ಕಾನೂಬಾಹಿರವಾಗಿ ಮನಿಬಿಲ್ ಎಂದು ವರ್ಗೀಕರಿಸುವ ಕುತಂತ್ರ ನಿಲ್ಲಬೇಕು

ಸಂಪುಟ: 
11
ಸಂಚಿಕೆ: 
15
Sunday, 2 April 2017

ರಾಜ್ಯಸಭೆ ಭಾರತೀಯ ಸಂವಿಧಾನದ ಭಾವನೆಯನ್ನು ರಕ್ಷಿಸಬೇಕು ಕಾನೂಬಾಹಿರವಾಗಿ ಮನಿಬಿಲ್ ಎಂದು ವರ್ಗೀಕರಿಸುವ ಕುತಂತ್ರ ನಿಲ್ಲಬೇಕು - ಉಪರಾಷ್ಟ್ರಪತಿಗಳಿಗೆ 200ಕ್ಕೂ ಹೆಚ್ಚು ಪ್ರತಿಷ್ಠಿತರ ಪತ್ರ

ಪ್ರಖ್ಯಾತ ನ್ಯಾಯವಾದಿ ಫಾಲಿ ನರಿಮನ್, ನಾಟಕಕಾರ ಗಿರೀಶ ಕಾರ್ನಾಡ್, ಸಂಗೀತಜ್ಞ ಟಿ,ಎಂ. ಕೃಷ್ಣ, ಅವರೊಂದಿಗೆ ಮ್ಯಾಗಸ್ಸೆಸ್ಸೆ ಪುರಸ್ಕಾರ ಪಡೆದ ಸಾಮಾಜಿಕ ಕಾರ್ಯಕರ್ತ ಬೆಜ್ವಾಡ ವಿಲ್ಸನ್, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ಪ್ರಭಾತ್ ಪಟ್ನಾಯಕ್ ಮತ್ತಿತರ 200ಕ್ಕೂ ಹೆಚ್ಚು ಪ್ರತಿಷ್ಠಿತ ನಾಗರಿಕರು ಹಣಕಾಸು ಮಸೂದೆ 2017ನ್ನು ‘ಮನಿ ಬಿಲ್’ ಎಂದು ಕಾನೂನುಬಾಹಿರವಾಗಿ ಪರಿಗಣಿಸಿರುವ ಬಗ್ಗೆ  ತೀವ್ರ ಆತಂಕ ವ್ಯಕ್ತಪಡಿಸುತ್ತ ರಾಜ್ಯಸಭಾದ ಅಧ್ಯಕ್ಷರೂ ಮತ್ತು ದೇಶದ ಉಪರಾಷ್ಟ್ರಪತಿಗಳೂ ಆದ ಹಮೀದ್ ಅನ್ಸಾರಿಯವರಿಗೆ ಪತ್ರ ಬರೆದಿದ್ದಾರೆ. 

ಎಲ್ಲ ನಾಗರಿಕರನ್ನು ತಟ್ಟುವ ಮಹತ್ವದ ಶಾಸನಗಳನ್ನು ರಾಜ್ಯಸಭೆಯ ಅನುಮೋದನೆಯಿಲ್ಲದೆ ತಂದು ಬಿಡಲು ಸರಕಾರ ‘ಮನಿ ಬಿಲ್’ ತಂತ್ರವನ್ನು ಉಪಯೋಗಿಸಲಾರಂಭಿಸಿದೆ. ಈ ಪ್ರಜಾಪ್ರಭುತ್ವ-ವಿರೋಧಿ ತಂತ್ರವನ್ನು ತೆರಿಗೆ ಮತ್ತು ಹಣ ನೀಡಿಕೆಯ  ಅಗತ್ಯಕ್ಕಿಂತ ಬಹಳ ಹೆಚ್ಚಿನ ವ್ಯಾಪ್ತಿಯಿರುವ, ಕೋಟ್ಯಂತರ ನಾಗರಿಕರನ್ನು ಹಲವಾರು ವಿಧಗಳಲ್ಲಿ ತಟ್ಟುವ ಆಧಾರ್ ಮಸೂದೆಗೆ  ಬಳಸಲಾಯಿತು. ಅತ್ಯಂತ ಮಹತ್ವದ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಚರ್ಚಿಸಿಯೇ ಇಲ್ಲ, ಅದನ್ನು ಸಾರ್ವಜನಿಕ ಪರೀಕ್ಷಣೆಗೆ ಒಡ್ಡಿಲ್ಲ ಎಂಬ ಸಂಗತಿಯತ್ತ ಪತ್ರ ಗಮನ ಸೆಳೆದಿದೆ.

ಇತ್ತೀಚಿನ ಬೆಚ್ಚಿ ಬೀಳಿಸುವ ಉದಾಹರಣೆ ಎಂದರೆ ಹಣಕಾಸು ಮಸೂದೆಯಲ್ಲಿ ಸೇರಿಸಬಾರದಿದ್ದ,  ಸ್ವತಂತ್ರವಾಗಿ ಪರಿಶೀಲಿಸಬೇಕಾಗಿದ್ದ  ಹಲವಾರು ಬಹಳ ಮಹತ್ವದ ವಿಷಯಗಳನ್ನು ಅಳವಡಿಸಿರುವುದು. ದೇಶದಲ್ಲಿ ಭ್ರಷ್ಟಾಚಾರದ ಅತ್ಯಂತ ಮಹತ್ವದ ಮೂಲವಾದ ರಾಜಕೀಯ ದೇಣಿಗೆಯ ಪ್ರಶ್ನೆಯನ್ನು ಈ ಮಸೂದೆಯಲ್ಲಿ ಸೇರಿಸಿ ಅದನ್ನು ಅತ್ಯಂತ ಅಪಾರದರ್ಶಕಗೊಳಿಸಲಾಗಿದೆ. ಇದು ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಭಾರೀ ದುಷ್ಪರಿಣಾಮಗಳನ್ನುಂಟು ಮಾಡುವಂತದ್ದು ಎಂದು ಈ ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. 

ದೇಶದ ಪ್ರಜಾಸತ್ತಾತ್ಮಕ ನಿರ್ವಹಣೆ ಮತ್ತು ನಾಗರಿಕರ ಹಣಕಾಸು ಭದ್ರತೆಯ ಮೇಲೆ ದೂರಗಾಮೀ ಪರಿಣಾಮ ಬೀರುವ ಇಂತಹ ಮಸೂದೆಗಳನ್ನು ವ್ಯಾಪಕ ಸಾರ್ವಜನಿಕ ಚರ್ಚೆಗೆ ಇಡಬೇಕಾಗುತ್ತದೆ. ಅವನ್ನು ಮನಿ ಬಿಲ್ ಎಂದು ಅಂಗೀಕರಿಸುವಂತಿಲ್ಲ ಮತ್ತು ಅಂಗೀಕರಿಸಬಾರದು. ಆದ್ದರಿಂದ 2017 ರ ಮಸೂದೆ ಸಂ.12-ಸಿ ಯ ಎಲ್ಲ ಆಯಾಮಗಳ ಮೇಲೆ ವ್ಯಾಪಕ ಮತ್ತು ಅಬಾಧಿತ ಚರ್ಚೆ ನಡೆಸಲು ಅವಕಾಶ ಕೊಡಬೇಕು, ಅವನ್ನು ಮನಿಬಿಲ್ ಎಂದು ಕಾನೂನುಬಾಹಿರವಾಗಿ ವರ್ಗೀಕರಿಸಿ ಚರ್ಚೆಯಿಂದ ತಪ್ಪಿಸುವ ಆಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ತಮ್ಮಿಂದ ಸಾಧ್ಯವಾದುದನ್ನೆಲ್ಲ ಮಾಡಬೇಕು ಎಂದು ಈ ಪತ್ರದಲ್ಲಿ ಉಪರಾಷ್ಟ್ರಪತಿಗಳನ್ನು ಕೋರಲಾಗಿದೆ.