ಸುರೇಶ್ ಕುಷ್ಠಗಿ ಇನ್ನಿಲ್ಲ

ಸಂಪುಟ: 
11
ಸಂಚಿಕೆ: 
25
Sunday, 11 June 2017

“ನಾನು ರಾಯಚೂರಿನ ಕಾಮ್ರೇಡ್, ನಿಮ್ಮನ್ನು ಕಾಣಲು ಬಂದೆ. ನೀವಿರಲಿಲ್ಲ, ಮತ್ತೇ ನಾಳೆ ಬರುತ್ತೇನೆ. ಸಂಜೆ 5 ಗಂಟೆಗೆ, ನೆನಪಿರಲಿ” - ಸುರೇಶ್ ಕುಷ್ಠಗಿ ಎಂಬ ಮಾಹಿತಿಯಿದ್ದ ಚೀಟಿಯ ಮೂಲಕ ನನಗೆ ಪರಿಚಯವಾದದ್ದು. ಅದು 1981-82 ಇರಬೇಕು. ರಾಯಚೂರಿನಿಂದ ಹೊಸಪೇಟೆಗೆ ಬಂದಿದ್ದು ಸುರೇಶ್, ಸರೋಜ್ ಅಲಾಯ್ಸ್ ಅಂಡ್ ಸ್ಟೀಲ್ಸ್ ಲಿ. ನ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ರಾಯಚೂರಿನ ಸಂಗಾತಿಗಳು ನಮ್ಮ ಮಾಹಿತಿ ನೀಡಿ ಸಂಪರ್ಕಿಸಲು ಹೇಳಿದ್ದರು.

ಸುರೇಶನು ನಮ್ಮ ಸಂಘಟನೆಗೆ, ಸಂಗಾತಿಗಳಿಗೆ ಪರಿಚಯವಾದ ಬಳಿಕ ಸಕ್ರಿಯವಾಗಿ ಭಾಗವಹಿಸತೊಡಗಿದ. ಸರೋಜ್ ಅಲಾಯ್ಸ್‍ನಲ್ಲಿ ಯುವ ಕಾರ್ಮಿಕರ ತಂಡ ಸಿದ್ಧವಾಯಿತು. ಮುಷ್ಕರವೂ ಆಯಿತು. ಆಗ ಹೊಸಪೇಟೆಯಲ್ಲಿ ಕಾರ್ಮಿಕರ ಸಂಘಟನೆ-ಸಿಐಟಿಯು ಇನ್ನೂ ಇರಲಿಲ್ಲ. ಈ ಕಾರ್ಮಿಕರು ಹೊಸಪೇಟೆಯಲ್ಲಿ ನಿವಾಸಿಗಳಾಗಿದ್ದರಿಂದ ಇವರೆಲ್ಲಾ ಡಿವೈಎಫ್‍ಐ ನ ಭಾಗವಾದರು. ಸುರೇಶ, ಚಿತ್ತವಾಡ್ಗೆಪ್ಪ, ಡಿ. ವೆಂಕಟರಮಣ ಇವರೆಲ್ಲ ಸಕ್ರಿಯವಾಗಿ ಕೆಲಸ ಮಾಡತೊಡಗಿದರು.

ಅದಾಗಲೇ ಹೊಸಪೇಟೆ, ತೋರಣಗಲ್ಲು, ಬಳ್ಳಾರಿಗಳಲ್ಲಿ ಡಿವೈಎಫ್‍ಐ ಬೆಳೆಯುತ್ತಿದ್ದ ಅವಧಿ. ಜಿಲ್ಲೆಯಲ್ಲಿ ಜಂಬಯ್ಯ ನಾಯಕ್, ರಾಮಚಂದ್ರ ನಾವಡ, ತಾಯಪ್ಪ ನಾಯಕ್, ಚನ್ನಿ, ಮುಂತಾದವರ ತಂಡ ಸಕ್ರಿಯವಾಗಿತ್ತು. ಜಿಲ್ಲೆಯಾದ್ಯಂತ ವಿಸ್ತರಿಸುವ ಕಾರ್ಯವೂ ನಡೆದಿತ್ತು. ಆ ದಿನಗಳಲ್ಲಿ ಹೋರಾಟಗಳು ಇಲ್ಲದ ದಿನಗಳೇ ಇರಲಿಲ್ಲ. ಹೀಗೆ ಸುರೇಶ್ ಬಳ್ಳಾರಿಯನ್ನು ಕೇಂದ್ರವಾಗಿರಿಸಿಕೊಂಡ. ಎರಿಸ್ವಾಮಿ ಕಂಬಾಳಿಮಠ, ಪ್ರಸನ್ನ, ಸಿ. ರಘು, ಯು. ಬಸವರಾಜ್ ಮುಂತಾದವರ ಸಾಥ್‍ನೊಂದಿಗೆ ಸ್ಥಳೀಯ ಪ್ರಶ್ನೆಗಳಿಗೆ ಗಮನ ಹರಿಸಿದ. ಆಗ ಬೆಳೆದು ಬಂದದ್ದು ಮಹಾನಂದಿ ಕೊಟ್ಟಂ ಸ್ಲಂನ ಜನರ ಸಂಘರ್ಷಮಯ ಹೋರಾಟ. ಹೀಗೆ ತೊಡಗಿಸಿಕೊಂಡ ಸುರೇಶ್, ಡಿವೈಎಫೈಐ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಸಮಿತಿಯ ಸದಸ್ಯನಾಗಿ ಆಯ್ಕೆಯಾದ. ಸಿಪಿಐ(ಎಂ) ಬಳ್ಳಾರಿ ಜಿಲ್ಲಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಅವಧಿಯಲ್ಲೇ ಕಾಣಿಸಿಕೊಂಡದ್ದು ಬೆನ್ನು ಹುರಿಯಲ್ಲಿ ಸಮಸ್ಯೆ, ತಪಾಸಣೆಯಲ್ಲಿ ಅದು `ನ್ಯೂರೋ ಫೈಬ್ರಮಾ’ ಎಂಬ ಖಾಯಿಲೆ. ಬೆನ್ನುಹುರಿಯಲ್ಲಿ ಅಧಿಕ ಮಾಂಸದ ಬೆಳವಣಿಗೆ. ಇದಕ್ಕೆ ಶಸ್ತ್ರ ಚಿಕಿತ್ಸೆ ಯೇ ಪರಿಹಾರವೆಂದಾಗ, ಅದು ಮೂರು ತಜ್ಞರಿಂದ ಮಾಡಿಸಬೇಕೆಂದಾಗ, ದೆಹಲಿಯ `ಏಮ್ಸ್’ ನಿಮ್ಹಾನ್ಸ್ ಮುಂತಾದೆಡೆ ಅಲೆದಾಟ ಮಾಡಿದ. ಕೊನೆಗೆ ನಿಮ್ಹಾನ್ಸ್‍ನಲ್ಲಿ ಶಸ್ತ್ರಚಿಕಿತ್ಸೆ. ಆದರೆ ಅಲ್ಲಿ ಆದ ಒಂದು ಪ್ರಮಾದದಿಂದ ಚೇತರಿಸಿಕೊಂಡಿದ್ದ ಸುರೇಶ್ ಇಡೀ ಜೀವನ ಪೂರ್ತಿ ತಾನು ನರಳ ಬೇಕಾಯಿತು ಎಂದು ಹೇಳಿದ. ಹಂತ ಹಂತವಾಗಿ ಕಾಲುಗಳು, ಬೆನ್ನು ಸ್ವಾಧೀನ ಕಳೆದುಕೊಂಡವು. ಬಹುತೇಕ ಸಣ್ಣ-ದೊಡ್ಡ ಸುಮಾರು 7 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ. ನಿರಂತರ ಚಿಕಿತ್ಸೆ. ಅತೀವ ಯಾತನೆಗಳು ಜೀವನದ ಜೊತೆಗೂಡಿದವು.

ಆದರೆ ಇವೆಲ್ಲವುಗಳಿಂದ ಸುರೇಶ್ ದೃತಿಗೆಡಲಿಲ್ಲ. ನಿರುಪಯೋಗಿಯಂತೆ ಬಾಳಲಿಲ್ಲ. ಇವುಗಳ ನಡುವೆಯೇ ಅತ್ಯಂತ ಕ್ರಿಯಾಶೀಲನಾಗಿ ಸಂಗಾತಿ ಸುರೇಶ್ ತೊಡಗಿಸಿಕೊಂಡಿದ್ದ ಮತ್ತು ಸಾಮೂಹಿಕ ಹಾಗೂ ಸ್ವಯಂ ಪ್ರಯತ್ನದ ಮೂಲಕ ತಿಳುವಳಿಕೆ, ಕಾರ್ಯದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದ್ದ. ಆತನಿಗೆ ಸಾಹಿತ್ಯ, ವಿಜ್ಞಾನ, ಕಾನೂನು, ಸಾಮಾಜಿಕ ಹೀಗೆ ವಿವಿಧ ವಿಷಯಗಳ ಓದಿನ ಆಸಕ್ತಿ ಇತ್ತು. ಬಹುತೇಕ ಭಾಷಣಗಳಲ್ಲಿ ವಿಷಯ ಅರ್ಥ ಮಾಡಿಸುವಂತೆ ಕಥೆ, ಹಾಸ್ಯಗಳನ್ನು ಬಳಸುತ್ತಿದ್ದ. ಮಾತನಾಡುವಾಗಲೇ ಈ ನಗುವು, ಬದ್ಧತೆ ಆತನ ಯಾತನೆಗಳನ್ನು ಮರೆಸುತ್ತಿದ್ದವು.

ಒಂದು ಅವಧಿಯಲ್ಲಿ ಬೆಂಗಳೂರಿನ ಕೇಂದ್ರಕ್ಕೆ ಕಾರ್ಯ ಕ್ಷೇತ್ರ ಬದಲಿಸಿಕೊಂಡಾಗ, ಐಕ್ಯರಂಗ ವಾರ ಪತ್ರಿಕೆಯ `ಮ್ಯಾನೇಜರ್’ ಆಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪೋಷಕರ ಸಂಘದ ಸ್ಥಾಪನೆಯಾಗುವಾಗ ಸಂಚಾಲಕರಲೊಬ್ಬರಾಗಿ ಜೊತೆಗೂಡಿದ್ದಾರೆ. ಹೊಸಪೇಟೆಯಲ್ಲಿ ಪತ್ನಿ ಶ್ರೀಮತಿ ಯಶಸ್ವಿನಿಯವರೊಂದಿಗೆ ವಾತ್ಸಲ್ಯ ಟ್ರಸ್ಟ್ ಮೂಲಕ ಆಕಾಂಕ್ಷ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣ ಕೇಂದ್ರ, ಆರಂಭಿಸಿ ತರಬೇತಿಯನ್ನು ನೀಡುವುದರಲ್ಲಿ ತೊ ಡಗಿದ್ದರು. ಅತ್ಯಂತ ಸ್ನೇಹಮಯಿ, ಮಾನವೀಯ ಮಿಡಿತದಿಂದ ಎಲ್ಲರಿಗೂ ಹತ್ತಿರವಾಗಿದ್ದರು.

ಅತ್ಯುತ್ತಮ ಸಾಮಥ್ರ್ಯವಿದ್ದ ಸುರೇಶ್ ಕುಷ್ಠಗಿ ಅಂಗವಿಕಲರ ಪ್ರಜಾಸತ್ತಾತ್ಮಕ ಆಂದೋಲನಕ್ಕೆ ಇನ್ನಷ್ಟು ಹೆಚ್ಚಿನ ಕೊಡುಗೆ ನೀಡುವ ಸಾಧ್ಯತೆಗಳಿದ್ದವು. ಅವರ ಅಗಲಿಕೆಯಿಂದ ಅಪಾರ ನಷ್ಟವಾಗಿದೆ.

ಇದೇ ಜೂನ್ 4 ರಂದು ಕಾಣಿಸಿಕೊಂಡ ಎದೆನೋವಿನಿಂದ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಹೊಸಪೇಟೆಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. (ಜನವರಿ 14, 1964) ತಂದೆ ವೆಂಕೋಬಾಚಾರ್, ತಾಯಿ ಅನಸೂಯಮ್ಮ. ಸುರೇಶ್ ವೃದ್ಧ ತಾಯಿ, ಪತ್ನಿ, ಅಲ್ಲದೇ ಮೂವರು ಸಹೋದರರು, ಮೂವರು ಸಹೋದರಿಯರಿರುವ ಕುಟುಂಬವನ್ನ ಅಗಲಿದ್ದಾರೆ.

5 ರಂದು ನಡೆದ ಅಂತ್ಯ ಕ್ರಿಯೆಯಲ್ಲಿ ಸಿಪಿಐ(ಎಂ) ನ ರಾಜ್ಯ ಸಮಿತಿಯ ಸದಸ್ಯರಾದ ಎಸ್.ವೈ. ಗುರುಶಾಂತ್, ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಸದಸ್ಯರಾದ ಆರ್.ಎಸ್. ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹೊಸಪೇಟೆ ತಾಲೂಕ್ ಕಾರ್ಯದರ್ಶಿ ಭಾಸ್ಕರರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ. ಜಂಬಯ್ಯನಾಯಕ್, ಕರ್ನಾಟಕ ರಾಜ್ಯ ಅಂಗವಿಕಲರ, ಪಾಲಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗಪ್ಪದಾಸರ್, ಎಲ್‍ಐಸಿ ನೌಕರರ ಮುಖಂಡರಾದ ಚನ್ನಬಸಯ್ಯ ಜೆ.ಎಂ., ಜೆ. ಪ್ರಕಾಶ್, ಡಿವೈಎಫ್‍ಐನ ಹುಳ್ಳಿಪ್ರಕಾಶ್, ಬಸವರಾಜ್ ಕಮ್ಮಾರ್, ಅಲ್ಲದೆ ಅವರ ಹಿರಿಯ ಸಹೋದರ ರಾಘವೇಂದ್ರ ಕುಷ್ಠಗಿ, ಲೇಖಕ ಗಂಗಾಧರ ಕುಷ್ಠಗಿ, ಸರ್ಕಾರಿ ನೌಕರರ ಒಕ್ಕೂಟದ ತಾಯಪ್ಪ ನಾಯಕ್, ಸಾಫ್ಟ್‍ವೇರ್‍ನ ಖಾಜಾಪೀರ್, ಮತ್ತು ಅಪಾರ ಸಂಖ್ಯೆಯಲ್ಲಿ ಸ್ನೇಹಿತರು, ಬಂಧುಗಳು, ಸಂಗಾತಿಗಳು ಪಾಲ್ಗೊಂಡಿದ್ದರು.

- ಎಸ್.ವೈ. ಗುರುಶಾಂತ್