ನೋಟು ರದ್ಧತಿಯಿಂದ ಕಾರ್ಮಿಕರು ಅತಂತ್ರ - ಮಹಾಂತೇಶ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಉಡುಪಿ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೂತನ ಸ್ವಂತ ಕಛೇರಿ ಉದ್ಘಾಟನೆ ಹಾಗೂ 15ನೇ ವಾರ್ಷಿಕ ಮಹಾಸಭೆ

ಕೇಂದ್ರ ಸರಕಾರ ನೋಟು ರದ್ದು ಮಾಡಿದ ಪರಿಣಾಮ ದೇಶಾದ್ಯಂತ 35 ಲಕ್ಷ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ದೇಶದ ಬ್ಯಾಂಕ್‍ಗಳಲ್ಲಿದ್ದ ಒಟ್ಟು ರೂ. 16.5 ಲಕ್ಷ ಕೋಟಿ ಹಣದಲ್ಲಿ 11.5 ಲಕ್ಷ ಕೋಟಿ ಹಣವನ್ನು ಶ್ರೀಮಂತರು ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ. ಇವರು ಇದನ್ನು ಮರುಪಾವತಿಸದೆ ಬ್ಯಾಂಕ್‍ಗಳ ಹಣವನ್ನು ಲೂಟಿ ಮಾಡಿದ್ದಾರೆ. ಇದನ್ನು ಸರಿದೂಗಿಸಲು ಕೇಂದ್ರ ಸರಕಾರ ನೋಟು ರದ್ದುಗೊಳಿಸಿ ಬಡವರ ಹಣವನ್ನು ಸುಲಿಗೆ ಮಾಡಿದೆ. ಈ ರಾಜಕೀಯವನ್ನು ಕಾರ್ಮಿಕರು ಅರ್ಥಮಾಡಿಕೊಳ್ಳಬೇಕು ಎಂದು ಸಿಐಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು. 

ಉಡುಪಿಯ ಸಾಯಿ ರೆಸಿಡೆನ್ಸಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (CWFI) (ಸಿಐಟಿಯು ಸಂಯೋಜಿತ) ನೂತನ ಸ್ವಂತ ಕಛೇರಿಯ ಉದ್ಘಾಟನೆ ಸಮಾರಂಭ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್ ಮೂಲಕ ಹಣ ಒಟ್ಟು ರೂ. 5400 ಕೋಟಿ ಸಂಗ್ರಹವಾಗಿದ್ದು, ಅದರಲ್ಲಿ ಕಳೆದ 10 ವರ್ಷಗಳಲ್ಲಿ ಕೇವಲ ರೂ. 93 ಕೋಟಿ ವ್ಯಯವಾಗಿದ್ದು, ಅದರಲ್ಲೂ ಕಾರ್ಮಿಕರ ಕಲ್ಯಾಣಕ್ಕಾಗಿ 12 ರೀತಿಯ ಸೌಲಭ್ಯಗಳನ್ನು ನೀಡಲು ರೂ. 33 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹಣದಲ್ಲಿ ರೂ. 750 ಕೋಟಿ ಕೌಶಲ್ಯ ಅಭಿವೃದ್ಧಿ ಕಟ್ಟಡದ ಭವನಕ್ಕೆ ವಿನಿಯೋಗಿಸಲು ಕಲ್ಯಾಣ ಮಂಡಳಿ ತೀರ್ಮಾನಿಸಿದೆ. ಕಲ್ಯಾಣ ಭವನ, ವಿದೇಶ ಪ್ರವಾಸ ನಿಗದಿಯಾಗಿತ್ತು. ಆದರೆ ನಮ್ಮ ಸಂಘಟನೆಯ ತೀವ್ರವಾದ ಪ್ರತಿಭಟನೆಯಿಂದಾಗಿ ಈ ಯೋಜನೆ ಕೈಬಿಡಲಾಯಿತು. ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2013 ರಿಂದ ಕಳೆದ 5 ವರ್ಷಗಳಲ್ಲಿ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 185 ಅವಘಡಗಳು ಸಂಭವಿಸಿದ್ದು, ಅದರಲ್ಲಿ 195 ಮಂದಿ ಕಟ್ಟಡ ಕಾರ್ಮಿಕರು ವಿವಿಧ ಅವಘಡಗಳಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 3 ಕೋಟಿಗೂ ಹೆಚ್ಚಿನ ಕಟ್ಟಡ ಕಾರ್ಮಿಕರಿದ್ದು ಕೆಲಸದ ವೇಳೆ ಅವರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ ವಹಿಸುತ್ತಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವಾಗಿದೆ ಎಂದು ಮಹಾಂತೇಶ್ ದೂರಿದರು. 

ಪ್ರಸ್ತುತ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಇರುವ ಹಣವನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಇದೆ. ಕಟ್ಟಡ ಕಾರ್ಮಿಕರು ತಮ್ಮ ಸೌಲಭ್ಯಕ್ಕಾಗಿ ಹೋರಾಟ ನಡೆಸುವುದರ ಜೊತೆಗೆ ಸರಕಾರದ ನೀತಿಯ ವಿರುದ್ಧವೂ ಬೀದಿಗೆ ಇಳಿಯಬೇಕು ಎಂದು ಮಹಾಂತೇಶ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉಡುಪಿಯ ಕೆ.ಎಸ್.ಆರ್.ಟಿ.ಸಿ. ಬಸ್ಸ್ ನಿಲ್ದಾಣ ಬಳಿಯ ಕೃಷ್ಣಾ ಕೃಪಾ ಕಟ್ಟಡದಲ್ಲಿ ಆರಂಭಿಸಲಾದ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ (CWFI) (ಸಿಐಟಿಯು ಸಂಯೋಜಿತ) ನೂತನ ಸ್ವಂತ ಕಛೇರಿಯನ್ನು ತಾಲೂಕು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಸ್ಥಾಪಕ ಅಧ್ಯಕ್ಷ ರಾಮ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಶೇಖರ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ, ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಯು. ದಾಸಭಂಡಾರಿ, ಸುರೇಶ ಕಲ್ಲಾಗರ, ಜಗದೀಶ ಆಚಾರ್, ವೆಂಕಟೇಶ ಕೋಣಿ, ಉಮೇಶ್ ಕುಂದರ್, ಗಣೇಶ ನಾಯ್ಕ, ಕವಿರಾಜ ಎಸ್. ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಎಚ್. ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. 

ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶೇಖರ ಬಂಗೇರ (ಅ ಧ್ಯಕ್ಷ) ದಯಾನಂದ ಕೋಟ್ಯಾನ್ (ಗೌರವ ಅಧ್ಯಕ್ಷ) ಬಾಲಕೃಷ್ಣ ಶೆಟ್ಟಿ (ಪ್ರಧಾನ ಕಾರ್ಯದರ್ಶಿ), ಗಣೇಶ ನಾಯ್ಕ (ಕೋಶಾಧಿಕಾರಿ), ವಾಮನ ಪೂಜಾರಿ, ಶೇಕರ ಕುಲಾಲ್, ರಾಘವ ದೇವಾಡಿಗ, ಎಚ್. ವಿಠಲ ಪೂಜಾರಿ, ಸುಭಾಶ್‍ನಾಯಕ್, ಉದಯ ಎಂ. ಪೂಜಾರಿ, ಕೆ. ರಮ ಕರ್ಕಡ, ಸುಂದರ ಕೋಟ್ಯಾನ್, ಇವರನ್ನೊಳಗೊಂಡ 25 ಮಂದಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. 

ವರದಿ : ವೆಂಕಟೇಶ ಕೋಣಿ