ಹಣಕಾಸು ಮಂತ್ರಿಗಳೇ, ರೈತರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ-ಎಐಕೆಎಸ್

ಸಂಪುಟ: 
11
ಸಂಚಿಕೆ: 
26
Sunday, 18 June 2017

ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರ ಹಣ ಕೊಡಲು ಸಾಧ್ಯವಿಲ್ಲ, ಅದರ ಸಂಪೂರ್ಣ ಹೊರೆಯನ್ನು ರಾಜ್ಯ ಸರಕಾರಗಳೇ ಹೊರಬೇಕು ಎಂಬ ಹಣಕಾಸು ಮಂತ್ರಿಗಳ ಹೇಳಿಕೆಯನ್ನು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಬಲವಾಗಿ ಖಂಡಿಸಿದೆ. ಇದು ಸಂಪೂರ್ಣವಾಗಿ ಸಂವೇದನಾಶೂನ್ಯ ಹೇಳಿಕೆ ಎಂದು ಅದು ವರ್ಣಿಸಿದೆ.
 

ರೈತರು ನಮಗೆ ಸ್ವಲ್ಪ ಅನುಕೂಲ ಮಾಡಿಕೊಡಿ ಎಂದೇನೂ ಭಿಕ್ಷೆ ಕೇಳುತ್ತಿಲ್ಲ, ಅವರು ತಮ್ಮ ಹಕ್ಕನ್ನು ಆಗ್ರಹಿಸುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಜಾರಿ ಮಾಡಬೇಕಾದ್ದು ಕೇಂದ್ರ ಸರಕಾರದ ಜವಾಬ್ದಾರಿ. ಕಳೆದ ಮೂರು ವರ್ಷಗಳಲ್ಲಿ  ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ಹಣಕಾಸು ಮಂತ್ರಿಗಳು ಅದನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಸರಕಾರದ ತಪ್ಪು ಧೋರಣೆಗಳಿಂದಾಗಿ ರೈತರು ಸಾಲಬಲೆಯಲ್ಲಿ ಸಿಲುಕಿದ್ದಾರೆ ಎಂದು ಅದು ಹಣಕಾಸು ಮಂತ್ರಿಗಳಿಗೆ ನೆನಪಿಸಿದೆ.
 

ರೈತರ ಹೋರಾಟಗಳ ಒತ್ತಡದಿಂದಾಗಿ ಸಾಲಮನ್ನಾ ಪ್ರಕಟಿಸಿರುವ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿಗಳು ಅರುಣ್ ಜೇಟ್ಲಿ ಅವರ ಸಂವೇದನಾಶೂನ್ಯ ಹೇಳಿಕೆಗೆ ಉತ್ತರ ಕೊಡಬೇಕಾಗಿದೆ ಎಂದಿರುವ ಎಐಕೆಎಸ್ ಈಗಾಗಲೇ ಯೋಜಿಸಿರುವ ಜೂನ್ 16 ರ ಪ್ರತಿಭಟನೆಯಲ್ಲಿ ದೇಶಾದ್ಯಂತ ರೈತ-ವಿರೋಧಿ ಹಣಕಾಸು ಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳ ಪ್ರತಿಕೃತಿಗಳನ್ನು ದಹಿಸಲಾಗುವುದು ಎಂದಿದೆ. ಈ ಪ್ರತಿಭಟನೆಯಲ್ಲಿ ರೈತರು  ಮತ್ತು ಕೃಷಿಕೂಲಿಕಾರರು ಮತ್ತು ದಮನಿತ ಜನವಿಭಾಗಗಳ ನೂರಾರು ಸಂಘಟನೆಗಳು ಭಾಗವಹಿಸುತ್ತವೆ ಎಂದು ಅದು ಹೇಳಿದೆ.