ವಳಗೆರೆಹಳ್ಳಿ ಭೂಮಿ ಮರು ವಶ ಹೋರಾಟ

ಸಂಪುಟ: 
11
ಸಂಚಿಕೆ: 
25
Sunday, 11 June 2017

ಮದ್ದೂರು : ಯಶಸ್ವಿ ಭೂ ಹೋರಾಟ ಮರು ವಶ ಪಡೆದು ಉಳುಮೆ ಮಾಡಿ ಸಂಭ್ರಮ ಪಟ್ಟ ವಳಗೆರೆಹಳ್ಳಿ ರೈತರು

ಮಂಡ್ಯ ಜಿಲ್ಲೆ, ಮದ್ದೂರು ತಾ|| ವಳಗೆರೆಹಳ್ಳಿ ಗ್ರಾಮದ ಬಿ.ಹೊಸಹಳ್ಳಿ ಎಲ್ಲೆ ಸ.ನಂ.29 ರಲ್ಲಿ ಬೇಸಾಯ ಮಾಡುತ್ತಿರುವ ರೈತರು, ಕರ್ನಾಟಕ ಪ್ರಾಂತ ರೈತ ಸಂಘ (ಏPಖS) ನೇತೃತ್ವದಲ್ಲಿ ಯಶಸ್ವಿ ಹೋರಾಟ ನಡೆಸಿ ಕಳೆದುಕೊಂಡಿದ್ದ ತಮ್ಮ ಜೀವನಾಧರ ಭೂಮಿಯನ್ನು ಮರು ವಶಕ್ಕೆ ತೆಗೆದುಕೊಂಡು ಉಳುಮೆ ಮಾಡಿ ಸಂಭ್ರಮ ಆಚರಿಸಿದರು.

ಘಟನೆ ಹಿನ್ನಲೆ: ತಾ|| ನ ಕಸಬಾ ಹೋಬಳಿಗೆ ಸೇರಿದ ವಳಗೆರೆಹಳ್ಳಿ ಗ್ರಾಮದ 5 ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸೇರಿದಂತೆ ಒಟ್ಟು 8 ಕುಟುಂಬ, ಬಿ.ಹೊಸಹಳ್ಳಿ ಸ.ನಂ. 29 ರಲ್ಲಿ ಕಳೆದ 40 ವರ್ಷಗಳಿಂದ ಬೇಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದರು. ಈ ಸಂಬಂಧ ಇವರೆಲ್ಲ ನಮೂನೆ 53 ರಲ್ಲಿ 98-99 ರ ಸಾಲಿನಲ್ಲೇ ಅರ್ಜಿ ಸಲ್ಲಿಸಿದ್ದರೂ ಇತ್ಯರ್ಥ ಆಗಿರಲಿಲ್ಲ. ಆದರೆ ದಾಖಲಾತಿಗಳಲ್ಲಿ 2014 ರಲ್ಲೇ ಇವರ ಜಮೀನನ್ನು ಅಂದಿನ ಜಿಲ್ಲಾಅಧಿಕಾರಿಗಳು ಮೊರಾರ್ಜಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಿ ಪಹಣಿಯಲ್ಲಿ ನಮೂದಿಸಿದ್ದರು. ಇದರ ಅರಿವಿಲ್ಲದ ರೈತರು ಸಕ್ರಮಾತಿ ಕೋರಿರುವ ತಮ್ಮ ಅರ್ಜಿ ಪ್ರಕಾರ ಮಂಜೂರಾತಿ ನಿರೀಕ್ಷೆ ಇಟ್ಟುಕೊಂಡು ಎಂದಿನಂತೆ ಬೇಸಾಯ ಮಾಡಿಕೊಂಡು ಬಂದಿದ್ದರು.

ಈ ಮಧ್ಯೆ ಹಾಸ್ಟೆಲ್ ಕಟ್ಟಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ತಾ|| ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಸ್ಥಳೀಯ ಎಆ(S) ಶಾಸಕ ತಮ್ಮಣ್ಣ ರವರ ಮುತುವರ್ಜಿ ಮೇರೆಗೆ ಶಂಕು ಸ್ಥಾಪನೆ ಕಾರ್ಯವನ್ನು ಜನವರಿ ಮೊದಲ ವಾರದಲ್ಲಿ ಹಮ್ಮಿಕೊಂಡಾಗಷ್ಟೇ ರೈತರಿಗೆ ತಮ್ಮ ಜಮೀನಿನಲ್ಲಿ ಏನೋ ನಡೆಯುತ್ತಿದೆ ಎಂದು ಅರಿವಾಗಿ, ಸ್ಥಳೀಯ ಶಾಸಕರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಾಗ, ಶಾಸಕರು ನೆರವಿಗೆ ಬಾರದೇ ಇದ್ದುದ್ದನ್ನು ಕಂಡು, ರೈತ ಸಂಘದ ಬಳಿ ಬಂದರು.

ಸ.ನಂ 29 ರಲ್ಲಿ ಬಗರ್‍ಹುಕಂ ರೈತರು ಬೇಸಾಯ ಮಾಡುವ ಜಮೀನಲ್ಲದೇ ಬೇಕಾದಷ್ಟು ಖಾಲಿ ಜಮೀನು ಇದ್ದರೂ, ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರದ ಹಿಂದೆ ಪಟ್ಟ ಭದ್ರ ಹಿತಾಸಕ್ತಿಗಳು ಇರುವುದನ್ನು ಮನಗಂಡ ಕೆ.ಪಿ.ಆರ್.ಎಸ್., ರೈತರಲ್ಲಿ ಧೈರ್ಯ ತುಂಬಿ ಹೋರಾಟ ರೂಪಿಸಿತು. ರಾಜಕೀಯ ಚಿತಾವಣೆಯಿಂದ ಪ್ರೇರಿತನಾಗಿದ್ದ ತಹಶಿಲ್ದಾರ್ ನೇತೃತ್ವದ ತಾ|| ಆಡಳಿತ ಹೋರಾಟವನ್ನು ವಿಫಲಗೊಳಿಸಲು ಹಾಸ್ಟೆಲ್ ಕಟ್ಟಡಕ್ಕೆ ಎಂದು ಆಕ್ರಮವಾಗಿ ಕಾಯ್ದಿರಿಸಿದ್ದ 9.36 ಎಕರೆ ಸುತ್ತ ಏಪ್ರಿಲ್ ಮೊದಲನೇ ವಾರದಲ್ಲಿ ಟ್ರಂಚ್ ಹೊಡೆಸಿತು. ಇದನ್ನು ಆ ತಕ್ಷಣವೇ ಪ್ರತಿಭಟಿಸಿ ಟ್ರಂಚ್ ಮುಚ್ಚಲು ತಾ|| ಆಡಳಿತಕ್ಕೆ ಗಡುವು ನೀಡಿ, ಕಾನೂನು ಬಾಹಿರವಾಗಿ ತೆಗೆದಿರುವ ಟ್ರಂಚ್ ಮುಚ್ಚದಿದ್ದರೇ, ರೈತ ಸಂಘವೇ ಟ್ರಂಚ್ ಮುಚ್ಚಿ ಪ್ರತಿಭಟಿಸುತ್ತದೆ ಎಂದು ಎಚ್ಚರಿಕೆ ನೀಡಲಾಯಿತು ಹಾಗೂ ನಮೂನೆ 53 ರ ಅಡಿ ಸಲ್ಲಿಸಿರುವ ಅರ್ಜಿಗಳ ದಾಖಲಾತಿಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು.
ಈ ಎಲ್ಲಾ ದಾಖಲಾತಿಗಳನ್ನು ತಾ|| ಆಡಳಿತಕ್ಕೆ ಸಲ್ಲಿಸಿದರೂ ನಿರ್ಲಕ್ಷಿಸಿ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸುತ್ತಿರುವುದನ್ನು ಏಪ್ರಿಲ್ 18,19 ರಂದು ನಡೆದ ಕೆ.ಪಿ.ಆರ್.ಎಸ್. 3 ನೇ ತಾ|| ಸಮ್ಮೇಳನದ ಬಹಿರಂಗ ಸಭೆ ಮತ್ತು ಪ್ರತಿನಿಧಿ ಅಧಿವೇಶನದಲ್ಲಿ ಖಂಡಿಸಲಾಯಿತು. ಈ ರೈತರ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಕೆ.ಪಿ.ಆರ್.ಎಸ್ ರಾಜ್ಯಾಧ್ಯಕ್ಷರಾದ ಜಿ.ಸಿ. ಬಯ್ಯರೆಡ್ಡಿ ರವರು, ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಮಂತ್ರಿಗಳನ್ನು ಭೇಟಿ ಮಾಡಿಸುವ ಭರವಸೆ ನೀಡಿ ರೈತರಲ್ಲಿ ಉತ್ಸಾಹ ತುಂಬಿದರು.

ಅದರಂತೆ ಏಪ್ರಿಲ್ 24 ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ. ರೈತರ ಸಕ್ರಮಾತಿ ಅರ್ಜಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ, ಸರ್ಕಾರ ಜಮೀನು ಸ್ವಾದೀನ ಪಡಿಸಿಕೊಂಡಿರುವುದು ಆಕ್ರಮ. ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಕೂಡುವಂತೆ ವಿನಂತಿಸಲಾಯಿತು. ಇದಾದ ನಂತರ 21 ಜನವರಿ 2017 ರಂದು ನಡೆದ ಸಕ್ರಮಾತಿ ಸಭೆಯಲ್ಲಿ ಈ ಎಲ್ಲಾ ರೈತರ ಅರ್ಜಿಗಳು ವಜಾಗೊಂಡಿವೆ ಎಂದು ತಹಶಿಲ್ದಾರ್ ರವರು ದಾಖಲೆಗಳನ್ನು ಸೃಷ್ಠಿಸಿ, ರೈತರ ಜಮೀನಿನಲ್ಲಿದ್ದ ಮಾವು, ತೆಂಗು, ಸೇರಿದಂತೆ 800 ಕ್ಕೂ ಹೆಚ್ಚು ಮರಗಳನ್ನು ಭಾರೀ ಪೋಲಿಸ್ ರಕ್ಷಣೆಯಲ್ಲಿ 5 ಜೆಸಿಬಿ ಯಂತ್ರ ಬಳಸಿ ಏಪ್ರಿಲ್ 26 ರ ಬೆಳಕು ಕಾಣುವ ಮುಂಚೆಯೇ ನಡೆಸಿದ ರಹಸ್ಯ ಕಾರ್ಯಚಾರಣೆಯಲ್ಲಿ ನಾಶ ಮಾಡಿದರು.

ಕಟ್ಟಯೂಡೆದ ರೈತರ ಆಕ್ರೋಶ:

ಏಪ್ರಿಲ್ 26 ರಂದು ಎಂದಿನಂತೆ ಜಮೀನಿಗೆ ಬಂದ ರೈತರಿಗೆ ಉರುಳಿ ಬಿದ್ದ ಮರಗಳು ಮತ್ತು ಮರಗಳನ್ನು ಜಮೀನಿನ ಆಚೆಗೆ ದೂಡುತ್ತಿದ್ದ ಭಾರೀ ಗಾತ್ರದ ಜೆ.ಸಿ.ಬಿ. ಯಂತ್ರಗಳನ್ನು ನೋಡಿ ಅಘಾತವಾಯಿತು, ಕೂಡಲೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ನೇತೃತ್ವದಲ್ಲಿ ಪ್ರತಿಭಟಿಸಿದರು. ರೈತರ ಆಕ್ರೋಶ ಕಂಡು ಬೆದರಿದ ತಹಶಿಲ್ದಾರ್ ಮರ ಕಡಿಯಲು ನಾನು ಸೂಚಿಸಿರಲಿಲ್ಲ ಎಂದು ಪರದಾಡಿದ, ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಹಾಸ್ಟೆಲ್ ಕಟ್ಟಡ ಕಾಮಗಾರಿ ನಿಲ್ಲಿಸಲು ಸೂಚಿಸುವುದಾಗಿ ಭರವಸೆ ನೀಡಿದರು.
ಹುಸಿ ಭರವಸೆ-ಕಾಮಗಾರಿಗೆ ಪೋಲಿಸ್ ರಕ್ಷಣೆ

ಜಿಲ್ಲಾಧಿಕಾರಿ ರಜೆ ಮೇಲೆ ಹೋಗಿದ್ದಕ್ಕೆ ನೆಪ ಮಾಡಿಕೊಂಡು ರೈತರಿಗೆ ಭರವಸೆ ನೀಡಿದಂತೆ ಕಾಮಗಾರಿ ನಿಲ್ಲಲಿಲ್ಲ. ಬದಲಾಗಿ ಪೋಲಿಸ್ ರಕ್ಷಣೆಯಲ್ಲಿ ಕಾಮಗಾರಿ ಭರದಿಂದ ಸಾಗುತ್ತಿತ್ತು. ನಳ ನಳಿಸುತ್ತಿದ್ದ ತೋಟ ಬಂದಾಗಿರುವ ನೋವಿನಲ್ಲಿದ್ದ ರೈತರಿಗೆ ಸಾಂತ್ವನ ಹೇಳಲು ಕೆ.ಪಿ.ಆರ್.ಎಸ್. ರಾಜ್ಯಧ್ಯಕ್ಷರಾದ ಜಿ.ಸಿ. ಬಯ್ಯರೆಡ್ಡಿ ರವರ ನೇತೃತ್ವದ ನಿಯೋಗ ಜಮೀನಿಗೆ ಭೇಟಿ ನೀಡಿ, ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಡಳಿತ ಮತ್ತು ಶಾಸಕರ ಧೋರಣೆಯನ್ನು ಖಂಡಿಸಿತು. ಇದಕ್ಕೆ ಮೊದಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರವರನ್ನು ಹಾಗೂ ಮತ್ತೊಮ್ಮೆ ಕಂದಾಯ ಇಲಾಖೆ ಪ್ರಾಧಾನ ಕಾರ್ಯದರ್ಶಿ ರಮಣರೆಡ್ಡಿ ರವರನ್ನು ಭೇಟಿ ಮಾಡಿದಾಗ ರಜೆ ಮೇಲೆ ತೆರಳಿರುವ ಜಿಲ್ಲಾಧಿಕಾರಿ ಬರುವ ತನಕ ಕಾಮಗಾರಿ ನಿಲ್ಲಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಕೂಡ ತಾ|| ಆಡಳಿತ ದಿಕ್ಕರಿಸಿ ಕಾವಗಾರಿ ನಡೆಸುತ್ತಿತ್ತು. ಜಮೀನಿಗೆ ಭೇಟಿ ನೀಡಿದ್ದನ್ನೆ ನೆಪ ಮಾಡಿಕೊಂಡು ಜಿ.ಸಿ.ಬಯ್ಯರೆಡ್ಡಿ ರವರನ್ನು ಮೊದಲೆ ಆರೋಪಿಯನ್ನಾಗಿಸಿ ಕರ್ತರ ಮೇಲೆ ಏಳು ಕಾರ್ಯಕರ್ತರ ಮೇಲೆ ಕಾಮಗಾರಿ ಸ್ಥಳಕ್ಕೆ ಆಕ್ರಮ ಪ್ರವೇಶ ಹಾಗೂ 2 ಲಕ್ಷ ರೂ ಮೌಲ್ಯದ ಕಟ್ಟಡ ಸಾಮಾಗ್ರಿಗಳನೂ ನಾಶ ಪಡಿಸಿದ ಆರೋಪದ ಅನ್ವಯ ಕೇಸು ದಾಖಲಿಸುವ ಉದ್ದಟತನವನ್ನು ತಾ|| ಆಡಳಿತ ತೋರಿತು.

ಗ್ರಾಮದಲ್ಲಿ ಸಭೆ-ರೈತರಲ್ಲಿ ಹೆಚ್ಚಿದ ಹೋರಾಟದ ಉತ್ಸಾಹ

ಬಗರ್ ಹುಕಂ ರೈತರ ಕುರಿತು ಕೆಲವು ಪುಡಾರಿಗಳು ನಡೆಸಿದ ಅಪಪ್ರಚಾರವನ್ನು ಹಿಮ್ಮೆಟ್ಟಿಸಲು, ಹಾಗೂ ರೈತರಲ್ಲಿ ಹೋರಾಡದ ಉತ್ಸಾಹವನ್ನು ಹೆಚ್ಚು ಮಾಡಲು ವಳೆಗೆರಹಳ್ಳಿ ಗ್ರಾಮದಲ್ಲಿ ಕರಪತ್ರ ಹಂಚಿ ಮೇ 12 ರಂದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೆ.ಪಿ.ಆರ್.ಎಸ್. ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಕ.ರಾ.ರೈ.ಸಂ.( ಮೂಲ ಸಂಘಟನೆ) ಮುಖಂಡ ಎಸ್.ವಿಶ್ವನಾಥ್, ಕೆ.ಪಿ.ಆರ್.ಎಸ್. ಜಿಲ್ಲಾ ಮುಖಂಡರಾದ ಟಿ.ಯಶವಂತ, ಎನ್.ಎಲ್. ಭರತ್ ರಾವ್. ಟಿ.ಎಲ್. ಕೃಷ್ಣೇಗೌಡ, ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಡಿ.ಎಸ್.ಎಸ್. ನ ಶಿವರಾಜು ಗ್ರಾಮದ ನರಸಿಂಹೇಗೌಡ ಮುಂತಾದವರು ಮಾತಾನಾಡಿದರು. ಇದರ ಪರಿಣಾಮ ಹೋರಾಟದ ಉತ್ಸಾಹ ಹೆಚ್ಚಿತು. ರೈತರ ವಿರೋದ ಲೆಕ್ಕಿಸದೇ ಹಠಮಾರಿತನದಿಂದ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಕಾಮಗಾರಿ ನಿಲ್ಲಿಸದಿದ್ದರೆ ಮೇ 15 ರಂದು ನೇರ ಕಾರ್ಯಚಾರಣೆಗೆ ದುಮುಕಿ ಕಾಮಗಾರಿ ನಿಲ್ಲಿಸಲು ನಿರ್ಣಯ ಮಾಡಲಾಯಿತು.

ಪೋಲಿಸ್ ಸರ್ಪಗಾವಲು ಭೇದಿಸಿ ನಡೆದ ಆಹೋರಾತ್ರಿ ಧರಣಿ

ಮೇ 15ರ ಪ್ರತಿಭಟನೆ ತಿಳಿದಿದ್ದ ತಾ|| ಆಡಳಿತ, ಕಾಮಗಾರಿ ಸ್ಥಳದ ರಕ್ಷಣೆಗೆ ಹೆಚ್ಚಿನ ಪೋಲಿಸ್ ಬಂದೋಬಸ್ತ್ ಮಾಡಿತ್ತು. ಆದರೆ ರೈತರು ಕಾಮಗಾರಿ ಸ್ಥಳಕ್ಕೆ ನುಗ್ಗಲು ಯತ್ನಿಸಿದಾಗ ಪೋಲಿಸರು ಮತ್ತು ರೈತರ ನಡುವೆ ನೂಕಾಟ- ತಳ್ಳಾಟ ನಡೆದು ಅಂತಿಮವಾಗಿ ಪೊಲೀಸರು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು.ಅದರಂತೆ ಕಾಮಗಾರಿ ನಿಂತಾಗ, ಪೋಲಿಸರು ಪ್ರತಿಭಟನೆ ಬಿಟ್ಟು ತೆರಳುವಂತೆ ವಿನಂತಿಸಿದರು. ನಾವು ಸ್ಥಳದಿಂದ ಕದಲಿದರೆ ಮತ್ತೆ ಕಾಮಗಾರಿ ನಡೆಸುತ್ತಾರೆ ಅದ್ದರಿಂದ ಲಿಖಿತವಾಗಿ ಕಾಮಗಾರಿ ನಿಲ್ಲಿಸಿದ ಆದೇಶದ ಪ್ರತಿ ನೀಡುವ ತನಕ ತೆರಳುವುದಿಲ್ಲ ಎಂದು ಘೋಷಿಸಿ, ಕಾಮಗಾರಿ ಸ್ಥಳದಲ್ಲೆ ಪೆಂಡಾಲ್ ಹಾಕಿ ಆಹೋರಾತ್ರಿ ಧರಣಿ ನಡೆಸಲಾಯಿತು. ಮೇ 18 ರಂದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಥಳಾಕ್ಕಾಗಮಿಸಿದ ಉಪವಿಭಾಗದಿಕಾರಿಗಳು, ಕಾಮಗಾರಿ ನಿಲ್ಲಿಸುವುದಾಗಿ ಮತ್ತು ವಜಾ ಆಗಿರುವ ಅರ್ಜಿದಾರರಿಗೆ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅಗತ್ಯ ದಾಖಲಾತಿಗಳನ್ನು ಒದಗಿಸುವುದಾಗಿ, ಮೆಲ್ಮನವಿ ಸಲ್ಲಿಸಿದ ತಕ್ಷಣ ಕಾನೂನಿನಂತೆ ಸಕ್ರಮಾತಿ ಸಮಿತಿಯ ನಿರ್ಣಯಕ್ಕೆ ತಡೆಯಾಜ್ಞೆ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೊನೆಗೊಂಡಿತು.
ಮತ್ತೆ ಉಳುಮೆ ಪ್ರಾರಂಭಿಸಿದ ರೈತರು

ಕೂಡಲೇ ಅಗತ್ಯ ಹಿಂಬರಹ ಪಡೆದು ಎಸಿ ನ್ಯಾಯಾಲಯದಲ್ಲಿ ಮೆಲ್ಮನವಿ ಸಲ್ಲಿಸಲಾಯಿತು. ತಡೆಯಾಜ್ಞೆ, ಸಿಕ್ಕಿದ ಸಂದರ್ಭದಲ್ಲಿ ಮಳೆಯೂ ಆಗದ್ದರಿಂದ ಮೇ 30 ರಂದು ರೈತರು ತಮ್ಮ ಉಳುಮೆ ಪ್ರಾರಂಭಿಸಿ ಸಂಭ್ರಮ ವ್ಯಕ್ತ ಪಡಿಸಿದರು. ಬಹುತೇಕ ಹೋಗಿಯೇ ಬಿಟ್ಟಿದ್ದ ಜಮೀನಿನನ್ನು ಹೋರಾಟದ ಮೂಲಕ ಮರುವಶಕ್ಕೆ ತೆಗೆದುಕೊಂಡು ರೈತರ ಮುಖದಲ್ಲಿ ಗೆಲುವಿನ ಆತ್ಮ ವಿಶ್ವಾಸ ಎದ್ದು ಕಾಣುತ್ತಿತ್ತು. ಈಗ ಜಮೀನು ಹಕ್ಕು ಪತ್ರಕ್ಕಾಗಿ ಹೋರಾಟ ಮುಂದುವರಿಯುತ್ತದೆ.

ವರದಿ: ಟಿ.ಯಶವಂತ