇಂತಹ ಸರಕಾರಗಳೇ ಬೇಕಾಗಿದೆ.ಏಕೆಂದರೆ ಇವು ಸದಾ  ‘ಜಾಗತಿಕ ಹಣಕಾಸು ಸಮುದಾಯ’ವನ್ನೇ ಅವಲಂಬಿಸುವ ವೈಚಾರಿಕ ಪರಾವಲಂಬಿಗಳಾಗಿಯೇ ಉಳಿಯುತ್ತವೆ.
 

ಅನು: ಮುರಳಿ

ಹಣಕಾಸು ಮಂತ್ರಿಗಳು ಹೇಳುವುದೇನೋ ನಿಜ, ಆದರೆ ಈ ನಿಧಾನಗತಿ ಬಹಳ ಹಿಂದೆಯೇ ಆರಂಭಗೊಂಡಿದೆ. ನೋಟುರದ್ಧತಿ ಮತ್ತಷ್ಟು ಹಿನ್ನಡೆ ಉಂಟು ಮಾಡಿದೆಯಷ್ಟೆ.  ಆದರೆ ಈ ಹಣಕಾಸು ಮಂತ್ರಿಗಳು ಒಪ್ಪುತ್ತಾರೋ, ಇಲ್ಲವೋ, ನವ-ಉದಾರವಾದಿ ಧೋರಣೆಗಳು ಮುಂದೆ ದಾರಿಗಾಣದ ಹಂತಕ್ಕೆ ತಲುಪಿರುವುದು ಇದಕ್ಕೆ ಪ್ರಮುಖ ಕಾರಣ. ಈ ಹಂತದಲ್ಲಿ ಆರ್ಥಿಕ ಸ್ಥಗಿತತೆ ಸಾಮಾನ್ಯ ಸಂಗತಿಯಾಗುತ್ತದೆ. ನಡು-ನಡುವೆ ಅಪರೂಪಕ್ಕೊಮ್ಮೆ ಆಸ್ತಿ ಸ್ವತ್ತುಗಳ ಕ್ಷಣಿಕ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಈ ನವ-ಉದಾರವಾದಿ ವ್ಯವಸ್ಥೆಯಿಂದ ಕಳಚಿಕೊಳ್ಳದಿದ್ದರೆ ಅಂದರೆ ಜಾಗತೀಕರಣದಿಂದ ಒಂದು ಮಟ್ಟದ ವರೆಗೆ ಕಳಚಿಕೊಳ್ಳದಿದ್ದರೆ ಭಾರತದಂತಹ ದೇಶಗಳು ಕೂಡ ಇಂತಹ ಸ್ಥಗಿತತೆಯಲ್ಲಿ ಸಿಲುಕಿಕೊಳ್ಳುತ್ತವೆ. ಆದರೆ ಮೋದಿ ಸರಕಾರಕ್ಕೆ ಇಂತಹ ಧೈರ್ಯ, ಸಾಮಥ್ರ್ಯ ಇದೆಯೇ?

ಮೋದಿ ಸರಕಾರಕ್ಕೆ ಈ ಬಿಕ್ಕಟ್ಟನ್ನು ನವ-ಉದಾರವಾದ ಬಯಸುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ಎದುರಿಸುವ ವೈಚಾರಿಕ ಸಾಮಥ್ರ್ಯವಿಲ್ಲ. ನವ-ಉದಾರವಾದಕ್ಕೆ ವಿಚಾರಶೂನ್ಯ ಬದ್ಧತೆ, ಅದರ ಜತೆಗೆ ಆಗಾಗ ನೋಟು ರದ್ಧತಿಯಂತಹ ವಿಚಾರಹೀನ ‘ಗಂಡಸ್ತನ’ದ ಕೃತ್ಯಗಳು-ಇವೇ ಈ ಸರಕಾರದ ಮುಖ್ಯ ಗುಣಲಕ್ಷಣವಾಗಿ ಬಿಟ್ಟಿದೆ. ಏಕೆಂದರೆ ಹೊಗಳುಭಟ್ಟಂಗಿಗಳ ಚಪ್ಪಾಳೆಯನ್ನು ಮಾತ್ರ ಕೇಳುವ ‘ನಾಯಕ’ನಿಗೆ ಇಂತಹ ವೈಚಾರಿಕತೆಯ ಪರಿಕರಗಳ ಕೊರತೆ ಇದೆ. ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಮೂರನೇ ಜಗತ್ತಿನ ದೇಶಗಳಲ್ಲಿ ಇಂತಹ ಸರಕಾರಗಳೇ ಬೇಕಾಗಿದೆ.