ರೈತಾಪಿ ಜನಗಳ ವ್ಯಾಪಕ ಪ್ರತಿಭಟನಾ ಕಾರ್ಯಾಚರಣೆ: ಸಿಐಟಿಯು ಅಭಿನಂದನೆ

ಸಂಪುಟ: 
11
ಸಂಚಿಕೆ: 
26
Monday, 19 June 2017

ಅಖಿಲ ಭಾರತ ಕಿಸಾನ್‍ ಸಭಾ ಮತ್ತಿತರ ರೈತಸಂಘಟನೆಗಳ ‘ಭೂಮಿ ಅಧಿಕಾರ್‍ ಆಂದೋಲನ್ ಕರೆಯ ಮೇರೆಗೆ ಸ್ವಾಮಿನಾಥನ್‍ ಆಯೋಗದ ಶಿಫಾರಸು, ಸಮಗ್ರ ಸಾಲ ಮನ್ನಾ, ಮಧ್ಯಪ್ರದೇಶ ಮುಖ್ಯಮಂತ್ರಿ ರಾಜೀನಾಮೆ, ಜಾನುವಾರು ವ್ಯಾಪಾರ ನಿರ್ಬಂಧದ ಅಧಿಸೂಚನೆಯ ರದ್ದು ಮತ್ತಿತರ ಬೇಡಿಕೆಗಳನ್ನು ಆಗ್ರಹಿಸಿ ಜೂನ್‍ 16ರಂದು ನಡೆಸಿರುವ ಯಶಸ್ವಿ ಪ್ರತಿಭಟನಾ ಕಾರ್ಯಾಚರಣೆಗೆ ರೈತಾಪಿಗಳು ಮತ್ತು ರೈತಸಂಘಟನೆಗಳನ್ನು ಸಿಐಟಿಯು ಅಭಿನಂದಿಸಿದೆ.  

ಇದು  ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ರೈತಾಪಿ ಜನಗಳ ಅತ್ಯಂತ ವ್ಯಾಪಕವಾದ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಒಂದು ಎಂದು ಸಿಐಟಿಯು ವರ್ಣಿಸಿದೆ. ಹಿಂದಿ ಭಾಷಿಕ ಪ್ರದೇಶದಲ್ಲಿ ಇದು ಯಶಸ್ವಿಯಾಗಿ ನಡೆದಿರುವುದು ಗಮನಾರ್ಹ ಎಂದು ಅದು ಹೇಳಿದೆ. ಸಿಐಟಿಯು ಸಂಘಗಳು ರೈತರ  ಪ್ರತಿಭಟನೆಗೆ ಬೆಂಬಲವನ್ನು ಸಂಘಟಿಸಿದವು, ಹಲವೆಡೆ ರೈತರೊಂದಿಗೆ ಪ್ರತಿಭಟನೆಗಳಲ್ಲಿ ಕೈಜೋಡಿಸಿದವು, ಹರ್ಯಾಣದಲ್ಲಿ ಹಲವೆಡೆಗಳಲ್ಲಿ ಎಐಕೆಎಸ್‍ ನೊಂದಿಗೆ ಜಂಟಿಯಾಗಿ ರಸ್ತ ತಡೆಗಳನ್ನು ನಡೆಸಿದವು.

ರೈತಾಪಿ ಜನಗಳು ಕಾರ್ಪೊರೇಟ್‍-ಪರ, ರೈತ-ವಿರೋಧಿ ನರೇಂದ್ರ ಮೋದಿ ಸರಕಾರದ ವಿರುದ್ಧ ಬೀದಿಗಿಳಿರುವುದು ಅಭಿನಂದನಾರ್ಹ. ಎಐಕೆಎಸ್ ಮತ್ತು ಭೂಮಿ ಅಧಿಕಾರ್‍ ಆಂದೋಲನ್‍ ತಮ್ಮ ಸತತ ಹೋರಾಟಗಳ ಮೂಲಕ  ಭೂಸ್ವಾಧೀನ ಸೇರಿದಂತೆ ರೈತರ ಪ್ರಶ್ನೆಗಳನ್ನು ರಾಷ್ಟ್ರೀಯ ಅಜೆಂಡಾಕ್ಕೆ ತರುವಲ್ಲಿ ಮುತುವರ್ಜಿ ವಹಿಸಿವೆ. ತಮ್ಮ ಬೇಡಿಕೆಗಳು ಈಡೇರುವ ವರೆಗೆ ಹೋರಾಟವನ್ನು ಮುಂದುವರೆಸುವ ರೈತ ಸಂಘಟನೆಗಳ ನಿರ್ಧಾರವನ್ನು ಸ್ವಾಗತಿಸುತ್ತ ಸಿಐಟಿಯು ಈ ಹೋರಾಟಗಳಿಗೆ ತನ್ನ ಸಂಪೂರ್ಣ ಸೌಹಾರ್ಧ ಮತ್ತು ಬೆಂಬಲ ವ್ಯಕ್ತಪಡಿಸಿದೆ.

ಮೋದಿ ಸರಕಾರ ಕೃಷಿಯ ಕಾರ್ಪೊರೇಟೀಕರಣದ ತನ್ನ ಧೋರಣೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಕ್ಷಣ ರೈತಾಪಿ ಜನಗಳ ನೈಜ ಬೇಡಿಕೆಗಳನ್ನು ಸ್ವೀಕರಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಸಿಐಟಿಯು ರಾಜ್ಯಸಮಿತಿಗಳು ರೈತರೊಂದಿಗೆ ಸೌಹಾರ್ದವನ್ನು ಮುಂದುವರೆಸಬೇಕು ಎಂದು ತನ್ನ ಘಟಕಗಳಿಗೆ ಕರೆ ನೀಡಿದೆ.