ಕಾರ್ಪೊರೇಟ್ ಹಿಂದುತ್ವದ ಹೊಸ ಮಾದರಿ: ಜಾನುವಾರು ಮಾರಾಟ ನಿಷೇಧ

ಸಂಪುಟ: 
11
ಸಂಚಿಕೆ: 
25
date: 
Sunday, 11 June 2017
Image: 

ಮಾಂಸಕ್ಕಾಗಿ ಜಾನುವಾರು ಮಾರಾಟ ನಿಷೇಧ ಕೇವಲ ಸಂಸ್ಕøತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಇದು ಕಾರ್ಪೊರೇಟ್ ಬಂಡವಾಳವನ್ನು ಬೆಂಬಲಿಸುವ ಒಂದು ಆರ್ಥಿಕ ಯೋಚನೆಯ ಮೇಲೆಯೇ ದೃಢವಾಗಿ ನಿಂತಿರುವಂತದ್ದು. ಅಥವ ಇದು ತನ್ನ ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುವ, ಮತ್ತು ಅದೇ ವೇಳೆಗೆ ಕಾರ್ಪೊರೇಟ್ ಮಂದಿಯ ಹಿತಗಳನ್ನು ರಕ್ಷಿಸುವ ಮೋದಿ ಸರಕಾರದ ಕಾರ್ಪೊರೇಟ್ ಹಿಂದುತ್ವದ ಅತ್ಯುತ್ತಮ ಉದಾಹರಣೆ ಎನ್ನುತ್ತಾರೆ

ಅರ್ಚನಾ ಪ್ರಸಾದ್

ಕೇಂದ್ರ ಸರಕಾರದ ಅಧಿಸೂಚನೆ ಮಾಂಸ ಮಾರಾಟ ಸರಣಿಯ ಕಾರ್ಪೊರೇಟೀಕರಣದ ಮೊದಲ ಹೆಜ್ಜೆಯೇ ಎಂದು ಸಂದೇಹ ವ್ಯಕ್ತಪಡಿಸುತ್ತ ಅವರು ಇದು ಕೋಮುವಾದಿ ಕ್ರಮವಷ್ಟೇ ಅಲ್ಲ, ಕಾರ್ಮಿಕ-ವಿರೋಧಿ ಕ್ರಮ ಕೂಡ ಎನ್ನುತ್ತಾರೆ.
ಅನುವಾದ: ಮುರಳಿ

ಕಾರ್ಪೊರೇಟ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಎರಡು ದಿನಗಳ ನಂತರ ಅಂದರೆ ಮೇ.25ರಂದು ಪ್ರಾಣಿಗಳಿಗೆ ಹಿಂಸೆ ತಡೆ (ನಿಯಂತ್ರಣ ಮತ್ತು ಜಾನುವಾರು ಮಾರುಕಟ್ಟೆ) ನಿಯಮ, 2017ನ್ನು ಪ್ರಕಟಿಸಲಾಯಿತು. ಈ ನಿಯಮಗಳ ಮೂಲಕ ತಮ್ಮ ಅನುಪಯೋಗಿ ಜಾನುವಾರುಗಳನ್ನು ಮಾರಾಟ ಮಾಡುವ ರೈತರು, ವರ್ತಕರು, ಮಧ್ಯವರ್ತಿಗಳು ಎಲ್ಲರಿಗೂ ಹೊಡೆತ ನೀಡಿದೆ. ಇದರ ಜೊತೆಗೆ ಮಾಂಸ ರಫ್ತು ವಲಯ ಮತ್ತು ಆಧುನಿಕ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸರಬರಾಜು ಸಂಪೂರ್ಣವಾಗಿ ಅನೌಪಚಾರಿಕ ಮತ್ತು ಅನಧಿಕೃತತೆ ಮೇಲೆ ನಿಂತಿದೆ. ಹೀಗಿರುವಾಗ ಜಾನುವಾರುಗಳ ಮಾರಾಟದ ಮೇಲೆ ನಿಷೇಧ ಹೇರುವುದೆಂದರೆ ಕೇವಲ ಕೋಮುವಾದಿ ವಿಷಯ ಮಾತ್ರವಲ್ಲ, ಕಾರ್ಮಿಕ ವಿರೋಧಿ ನೀತಿಯೂ ಹೌದು. ಹೀಗಾಗಿ ಇದರ ಹಿಂದಿನ ಸಂಪೂರ್ಣ ಹುನ್ನಾರವನ್ನು ಬಯಲಿಗೆಳೆಯಬೇಕಿದೆ.

ಹೊಸ ಆದೇಶದಲ್ಲಿನ ನಿಯಮಗಳು
ಮತ್ತು ಕುಸಿಯುತ್ತಿರುವ ಜಾನುವಾರು ಬೆಲೆಗಳು:

ದೇಶದ ಹಲವಾರು ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾನೂನುಗಳಿವೆ, ಅದರಲ್ಲೂ ವಿಶೇಷವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದು ಹೆಚ್ಚಿದೆ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಹತ್ಯೆ ನಿಷೇಧಿಸಲು ಹಿಂಬಾಗಿಲಿನಿಂದ ಕ್ರಮ ಜರುಗಿಸುವ ಮಟ್ಟಕ್ಕೆ ಇಳಿದಿದೆ. ಅಧಿಸೂಚನೆ ಹೊರಡಿಸಿರುವ ನಿಯಮಗಳಲ್ಲಿ 22ನೇ ಸೆಕ್ಷನ್ ಪ್ರಕಾರ ಜಾನುವಾರುಗಳನ್ನು ಖರೀದಿಸುವವರು ಕೃಷಿ ಉದ್ದೇಶಕ್ಕಾಗಿ, ಕಸಾಯಿಖಾನೆಗಲ್ಲ ಎಂದು ಪ್ರಮಾಣೀಕರಿಸಬೇಕು. ಜಾನುವಾರು ಮರು ಮಾರಾಟ ಆರು ತಿಂಗಳು ಮತ್ತು ಅಂತಾರಾಜ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ರಫ್ತು ಕಂಪನಿಗಳಿಗೂ ಜಾನುವಾರುಗಳನ್ನು ಸರಬರಾಜು ಮಾಡಬಾರದು ಎಂಬುದು ಇದರಿಂದ ಸ್ಪಷ್ಟ. ಈ ನಿಯಮಗಳು ಜಾರಿಗೆ ಬಂದಿದ್ದೇ ಆದರೆ ರೈತರು ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಮಾರುವಂತಿಲ್ಲ ಮತ್ತು ತಮ್ಮ ತೋಟ ಮನೆಗಳ ಬಳಿಯೇ ಕದ್ದುಮುಚ್ಚಿ ಅಗ್ಗದ ದರಕ್ಕೆ ಮಾರಬೇಕು. ರೈತರಿಗೆ ಚೌಕಾಸಿ ಮಾಡುವ ಅಧಿಕಾರವೂ ಹೋಗಲಿದೆ. ಇನ್ನು ದಲ್ಲಾಳಿಗಳ ಪರಿಸ್ಥಿತಿಯೂ ಇದೆ. ಕಂಪನಿಗಳಿಗೆ ಜಾನುವಾರುಗಳನ್ನು ಕದ್ದುಮುಚ್ಚಿ ಮಾರಾಟ ಮಾಡಬೇಕು. ಕಂಪನಿಗಳು ನೀಡಿದ್ದೇ ಬೆಲೆ.

ಇದುವರೆಗೆ ಗೋಹತ್ಯೆ ನಿಷೇಧಿಸಿರುವ ರಾಜ್ಯಗಳಲ್ಲಿನ ಅನುಭವಗಳನ್ನು ಗಮನಿಸಿದಾಗ ಜಾನುವಾರು ದರಗಳು ಭಾರಿ ಪ್ರಮಾಣದಲ್ಲಿ ಕುಸಿದಿವೆ. ಮಾಂಸ ಮತ್ತು ಜಾನುವಾರು ರಫ್ತು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಸಭರವಾಲ್ ಪ್ರಕಾರ ಈ ನಿಷೇಧ ಮಾಂಸ ರಫ್ತುದಾರರಿಗಿಂತಲೂ ಕೃಷಿಕರಿಗೆ ಅತಿಹೆಚ್ಚು ಹೊಡೆತ ಎಂದಿದ್ದಾರೆ. ಸದ್ಯ ನಾವು ಹಾಲು ನೀಡುವುದನ್ನು ನಿಲ್ಲಿಸಿರುವ, ವಯಸ್ಸಾದ ಎಮ್ಮೆಗಳನ್ನು ಮಧ್ಯವರ್ತಿಗಳ ಮೂಲಕ ಜಾನುವಾರು ಮಾರುಕಟ್ಟೆಯಲ್ಲಿ ಖರೀದಿಸುತ್ತೇವೆ. ಅವರು ಬಿಡ್ ಮಾಡುತ್ತಾರೆ ಮತ್ತು ಒಂದು ಎಮ್ಮೆ 20 ರಿಂದ 25 ಸಾವಿರವರೆಗೂ ಹೋಗುತ್ತದೆ. ಈಗ ರೈತರು ತಾವಿರುವೆಡೆಯಲ್ಲಿ ಮಾರಾಟ ಮಾಡಿದರೆ ಕಂಪನಿಗಳು ನೀಡುವ ದರಕ್ಕೆ ಕೊಡಬೇಕು. ಮಾರುಕಟ್ಟೆಯಲ್ಲಿ ಬಿಡ್ ಆಗುವ ದರ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಗೋಹತ್ಯೆ ನಿಷೇಧಿಸಿರುವ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ದರಗಳು ಗಣನೀಯವಾಗಿ ಕುಸಿದಿವೆ.

ಒಂದು ಅಧ್ಯಯನ ವರದಿ ಅನುಸಾರ ಹಾಲು ನೀಡುವ ಹಸುವೊಂದರ ದರ 65 ಸಾವಿರದಿಂದ 50 ಸಾವಿರಕ್ಕೆ ಕುಸಿದಿದೆ. ಹೋರಿ ಕರು ಎತ್ತು ಮತ್ತು ವಯಸ್ಸಾದ ಜಾನುವಾರುಗಳ ದರ 19 ಸಾವಿರದಿಂದ 16 ಸಾವಿರಕ್ಕೆ ಕುಸಿದಿದೆ. ಹಳೆ ಜಾನುವಾರುಗಳ ಮಾರಾಟ, ಹೊಸದರ ಖರೀದಿ ಇಂತಹ ಎಲ್ಲ ಪ್ರಕ್ರಿಯೆಗಳೂ ಅಯೋಮಯಗೊಂಡಿವೆ, ಗೊಂದಲದಿಂದ ಕೂಡಿವೆ.

ಈ ಗೊಂದಲ, ಗೋಜಲು ಅನುಪಯೋಗಿ ಜಾನುವಾರುಗಳನ್ನು ಖರೀದಿಸುವವರ ಕೊರತೆಯೊಂದಿಗೆ ಮಾತ್ರ ಸಂಬಂಧ ಹೊಂದಿಲ್ಲ. ಇದು ಹೈನುಗಾರಿಕೆ ಮತ್ತು ಮಾಂಸ ಉತ್ಪಾದನೆಯೊಂದಿಗೂ ನಿರ್ದಿಷ್ಟ ಸಂಬಂಧಗಳನ್ನು ಹೊಂದಿದೆ. ಹಲವಾರು ವಿಶ್ಲೇಷಕರು ವಿವರಿಸುವಂತೆ ಭಾರತದೊಳಗೆ ಮಾಂಸ ಮತ್ತು ಹಾಲಿಗಾಗಿ ಪ್ರತ್ಯೇಕ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳೇ ಇಲ್ಲ. ಹೈನುಗಾರಿಕೆಗಾಗಿ ಜಾನುವಾರುಗಳನ್ನು ಸಾಕುವ ರೈತರೇ ಮಾಂಸ ಉದ್ಯಮಕ್ಕೂ ಜಾನುವಾರುಗಳನ್ನು ಸರಬರಾಜು ಮಾಡುವವರು. ಹಸುವೊಂದು ಹಾಲು ಕೊಡುವುದನ್ನು ನಿಲ್ಲಿಸುತ್ತಿದ್ದಂತೆ ಮಾಂಸಕ್ಕೆ ಮಾರಾಟ ಮಾಡಲಾಗುವುದು. ಅಮೆರಿಕ, ಆಸ್ಟ್ರೆಲಿಯಾದಂತೆ ಇನ್ನೂ ಹಲವಾರು ದೇಶಗಳಲ್ಲಿ ಮಾಂಸಕ್ಕೆಂದು ವಿಶೇಷ ತಳಿಗಳನ್ನು ಅಭಿವೃದ್ಧಿಪಡಿಸಿಲ್ಲ. ಜಾನುವಾರುಗಳನ್ನು ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡಬೇಕು ಎಂದರೆ ಅನುತ್ಪಾದಕ ಜಾನುವಾರುಗಳನ್ನು ತೀರಾ ಅಗ್ಗದ ದರಕ್ಕೆ ಮಾರಾಟ ಮಾಡುವ ಒತ್ತಡಕ್ಕೆ ರೈತರು ಸಿಲುಕಲಿದ್ದಾರೆ.

ಮಹಾರಾಷ್ಟ್ರದಲ್ಲಿನ ಒಂದು ಉದಾಹರಣೆಯನ್ನು ನೋಡೋಣ. ಪ್ರಸ್ತುತ ಪ್ರತಿದಿನ 20 ಲೀಟರ್ ಹಾಲು ನೀಡುವ ಹಸುವೊಂದು ವಾರದ ಸಂತೆಯಲ್ಲಿ ಸರಿಸುಮಾರು 45 ಸಾವಿರ ರೂ.ಗಳ ಬೆಲೆ ಇದ್ದು ಉತ್ತರ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚಿನ ದರವಾಗಿದೆ. ಒಂದು ವರ್ಷದ ಹಿಂದೆ ಈ ದರ ಸರಾಸರಿ 80 ಸಾವಿರ ರೂ. ಇತ್ತು. ನಾಲ್ಕು ವರ್ಷ ವಯಸ್ಸಿನ ಮತ್ತು ಆರೋಗ್ಯವಂತ ಎತ್ತಿನ ದರ ವರ್ಷದ ಹಿಂದೆ 50 ಸಾವಿರ ರೂ. ಇದ್ದದು ಈಗ 30 ಸಾವಿರಕ್ಕೆ ಕುಸಿದಿದೆ.

ಮತ್ತೊಬ್ಬ ವರ್ತಕ ಹೇಳುವುದೇನೆಂದರೆ ಈ ಮೊದಲು ನಾನು ದಿನಕ್ಕೆ ಹತ್ತು ಜಾನುವಾರು ಮಾರಾಟ ಮಾಡುತ್ತಿದ್ದರೆ ಈಗ ಎರಡು ಮಾರುವುದು ಕಷ್ಟ ಎಂದಿದ್ದಾರೆ. ಗೋಹತ್ಯೆ ನಿಷೇಧ ಜಾರಿಯಾದ ನಂತರ ಒಳ್ಳೆಯ ವಯಸ್ಸಿನ ಹಸುವನ್ನು ಕೇವಲ 20 ಸಾವಿರಕ್ಕೆ ಮಾರಾಟ ಮಾಡಿದೆ. ನಿಷೇಧ ಇಲ್ಲದಿದ್ದರೆ ಸಾಮಾನ್ಯವಾಗಿ 60 ಸಾವಿರ ಬರುತ್ತಿತ್ತು ಎಂದು ರೈತರೊಬ್ಬರು ಹೇಳಿದ್ದಾರೆ.

ಮಾಂಸ ಸರಬರಾಜು ಸರಪಳಿ
ಮರು ಸಂಘಟನೆ ಸಂಭವನೀಯತೆ:

ಆಸಕ್ತಿಕರ ವಿಷಯ ಎಂದರೆ ಮಾಂಸ ರಫ್ತು ಮಾಡುವ ಬಹುತೇಕ ಕಂಪನಿಗಳು ಈ ನಿಷೇಧವನ್ನು ರೈತ ವಿರೋಧಿ ಎಂತಲೂ, ತಮ್ಮ ಹಿತಾಸಕ್ತಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿರುವುದು. ಏಕೆಂದರೆ ಜಾನುವಾರು ಮಾರಾಟ ನಿಷೇಧ ಮಾಂಸ ಸರಬರಾಜು ಉದ್ಯಮದ ದಿಕ್ಕನ್ನೇ ಬದಲಾಯಿಸಲಿದೆ ಎಂದು. ಸರ್ಕಾರಿ, ಸಾರ್ವಜನಿಕ ಪಾಲುದಾರಿಕೆ ಅಡಿಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಹೊಂದಿರುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ರೂಪಿಸುವ ಸಾಧ್ಯತೆಗಳೂ ಇಲ್ಲದಿಲ್ಲ.

ರಾಷ್ಟ್ರೀಯ ಜಾನುವಾರು ಮಿಷನ್‍ನ್ನು 2015-16ರಲ್ಲಿ ಪರಿಷ್ಕರಿಸಿದ್ದು ಅದರಲ್ಲಿನ ಕಾರ್ಯಾಚರಣೆ ನಿಯಮಗಳ ಅನುಸಾರ ಎಮ್ಮೆಗಳ ಸಾಕಣೆ ಪ್ರಮುಖ ಉದ್ಯೋಗ ಸೃಜನೆ ಯೋಜನೆಗಳಲ್ಲಿ ಒಂದು. ಕಳೆದ ಬಜೆಟ್‍ನಲ್ಲಿ ಈ ಯೋಜನೆಗೆ ಹಣವನ್ನೂ ಮೀಸಲಿಡಲಾಗಿದೆ. ಇದು ಮೂರು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ದಲಿತರು, ಆದಿವಾಸಿಗಳು ಮತ್ತು ಮಹಿಳೆಯರಿಗೆ ಎಮ್ಮೆ ಸಾಕಣೆಗೆ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸುವುದು. ಎರಡನೆಯದು ವಾಣಿಜ್ಯ ಘಟಕಗಳನ್ನು ಮತ್ತು ಮೂರನೆಯದಾಗಿ ಕೈಗಾರಿಕೆಗಳನ್ನು ಸ್ಥಾಪಿಸುವುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಕಾರ್ಯಕ್ರಮ ಕೇವಲ ಯುವಕರು ಮತ್ತು ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಕಂಪನಿಗಳನ್ನು ಸ್ಥಾಪಿಸಬಹುದು, ಪಾಲುದಾರಿಕೆ ಮಾಡಿಕೊಳ್ಳಬಹುದು ಮತ್ತು ದೊಡ್ಡ ದೊಡ್ಡ ಕಾರ್ಪೊರೇಟ್‍ಗಳನ್ನು ಸ್ಥಾಪಿಸಬಹುದು. ಈ ಯೋಜನೆ ಸಂಪೂರ್ಣವಾಗಿ ನಬಾರ್ಡ್‍ನ ಹಣಕಾಸು ನೆರವನ್ನು ಅವಲಂಬಿಸಿದ್ದು ಎಮ್ಮೆ ಸಾಕಣೆ ಮಾಡುವವರೇ ಮಾರುಕಟ್ಟೆಯನ್ನು ಹುಡುಕಿಕೊಳ್ಳಬೇಕು. ಈ ಕಾರಣದಿಂದಾಗಿ ಅವರು ಕಾರ್ಪೊರೇಟ್‍ಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಲಿದ್ದಾರೆ. ಅಂದರೆ ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ಚರ್ಮ ಮತ್ತು ಮಾಂಸ ರಫ್ತು ಉದ್ಯಮಕ್ಕೆ ಅಗತ್ಯವಾದುದನ್ನು ಸಿದ್ಧಪಡಿಸುವುದಾಗಿದೆ. ಗೋ ಹತ್ಯೆ ನಿಷೇಧಿಸುವುದರಿಂದಲೂ ರೈತರು ಅತ್ಯಂತ ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡುವ ಅನಿವಾರ್ಯಕ್ಕೆ ಒಳಗಾಗಲಿದ್ದಾರೆ. ಈಗಿನ ಸನ್ನಿವೇಶದಲ್ಲಿ ರಾಷ್ಟ್ರೀಯ ಜಾನುವಾರು ಮಿಶನ್ ಈ ಪ್ರಕ್ರಿಯೆಗೇ ನೆರವಾಗುತ್ತದೆ.

ಇದರಿಂದಾಗುವ ಮತ್ತೊಂದು ಸಮಸ್ಯೆ ಎಂದರೆ ಸ್ಥಳೀಯವಾಗಿ ಮಾಂಸದ ಅಗತ್ಯ ಪೂರೈಸುವ ಕಸಾಯಿಖಾನೆಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಸರ್ಕಾರ ಹಿಂದಿನ ಬಾಗಿಲಿನಿಂದ ತಂದಿರುವ ಈ ನಿಯಮಗಳಿಂದ ಸ್ಥಳೀಯ ಗ್ರಾಹಕರು ದನದ ಮಾಂಸ ಪಡೆಯುವುದು ಅಸಾಧ್ಯವಾಗಲಿದೆ. ಇದು ಜಾನುವಾರು ಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ನೀಡಿರುವ ಸ್ಪಷ್ಟ ಪ್ರತಿಕ್ರಿಯೆಯಲ್ಲಿ ಈ ಅಂಶವನ್ನು ಎತ್ತಿ ತೋರಿಸಿದೆ. ಅಂದರೆ ಕೇರಳದಲ್ಲಿ ದನದ ಮಾಂಸದ ಮೇಲೆ ನಿಷೇಧ ಇಲ್ಲದಿದ್ದರೂ ಗ್ರಾಹಕರು ಸೂಪರ್ ಮಾರುಕಟ್ಟೆಗಳಲ್ಲಿಯೇ ಖರೀದಿಸಬೇಕಾಗುತ್ತದೆ. ಇದು ದೇಶೀಯ ಪೂರೈಕೆ ಸರಪಳಿಯ ಒಂದು ತುದಿಯಾಗುತ್ತದೆ.ಇದರಿಂದÀ ಸಣ್ಣ ಮತ್ತು ರಿಟೇಲ್ ಮಾಂಸ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಲಿದೆ. ಈ ಸ್ಥಳೀಯ ಮಾರುಕಟ್ಟೆ ಉಳಿಯಬೇಕೆಂದರೆ ಈ ವರ್ತಕರು ಸಹ ಮಾಂಸ ಉತ್ಪಾದನೆಯ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ರೈತರಿಂದ ದನಗಳನ್ನು ಖರೀದಿಸಲು ದೊಡ್ಡ ದೊಡ್ಡ ಕಂಪನಿಗಳ ಫ್ರಾಂಚೈಸಿಗಳಾಗಬೇಕು.

ಹೀಗಾಗಿ ಜಾನುವಾರು ಮಾರಾಟ ನಿಷೇಧ ಕೇವಲ ಸಂಸ್ಕøತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಇದುÀ ಕಾರ್ಪೊರೇಟ್ ಬಂಡವಾಳವನ್ನು ಬೆಂಬಲಿಸುವ ಒಂದು ಆರ್ಥಿಕ ಯೋಚನೆಯ ಮೇಲೆಯೇ ದೃಢವಾಗಿ ನಿಂತಿರುವಂತದ್ದು. ಅಥವ ಇದು ತನ್ನ ಸಾಂಸ್ಕøತಿಕ ಯಜಮಾನಿಕೆಯನ್ನು ಹೇರುವ, ಮತ್ತು ಅದೇ ವೇಳೆಗೆ ಕಾರ್ಪೊರೇಟ್ ಮಂದಿಯ ಹಿತಗಳನ್ನು ರಕ್ಷಿಸುವ ಮೋದಿ ಸರಕಾರದ ಕಾರ್ಪೊರೇಟ್ ಹಿಂದುತ್ವದ ಅತ್ಯುತ್ತಮ ಉದಾಹರಣೆ.