ಮೋಟಾರು ವಾಹನಗಳ ಕಾಯ್ದೆ, ವಿಮಾ ಮತ್ತು ವಾಹನ ಶುಲ್ಕ ಏರಿಕೆಯ ವಿರುದ್ಧ ಸಾರಿಗೆ ಕಾರ್ಮಿಕರ ರಾಷ್ಟ್ರೀಯ ಚಳುವಳಿ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಅಖಿಲ ಭಾರತ ಸಾರಿಗೆ ಕಾರ್ಮಿಕರ ಒಕ್ಕೂಟದ ಕರೆಯ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಮೋಟಾರು ವಾಹನಗಳ ಕಾಯ್ದೆ(ತಿದ್ದುಪಡಿ) ಮಸೂದೆ, 2016ನ್ನು ಸಂಸತ್ತು ಪಾಸು ಮಾಡುವುದರ ವಿರುದ್ಧ, ಹಾಗೂ ವಿಮಾ ಪ್ರೀಮಿಯಂ  ಮತ್ತು ವಾಹನಗಳ ನೊಂದಾವಣಿ ಶುಲ್ಕ, ಪರವಾನಿಗೆ ಶುಲ್ಕ ಇತ್ಯಾದಿಗಳಲ್ಲಿ ವಿಪರೀತ ಹೆಚ್ಚಳ ಮಾಡುವುದರ ವಿರುದ್ಧ ರಾಷ್ಟ್ರವ್ಯಾಪಿ ಚಳುವಳಿಗೆ ಕರೆ ನೀಡಿದೆ. ಕೇಂದ್ರ ಸರಕಾರ ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಇವುಗಳಲ್ಲಿ 200% ಹೆಚ್ಚಳ ಮಾಡಿದೆ. ಈಗ ಐಆರ್‍ಡಿಎ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂಗಳಲ್ಲಿ 30% ದಿಂದ 50% ಹೆಚ್ಚಳ ಮಾಡಬೇಕು ಎಂದು ಆದೇಶಿಸಿದೆ. ಜಂಟಿ ಮುಷ್ಕರವೂ ಸೇರಿದಂತೆ ಪ್ರತಿಭಟನಾ ಕಾರ್ಯಾಚರನೆಗಳನ್ನು ನಡೆಸಬೇಕೆಂದು ಒಕ್ಕೂಟ ಕರೆ ನೀಡಿದೆ.

ಬಿಹಾರದಲ್ಲಿ ಮಾರ್ಚ್ 27ರಂದು ಸಂಪೂರ್ಣ ಮುಷ್ಕರ ನಡೆದಿದೆ. ಆಟೋಗಳು, ಬಸ್ಸುಗಳು, ಟ್ಯಾಕ್ಸಿಗಳು, ಲಾರಿಗಳು ಸಂಚರಿಸದೆ ಬಂದ್‍ನಂತಹ ವಾತಾವರಣ ಸೃಷ್ಟಿಯಾಯಿತು.

ಕೇರಳದಲ್ಲಿ ಮಾರ್ಚ್ 31ರಂದು ವಾಹನ ಬಂದ್ ಆಚರಿಸಲಾಗುತ್ತಿದೆ.

ಅಸ್ಸಾಂ ನಲ್ಲಿ ಎಪ್ರಿಲ್ 8ರಂದು ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. 

ದಕ್ಷಿಣ ಭಾರತ ಸಾರಿಗೆ ನಿರ್ವಾಹಕರ ಕಲ್ಯಾಣ ಸಂಘ ಮಾರ್ಚ್ 30ರಿಂದ ಅನಿರ್ದಿಷ್ಟ ಕಾಲ ವಾಹನ ಬಂದ್ ನಡೆಸಲು ನಿರ್ಧರಿಸಿದೆ. ಅಖಿಲ ಭಾರತ ಸಾರಿಗೆ ಕಾರ್ಮಿಕರ ಒಕ್ಕೂಟ ಈ ಎಲ್ಲ ಹೋರಾಟಗಳಿಗೆ ತನ್ನ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿದೆ.