ಜೂನ್ 16: ದೇಶಾದ್ಯಂತರೈತರಬೃಹತ್‍ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
26
Thursday, 15 June 2017

ರೈತ-ವಿರೋಧಿ ಬಿಜೆಪಿ ಸರಕಾರಗಳ ವಿರುದ್ಧ  ಆಕ್ರೋಶದ ಐಕ್ಯ ಕಾರ್ಯಾಚರಣೆಗಳು ಐಕ್ಯ ಹೋರಾಟಗಳನ್ನು ನಡೆಸಲು 100ಕ್ಕೂ ಹೆಚ್ಚು ರೈತ ಸಂಘಟನೆಗಳ ನಿರ್ಧಾರ

ಜೂನ್‍ 16ರಂದು ದೇಶಾದ್ಯಂತ ನಡೆದ ಬ್ರಹತ್ ಪ್ರತಿಭಟನೆಗಳಲ್ಲಿ ರೈತರು ರಸ್ತೆಗಳನ್ನು ಅಡ್ಡಗಟ್ಟಿದ್ದಲ್ಲದೆ ಪ್ರಧಾನ ಮಂತ್ರಿ ಮೋದಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‍ ಸಿಂಗ್‍ ಚೌಹಾಣ್ ಮತ್ತು ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರದೇಶದ ಮಂದ್‍ಸೌರ್‍ನಲ್ಲಿ ಆರು ರೈತರ ಅಮಾನುಷ ಹತ್ಯೆ ಮತ್ತು ಬಿಜೆಪಿ ಸರಕಾರದ ರೈತ-ವಿರೋಧಿ ಧೋರಣೆಗಳು ಹಾಗೂ ಸಂವೇದನಾಶೂನ್ಯತೆಯ ವಿರುದ್ಧ ಈ ಸಮರಧೀರ ಐಕ್ಯ ಸೌಹಾರ್ಧ ಕಾರ್ಯಾಚರಣೆಗೆ ಅಖಿಲ ಭಾರತ ಕಿಸಾನ್‍ ಸಭಾ (ಎಐಕೆಎಸ್) ದೇಶದ ರೈತಾಪಿ ಜನಗಳನ್ನು ಅಭಿನಂದಿಸಿದೆ.
 

ವರದಿಗಳ ಪ್ರಕಾರ ಬಂಗಾಲದ ಎಲ್ಲ 355 ಬ್ಲಾಕುಗಳಲ್ಲಿ ರೈತರು ಬೃಹತ್‍ ಪ್ರಮಾಣದಲ್ಲಿ ಭಾಗವಹಿಸಿದರು. ಕೇರಳದಲ್ಲಿ ಎಲ್ಲ ಜಿಲ್ಲೆಗಳಲ್ಲಿ ರಸ್ತೆ ತಡೆಗಳು ಮತ್ತು ಪ್ರತಿಕೃತಿ ದಹನಗಳು ನಡೆದವು. ತ್ರಿಪುರಾದಲ್ಲಿ ಭಾರೀ ಮಳೆಯ ನಡುವೆಯೂ ಎಲ್ಲ ಕಡೆಗಳಲ್ಲಿ ಸಾವಿರಾರು ರೈತರು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಮಧ್ಯಪ್ರದೇಶ, ರಾಜಸ್ತಾನ, ಒಡಿಶ, ಹರ್ಯಾಣ, ಉತ್ತರಪ್ರದೇಶ, ತೆಲಂಗಾಣ, ತಮಿಳುನಾಡು, ಝಾರ್ಖಂಡ್‍ನಲ್ಲಿ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದರು.
 

ಮಧ್ಯಪ್ರದೇಶ ಪೋಲೀಸರು ರೇವಾದಲ್ಲಿ  ಎಐಕೆಎಸ್‍ ರಾಜ್ಯ ಕಾರ್ಯದರ್ಶಿ ರಾಮ್‍ ನಾರಾಯಣ್ ಅವರನ್ನು ಪ್ರತಿಭಟನಾ ನಿರತ ನೂರಾರು ರೈತರೊಂದಿಗೆ ಬಂಧಿಸಿದರು. ಮೊರೆನ ಜಿಲ್ಲೆಯ ಕೈಲಾರಸ್‍ ಮತ್ತಿತರ ಹಲವು ಕಡೆಗಳಲ್ಲಿಯೂ ರೈತರನ್ನು ಬಂಧಿಸಲಾಯಿತು. ರಾಜ್ಯಾದ್ಯಂತ 1500ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಯಿತು ಎಂದು ವರದಿಯಾಗಿದೆ.  ಹಲವೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೈತರು ಅಡ್ಡಗಟ್ಟಿ ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು.
 

ರಾಜಸ್ತಾನದಲ್ಲಿ ಅಂದು ಸಾಲಮನ್ನಾ, ಫಲದಾಯಕ ಬೆಲೆಗಳು, ಚೌಹಾಣ್‍ ರಾಜೀನಾಮೆಗಾಗಿ ಮತ್ತು ಜಾನುವಾರು ವ್ಯಾಪಾರ ನಿರ್ಬಂಧದ ಅಧಿಸೂಚನೆಯ ವಿರುದ್ಧ ಬೃಹತ್‍ ಪ್ರತಿಭಟನೆಗಳು ನಡೆದವು. ಸಿಕಾರ್‍ನಲ್ಲಿ ಕಲೆಕ್ಟರ್‍ ಕಚೇರಿಯ ಘೇರಾವ್‍ ನಡೆಸಿದ ಮಹಾಪಡಾವ್‍ ನಂತರ ಅಧಿಕಾರಿಗಳು ಈರುಳ್ಳಿಯ ನ್ಯಾಯಬೆಲೆಯಲ್ಲಿ ಖರೀದಿಗೆ ಮತ್ತು ರೈತರ ಇತರ ಅಹವಾಲುಗಳನ್ನು ಪರಿಶೀಲಿಸಲು ಒಪ್ಪುವಂತೆ ಮಾಡಲಾಯಿತು.
 

ಹರ್ಯಾಣದಲ್ಲಿ 9 ಜಿಲ್ಲೆಗಳಲ್ಲಿ ಜೂನ್‍ 14ರಿಂದ ಧರಣಿಗಳು ನಡೆಯುತ್ತಿದ್ದು ಕೆಲವು ಜಿಲ್ಲೆಗಳಲ್ಲಿ ಅವು ಕಲೆಕ್ಟರ್‍ ಕಚೇರಿಗಳ ಘೇರಾವ್‍ಗಳಾಗಿ  ಪರಿವರ್ತನೆಗೊಂಡವು. ಹಿಸ್ಸಾರ್‍ನಲ್ಲಿ ಮುತ್ತಿಗೆ ಆನಂತರವೂ ಮುಂದುವರಿಯಿತು. ಪಂಜಾಬಿನಲ್ಲಿ ರಾಜ್ಯಾದ್ಯಂತ ರಸ್ತೆ ತಡೆಗಳು ಆರಂಭವಾಗಿ ಒಂದು ವಾರದ ವರೆಗೆ ಅದನ್ನು ಮುಂದುವರೆಸಲಾಗಿದೆ.
 

ಬಿಹಾರ, ಅಸ್ಸಾಂ, ಜಮ್ಮು-ಕಾಶ್ಮೀರದಲ್ಲಿ ಜೂನ್‍ 14ರಂದು ಪ್ರತಿಭಟನೆ ನಡೆದರೆ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಜೂನ್ 12ರಂದು ನಡೆಯಿತು. ಉತ್ತರಪ್ರದೇಶದಲ್ಲಿ ಮೆರವಣಿಗೆಗಳು, ಪ್ರತಿಕೃತಿ ದಹನ ಮತ್ತು ಮತಪ್ರದರ್ಶನಗಳು ನಡೆದವು. ತಮಿಳುನಾಡಿನಲ್ಲಿ ಜೂನ್‍ 14ರಂದು ತಿರುವರೂರ್‍ನಲ್ಲಿ ಬೃಹತ್‍ ಜಂಟಿ ಪ್ರದರ್ಶನ ನಡೆಯಿತು, ನಂತರ ಜೂನ್‍ 16ರಂದು ತಮಿಳುನಾಡು ವ್ಯವಸಾಯಿಗಳ್‍ ಸಂಘಂ ಪ್ರತಿಭಟನೆಗಳು ನಡೆದವು. ತೆಲಂಗಾಣದಲ್ಲಿ ರೈತ ಸಂಘ ಮತ್ತು ಕೃಷಿಕೂಲಿಕಾರರ ಸಂಘ ಜಂಟಿಯಾಗಿ ರಾಸ್ತಾರೋಕೋ ನಡೆಸಿದವು. ಒಡಿಶದಲ್ಲಿ ಎಲ್ಲ ಕಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಭಾಗವಹಿಸಿದರು.
 

ಭೂಮಿ ಅಧಿಕಾರ್‍ ಆಂದೋಲನ್‍ನ ಅಂಗ ಸಂಘಟನೆಗಳೂ ಈ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವು. ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ರೈತರ ಹೋರಾಟಕ್ಕೆ ಸಿಕ್ಕ ವಿಜಯ ದೇಶಾದ್ಯಂತ ರೈತರಿಗೆ ಹೊಸ ಹುರುಪು ತುಂಬಿವೆ. ಮಧ್ಯಪ್ರದೇಶ, ಝಾರ್ಖಂಡ್‍ ಮತ್ತಿತರ ಕಡೆಗಳಲ್ಲಿ ಅಮಾನುಷ ದಮನ ರೈತರ ಹೋರಾಟಗಳನ್ನು ತಡೆಯಲಾರವು ಎಂದಿರುವ ಎಐಕೆಎಸ್ ಜೂನ್‍ 16ರಂದು 100ಕ್ಕೂ ಹೆಚ್ಚು ಸಂಘಟನೆಗಳ ಸಭೆ ನಡೆದು ಮುಂಬರುವ ದಿನಗಳಲ್ಲಿ ಸಂಯೋಜಿತ ಕಾರ್ಯಾಚರಣೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ರೈತಾಪಿ ಜನಗಳ ಎಲ್ಲ ಬೇಡಿಕೆಗಳು ಈಡೇರುವ ವರೆಗೆ ರೈತಾಪಿಗಳು, ಶ್ರಮಜೀವಿ ಸಮೂಹಗಳು ಮತ್ತು ದಮನಿತ ವಿಭಾಗಗಳನ್ನು ಒಂದುಗೂಡಿಸಿ ಹೋರಾಟಗಳನ್ನು ತೀವ್ರಗೊಳಿಸುವುದಾಗಿ ಎಐಕೆಎಸ್‍ ಎಚ್ಚರಿಸಿದೆ.