ದೇಶಾದ್ಯಂತ ಜಾನುವಾರು ಮಾರಾಟ ನಿಷೇಧ ಅಧಿಸೂಚನೆ ಸುಟ್ಟು ರೈತರ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
26
Sunday, 18 June 2017

ಜೂನ್ 9 ರಂದು ದೇಶಾದ್ಯಂತ ಸಾವಿರಾರು ರೈತರು ಮಾಂಸಕ್ಕಾಗಿ ಜಾನುವಾರು ಮಾರಾಟ ನಿಷೇಧಿಸುವ ಕೇಂದ್ರ ಸರಕಾರದ ಅಧಿಸೂಚನೆಯ ಪ್ರತಿಗಳನ್ನು ಸುಡುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹೆಚ್ಚಿನ ರಾಜ್ಯಗಳಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
 

ಬೃಹತ್ ಪ್ರಮಾಣದಲ್ಲಿ ರೈತರು ಇದರಲ್ಲಿ ಭಾಗವಹಿಸಿರುವುದು ಜಾನುವಾರುಗಳನ್ನು ನಿಷ್ಪ್ರಯೋಜಕಗೊಳಿಸುವ ಸರಕಾರದ ರೈತ-ವಿರೋಧಿ ಕ್ರಮಕ್ಕೆ ರೈತರ ಆಕ್ರೋಶವನ್ನು ಅಭಿವ್ಯಕ್ತಗೊಳಿಸಿದೆ,.  ಆರೆಸ್ಸೆಸ್-ಬಿಜೆಪಿ ಕುಟುಂಬಗಳಿಗೆ ಸೇರಿದ ರೈತರು ಕೂಡ ಇದರಲ್ಲಿ ಭಾಗವಹಿಸಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಹೇಳಿದೆ.
 

ದಿಲ್ಲಿಯಲ್ಲಿ ಜಂತರ್‍ಮಂತರ್‍ನಲ್ಲಿ ಪ್ರತಿಭಟನಾ ಕಾರ್ಯಕ್ರಮ ನಡೆಯಿತು. ಭೂಮಿ ಅಧಿಕಾರ್ ಆಂದೋಲನ ಮತ್ತು ವಿವಿಧ ಸಾಮೂಹಿಕ ಮತ್ತು ವರ್ಗ ಸಂಘಟನೆಗಳ ಮುಖಂಡರು ಇದರಲ್ಲಿ ಭಾಗವಹಿಸಿದರು. ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ, ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್, ಎನ್‍ಎಫ್‍ಐಡಬ್ಲ್ಯು ಪ್ರಧಾನ ಕಾರ್ಯದರ್ಶಿ ಅನ್ನಿ ರಾಜ, ಎಐಡಿಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಳೆ, ಎಐಎಡಬ್ಲ್ಯುಎ ಜಂಟಿ ಕಾರ್ಯದರ್ಶಿ ಸುನಿತ್ ಚೊಪ್ರಾ ಮತ್ತು ಭೂಮಿ ಅಧಿಕಾರ್ ಆಂದೋಲನದ ಮುಖಂಡರಾದ ಸ್ನೇಹಲತಾ ಹಾಗು ಸಂಜೀವ್ ಭಾಗವಹಿಸಿದವರಲ್ಲಿ ಪ್ರಮುಖರು.

ನರೇಂದ್ರ ಮೋದಿ ಸರಕಾರ ಈ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವ ವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ಈ ಮುಖಂಡರು ಹೇಳಿದರು.