ಮಳೆಗಾಗಿ ದೇವರ ಮೇಲೆ ಭಾರ ಹಾಕಿದ ಸರ್ಕಾರ

ಸಂಪುಟ: 
11
ಸಂಚಿಕೆ: 
25
Sunday, 11 June 2017

ಮಳೆಗಾಗಿ ಪ್ರಾರ್ಥಿಸಿ ಕೃಷ್ಣಾ ಮತ್ತು ಕಾವೇರಿ ಉಗಮ ಸ್ಥಾನದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಪರ್ಜನ್ಯ ಹೋಮ ನಡೆಸಿದ್ದಾರೆ. ಸರಕಾರವನ್ನೂ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ, ತಮ್ಮ ಮತ್ತು ಅವರ ಗೋಸುಂಬೆತನವನ್ನು ಬಯಲುಗೊಳಿಸಿದ್ದಾರೆ ಕೂಡಾ.

ಉತ್ತಮ ಮುಂಗಾರು ಮಳೆಗೆ ಪ್ರಾರ್ಥಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾವೇರಿ ನದಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಜೂನ 3ರಂದು ಪರ್ಜನ್ಯ ಜಪ ನಡೆಸಿದರು. ತೀವ್ರ ವಿರೋಧದಿಂದ ಸರ್ಕಾರದ ಅನುದಾನದಲ್ಲಿ ನಡೆಸಲು ಉದ್ದೇಶಿಸಿದ್ದ ಪರ್ಜನ್ಯ ಹೋಮ ಕೈಬಿಟ್ಟು ಜಪ ಹಾಗೂ ವಿಶೇಷ ಪೂಜೆಯನ್ನಷ್ಟೇ ನಡೆಸಲಾಯಿತು. ಬೆಳಿಗ್ಗೆ 8ಕ್ಕೆ ನಡೆದ ಪೂಜೆಯಲ್ಲಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್ ದಂಪತಿ ಸಮೇತ ಹಾಜರಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತ್ರ ಜಪದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಮಧ್ಯಾಹ್ನ 3ಕ್ಕೆ ಪ್ರತ್ಯೇಕವಾಗಿ ಭಾಗಮಂಡಲಕ್ಕೆ ಆಗಮಿಸಿದ ಸಚಿವ ಪಾಟೀಲ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತ್ರಿವೇಣಿ ಸಂಗಮದಲ್ಲಿ ಬಾಗಿನ ಸಲ್ಲಿಸಿದರು. ಬಳಿಕ ಭಂಗಡೇಶ್ವರ ದೇವಸ್ಥಾನ ಹಾಗೂ ತಲಕಾವೇರಿಯಲ್ಲಿ ಪೂಜೆ ನೆರವೇರಿಸಿ, ವರುಣನ ಕೃಪೆಗೆ ಪ್ರಾರ್ಥಿಸಿದರು, ಎಂದು ವರದಿಯಾಗಿದೆ.

ಇದಕ್ಕಿಂತ ಮೊದಲು ಅವರು ಜೂನ್ 2 ರಂದು ಪತ್ನಿ ಆಶಾ, ಇಲಾಖೆಯ ಅಧಿಕಾರಿಗಳ ತಂಡದ ಜತೆ ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. `ಕೃಷ್ಣಾ?ಕಾವೇರಿ ರಾಜ್ಯದ ಜೀವ ನದಿಗಳು. ಈ ಹಿಂದೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದೆ. ಇದೇ ಪ್ರಥಮ ಬಾರಿಗೆ ಕೃಷ್ಣೆಯ ಉಗಮ ಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಉತ್ತಮ ಮಳೆ? ಬೆಳೆಗಾಗಿ ಪ್ರಾರ್ಥಿಸಿದೆ.
ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಮಳೆಯಿಲ್ಲ. ಮಳೆ ಆಗಲಿ ಎಂದು ನಡೆಸುವ ಪೂಜೆಗಾಗಿ ಸರ್ಕಾರದ ಒಂದು ರೂಪಾಯಿ ಹಣ ಖರ್ಚು ಮಾಡುವುದಿಲ್ಲ. ನಾನು ಮತ್ತು ನನ್ನ ಸ್ನೇಹಿತರು ಅದರ ಖರ್ಚು ಭರಿಸುತ್ತೇವೆ' ಎಂದು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದುವರೆದು `ತಾಯಿಯ ಪೂಜೆಯನ್ನೇ ಮೌಢ್ಯ, ತಪ್ಪು ಎನ್ನುವುದಾದರೆ ಇಂತಹ ಪೂಜೆಯನ್ನು ಲಕ್ಷ ಬಾರಿ ಬೇಕಾದರೂ ಮಾಡುತ್ತೇನೆ. ಕೆಲವರು ಜೀವವಿಲ್ಲದ ಕಲ್ಲನ್ನೇ ಪೂಜಿಸುತ್ತಾರೆ. ಕೋಟ್ಯಂತರ ಜನರಿಗೆ ಆಧಾರವಾಗಿರುವ ಕಾವೇರಿಗೆ ಪೂಜೆ ಸಲ್ಲಿಸುವುದಕ್ಕೆ ಏಕೆ ವಿರೋಧ' ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಪ್ರಶ್ನಿಸಿದ್ದಾರೆ. ವಿಧಾನಮಂಡಲದಲ್ಲಿ ಅವರ ಕ್ರಮವನ್ನು ವಿರೋಧ ಪಕ್ಷಗಳು ಪ್ರಶ್ನಿಸಿದಾಗಲೂ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಕೊಡಗಿನ ತಲಕಾವೇರಿಯಲ್ಲಿ ನಡೆಯುತ್ತಿರುವ ಪರ್ಜನ್ಯ ಹೋಮಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ``ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ವೈಯಕ್ತಿಕವಾಗಿ ಪೂಜೆ ಮಾಡುತ್ತಿದ್ದಾರೆ. ನನಗೆ ಪ್ರಕೃತಿ ಮೇಲೆ ನಂಬಿಕೆ ಇದೆ. ಹೋಮ?ಪೂಜೆಗಳ ಮೇಲೆ ಅಲ್ಲ. ಎರಡು ವರ್ಷ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿಯುವ ನಿರೀಕ್ಷೆ ಇದೆ. ಇದು ಹುಸಿಯಾಗುವುದಿಲ್ಲ ಎಂಬುದು ನನ್ನ ನಂಬಿಕೆ'' ಎಂದೂ ಹೇಳಿದರು. `ವೈಯಕ್ತಿಕವಾಗಿ ನಾನು ಮೌಢ್ಯ ವಿರೋಧಿಸುತ್ತೇನೆ. ಪೂಜೆ, ಹೋಮ ಪಾಟೀಲರ ವೈಯಕ್ತಿಕ ವಿಷಯ. ಅವರು ಸಚಿವರಾಗಿ ಹೋಮ ಮಾಡಿಸಿಲ್ಲ. ಸ್ವಂತ ಹಣ ಖರ್ಚು ಮಾಡಿದ್ದಾರೆ. ತಲಕಾವೇರಿಯಲ್ಲಿ ಪೂಜೆ ಮಾಡಿಸಿದ್ದೇ ಅಪರಾಧ ಎಂದು ಬಿಂಬಿಸಬೇಡಿ. ಸಚಿವರು ಹೋಗಿದ್ದಾರೆ ಎಂಬ ಕಾರಣಕ್ಕೆ ಇಲಾಖೆ ಅಧಿಕಾರಿಗಳು ಹೋಗಿದ್ದಾರೆ' ಎಂದು ಮುಖ್ಯಮಂತ್ರಿ ಸದನದಲ್ಲಿ ಚರ್ಚೆಯ ಸಂದರ್ಭದಲ್ಲೂ ಸಮರ್ಥಿಸಿಕೊಂಡಿದ್ದಾರೆ. ಆದರೆ ಪರ್ಜನ್ಯ ಹೋಮಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದು ಪೂರ್ಣ ನಿಜವಲ್ಲ. ಮೊದಲಿಗೆ ಹೋಮವನ್ನು ಸರಕಾರ ಮತ್ತು ನಿಗಮದಿಂದ ಅಧಿಕೃತವಾಗಿಯೇ ಯೋಜಿಸಲಾಗಿತ್ತು. ವಿರೋಧ ಬಂದ ಮೇಲಷ್ಟೇ ವೈಯಕ್ತಿಕವೆಂದು ರಾಗ ಬದಲಾಯಿಸಿದ್ದರು. ``ಮೂಢನಂಬಿಕೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಮಂಡಿಸುತ್ತೇವೆ'' ಎಂದು ಬಹುಶಃ ನೂರವೊಂದನೇ ಬಾರಿ ಆಶ್ವಾಸನೆ ಕೊಟ್ಟಿದ್ದಾರೆ! ಸಚಿವರು ಮತ್ತು ಅಧಿಕಾರಿಗಳು ಮೂಢನಂಬಿಕೆಯಲ್ಲಿ ಮುಳುಗೇಳುತ್ತಿರುವಾಗ ಕಾಯಿದೆ ಮಂಜೂರಾಗುವುದಾದರೂ, ಮಂಜೂರಾದರೆ ಜಾರಿಯಾಗುವುದಾದರೂ ಹೇಗೆ?

ಸೆಕ್ಯುಲರ್ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ವೈಯಕ್ತಿಕವಾಗಿ ಸಹ ಇಂತಹ ಆಚರಣೆಗಳನ್ನು ನಡೆಸುವುದು. ತಪ್ಪು. ಅಸಂವೈಧಾನಿಕ ಕೂಡಾ. ಸಚಿವರು ಮತ್ತು ನಿಗಮದ ಅಧಿಕಾರಿಗಳೂ ಭಾಗವಹಿಸಿದ ಮೇಲೆ ಅದು ವೈಯಕ್ತಿಕ ಹೇಗಾಗುತ್ತದೆ. ವೈಜ್ಞಾನಿಕ ದೃಷ್ಟಿಕೋಣವನ್ನು ಬೆಳೆಸುವ ಪ್ರಸಾರ ಮಾಡುವ ಮೂಲಭೂತ ಕರ್ತವ್ಯ ಇರುವ ಸರಕಾರದ ಸಚಿವರೂ ಅಧಿಕಾರಿಗಳೂ ಈ ಆಚರಣೆ ಮೂಲಕ ತಮ್ಮ ಮೂಢನಂಭಿಕೆಯನ್ನು ಹರಡುತ್ತಿಲ್ಲವೇ? ಪರ್ಜನ್ಯ ಜಪ ಮಾಡಿದರೆ ಮಳೆ ಬರುತ್ತದೆ ಎಂದು ಅವರು ನಂಬಿದ್ದರೆ ಪ್ರತಿ ವರ್ಷ ಅವರು ಏಕೆ ಪರ್ಜನ್ಯ ಜಪ-ಹೋಮ ನಡೆಸುವುದಿಲ್ಲ? ಈ ಮೂಲಕ ಜನತೆಗೆ ತಪ್ಪು ಸಂದೇಶ ಕೊಡುತ್ತಿಲ್ಲವೇ? ಎಲ್ಲಾ ಸಾರ್ವಜನಿಕ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪೂಜೆ ಮಾಡುವುದು ವಾಡಿಕೆಯಾಗಿರುವುದೂ ತಪ್ಪು.

ವಿರೋಧ ಪಕ್ಷ ಬಿಜೆಪಿ ಸಚಿವರನ್ನು ಈ ಕ್ರಮಕ್ಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರೇನೋ ನಿಜ. ಆದರೆ ಯಥಾ ಪ್ರಕಾರ ಎರಡು ನಾಲಿಗೆಗಳಿಂದ ಮಾತನಾಡಿದ್ದಾರೆ. ಜಗದೀಶ ಶೆಟ್ಟರ್ ``ಬರ ಪರಿಹಾರಕ್ಕೆ ಪಾಟೀಲರು ಪರ್ಜನ್ಯ ಹೋಮದ ಪರಿಹಾರ ಕಂಡುಕೊಂಡಿದ್ದಾರೆ. ಇದು ಮೂರ್ಖತನದ ಪರಮಾವಧಿ.. ವೈಯಕ್ತಿಕ ವಿಚಾರ ಎಂದು ಪಾಟೀಲರು ಹೇಳುವುದಾದರೆ ಸಚಿವ ಸ್ಥಾನದಿಂದ ಕಿತ್ತೊಗೆಯಿರಿ' ಎಂದು ಆಗ್ರಹಿಸಿದರು. ಆದರೆ ಅವರ ಅಧಿಕಾರದ ಅವಧಿಯಲ್ಲಿ ಅವರೂ ಬಾಗಿನ ಪೂಜೆಗಳನ್ನು ಮಾಡಿದ್ದಾರೆ. ಬಿಜೆಪಿಯ ಸಿ.ಟಿ. ರವಿ, `ಪಾಟೀಲರು ಪರ್ಜನ್ಯ ಹೋಮ ಮಾಡಿದ್ದಕ್ಕೆ ನನ್ನ ಬೆಂಬಲವಿದೆ. ನಮ್ಮನ್ನು ಮೀರಿದ ಅಲೌಕಿಕವಾದ ಶಕ್ತಿ ಇದೆ. ಅದನ್ನು ನಾನು ನಂಬುತ್ತೇನೆ' ಎಂದಿದ್ದಾರೆ!

ಮಳೆಗೆ ದೇವರ ಮೇಲೆ ಭಾರ ಹಾಕಿ ಕೂತ ಸರಕಾರ ಜನತೆಯ ಯಾವುದೇ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಹುಡುಕಲು ಪ್ರಯತ್ನಿಸುತ್ತದೆ ಎಂದು ನಂಬುವುದು ಹೇಗೆ?