ಮಹಿಳೆಯರ ಕುರಿತು ಕೇರಳ ಕಾಂಗ್ರೆಸ್ ಮುಖಂಡರ ಪ್ರತಿಗಾಮಿ ಹೇಳಿಕೆ: ಎಐಡಿಡಡಬ್ಲ್ಯುಎ ಖಂಡನೆ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಕೇರಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಎಂ.ಹಸ್ಸನ್ ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿಯ ಶಿಬಿರವೊಂದರಲ್ಲಿ ಪತ್ರಕರ್ತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಮುಟ್ಟಾಗಿರುವ ಮಹಿಳೆಯರು ‘ಅಶುದ್ಧ’ರು, ಅವರು ದೇವಸ್ಥಾನಗಳಿಗೆ ಹೋಗಬಾರದು, ಮುಟ್ಟಿನ ಅವಧಿ ಅಶುದ್ಧತೆಯ ದಿನಗಳಾದ್ದರಿಂದ ಮನೆಯಲ್ಲೇ ಇರಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಇಂತಹ ಹೇಳಿಕೆ ಆಘಾತಕಾರಿ ಎಂದು ಬಣ್ಣಿಸಿದೆ. 

ಶಿಬಿರದಲ್ಲಿ ಭಾಗವಹಿಸಿದ್ದ ಮಹಿಳೆಯರು ಇದನ್ನು ಪ್ರತಿಭಟಿಸಿ ಅವರನ್ನು ಪ್ರಶ್ನಿಸಿದಾಗ ಅವರು ಖೇದ ವ್ಯಕ್ತಪಡಿಸುವ ಬದಲು ತನ್ನ ಟಿಪ್ಪಣಿಗೇ ಅಂಟಿಕೊಂಡರು.

ನಮ್ಮ ಚುನಾಯಿತ ಪ್ರತಿನಿಧಿಗಳು ಇಂತಹ ಮಹಿಳಾ-ವಿರೋಧಿ ನಿಲುವುಗಳನ್ನು ತಳೆಯುವುದು ಬಹಳಷ್ಟು ಆತಂಕದ ಸಂಗತಿ. ಇಂದಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರು ಅತ್ಯಂತ ಕೆಟ್ಟ ರೀತಿಯ ದಾಳಿಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಮಹಿಳೆಯರ ವಿರುದ್ಧ ಹಿಂಸಾಚಾರದ ಘಟನೆಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಇಂತಹ ಟಿಪ್ಪಣಿಗಳು ಮಹಿಳೆಯರ ಮೇಲೆ ಗುರಿಯಿಟ್ಟಿರುವ ಪ್ರತಿಗಾಮಿ ಪಾಳೆಯಗಾರಿ ಮತ್ತು ಪಿತೃಪ್ರಧಾನತೆಯ ಶಕ್ತಿಗಳನ್ನು ಮತ್ತಷ್ಟು ಹುರಿದುಂಬಿಸುತ್ತವೆ ಎಂದಿರುವ ಎಐಡಿಡಬ್ಲ್ಯುಎ ಈ ಹೇಳಿಕೆಯನ್ನು ಖಂಡಿಸುತ್ತ ಎಂಎಂ ಹಸ್ಸನ್ ಅವರು ಈ ಬಗ್ಗೆ ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.