ರಾಜ್ಯಸಭೆಯಲ್ಲಿ ಮೋದಿ ಸರಕಾರಕ್ಕೆ ಮುಖಭಂಗ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಬಿಜೆಪಿ ಸರಕಾರ ಸಂವಿಧಾನ ಮತ್ತು ಸಂಸತ್ತನ್ನು ಬುಡಮೇಲು ಮಾಡಿ ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದೆ. - ಸೀತಾರಾಮ್ ಯೆಚುರಿ

ಮಾರ್ಚ್ 29 ರಂದು ರಾಜ್ಯಸಭೆ ಮೋದಿ ಸರಕಾರ ಮಂಡಿಸಿದ ಹಣಕಾಸು ಮಸೂದೆಗೆ ಪ್ರತಿಪಕ್ಷಗಳು ಐದು ತಿದ್ದುಪಡಿಗಳನ್ನು ಶಿಫಾರಸು ಮಾಡುವಲ್ಲಿ ಯಶಸ್ವಿಯಾದವು. ಸಿಪಿಐ(ಎಂ)ನಿಂದ ಸೀತಾರಾಮ್ ಯೆಚೂರಿ ಮತ್ತು ಕಾಂಗ್ರೆಸ್‍ನಿಂದ ದಗ್ವಿಜಯ್ ಸಿಂಗ್ ಸೂಚಿಸಿದ ತಿದ್ದುಪಡಿಗಳನ್ನು ಆಳುವ ಬೆಂಚ್‍ಗಳ ವಿರೋದದ ನಡುವೆಯೂ ಅಂಗೀಕರಿಸಲಾಯಿತು.

ಯೆಚುರಿಯವರು ರಾಜಕೀಯ ಪಕ್ಷಗಳಿಗೆ, ವಾಸ್ತವವಾಗಿ ಆಳುವ ಪಕ್ಷಕ್ಕೆ ಹೇರಳ ಕಾರ್ಪೊರೇಟ್ ಹಣ ಹರಿದು ಬರಲು ಅನುಕೂಲ ಕಲ್ಪಿಸಲು ಕಂಪನಿ ಕಾನೂನನ್ನು ತಿದ್ದುಪಡಿ ಮಾಡುವುದರ ವಿರುದ್ಧ  ಎರಡು ತಿದ್ದುಪಡಿಗಳನ್ನು ಮಂಡಿಸಿದರು. 

ದಿಗ್ವಿಜಯ್ ಸಿಂಗ್ ಆದಾಯ ತೆರಿಗೆ ಅಧಿಕಾರಿಗಳಿಗೆ ಲಂಗುಲಗಾಮಿಲ್ಲದ ಅಧಿಕಾರಗಳನ್ನು ಕೊಡುವುದರ ವಿರುದ್ಧ ಹಾಗೂ ಧರ್ಮಾರ್ಥ ಸಂಸ್ಥೆಗಳನ್ನು ಕುರಿತಾದ ಮೂರು ತಿದ್ದುಪಡಿಗಳನ್ನು ಮಂಡಿಸಿದರು.

ಈ ತಿದ್ದುಪಡಿಗಳನ್ನು ಬಿಜೆಪಿಯ ಮಿತ್ರಪಕ್ಷವಾದ ಶಿರೋಮಣಿ ಅಕಾಲಿ ದಳ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಬೆಂಬಲಿಸಿದರೂ  ಮತದಾನದ ವೇಳೆಯಲ್ಲಿ ಟಿಎಂಸಿ ಸದಸ್ಯರು ಸದನದಿಂದ ಹೊರನಡೆದರು, ಎಐಎಡಿಎಂಕೆ ಹಾಗೂ ಬಿಜೆಡಿ ಸದಸ್ಯರು ಗೈರು ಹಾಜರಾದರು. ಆದರೂ ಈ ತಿದ್ದುಪಡಿಗಳು 27 ರಿಂದ 34 ಮತಗಳ ಅಂತರದಲ್ಲಿ ಅಂಗೀಕಾರವಾಗಿ ಸರಕಾರಕ್ಕೆ ಮುಖಭಂಗವಾಯಿತು.

ಆದರೆ ಇದನ್ನು ದುರುದ್ದೇಶಪೂರ್ವಕವಾಗಿಯೇ ‘ಮನಿಬಿಲ್’ ಎಂದು ತೂರಿಸಿದ್ದರಿಂದಾಗಿ ರಾಜ್ಯಸಭೆ ಈ ಮಸೂದೆಯನ್ನು ತಿರಸ್ಕರಿಸುವಂತಿಲ್ಲ, ಶಿಫಾರಸುಗಳೊಂದಿಗೆ ಲೋಕಸಭೆಗೆ ಹಿಂದಕ್ಕೆ ಕಳಿಸಬಹುದು. ನಿರೀಕ್ಷೆಯಂತೆ ಲೋಕಸಭೆ ಈ ಶಿಫಾರಸುಗಳನ್ನು ಒಪ್ಪದೆ ಮಸೂದೆಯನ್ನು ಸರಕಾರ ಬಯಸಿದ ರೀತಿಯಲ್ಲೇ ಪಾಸು ಮಾಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಅದರ ಸಂಸದೀಯ ಪ್ರಜಾಪ್ರಭುತ್ವ-ವಿರೋಧಿ ಚಹರೆ ಬಯಲಾಗಿದೆ.

“ಸರಕಾರ ಉನ್ನತ ಸ್ಥಾನಗಳಲ್ಲಿ ರಾಜಕೀಯ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಟ್ಟಿದೆ. ನಾವು ಅದನ್ನು ತಡೆಯಲು ಪ್ರಯತ್ನಿಸಿದೆವು. ಅದಕ್ಕೆ ಮತನೀಡದವರು ತಾವು ಎಲ್ಲಿ ನಿಂತಿದ್ದೇವೆ ಎಂದು ತೋರಿಸಿದ್ದಾರೆ” ಎಂದು ಸೀತಾರಾಮ್ ಯೆಚುರಿ ಈ ಬಗ್ಗೆ ಟಿಪ್ಪಣಿ ಮಾಡಿದ್ದಾರೆ.

ಬಿಜೆಪಿ ಸರಕಾರ ಸಂವಿಧಾನ ಮತ್ತು ಸಂಸತ್ತನ್ನು ಬುಡಮೇಲು ಮಾಡಿ ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದೆ, ಮತ್ತು ರಾಜಕೀಯ ದೇಣಿಗೆಯನ್ನು ಗುಪ್ತಗೊಳಿಸಿದೆ ಎಂದು ಅವರು ಮುಂದುವರೆದು ಅವರು ಹೇಳಿದ್ದಾರೆ.