Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕಾಗಿ ಹೋರಾಡಲು ಕೆ.ಆರ್. ಶ್ರೀಯಾನ್ ಕರೆ

ಸಂಪುಟ: 
11
ಸಂಚಿಕೆ: 
25
date: 
Sunday, 11 June 2017

ಬೀಡಿ ಉದ್ಯಮ ಹಿಂದೆ ಡಿಪೋಗಳಲ್ಲಿ ನಡೆಯುತ್ತಿದ್ದು, 1950 ರಿಂದ ಮೊದಲೇ ಈ ಬೀಡಿ ಕಾರ್ಮಿಕರು ಸಂಘಟನೆ ಕಟ್ಟಿ ಸವಲತ್ತುಗಳಿಗಾಗಿ ಹೋರಾಡುತ್ತಿದ್ದರು. ಈ ಹೋರಾಟಗಳನ್ನು ದಾರಿ ತಪ್ಪಿಸಲು ಮಾಲಿಕರು ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದರು. ಮನೆಮನೆಗಳಲ್ಲಿ ಮಹಿಳೆಯರ ಮೂಲಕ ಬೀಡಿ ಕಟ್ಟಿಸಲಾಯಿತು. ಆದರೆ ಈ ಮಹಿಳಾ ಕಾರ್ಮಿಕರು ಸಂಘಟಿತರಾಗಿ, ಕಾರ್ಖಾನೆ ಕಾರ್ಮಿಕರಿಗೆ ಸಿಗುತ್ತಿದ್ದ ಕೂಲಿ, ತುಟ್ಟಿಭತ್ತೆ, ಪ್ರಾವಿಡೆಂಟ್ ಫಂಡ್, ಹೆರಿಗೆ ಭತ್ತೆ ಇತ್ಯಾದಿ ಕಾರ್ಮಿಕ ಸವಲತ್ತುಗಳನ್ನು ಪಡೆಯುವಂಥ ಕಾನೂನುಗಳನ್ನು ಜಾರಿ ಮಾಡುವಂಥಾದುದು, ಮಹಿಳಾ ಕಾರ್ಮಿಕರ ಹೋರಾಟದ ಗೆಲುವು ಎಂಬುದಾಗಿ ಹಿರಿಯ ರೈತ ಕಾರ್ಮಿಕ ಮುಖಂಡ ಕೆ.ಆರ್.ಶ್ರೀಯಾನ್ ಅವರು ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜೂನ್ 6 ರಂದು ನಡೆದ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನಿನ (ಸಿಐಟಿಯು) 5ನೇ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದರು.

ಆದರೆ ಇವತ್ತು 2001 ರಿಂದ ಕೇಂದ್ರ ಸರಕಾರ ಧೂಮಪಾನ ನಿಷೇಧ ಕಾಯಿದೆಯನ್ನು ಜಾರಿ ಮಾಡುತ್ತಿದೆ. ಕಳೆದ 3 ವರ್ಷಗಳಿಂದ ಕೋಟ್ಪಾ ಕಾಯಿದೆಗೆ ತಂದಿರುವ ತಿದ್ದುಪಡಿಯಿಂದಾಗಿ ತಂಬಾಕು ಬಳಸುವ ಉದ್ದಿಮೆಗೆ ಸಾಕಷ್ಟು ನಿರ್ಬಂಧಗಳನ್ನು ತಂದು ಅನುಷ್ಟಾನಗೊಳಿಸಲಾಗುತ್ತಿದೆ. ಇದರಿಂದಾಗಿ ಬೀಡಿ ಉದ್ದಿಮೆ ಬಿಕ್ಕಟ್ಟಿಗೆ ಒಳಗಾಗಿದೆ. ಕಾರ್ಮಿಕರು ಆತಂಕಿತರಾಗಿದ್ದು, ಅನೇಕರು ಈಗಾಗಲೇ ಬೀಡಿ ಕಟ್ಟುವುದನ್ನು ಬಿಟ್ಟಿದ್ದಾರೆ. ಜಿಲ್ಲೆಯ ಬೀಡಿ ಚಳುವಳಿ ಜಿಲ್ಲೆಯ ಕಾರ್ಮಿಕ ಚಳುವಳಿಗಳ ಆಧಾರ ಸ್ಥಂಭ. ಬೀಡಿ ಕಾರ್ಮಿಕರು ಕಂಗಾಲಾಗದೆ, ಸರಕಾರದ ಮೇಲೆ ಒತ್ತಡ ತಂದು ಬೀಡಿ ಉದ್ಯಮವನ್ನು ಉಳಿಸಿಕೊಳ್ಳಬೇಕಾಗಿದೆ. ಬೀಡಿ ಉದ್ದಿಮೆಯ ನಾಶದಿಂದ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಲು ಆಗ್ರಹಿಸಿ ಈ ಬಗ್ಗೆ ತೀವ್ರವಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಆದರೆ ಇಂದು ಕಾರ್ಮಿಕರು ಕೇಂದ್ರ ಸರಕಾರವನ್ನು ನಂಬುವಂತಿಲ್ಲ. ಕಾರಣ ಅದು ದೇಶೀಯ ಉದ್ದಿಮೆ ಪ್ರೋತ್ಸಾಹ ಕೊಡುತ್ತಿಲ್ಲ. ವಿದೇಶೀಯರನ್ನು ಆಹ್ವಾನಿಸುತ್ತಿದ್ದಾರೆ. ಕಾರ್ಮಿಕರು ದೀರ್ಘ ಹೋರಾಟದಿಂದ ಪಡೆದುಕೊಂಡ ಸವಲತ್ತುಗಳನ್ನು ಈಗಿನ ಕೇಂದ್ರ ಸರಕಾರ ಒಂದೊಂದೇ ತೆಗೆದುಹಾಕುತ್ತಿದೆ. ಇದು ಕಾರ್ಮಿಕ ಪರವಾದ ಸರಕಾರವಲ್ಲ. ಪ್ರಾವಿಡೆಂಟ್ ಫಂಡ್‍ನ ರೂ.6000 ಕೋಟಿ ಮೊಬಲಗನ್ನು ಷೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತಿದೆ. ದುಡಿಯುವ ಜನರ ಹಕ್ಕುಗಳ ಪ್ರಜಾಪ್ರಭುತ್ತಾತ್ಮಕ ಹಕ್ಕುಗಳ ದಮನ ನಡೆಯುತ್ತಿದೆ. ಕೋಮುವಾದಿ ಹಿಂದುತ್ವವನ್ನು ಜಾರಿ ಮಾಡುತ್ತಾ ಕಾರ್ಮಿಕರ ನಡುವೆ ಒಗ್ಗಟ್ಟನ್ನು ಮುರಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಮಿಕ ವರ್ಗ ಕೆಂಬಾವುಟದಡಿಯಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಜನತೆಯ ಹಕ್ಕುಗಳನ್ನು ಹೋರಾಡುವ ಹಕ್ಕುಗಳನ್ನು ಕೂಡಾ ರಕ್ಷಿಸಬೇಕಾಗಿದೆ ಎಂದು ಕೆ.ಆರ್.ಶ್ರೀಯಾನ್ ಕರೆ ನೀಡಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಇವತ್ತು ದ.ಕ.ಜಿಲ್ಲೆಯ ಆರ್ಥಿಕ ಚಕ್ರ ತಿರುಗುತ್ತಿರುವುದು ಬೀಡಿ ಕಾರ್ಮಿಕರಿಂದ. ಇದರ ಬಗ್ಗೆ ಬೇರೆ ಯಾರೂ ಮಾತನಾಡುತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರಿಗೇನೇ ತಮಗೆ ಅನ್ನ ಕೊಡುವ ಉದ್ಯಮವನ್ನು ಉಳಿಸುವ ಜವಾಬ್ದಾರಿ ಇದೆ ಎಂದರು.

ಫೆಡರೇಶನಿನ ಹಿರಿಯ ಮುಖಂಡರಾದ ಯು.ಬಿ.ಲೋಕಯ್ಯ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಫೆಡರೇಶನಿನ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ, ಫೆಡರೇಶನಿನ ಜಿಲ್ಲಾ ಪದಾಧಿಕಾರಿಗಳಾದ ಯು.ಜಯಂತ ನಾಯ್ಕ್, ಸಂಜೀವ ಬಂಗೇರ, ಜಯಂತಿ ಶೆಟ್ಟಿ, ರಮಣಿ ಮೂಡಬಿದರೆ, ಭಾರತಿ ಬೋಳಾರ್, ಸದಾಶಿವದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತಿ ಬಿ.ಶೆಟ್ಟಿ ಸ್ವಾಗತಿಸಿದರು. ಜೆ.ಬಾಲಕೃಷ್ಣ ಶೆಟ್ಟಿ ವಂದಿಸಿದರು.

- ಜೆ. ಬಾಲಕೃಷ್ಣ ಶೆಟ್ಟಿ