ತ್ರಾಸಿ : ಮನೆ ನಿವೇಶನ ಹಕ್ಕು ಪತ್ರಕ್ಕಾಗಿ - ಶಾಸಕರ ಮನೆ ಚಲೋ ಹೋರಾಟಕ್ಕೆ ಕರೆ - ಶೀಲಾವತಿ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಪುರುಷರಿಗಿಂತ ಹೆಚ್ಚಾಗಿ ಮಹಿಳೆ ಒಂದು ಸ್ವಂತ ಮನೆಗಾಗಿ ಹಾತೊರೆಯುತ್ತಾಳೆ. ಮಕ್ಕಳಿಗೆ ಜನ್ಮ ನೀಡಲು, ಅವರ ಲಾಲನೆ ಪಾಲನೆ ಪೋಷಣೆ ಮಾಡಲು ತಾಯಿಗೆ ಮನೆ ಬಹಳ ಮುಖ್ಯವಾಗುತ್ತದೆ. ಮನೆ ನಿವೇಶನದ ಪ್ರಶ್ನೆ, ದುಬಾರಿ ಮನೆ ಬಾಡಿಗೆಯ ಪ್ರಶ್ನೆ ಇಂದು ತುಂಬಾ ಮಹತ್ವವನ್ನು ಪಡೆಯುತ್ತಿದೆ. ಮನೆ, ನಿವೇಶನಕ್ಕಾಗಿ ಒತ್ತಾಯಿಸಿ ನಡೆಯುವ ಹೋರಾಟಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದನ್ನು ನೋಡಬಹುದು. ಈ ಹಿನ್ನಲೆಯಲ್ಲಿ ಏಪ್ರಿಲ್ 18 ರಂದು ಬೈಂದೂರು ಶಾಸಕರ ಮನೆ ಚಲೋ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರೂ, ಸಿಐಟಿಯು ತಾಲೂಕು ಕೋಶಾಧಿಕಾರಿ, ಶೀಲಾವತಿಯವರು ನಿವೇಶನ ರಹಿತ ಅರ್ಜಿದಾರರಿಗೆ ಸಮಾವೇಶದಲ್ಲಿ ಕರೆಕೊಟ್ಟರು. 

ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಜರಗಿದ ತ್ರಾಸಿ, ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಕೃಷಿ ಕೂಲಿಕಾರರ ಸಂಘದ ಮುಖಂಡರಾದ ನಾಗರತ್ನ ನಾಡ, ಶೀಲಾವತಿ ಪದ್ಮಾವತಿ ಶೆಟ್ಟಿ, ರಾಜೀವ ಪಡುಕೋಣೆ ಹಾಗೂ ವಿಘ್ನೇಶ ಖಾರ್ವಿ ಕಂಚಗೊಡ ಉಪಸ್ಥಿತರಿದ್ದರು.  

ತಲ್ಲೂರು : ಮನೆ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಕರೆ  - ಕುಶಲ 

ಹುಟ್ಟಿ ಬಂದಾಗ ಭೂಮಿ ತಂದಿಲ್ಲ-ಸಾಯುವಾಗ ಕೊಂಡೊಯ್ಯುತ್ತಿಲ್ಲ. ಭೂಮಿ ಎಲ್ಲರಿಗೂ ಸೇರಿದ್ದು, ದೇಶದ ಕಾನೂನು ಎಲ್ಲರಿಗೂ ಒಂದೇ ಅದಾನಿ ಅಂಬಾನಿಗೆ ಭೂಮಿ ಕೊಡುತ್ತಾರೆ. ಬಡವರಿಗೆ ಭೂಮಿ ಕೊಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕುಶಲ ಹೇಳಿದರು. 

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಯು. ದಾಸಭಂಡಾರಿ, ಸಮಾವೇಶದಲ್ಲಿ ಮಾತನಾಡುತ್ತಾ ಕಾಂಗ್ರೇಸ್, ಬಿಜೆಪಿ ಎರಡೂ ಪಕ್ಷ ಒಂದೇ. ಒಂದೇ ನಾಣ್ಯದ ಎರಡು ಮುಖವಾಗಿದ್ದು, ಅಧಿಕಾರಕ್ಕಾಗಿ ಹೊಡೆದಾಟ ಮಾಡುವುದನ್ನು ಬಿಟ್ಟರೆ ಬಡನಿವೇಶನ ರಹಿತರ ಮೂಲಭೂತ ಹಕ್ಕು- ಮನೆ, ನಿವೇಶನ, ಕುಡಿಯುವ ನೀರಿಗೆ ಶಾಶ್ವತ ಯೋಜನೆ ವಿದ್ಯುತ್ ಆರೋಗ್ಯ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿಲ್ಲ ಎಂದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ನಾಗರತ್ನ ನಾಡ, ಶೀಲಾವತಿ, ಪದ್ಮಾವತಿ ಶೆಟ್ಟಿ, ಲಕ್ಷ್ಮಣ ನೆರಳಕಟ್ಟೆ, ಮತ್ತು ಜಗದೀಶ ಆಚಾರ್ ಹೆಮ್ಮಾಡಿ ಉಪಸ್ಥಿತರಿದ್ದರು. 

ವರದಿ : ವೆಂಕಟೇಶ ಕೋಣಿ