ಹಗಲು-ಇರುಳೂ ಹಕ್ಕಿನ ಹೋರಾಟದಲ್ಲಿ ರಾಮನಗರದ ಇರುಳಿಗರು

ಸಂಪುಟ: 
11
ಸಂಚಿಕೆ: 
26
Sunday, 18 June 2017

ರಾಮನಗರ ಜಿಲ್ಲೆಯ ಇರುಳಿಗರು ಬುಡಕಟ್ಟು ಸಮುದಾಯದ ನೂರಾರು ಕುಟುಂಬಗಳು ಜಿಲ್ಲಾಧಿಕಾರಿಗಳ ಕಛೇರಿಯೆದುರು 2017 ಮೇ 24 ರಿಂದ ಹಗಲು ರಾತ್ರಿ ನಿರಂತರ ಧರಣಿ ಕುಳಿತಿವೆ. ಅವರು ಗಿಡಗಂಟಿ, ಕಚಡಾವನ್ನೆಲ್ಲಾ ಸ್ವಚ್ಛಗೊಳಿಸಿ ಕುಳಿತುಗೊಂಡಿದ್ದ ಜಾಗದಲ್ಲಿ ಮಹಿಳೆಯೊಬ್ಬರು  ಮೊದಲ ದಿನವೇ ಚೇಳು ಕಡಿತದಿಂದ ಅಸ್ಪತ್ರೆಗೆ ಸೇರಿದ್ದಾಯ್ತು.  ಬಳಿಕ ಪ್ರತಿಭಟನೆಯೆಂಬುದನ್ನು ತಮ್ಮ ಪ್ರತಿಷ್ಟೆಗೆ ಎಸೆದ ಅನಿಷ್ಠ  ಸವಾಲು ಎಂದು ಅವರನ್ನೆಲ್ಲಾ ಅಧಿಕಾರಸ್ತರು ಜಾಗದಿಂದ ಎತ್ತಂಗಡಿ ಮಾಡಿಸಿದರು. ನಡುವೆ ಮಳೆ ಶುರುವಾಗಿದೆ, ಆಶÀ್ರಯಕ್ಕೆ ತಾಡಪಾಲು ಅಷ್ಟೇ. ಹೀಗಿದ್ದರೂ ಧರಣಿ ಮುಂದುವರಿಯಿತು. ಆಗÀ ಧರಣಿ ಹಿಂಪಡಿಯಿರಿ ಎಂದು ಹಲವರ ಒತ್ತಡ ಬೇರೆ. ಆದರೆ ಇವಾವುದಕ್ಕೂ ಜಗ್ಗದೇ  ನೂರಾರು ಇರುಳಿಗರ ಕುಟುಂಬಗಳು ಅಲ್ಲೇ ಧರಣಿ ಮಾಡುತ್ತಿವೆ. ಅಲ್ಲೇ ಗಂಜಿ ನೀರು ಕಾಯಿಸಿಕೊಂಡು ದಿನಗಳೆಯುತ್ತಿದ್ದಾರೆ.
 

ವಿಳಂಬ ತಂತ್ರ
ವಿಚಿತ್ರವೆಂದರೆ, ಇದು ಮೈಸೂರಿಗೆ ಹೋಗುವ ಹೆದ್ದಾರಿ. ಮುಖ್ಯಮಂತ್ರಿಯವರನ್ನೂ ಒಳಗೊಂಡು ಸಂಪುಟದ ಹತ್ತಾರು ಸಚಿವರು ಅಲ್ಲೇ ಓಡಾಡುತ್ತಾರೆ. ಉಸ್ತುವಾರಿ ಸಚಿವರು, ಸಂಸದರೂ ‘ಅಭಿವೃದ್ದಿ’ ಸಭೆಗಳೆಂಬ ಒಡ್ಡೋಲಗ ನಡೆಸುತ್ತಲೇ ಇರುವರಾದರೂ ‘ಅವರ ಅಭಿವೃದ್ಧಿ’ ಅಜೆಂಡಾದಲ್ಲಿ ‘ಇವರು’ ಇಲ್ಲದಿರುವುದರಿಂದ ಕ್ಯಾರೇ ಎನ್ನುತ್ತಿಲ್ಲ. ಧರಣಿಗೆ ಮೊದಲು 24 ರಂದು ಮೆರವಣಿಗೆ ಹೊರಟವರನ್ನು ಮಾರ್ಗದ ಮದ್ಯದಲ್ಲೇ ತಡೆದು ‘ಒಂದು ವಾರ ಕಾಲಾವಕಾಶ ಕೊಡಿ, ಬಗೆಹರಿಸುತ್ತೇನೆ’ ಎಂದು ಹೇಳಿದ್ದ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಇಲ್ಲಿಗೆ ಮೂರು ವಾರಗಳು ಕಳೆದರೂ ಒಂದು ಹಂತದ ಪ್ರಕ್ರಿಯೆಯೂ ನಡೆದಿಲ್ಲ. ಆದರೆ ಹೊಣೆಯಿರುವ ಅಧಿಕಾರಿಗಳು ತಮ್ಮೆಲ್ಲಾ ಲೋಪ, ‘ಅಪರಾಧ’ಗಳನ್ನು ಪಿ.ಡಿ.ಒ.ನಂತಹ ಕೆಳ ಹಂತದ ಅಧಿಕಾರಿಗಳ ಮೇಲೆ ಎತ್ತಿ ಹಾಕಿ ರಕ್ಷಣೆ ಪಡೆಯಲು ಯತ್ನಿಸುತ್ತಿದ್ದಾರೆ!

 

‘ದೊಡ್ಡವರ’ ಆಟಗಳ ನಡುವೆ
ರಾಮನಗರ ಎಂದರೆ ‘ಶೋಲೆ’ ಸಿನಿಮಾ, ಗಬ್ಬರ್‍ಸಿಂಗ್ ಘರ್ಜನೆ ಎಲ್ಲಾ ನೆನಪಿಗೆ ತರುತ್ತದೆಯಲ್ಲವೇ? ಆ ಸಿನಿಮಾ ತೆಗೆದ ಸ್ಥಳವನ್ನೀಗ ಪ್ರೇಕ್ಷಣೀಯ ಸ್ಥಳ ಮಾಡಲು ಸರಕಾರ ಹೊರಟಿದೆ! ಈ ರಾಮನಗರ ಈಗ  ಜಿಲ್ಲೆಯಾಗಿದೆ. ಇದರ ಉಸ್ತುವಾರಿ ಸಿದ್ದು ಸಂಪುಟದಲ್ಲಿ ಪವರ್ ಫುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್, ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಘಟಾನಿಘಟಿಗಳ ರಾಜಕೀಯ ಆಟದ ಕ್ಷೇತ್ರವೂ ಹೌದು. ಅಪಾರ ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿರುವ ಪ್ರದೇಶ.  ಬೆಂಗಳೂರು-ಮೈಸೂರು ಅಭಿವೃದ್ಧಿ ಕಾರಿಡಾರ್‍ನಲ್ಲಿ ಆಯಕಟ್ಟಿನ ಜಾಗ! ಹಾಗೇ ಇಂತಹ ವನ್ಯ ಸಂಪತ್ತಿನ ನಡುವೆ ಇರುಳಿಗರು, ಸೋಲಿಗರು, ಮೇಧರು, ಹಕ್ಕಿ ಪಿಕ್ಕಿ ಬುಡಕಟ್ಟು-ಆದಿವಾಸಿ ಸಮುದಾಯಗಳು ನೂರಾರು ವರುಷಗಳಿಂದ ತಮ್ಮದೇ ವಿಶಿಷ್ಠ ರೀತಿಯಲ್ಲಿ ಬದುಕು ಕಟ್ಟಿಕೊಂಡಿವೆ. ಇಂತಹ ಅನನ್ಯತೆ ಇರುವವರೂ ಇಲ್ಲಿ ಇದ್ದಾರಾ ಎಂದು ಜನ ಅಂದುಕೊಳ್ಳುವಂತೆ ಮೌನದಿಂದಲೇ ತಮ್ಮದೇ ಜೀವನ ನಡೆಸುತ್ತಾ ಬಂದಿದ್ದಾರೆ. ಇಂತಹವರು ನಗರದ ಬೀದಿ ಬದಿಯಲ್ಲಿ ಹೋರಾಟ ಮಾಡುವ ಅಗತ್ಯ ಬಂದದ್ದಾರೂ ಯಾಕೆ?

 

ಬದುಕು ಬೇಗೆಯಲ್ಲಿ
ಒಂದು ಅಂದಾಜಿನಂತೆ ರಾಜ್ಯದಲ್ಲಿ ಇರುಳಿಗರ ಸಂಖ್ಯೆ 16,000. (ಇದರಲ್ಲಿ ಶಿವಮೊಗ್ಗದ ಈರುಳಾರ್ ಸೇರಿಲ್ಲ) ರಾಮನಗರ ಜಿಲ್ಲೆಯಲ್ಲೇ ಸುಮಾರು 12,000 (2011 ರ ಜನಗಣತಿಯಂತೆ 10292. ಇದರಲ್ಲಿ ಗ್ರಾಮೀಣದಲ್ಲಿ 9901, ನಗರ 558). 148 ಹಳ್ಳಿಗಳಲ್ಲಿ ಸುಮಾರು 5500 ಕುಟುಂಬಗಳಿವೆ. ಮುಖ್ಯವಾಗಿ ಕನಕಪುರ, ಮಾಗಡಿ, ರಾಮನಗರ ತಾಲೂಕುಗಳ ಕಾಡುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆ. ಬೆಂಗಳೂರು ಜಿಲ್ಲೆಗೂ ಇವರ ಬದುಕು ಚಾಚಿದೆ. ಕೋಲಾರ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಒಂದಿಷ್ಟು ಜನ ಚದುರಿದ್ದಾರೆ. ತಮಿಳುನಾಡಿನೊಂದಿಗೆ ಪೂರ್ವಿಕರ ನಂಟಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡದ (ಎಸ್.ಟಿ.) ಪಟ್ಟಿಗೆ ಸೇರಿಸಲಾಗಿದೆ.

 

ಈ ಇರುಳಿಗ ಸಮುದಾಯ ಸರ್ವ ರೀತಿಯಿಂದಲೂ ಅತ್ಯಂತ ಹಿಂದುಳಿದಿದೆ. ಬೇಟೆ ಹಾಗೂ ಕಾಡಿನ ಉತ್ಪನ್ನಗಳೇ ಇವರ ಮುಖ್ಯ ಆಹಾರ ಸಂಗ್ರಹಣಾ ವಿಧಾನವಾಗಿತ್ತು. ಕಾಲ ಕ್ರಮೇಣ ಇವರು ಅಲ್ಪ ಸ್ವಲ್ಪ ಕೃಷಿ ಮಾಡಿಕೊಂಡು  ಆಹಾರದ ಬೆಳೆಗಳನ್ನು ಪಡೆಯುತ್ತಿದ್ದರು. ಈಗ ಬೇಡಿಕೆ ಇಟ್ಟಿರುವುದು ಈ ಜಿಲ್ಲೆಯ ಆದಿವಾಸಗಳದ್ದು. ಆದರಲ್ಲೂ ನಿರ್ದಿಷ್ಠವಾಗಿ ಮೊದಲ ಹಂತದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯಂತೆ ಮೂಲಭೂತ ಸರ್ವೆ ಮುಗಿದಿರುವ ಮೂರು ತಾಲೂಕಿನ, ಮೂರು ಹಾಡಿ/ಹಳ್ಳಿಗಳಿಗೆ ಸಂಬಂಧಿಸಿದವರ ಬೇಡಿಕೆ ಈಡೇಸಿರೆಂದು. ಇದರಲ್ಲಿ ಕಾಡಿನಲ್ಲಿ ವಾಸವಿದ್ದವರನ್ನು 1980 ರಲ್ಲಿ ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಿದರು. ಕನಕಪುರ ತಾಲೂಕಿನಲ್ಲಿ ಬರುವ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನಕ್ಕೂ ಸೇರಿಸಲಾಯಿತು. ಇದರಿಂದಾಗಿ ಇರುಳಿಗರು ನೆಲೆ ತಪ್ಪಿದರು. ಬಹುತೇಕರು ಕೂಲಿಯಾಳಾಗಿ, ಇಟ್ಟಿಗೆಗೂಡುಗಳಲ್ಲಿ, ಕಲ್ಲಿ ಕ್ವಾರಿಗಳಲ್ಲಿ ಜೀತ ಮಾಡಿ ಬದುಕಬೇಕಾಯಿತು.

ಹಕ್ಕಿನ ಧೃಡ ಹೋರಾಟ
ಮುಂದೆ 2006 ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಅಂಗೀಕಾರವಾದ ಬಳಿಕ 2014 ರಲ್ಲಿ ಆ ಕಾಯ್ದೆಯಂತೆ ತಮಗೆ ತಮ್ಮ ಪಾರಂಪರಿಕ ನೆಲೆಗಳಲ್ಲೇ ಭೂಮಿಯ ಹಕ್ಕು ಮತ್ತು ಸಮುದಾಯದ ಹಕ್ಕುಗಳು ಸಿಗಬೇಕೆಂದು ಹೋರಾಟ ಆರಂಭವಾಯಿತು. ಕಾಯದೆ ತಿಳಿಸುವಂತೆ ಸಾಕ್ಷ್ಯಾಧಾರಗಳನ್ನು ಒದಗಿಸಲಾಯಿತು. ಅರಣ್ಯ ಹಕ್ಕು ಸಮಿತಿಯೂ ಕ್ಲೇಮು ಅರ್ಜಿಗಳನ್ನು ಸಭೆ ನಡೆಸಿ ಅಂಗೀಕರಿಸಿ ಮುಂದಿನ ಕ್ರಮಕ್ಕೆ ಮಂಡಿಸಿತು. ವಿಳಂಬವಾದ್ದರಿಂದ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಬುಡಗಯ್ಯನದೊಡ್ಡಿಯಲ್ಲಿ ಅರೆ ಬೆತ್ತಲೆ ನಿರಂತರ ಧರಣಿನಡೆಸಲಾಯಿತು. ಈ ಬಳಿಕ ಸರಕಾರದ ಆಡಳಿತ ಅಲ್ಲಿನ ಭೂಮಿಯನ್ನು ಉಪಗ್ರಹದ ಮೂಲಕ ಸರ್ವೇ ನಡೆಸಿತು. 40 ಹಳ್ಳಿಗಳಲ್ಲಿ ಸರ್ವೇ ಕಾರ್ಯ ಆಗಿದೆ, ಆದರೆ 25 ಹಳ್ಳಿಗಳದ್ದು ನಿಂತಿದೆ.

 

ಈಗ ಕೇಳುತ್ತಿರುವುದು ಈಗಾಗಲೇ ಸರ್ವೆ ಮಾಡಲಾಗಿರುವ ರಾಮನಗರದ ಗೊಲ್ಲರದೊಡ್ಡಿ (ವಡ್ಡರಹಳ್ಳಿ), ಮಾಗಡಿ ತಾಲೂಕಿನ ಜೋಡಗಟ್ಟೆ ಇರುಳಿಗರ ಕಾಲೋನಿ ಮತ್ತು ಕನಕಪುರ ತಾಲೂಕಿನ ಬುಡಗಯ್ಯನದೊಡ್ಡಿ ಪ್ರದೇಶಗಳÀ ಆದಿವಾಸಿಗಳಿಗೆ ಅರಣ್ಯ ಹಕ್ಕುಗಳ ಕಾಯ್ದೆ 2006 ರಂತೆ ಭೂಮಿಯ ಹಕ್ಕು ಮತ್ತು ಸಮುದಾಯದ ಹಕ್ಕುಗಳನ್ನು ಒದಗಿಸಬೇಕು ಎಂಬುದು ಇವರ ಆಗ್ರಹ. ಅಲ್ಲದೇ ನಾಗರೀಕ ಸೌಲಭ್ಯ, ಕೆಲವು ಭೂಮಾಲೀಕರೆಂದು ಹೇಳಿಕೊಳ್ಳುವ (ರಿಯೆಲ್ ಎಸ್ಟೆಟ್)ವರಿಂದ ಸದಾ ಕಿರುಕುಳ ತಡೆಯಲು, ಇತ್ಯಾದಿ ಪ್ರಶ್ನೆಗಳಿವೆ.

ಅರಣ್ಯ ಹಕ್ಕುಗಳ ಕಾಯ್ದೆಯಂತೆ 2010 ರಿಂದ 1900 ಕ್ಲೇಮು ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ ಕೇವಲ 310 ಹಕ್ಕುಪತ್ರಗಳನ್ನು ಕಾಟಾಚಾರಕ್ಕೆ ಎಂಬಂತೆ ಜಿಲ್ಲಾಡಳಿತ ನೀಡಿದೆ. ಒಟ್ಟಾರೆ ಈಗಿನ ಬೇಡಿಕೆಗಳನ್ನು ಒಪ್ಪಲು ಆಡಳಿತಕ್ಕೆ ಕಾನೂನಾತ್ಮವಾಗಿ ಅಡ್ಡಿಗಳಿಲ್ಲ. ಆದರೆ ಅಡ್ಡಿ ಇರುವುದು ಕೇವಲ ಪಟ್ಟಭದ್ರ ಹಿತಾಸಕ್ತಿಗಳಿಂದ. ಈ ಪ್ರದೇಶಗಳಲ್ಲಿ ಭೂಮಿಯೀಗ ಭಾರೀ ಬೆಳೆ ಬಾಳುತ್ತದೆ. ಅಂತಹದ್ದನ್ನು ಇವರಿಗೆ ಕೊಡೋದೇ ಎಂಬ ತಿರಸ್ಕಾರ, ದ್ವೇಷ. ಮೇಲಾಗಿ ಈ ಅರಣ್ಯದಲ್ಲಿ ಸಕ್ರಮ, ಅಕ್ರಮವಾಗಿ ಮರಳು, ಕಲ್ಲು ಕ್ವಾರಿ ನಡೆಯುತ್ತಿರುವ ಪ್ರದೇಶವೂ ಕೂಡ. ಇಲ್ಲಿ ನಡೆಯುವ ಅಕ್ರಮಗಳಲ್ಲಿ ಕೆಲವರ ಮೇಲೆ ಅನಿವಾರ್ಯವಾಗಿ ಹಲವಾರು ಮೊಕದ್ದಮೆಗಳೂ ದಾಖಲಾಗಿವೆ. ಇಂತಹವರದ್ದು ಒಳ ವಿರೋಧವಿದೆ. ಆದರೆ ಈ ಸಮುದಾಯದ ಜನರಿಗೆ ಭೂಮಿ, ಅರಣ್ಯ ಹಕ್ಕು ನೀಡುವುದಕ್ಕೆ ಅವರದ್ದೇ ಪ್ರದೇಶ ಇದಾಗಿದ್ದು ಯಾವುದೇ ತೊಂದರೆ ಬರಲಾರದು. ಅವೆಲ್ಲಾ ಉಳುಮೆ ಮಾಡಿದ, ಬಾಳಿದ ಜಾಗಗಳು.
 

ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿ ಮಾಡದೇ ಆದಿವಾಸಿಗಳನ್ನು ವಂಚಿಸುತ್ತಿರುವ ಬಗ್ಗೆ ದೇಶದ ಸುಪ್ರಿಂ ಕೋರ್ಟ್ 2013 ರಲ್ಲಿ ಅತ್ಯಂತ ತೀಕ್ಷಣವಾಗಿ ಟೀಕಿಸಿ ಎಚ್ಚರಿಸಿದೆ. ಜಾರಿಗೊಳಿಸದೆ ವಂಚಿಸುವವರ ಮೆಲೆ ಕ್ರಿಮಿನಲ್ ದೂರು ದಾಖಲಾದ ಉದಾಹರಣೆಗಳು ಇವೆ. ಆದ್ದರಿಂದಲೇ ಈಗ ಹೋರಾಟ ನಡೆಸುತ್ತಿರುವ ರಾಮನಗರ ಇರುಳಿಗರ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘ (ರಿ) ಜಿಲ್ಲಾಡಳಿತ ಸಬೂಬು ನೀಡುವುದನ್ನು ಒಪ್ಪುತ್ತಿಲ್ಲ. ನಿರಾಕರಿಸಲು ಕಾರಣಗಳೇ ಇಲ್ಲದಿರುವಾಗ ವಿಳಂಬ ಪ್ರಶ್ನಿಸಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮುಂತಾದವರ ಮೇಲೆ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದೆ. ಎಲ್ಲಾ ಮಗ್ಗುಲಿನಿಂದ ಪರಿಶೀಲಿಸಿದರೂ ಸಂಘ ಅತ್ಯಂತ ಶಿಸ್ತು, ತಾಳ್ಮೆ ಮತ್ತು ಶಾಂತ ರೀತಿಯಿಂದ ನ್ಯಾಯ ಬದ್ದ ಹಕ್ಕು ಪಡೆಯಲು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತಿದೆ. ‘ನಮ್ಮದೇನಿದ್ದರೂ ಹಕ್ಕುಗಳಿಗಾಗಿ ನಡೆದಿರುವ ಹೋರಾಟ. ಕಾನೂನನ್ನೇ ಜಾರಿಮಾಡಿರೆಂದೇ ಕೇಳುತ್ತಿದ್ದೇವೆ. ಯಾವುದೇ ವ್ಯಕ್ತಿ ವಿರುದ್ಧದ ಹೋರಾಟವು ಅಲ್ಲ. ಜಿಲ್ಲಾಧಿಕಾರಿಗಳು ಒಂದು ವಾರದ ಸಮಯ ಕೇಳಿದ್ದರು, ಮೂರು ವಾರ ಮುಗಿದಾಗಿದೆ. ಬೇಕಾದರೆ ಇನ್ನೂ ಒಂದು ವಾರ ಇಲ್ಲೇ ಕೂತಿರಲು ನಾವು ಸಿದ್ಧ. ಆದರೆ ಕೆಲಸ ನಡೆಯಬೇಕು’ ಎನ್ನುತ್ತಾರೆ ಮುಖಂಡರಾದ ಸಮಿತಿ ಅದ್ಯಕ್ಷ ಕೃಷ್ಣಮೂರ್ತಿಯವರು.  ಹೋರಾಟದಲ್ಲಿ ಸದಾ ಸಾಥ್ ಕೊಡುತ್ತಿರುವವರು ಗೋವಿಂದರಾಜು, ಗೌರವ ಅದ್ಯಕ್ಷರಾದ ಮಹದೇವಯ್ಯ, ಶಿವು ಮುಂತಾದವರು.
 

‘ಅಡ್ಡಿಗಳಿಗೆ ಅಂಜುವುದಿಲ್ಲ’
ಇದನ್ನು ಸಹಿಸದ ಶಕ್ತಿಗಳು ಏನಾದರೂ ಮಾಡಿ ಈ ಹೋರಾಟವನ್ನು ವಿಫಲಗೊಳಿಸಲು ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಮೊದಲು ಕೆಲವು ಸಂಘ ಸಂಸ್ಥೆಗಳ ಹೆಸರಿನಲ್ಲಿ, ಸ್ಥಳೀಯ ರಾಜಕೀಯ ಮುಖಂಡರುಗಳಾಗಿ ಭರವಸೆ ನೀಡಿ ಹಿಂಪಡೆಯಲು ಒತ್ತಾಯಿಸಿದರು. ಈಗ ಕಂದಾಯ ನೌಕರರನ್ನು ಎತ್ತಿ ಕಟ್ಟಿ ಕೇಸ್ ಹಾಕಿ ಭಯ ಹುಟ್ಟಿಸಿ ಭ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಜನರನ್ನು ಹಾದಿ ತಪ್ಪಿಸಲು ಮುಂದಾಗಿದ್ದಾರೆ. ಕಾಯ್ದೆಯಲ್ಲಿ ಇಲ್ಲದ ಅಂಶಗಳನ್ನು ಮತ್ತಷ್ಟೂ ತಿರುಚಿ ಹಕ್ಕೇ ಅಸಿಂಧು ಎಂದು ಪ್ರಚಾರಿಸುತ್ತಿದ್ದಾರೆ.  ಅರಣ್ಯ ಹಕ್ಕು ಸಮಿತಿಗೆ ಆದಿವಾಸಿ ಅದ್ಯಕ್ಷನಾಗಿರಬೇಕಿದೆ. ಇವರ ಪ್ರಕಾರ ಅದ್ಯಕ್ಷರಾದವರು ತಮ್ಮ ಭೂಮಿ ಹಕ್ಕು ಕೇಳಬಾರದಂತೆ. ಅಂದರೆ ವಂಚಿತ ಹಕ್ಕುದಾರ ಆದಿವಾಸಿಯೇ ಅದ್ಯಕ್ಷರಾಗುವದರಲ್ಲಿ, ತನ್ನ ಹಕ್ಕು ಕೇಳುವುದರಲ್ಲಿ ಯಾವ ತಪ್ಪಿದೆ? ಕೊನೆಗೂ ಅರ್ಜಿ ಇತ್ಯರ್ಥ ಮಾಡುವುದು ಅದ್ಯಕ್ಷನಲ್ಲ. ಇಡೀ ಸಭೆ, ಸಮಿತಿ. ಇವರಿಗೆ ಅಂತಹ ತಕರಾರು ಇರೋದು ಅಡ್ಡಿ ನಿವಾರಣೆಗಲ್ಲ, ಬದಲಾಗಿ ಅಡ್ಡಿ ಮಾಡಿ ವಿಳಂಬಿಸಲು ಅಷ್ಟೆ.

 

ಯೆಚೂರಿಯವರ ಭೇಟಿ-ಬೆಂಬಲ
ಇಷ್ಟು ದಿನಗಳಾದರೂ ಚುನಾಯಿತ ಜನ ಪ್ರತಿನಿಧಿಗಳಾಲೀ, ಉಸ್ತುವಾರಿ ಸಚಿವರಾಗಲೀ, ಸಂಬಂಧಿಸಿದ ಸಮಾಜ ಕಲ್ಯಾಣ ಮಂತ್ರಿಯಾಗಲೀ ಇತ್ತ ಸುಳಿದೇ ಇಲ್ಲ. ಮುಖ್ಯಮಂತ್ರಿಗಳೂ ಕುರುಡು. ಇದು ಖಂಡನೀಯ. ಆದರೆ ಸಿಪಿಐ(ಎಂ)ನ ಅಖಿಲ ಭಾರತ ಫ್ರಧಾನ ಕಾರ್ಯದರ್ಶಿ, ಸಂಸದರಾದ ಸೀತರಾಮ್ ಯೆಚೂರಿ ವಿಷಯ ತಿಳಿದ ಬಳಿಕ ಧರಣಿ ನಿರತರನ್ನು ಭೇಟಿ ಬೆಂಬಲಿಸಿದರಲ್ಲದೇ, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಒತ್ತಡ ಹಾಕುವುದಾಗಿ ಹೇಳಿದರು. ಈ ಹೋರಾಟಕ್ಕೆ ಆರಂಭದಿಂದಲೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಂಬಲಿಸಿ ಭಾಗವಹಿಸಿದೆ. ಅಲ್ಲದೇ ರಾಮನಗರದ ಕರ್ನಾಟಕ ಪ್ರಾಂತ ರೈತ ಸಂಘ, ಸಿ.ಐ.ಟಿ.ಯು., ಟೈಲರ್ಸ್ ಯೂನಿಯನ್, ದಲಿತ ಹಕ್ಕುಗಳ ಸಮಿತಿ ಗಳು ಸಕ್ರಿಯವಾಗಿ ಬೆಂಬಲಿಸಿವೆ. ಮುಖಂಡರಾದ ರಾಘವೇಂದ್ರ, ವನಜಾ, ವೆಂಕಟಾಚಲಯ್ಯ, ಯತೀಶ್ ಕುಮಾರ್, ಸಿದ್ಧ ಮಾದಯ್ಯ, ಕೆ.ಎನ್.ಉಮೇಶ್, ಗೋಪಾಲಕೃಷ್ಣ ಅರಳಹಳ್ಳಿ, ಗುರುಶಾಂತ್ ಎಸ್.ವೈ. ಭೇಟಿ ನೀಡಿದ್ದಾರೆ. ಕೂಡಲೇ ಸರಕಾರ ಮದ್ಯಪ್ರವೇಶ ಮಾಡಿ ಇತ್ಯರ್ಥಗೊಳಿಸದಿದ್ದಲ್ಲಿ ಹೋರಾಟವನ್ನು ಜಿಲ್ಲೆಯಾದ್ಯಂತ ವಿಸ್ತರಿಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.

 

 

 

ಎಸ್.ವೈ. ಗುರುಶಾಂತ್