ಮಾರುತಿ ಕಾರ್ಮಿಕರ ಕುರಿತ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ಗುಡ್‍ಗಾಂವ್‍ನಲ್ಲಿ ವಿಶಾಲ ರಾಲಿ ಹರ್ಯಾಣದಾದ್ಯಂತ ಸಂಕಲ್ಪ ದಿನಾಚರಣೆ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಮಾರುತಿ ಸುಝುಕಿಯ ಮಾನೆಸರ್ ಸ್ಥಾವರದ 13 ಕಾರ್ಮಿಕರಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಕಾರ್ಮಿಕರಿಗೆ ಶಿಕ್ಷೆ ವಿಧಿಸಿರುವುದು ನ್ಯಾಯವಲ್ಲ ಎಂದು ಮಾರ್ಚ್ 23ರಂದು ಭಗತ್‍ಸಿಂಗ್, ರಾಜಗುರು ಮತ್ತು ಸುಖದೇವ್ ಬ್ರಿಟಿಶ್ ಸಾಮ್ರಾಜ್ಯಶಾಹಿಗಳ ನೇಣುಗಂಬಗಳನ್ನು ಏರಿದ ದಿನವಾದ ಮಾರ್ಚ್23ರಂದು ಹರ್ಯಾಣದಾದ್ಯಂತ ಸಂಕಲ್ಪ ದಿನಾಚರಣೆ ನಡೆಸಲಾಗಿದೆ. ಕಂಪನಿಯ ಸ್ಥಾವರ ಇರುವ ಗುಡ್‍ಗಾಂವ್‍ನಲ್ಲಿ ಒಂದು ವಿಶಾಲ ರಾಲಿ ನಡೆಯಿತು.

ಮಾರ್ಚ್ 23ರಂದು ಗುಡ್‍ಗಾಂವ್‍ನಲ್ಲಿರುವ ಉದ್ದಿಮೆಗಳ ಕಾರ್ಮಿಕರು ತಮ್ಮ ಕೆಲಸದ ಪಾಳಿ ಮುಗಿಯುತ್ತಿದ್ದಂತೆ ತಮ್ಮ ಕಾರ್ಖಾನೆ ಗೇಟುಗಳಿಂದ ಮೆರವಣಿಗೆಗಳಲ್ಲಿ ಸಾಗಿದರು. ಅತ್ಯಂತ ದೊಡ್ಡ ಮೆರವಣಿಗೆ ಮಾರುತಿಯ ಮಾನೆಸರ್ ಘಟಕದಿಂದಲೇ ಆರಂಭವಾಯಿತು. ಈ ಎಲ್ಲ ಮೆರವಣಿಗೆಗಳು ಒಂದುಗೂಡಿ 5 ಕಿ.ಮೀ. ಕ್ರಮಿಸಿ ಬಹಿರಂಗ ಸಭೆ ನಡೆಯುವ ಸ್ಥಳವನ್ನು ಸೇರಿದವು. ಮಾರುತಿ ಸುಝುಕಿ ಕಾರ್ಮಿಕರ ಸಂಘದ ಮುಖಂಡರು, ಸಿಐಟಿಯುನ ಹರ್ಯಾಣ ರಾಜ್ಯಾಧ್ಯಕ್ಷ ಸತ್‍ಬೀರ್‍ಸಿಂಗ್, ಪ್ರಧಾನ ಕಾರ್ಯದರ್ಶಿ ಜಯಭಗವಾನ್, ಎಐಟಿಯುಸಿ ರಾಜ್ಯ ಉಪಪ್ರಧಾನ ಕಾರ್ಯದರ್ಶಿ ಅನಿಲ್ ಪಂವಾರ್ ಮತ್ತು ಎಐಯುಟಿಯುಸಿಯ ರಾಂಕುಮಾರ್ ಮೆರವಣಿಗೆಯ ನೇತೃತ್ವ ವಹಿಸಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಮಿಕರನ್ನು ಉದ್ದೇಶಿಸಿ ಹರ್ಯಾಣದ ಕಾರ್ಮಿಕ ಮುಖಂಡರಲ್ಲದೆ, ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲೊಬ್ಬರಾದ ಎ.ಆರ್.ಸಿಂಧು ಮಾತನಾಡಿ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಸಾಮ್ರಾಜ್ಯಶಾಹಿ ದಮನದ ವಿರುದ್ಧ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ದಿನದಂದು ಕಾರ್ಮಿಕರು ಬಂಡವಾಳಶಾಹಿ ದಮನದ ವಿರುದ್ಧ ಹೋರಾಟದ ಸಂಕಲ್ಪ ಮಾಡುತ್ತಿರುವುದು ಅತ್ಯಂತ ಸೂಕ್ತವಾಗಿದೆ ಎಂದರು. ಅಖಿಲ ಭಾರತ ಮಟ್ಟದಲ್ಲೂ ಕಾರ್ಮಿಕ ಸಂಘಟನೆಗಳು ಈ ಹೋರಾಟವನ್ನು ಎತ್ತಿಕೊಳ್ಳುತ್ತವೆ, ಎಪ್ರಿಲ್ 5ರಂದು ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಿಐಟಿಯು ಹರ್ಯಾಣ ರಾಜ್ಯಸಮಿತಿ ಹೊರಡಿಸಿದ ಕರಪತ್ರವನ್ನು  ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಹಂಚಲಾಗುತ್ತಿದೆ. 

ಮಾರುತಿ ಕಂಪನಿಯ ಕಾರ್ಮಿಕರನ್ನು ದೋಷಿಗಳೆಂದು ತೀರ್ಪಿತ್ತಿರುವುದು ಉಚಿತವಲ್ಲೆಂದು ಹೇಳಿರುವ ಈ ಕರಪತ್ರ 117 ಕಾರ್ಮಿಕರನ್ನು ನ್ಯಾಯಾಲಯವೇ ನಿರ್ದೋಷಿಗಳೆಂದು ಬಿಡುಗಡೆ ಮಾಡಿರುವಾಗ ಅವರನ್ನು ಐದು ವರ್ಷಗಳ ಕಾಲ ಅಕಾರಣವಾಗಿ ಪೀಡಿಸಿರುವ ಮಾರುತಿ ಕಂಪನಿಯ ವ್ಯವಸ್ಥಾಪಕರು, ಸರಕಾರ ಮತ್ತು ಅದರ ಪೋಲಿಸನ್ನು ಏಕೆ ಕಾನೂನಿನ ವ್ಯಾಪ್ತಿಗೆ ತಂದಿಲ್ಲ ಎಂದೂ ಈ ಕರಪತ್ರ ಪ್ರಶ್ನಿಸಿದೆ. 

ಮಾರುತಿ ಕಾರ್ಮಿಕರ ಏಕೈಕ ಅಪರಾಧವೆಂದರೆ ಅವರು ತಮ್ಮ ಆಯ್ಕೆಯ ಕಾರ್ಮಿಕ ಸಂಘವನ್ನು ರಚಿಸಿದ್ದು. ಈ ಹಕ್ಕನ್ನು ದೇಶದ ಸಂವಿಧಾನ ನೀಡಿದೆ, ಆದರೆ ಲೂಟಿಕೋರ ಬಂಡವಾಳಕ್ಕೆ ಮತ್ತು ಅವರ ಚೇಲಾಗಳಿಗೆ ಇದು ಒಪ್ಪಿಗೆಯಿಲ್ಲ ಎಂದಿರುವ ಈ ಕರಪತ್ರ 56 ಅಂಗುಲ ಎದೆಯನ್ನು ಪ್ರದರ್ಶಿಸುತ್ತಲೇ ಸಾಮ್ರಾಜ್ಯಶಾಹಿಯ ಎದುರು ಡೊಗ್ಗುಸಲಾಮು ಹೊಡೆಯುವ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕಾರ್ಮಿಕರ ಈ ಹಕ್ಕುಗಳನ್ನು ದಮನ ಮಾಡಲು ಪ್ರಯತ್ನಿಸುತ್ತಿವೆ. ಇದರ ವಿರುದ್ಧ ಹೋರಾಟಕ್ಕೆ ಐಕ್ಯತೆಯಿಂದ ಮುಂದಾಗಬೇಕೆಂದು ಸಿಐಟಿಯು ಕರಪತ್ರ ಕರೆ ನೀಡಿದೆ.