ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬೃಹತ್ ಧರಣಿ

ಸಂಪುಟ: 
11
ಸಂಚಿಕೆ: 
26
Sunday, 18 June 2017

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಹಾಗೂ ಸರ್ಕಾರದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಇರುವ ವಿದ್ಯಾರ್ಥಿ ವಸತಿನಿಲಯ (ಹಾಸ್ಟೆಲ್)ಗಳಲ್ಲಿ ಅಡುಗೆಯವರು, ಸ್ವಚ್ಛತಾ ಸಿಬ್ಬಂದಿಗಳು, ಕಾವಲುಗಾರರು ಮೊದಲಾದ `ಡಿ’ ವರ್ಗದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸರ್ಕಾರದ ಪ್ರಸ್ತಾವವನ್ನು ಈಗಾಗಲೇ ಹತ್ತಾರು ವರ್ಷಗಳಿಂದ ಸದರಿ ಹುದ್ದೆಗಳಲ್ಲಿ ಕೆಲಸಮಾಡುತ್ತಾ ಬಂದಿರುವ ಹೊರಗುತ್ತಿಗೆ ನೌಕರರು ವಿರೋಧಿಸುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸಕರು ಪಕ್ಷಬೇಧ ಮರೆತು ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿದ್ದರು. ಸರ್ಕಾರ ತಾತ್ಕಾಲಿಕವಾಗಿ ನೇರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿತ್ತು. ಈಗ 4 ತಿಂಗಳ ಬಳಿಕ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
 

ವಸ್ತುಸ್ಥಿತಿ ಹೀಗಿದೆ. ಸಂಬಂಧಪಟ್ಟ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ `ಡಿ’ ವರ್ಗದ ಹುದ್ದೆಗಳು ಖಾಲಿ ಇಲ್ಲ. ಆ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ನೇರ ನೇಮಕಾತಿ ಮೂಲಕ ಹೊಸ ಅಡುಗೆಯವರು, ಕಾವಲುಗಾರರು ಮೊದಲಾದವರು ಆಗಮಿಸಿದರೆ ಅಲ್ಲಿ ಕೆಲಸಮಾಡುತ್ತಾ ಇರುವ ಬಡಪಾಯಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ.

ಹಾಲಿ ಕೆಲಸಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ತೊಂದರೆ ಆಗದಂತೆ ನೇರ ನೇಮಕಾತಿ ಮಾಡಲಾಗುವುದೆಂದೂ, ಹೊಸದಾಗಿ ನಿರ್ಮಾಣ ಆಗುತ್ತಿರುವ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕೆಲಸ ಮಾಡಲು ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ ಎಂದು ಮಾನ್ಯ ಸಮಾಜ ಕಲ್ಯಾಣ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ನೇರ ನೇಮಕಾತಿಯ ಅಧಿಸೂಚನೆಯಲ್ಲಿ ಇದನ್ನು ಸ್ವಷ್ಟ ಪಡಿಸಿಲ್ಲ. ನೇರ ನೇಮಕಾತಿ ಮೂಲಕ ಬರುವ ಹೊಸಬರನ್ನು ಯಾವ ವಿದ್ಯಾರ್ಥಿ ವಸತಿ ನಿಲಯಕ್ಕೂ ನಿಯೋಜಿಸಬಹುದು. ಈಗಾಗಲೇ ಅಂತಹ ಪ್ರಸಂಗಗಳನ್ನು ಹೊರಗುತ್ತಿಗೆ ನೌಕರರು ಎದುರಿಸುತ್ತಿದ್ದಾರೆ. ಒಬ್ಬ ಕಾಯಂ ಅಡುಗೆಯವನು ಒಂದು ವಿದ್ಯಾರ್ಥಿ ವಸತಿ ನಿಲಯದಿಂದ ವರ್ಗಾವಣೆ ಪಡೆದು ಬೇರೊಂದು ವಿದ್ಯಾರ್ಥಿ ವಸತಿ ನಿಲಯಕ್ಕೆ ಬಂದಾಗ ಅಲ್ಲಿ ಈಗಾಗಲೇ ಕೆಲಸಮಾಡುತ್ತಿರುವ ಹೊರಗುತ್ತಿಗೆ ಅಡುಗೆಯವನು ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕಾಗುತ್ತದೆ.
 

ಆದ್ದರಿಂದ ನೇರ ನೇಮಕಾತಿಯನ್ನು ಕೈಬಿಟ್ಟು ತಮ್ಮನ್ನೇ ಆಯಾ ಹುದ್ದೆಗಳಲ್ಲಿ ಕಾಯಂ ಮಾಡಬೇಕೆಂಬುದು ಹೊರಗುತ್ತಿಗೆ ನೌಕರರ ಬೇಡಿಕೆಯಾಗಿದೆ. ಹೊಸದಾಗಿ ನಿರ್ಮಾಣ ಆಗುತ್ತಿರುವ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸೀಮಿತವಾಗಿ ಮಾತ್ರ ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿಮಾಡುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದರಂತೆ ಅಧಿಸೂಚನೆಗೆ ಅಗತ್ಯ ತಿದ್ದುಪಡಿ ಮಾಡಬೇಕೆಂದೂ, ಅಲ್ಲಿಯವರೆಗೆ ನೇರ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ನೌಕರರು ಜೂನ್ 13 & 14 ರಂದು ಬೆಂಗಳೂರಿನಲ್ಲಿ ಬೃಹತ್ ಸಾಮೂಹಿಕ ಧರಣಿಯನ್ನು ನಡೆಸಿದರು. ಸಚಿವರಾದ ಶ್ರೀ ಆಂಜನೇಯರವರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಶ್ರೀ ವಿಕಾಸ ಕುಮಾರ, ಶ್ರೀ ಶಿವಾಜಿ ಡಿಗಿ ಉಪನಿರ್ದೇಶಕರು (ಆಡಳಿತ), ಶ್ರೀ ಹೀರೆಮಠ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ರವರು ಬಂದು ಮನವಿಯನ್ನು ಸ್ವೀಕರಿಸಿ ಮಾತನಾಡಿದರು.
 

ಇದಕ್ಕೂ ಮೊದಲು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನೌಕರರ ಬೃಹತ್ ಮೆರವಣಿಗೆ ನಡೆಯಿತು. ಸುಮಾರು 26 ಜಿಲ್ಲೆಗಳಿಂದ ಸುಮಾರು 3000 ಹೆಚ್ಚು ನೌಕರರು ಪಾಲ್ಗೊಂಡಿದ್ದರು. ನೌಕರರ ಸಂಘದ ರಾಜ್ಯ ಅ ಧ್ಯಕ್ಷರಾದ ನಿತ್ಯಾನಂದಸ್ವಾಮಿ, ಇತರ ಪದಾಧಿಕಾರಿಗಳಾದ ಭೀಮಶೆಟ್ಟಿ ಯಂಪಳ್ಳಿ, ಕೆ. ಹನುಮೇಗೌಡ, ಆಂಜನೇಯ ರೆಡ್ಡಿ, ಸುಭಾಷ್, ವೆಂಕಟೇಶ್ ಕೋಣಿ, ಹೆಚ್.ಹೆಚ್. ನದಾಫ್, ಜಂಬಯ್ಯ ನಾಯಕ್, ಇ.ಆರ್. ಯಲ್ಲಪ್ಪ, ಮುಬಾರಕ್, ಚೆನ್ನಪ್ಪ ಕುಂಬಾರ್, ಪವಾಡೆಪ್ಪ ಚಲವಾದಿ, ಎಸ್. ನಂಜುಂಡಸ್ವಾಮಿ, ಶಾಂತಾ ಗಡ್ಡಿಯವರ್, ಪಿರೂ ರಾಠೋಡ್, ಶಶಿವರ್ಧನ್, ಸುರೇಶ್ ಅಂಗಡಿ, ಲಿಂಗಪ್ಪ ಹಣವಾಳ, ಅಣ್ಣಬಸಪ್ಪ, ಮೋಹನ್ ಕಟ್ಟಿಮನಿ, ಕರಿಯಪ್ಪ ಅಚ್ಚೋಳಿ, ಮಂಜುನಾಥ್ ಕೊರವರ ಮೊದಲಾದವರು ನೇತೃತ್ವವಹಿಸಿದ್ದರು.

ಈ ಹೋರಾಟವನ್ನು ಬೆಂಬಲಿಸಿ ಸರ್ವೋದಯ ಕರ್ನಾಟಕ ಪಕ್ಷದ ಶ್ರೀ ಕೆ.ಎಸ್. ಪುಟ್ಟಣ್ಣಯ್ಯ ಶಾಸಕರು ಮೇಲುಕೋಟೆ, ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೆಗೌಡ. ಸಾಹಿತಿಗಳಾದ ವಡ್ಡಗೆರೆ ನಾಗರಾಜಯ್ಯ, ಸಿಐಟಿಯುನ ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿ, ಯಮುನಾ ಗಾಂವ್ಕರ್, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುನಂದ, ಬಿಸಿಯೂಟ ನೌಕರರ ಸಂಘದ ಮಾಲಿನಿ ಮೇಸ್ತಾ, ಆದಿವಾಸಿ ಸಂಘದ ಎಸ್.ವೈ. ಗುರುಶಾಂತ್, ಎಸ್‍ಎಫ್‍ಐನ ಅಂಬರೀಷ್, ಗುರುರಾಜ ದೇಸಾಯಿ, ಬಸವರಾಜ ಪೂಜಾರ, ಹನುಮಂತು ಮಾತನಾಡಿದರು.  
 

ಸಚಿವರ ಜೊತೆ ಸಂಘದ ಮುಖಂಡರ ಸಭೆ
15 ಜೂನ್ 2017 ರಂದು ವಿಧಾನ ಸೌಧದಲ್ಲಿ ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳು ಮತ್ತು ಸಂಘದ ಮುಖಂಡರ ಸಭೆಯನ್ನು ಕರೆದಿದ್ದರು. ಪ್ರಮುಖ ಬೇಡಿಕೆಗಳ ಬಗ್ಗೆ ಸರಿಯಾಗಿ ಚರ್ಚಿಸದೆ ಒಮ್ಮತದ ಅಭಿಪ್ರಾಯ ಬರದೆ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಸಂಘವನ್ನು ಪ್ರತಿನಿಧಿಸಿ ನಿತ್ಯಾನಂದಸ್ವಾಮಿ, ಚಂದ್ರಪ್ಪ ಹೊಸ್ಕೇರಾ, ಆಂಜನೇಯ ರೆಡ್ಡಿ, ಕೆ. ಹನುಮೇಗೌಡ, ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಭಾಗವಹಿಸಿದರು.

 

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಸರ್ಕಾರದ ನೌಕರ ವಿರೋಧಿ ಧೋರಣೆಯ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದೆ.   
ಬೇಡಿಕೆಗಳು :

  1.  ನೇಮಕಾತಿ ನಿಯಮಾವಳಿಯನ್ನು ಸೂಕ್ತವಾಗಿ ತಿದ್ದುಪಡಿ ಮಾಡಿಯಾದರೂ ಹಾಲಿ `ಡಿ’ ವರ್ಗದ ಹೊರಗುತ್ತಿಗೆ ನೌಕರರ ಸೇವೆಯನ್ನು ಕಾಯಂ ಮಾಡಿ.
  2. ಅಲ್ಲಿಯವರೆಗೆ ಹೊರಗುತ್ತಿಗೆ ನೌಕರರಿಗೆ `ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಿ.
  3. ಮುಖ್ಯವಾಗಿ, ಈಗಾಗಲೇ ಹೊರಡಿಸಲಾದ ನೋಟಿಫಿಕೇಷನ್‍ಗೆ ತಿದ್ದುಪಡಿ ಮಾಡಿ. ನೇರ ನೇಮಕಾತಿ ಪ್ರಕ್ರಿಯೆ ಕೇವಲ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ವಿದ್ಯಾರ್ಥಿ ವಸತಿ ನಿಲಯಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸ್ವಷ್ಟಪಡಿಸಿ. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿ.
  4. ಕಾಯಂ ನೌಕರರ ವರ್ಗಾವಣೆಯ ಸಂದರ್ಭದಲ್ಲಿ ಹಾಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳದಿರುವುದನ್ನು ಖಚಿತಪಡಿಸಿ.

 

 

ವರದಿ: ಕೆ. ಹನುಮೇಗೌಡ