ನೋಟು ರದ್ದತಿ ಮತ್ತು ಮರುನಾಣ್ಯೀಕರಣ-ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ರಿಸರ್ವ್ ಬ್ಯಾಂಕ್ ವರದಿ

ಸಂಪುಟ: 
11
ಸಂಚಿಕೆ: 
15
date: 
Sunday, 2 April 2017

ಕೇಂದ್ರೀಯ ಅಂಕಿ ಅಂಶಗಳ ಸಂಸ್ಥೆ ಬಿಡುಗಡೆ ಮಾಡಿರುವ ಮೂರನೆ ತ್ರೈಮಾಸಿಕದ ಜಿಡಿಪಿ ಅಂದಾಜು ದರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯ ವಿಜಯ ನೋಟು ರದ್ದತಿಯಿಂದಾಗಿ ಜನರಿಗೆ ತೊಂದರೆಯಾಗಿತ್ತು ಎಂದು ವಾದಿಸಿದ್ದು ತಪ್ಪು ಎಂಬುದಾಗಿ ಕೆಲವು ಮಂದಿ ಇತ್ತೀಚಿನ ದಿನಗಳಲ್ಲಿ ಮಂಡಿಸುತ್ತಿರುವ ವಾದವು ವೈಜ್ಞಾನಿಕ ಪ್ರತಿಪಾದನೆಗೂ ಮತ್ತು ಜನಜನಿತ ಅಭಿಪ್ರಾಯಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಗ್ರಹಿಸದೆ ಗೊಂದಲ ಮಾಡಿಕೊಳ್ಳುವ ವಿಚಿತ್ರವಾದ. ನೋಟು ರದ್ದತಿ ಬೀರಿದ್ದ ಅನರ್ಥಕರ ಪರಿಣಾಮಗಳು ಮುಗಿದು ಹೋಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳುವ ರೀತಿಯಲ್ಲಿ ವಾದಿಸುವುದು ಎರಡು ಪಟ್ಟು ತಪ್ಪಾಗುತ್ತದೆ. 

-ಪ್ರೊ. ಪ್ರಭಾತ್ ಪಟ್ನಾಯಕ್ (‘ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆ ಪ್ರಕಟಿಸಿರುವ ಅವರ The Reserve Bank on Remonetisation ಲೇಖನದ ಸಾರಾಂಶ)

ನೋಟು ರದ್ದತಿಯಿಂದಾದ ಪರಿಣಾಮಗಳ ಬಗ್ಗೆ ತನ್ನ ಪ್ರಾಥಮಿಕ ಅಂದಾಜಿನ ಒಂದು ದಸ್ತಾವೇಜನ್ನು ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೊರತಂದಿದೆ. ಈ ಕ್ರಮದಿಂದ ಉತ್ಪಾದನಾ ಚಟುವಟಿಕೆಗಳಿಗೆ ತೊಂದರೆಯಾಗಿತ್ತು ಎಂದು ಒಪ್ಪಿಕೊಂಡಿರುವ ರಿಸರ್ವ್ ಬ್ಯಾಂಕ್, ಫೆಬ್ರವರಿ 17ರ ಒಳಗೆ ಎಲ್ಲ ತೊಂದರೆಗಳೂ ನಿವಾರಣೆಯಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ದಸ್ತಾವೇಜಿನಲ್ಲಿ ಒದಗಿಸಿರುವ ಅಂಕಿ ಅಂಶಗಳ ಪ್ರಕಾರ, ರದ್ದಾದ ನೋಟುಗಳ ಒಟ್ಟು ಮೌಲ್ಯದ 60%ರಷ್ಟು ಮೌಲ್ಯದ ಹೊಸ ನೋಟುಗಳನ್ನು ಫೆಬ್ರವರಿ 17ರವರೆಗೆ ಪೂರೈಸಲಾಗಿತ್ತು. ನಂತರದ ಒಂದು ತಿಂಗಳ ಬಳಿಕವೂ ಚಲಾವಣೆಯಲ್ಲಿದ್ದ ಹೊಸ ನೋಟುಗಳ ಮೌಲ್ಯ 70%ಗಿಂತ ಹೆಚ್ಚಿಗೆ ಇರಲಿಲ್ಲ. ಈ ಹೊತ್ತಿಗೂ ಹೊಸ ನೋಟುಗಳ ಪೂರೈಕೆಯು ನೋಟು ರದ್ದತಿಯಿಂದಾದ ತೊಂದÀರೆಗಳನ್ನು ನಿವಾರಿಸುವ ಮಟ್ಟದಲ್ಲಿಲ್ಲ. ಆದ್ದರಿಂದ, ರದ್ದಾದ ನೋಟುಗಳ ಮೌಲ್ಯಕ್ಕೆ ಹೋಲಿಸಿದರೆ ಕೇವಲ 60%ರಷ್ಟು ಮೌಲ್ಯದ ಹೊಸ ನೋಟುಗಳನ್ನು ಪೂರೈಸಿದ್ದ ಪರಿಸ್ಥಿತಿಯಲ್ಲಿ, ಉತ್ಪಾದನಾ ಚಟುವಟಿಕೆಗಳಿಗೆ ಉಂಟಾಗಿದ್ದ ತೊಡಕುಗಳು ಫೆಬ್ರವರಿ ಮುಗಿಯುವುದರ ಒಳಗೆ ನಿವಾರಣೆಯಾಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೊಂಡಿರುವುದು ಒಪ್ಪುವ ಮಾತೇ ಅಲ್ಲ. 

ನಗದು ಹಣದ ಕೊರತೆ ಇದ್ದಾಗ, ಆ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಅನೇಕ ರೀತಿಯ ಉಪಾಯಗಳು ಹುಟ್ಟಿಕೊಳ್ಳುತ್ತವೆ. ಬಹಳ ಸಾಮಾನ್ಯವಾಗಿ ಕಾಣುವ ಸರಳ ಉಪಾಯವೆಂದರೆ, ಇಂತಿಷ್ಟು ಹಣ ಕೊಡಬೇಕಿದೆ ಎಂಬುದನ್ನು ಕಾಗದದ ಒಂದು ಚೂರಿನಲ್ಲಿ ನಮೂದಿಸುವುದು.  ಕೆಲವು ಸಲ ಆ ಕಾಗದದ ಚೂರೂ ಇರುವುದಿಲ್ಲ. ಕೇವಲ ಬಾಯಿಮಾತಿನ ನಂಬಿಕೆಯ ಮೇಲೆ ಅನೇಕ ವ್ಯವಹಾರಗಳು ನಡೆಯುತ್ತವೆ. ಬಾಯಿಮಾತಿನ ಮೇಲಿನ ನಂಬಿಕೆಯೂ ನಗದು ಹಣದ ಸ್ಥಾನ ಪಡೆಯುತ್ತದೆ. 

ಇಂತಹ ಉಪಾಯಗಳು ಒಂದು ಮಟ್ಟದವರೆಗೆ ನೆರವಾಗುತ್ತವೆ. ಈ ಮಿತಿಯಿಂದಾಗಿಯೇ ಜನರಿಗೆ ಹಣ ಬಳಕೆಯ ಅವಶ್ಯಕತೆ ಉಂಟಾಗಿರುವುದು. ಅನೌಪಚಾರಿಕ ವಲಯ ದೊಡ್ಡದಿರುವ ನಮ್ಮ ಅರ್ಥವ್ಯವಸ್ಥೆಯಲ್ಲಿ ಬಳಕೆಯಾಗುತ್ತಿರುವ ಅಧಿಕ ಪ್ರಮಾಣದ ಹಣ ನಗದು ರೂಪದಲ್ಲಿದೆ. ಆದ್ದರಿಂದ, ಅರ್ಥವ್ಯವಸ್ಥೆ ಸಾಧಾರಣ ಪರಿಸ್ಥಿತಿಗೆ ಮರಳಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೊಂಡಿರುವುದು ವಿಚಿತ್ರವಾಗಿದೆ. ಒಂದು ವೇಳೆ ರದ್ದಾದ ನೋಟುಗಳ ಮೌಲ್ಯದ 98% ಹೊಸ ನೋಟುಗಳನ್ನು ಚಲಾವಣೆಗೆ ಬಿಟ್ಟಿದ್ದರೆ, ರಿಸರ್ವ್ ಬ್ಯಾಂಕ್ ಹೇಳಿರುವ ಮಾತುಗಳಿಗೆ ವಿಶ್ವಾಸಾರ್ಹತೆ ಇರುತ್ತಿತ್ತು. ಕೇವಲ 60%ರಷ್ಟು ಮೌಲ್ಯದ ಹೊಸ ನೋಟುಗಳನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್, ಅರ್ಥವ್ಯವಸ್ಥೆ ಸಾಧಾ ರಣ ಪರಿಸ್ಥಿತಿಗೆ ಮರಳಿದೆ ಎಂದು ಹೇಳಿಕೊಳ್ಳುವುದು ವಿಚಾರ ಶೂನ್ಯವಾಗಿದೆ.

ನಗದು ರಹಿತತೆ-ದಬ್ಬಾಳಿಕೆಯ ಕ್ರಮ

ವಾಸ್ತವವಾಗಿ, ನೋಟು ರದ್ದತಿಯ ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ, ಅರ್ಥವ್ಯವಸ್ಥೆಯು ಅದೇ ಮಟ್ಟದ ಹಿಂದಿನ ಸಾಧಾರಣ ಪರಿಸ್ಥಿತಿಗೆ ಮರಳುವುದು ಅನುಮಾನ. ಈ ಅನುಮಾನಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಜನರು ತಮ್ಮ ವ್ಯವಹಾರಗಳನ್ನು ನಗದು ರಹಿತವಾಗಿ ನಡೆಸಬೇಕೆಂದು ಸರ್ಕಾರ ಆಗ್ರಹಿಸುತ್ತಿದೆ. ಆದ್ದರಿಂದ, ರದ್ದಾದ ಮೌಲ್ಯದಷ್ಟೇ ಪ್ರಮಾಣದ ಹೊಸ ನೋಟುಗಳನ್ನು ಚಲಾವಣೆಗೆ ಬಿಡುವುದಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಇದೊಂದು ದಬ್ಬಾಳಿಕೆಯ ಕ್ರಮ. ನಗದು ಹಣದ ಮೂಲಕ ನಡೆಯುವ ವ್ಯವಹಾರಗಳಿಗೆ ಯಾವುದೇ ವೆಚ್ಚ ತಗುಲುವುದಿಲ್ಲ. ಆದರೆ, ನಗದು ಹಣದ ಬದಲಾಗಿ ಡಿಜಿಟಲ್ ರೂಪದಲ್ಲಿ ನೆಡೆಯುವ ವ್ಯವಹಾರಗಳಿಗೆ ಇಂತಹ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ಶುಲ್ಕ ತೆರಬೇಕಾಗುತ್ತದೆ. ಆದ್ದರಿಂದ, ನಗದು ಹಣದ ಬದಲಾಗಿ ಡಿಜಿಟಲ್ ರೂಪದಲ್ಲಿ ವ್ಯವಹರಿಸಬೇಕೆಂದು ಜನರನ್ನು ಬಲಾತ್ಕರಿಸುವುದು ಮತ್ತು ಅದರ ಪರಿಣಾಮವಾಗಿ, ಹಣಕಾಸು ಸಂಸ್ಥೆಗಳ ಲಾಭ ಹೆಚ್ಚಿಸಲು ಜನರು ತಮ್ಮ ತೀರಾ ಕಡಿಮೆ ಗಳಿಕೆಯಲ್ಲೇ ಇನ್ನೂ ಒಂದಂಶವನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸ್ವಲ್ಪವೂ ಅಳುಕಿಲ್ಲ. ತುಸು ಅನುಮಾನ ಹೊಂದಿತ್ತು, ಆರಂಭದಲ್ಲಿ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳ ನಂತರ ಅದೂ ಸಹ ಮಾಯವಾಗಿದೆ. 

ನಗದು ಹಣದ ಬದಲಾಗಿ ಡಿಜಿಟಲ್ ರೂಪದಲ್ಲಿ ವ್ಯವಹರಿಸುವಂತೆ ಜನರನ್ನು ಅಣಿಗೊಳಿಸುವ ಉದ್ದೇಶದಿಂದ, ರದ್ದಾದ ನೋಟುಗಳ ಒಟ್ಟು ಮೌಲ್ಯಕ್ಕಿಂತ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳಷ್ಟು ಕಡಿಮೆ ಪ್ರಮಾಣದ ಹೊಸ ಹೊಸ ನೋಟುಗಳನ್ನು ಚಲಾವಣೆಗೆ ಬಿಡುವುದಾಗಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ. ನಂತರ ಅರುಣ್ ಜೇಟ್ಲಿ ಈ ಅಂಶವನ್ನು ದೃಢಪಡಿಸಿದ್ದಾರೆ. ರದ್ದಾದ ಪ್ರಮಾಣದಷ್ಟೇ ಹೊಸ ನೋಟುಗಳನ್ನು ಚಲಾವಣೆಗೆ ತರದಿದ್ದರೆ ಅನೌಪಚಾರಿಕ ವಲಯದ ಕಷ್ಟ ಕಾರ್ಪಣ್ಯಗಳು, ಬದಲಾವಣೆಯ ಕಾಲದ ತೊಡಕುಗಳಾಗದೆ, ಶಾಶ್ವತವಾಗಿಯೇ ಉಳಿಯುತ್ತವೆ.

ಬಂಡವಾಳದ ಕೇಂದ್ರೀಕರಣ

ಎರಡನೆಯದಾಗಿ, ಪೂರ್ಣಪ್ರಮಾಣದಲ್ಲಿ ಹೊಸ ನೋಟುಗಳನ್ನು ಚಲಾವಣೆಗೆ ತಂದರೂ ನೋಟು ರದ್ದತಿಯ ಮುನ್ನ ಇದ್ದ ಪರಿಸ್ಥಿತಿಗೆ ಮರಳಲಾಗುವುದಿಲ್ಲ. ಏಕೆಂದರೆ, ಬದಲಾವಣೆಯ ಕಾಲದ ತೊಡಕುಗಳೂ ಸಹ ಅರ್ಥವ್ಯವಸ್ಥೆಯ ಮೇಲೆ ಬಹಳ ಕಾಲ ಉಳಿಯುವಂತಹ ಹಾನಿ ಉಂಟುಮಾಡುತ್ತವೆ. ಉದಾಹರಣೆಗೆ, ಕಿರು ಉತ್ಪಾದಕರ ಮೇಲೆರಗಿದ ಸಂಕಷ್ಟಗಳು. ನಗದು ಹಣದ ಕೊರತೆಯಿಂದಾಗಿ ಮೈ ತುಂಬಾ ಸಾಲಮಾಡಿಕೊಂಡ ಅಥವಾ ವ್ಯವಹಾರವನ್ನೇ ತೊರೆದ ಕಿರು ಉತ್ಪಾದಕರು, ತಮ್ಮ ಉತ್ಪಾದನಾ ವ್ಯವಹಾರ ಮುಂದುವರೆಸುವುದಾಗಲಿ ಅಥವಾ ವ್ಯವಹಾರದಲ್ಲಿ ಮುಂದುವರೆಯುವುದಾಗಲಿ ಸಾಧ್ಯವಾಗುವುದಿಲ್ಲ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಕಿರು ಉತ್ಪಾದಕರ ಕಷ್ಟ ಕಾರ್ಪಣ್ಯಗಳು ಹೆಚ್ಚುತ್ತಿರುವ ಸಮಯದಲ್ಲಿ “ಬಂಡವಾಳದ ಕೇಂದ್ರೀಕರಣ” ಪ್ರಕ್ರಿಯೆಯೂ ನಡೆಯುತ್ತದೆ. ಅಷ್ಟೇ ಅಲ್ಲದೆ, ನಗದು ಹಣದ ಕೊರತೆ ನಿವಾರಣೆಯಾದ ಬಳಿಕವೂ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. 

ಮೂರನೆಯದಾಗಿ, ಖರ್ಚು-ವೆಚ್ಚಗಳ ತೀರ್ಮಾನಗಳಿಗೆ ಸಂಬಂಧಿಸಿದ ಒಂದು ಮುಖ್ಯವಾದ ಸಮಸ್ಯೆ ಇರುತ್ತದೆ. ಈ ಸಮಸ್ಯೆಯನ್ನು ಸರಿಯಾಗಿ ಗ್ರಹಿಸಿಲ್ಲ ಮತ್ತು ಅದರ ಬಗ್ಗೆ ಚರ್ಚೆ ನಡೆದಿರುವುದೂ ಕಡಿಮೆಯೇ. ಪ್ರಧಾನವಾಗಿ, ಎರಡು ವಿಧದ ಖರ್ಚು-ವೆಚ್ಚಗಳಿರುತ್ತವೆ. ಒಂದು, ಅನೇಕ ರೀತಿಯ ದಿನ ನಿತ್ಯದ ಖರ್ಚು-ವೆಚ್ಚಗಳು. ಈ ಖರ್ಚುಗಳ ಮಟ್ಟವು ಹಾಲಿ ವರಮಾನದ ಮಟ್ಟದ ಮೇಲೆ ಅವಲಂಬಿತವಾಗಿರುತ್ತವೆ. ಇನ್ನೊಂದು, ಆನೇಕ ರೀತಿಯ ಖರ್ಚು-ವೆಚ್ಚಗಳು ಅರ್ಥವ್ಯವಸ್ಥೆಯ ದೀರ್ಘಾವಧಿ ಸ್ಥಿತಿ-ಗತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಅರ್ಥವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿದ್ದರೆ, ವರ್ತಮಾನದಲ್ಲಿ ಇಂತಹ ವೆಚ್ಚಗಳ ಪ್ರಮಾಣವೂ ಅಧಿಕವಾಗಿರುತ್ತದೆ.

ಹೂಡಿಕೆಯ ವೆಚ್ಚಗಳು ಈ ಎರಡನೆಯ ಅಂಶಕ್ಕೆ ನಿದರ್ಶನವಾಗುತ್ತವೆ. ಅರ್ಥವ್ಯವಸ್ಥೆಯಲ್ಲಿ ಸ್ಥಗಿತತೆ ಇದ್ದರೆ, ಬಂಡವಾಳ ಸುರಕ್ಷಿತವಾಗಿ ಉಳಿಯುವಷ್ಟು ಕನಿಷ್ಟ ಹೂಡಿಕೆ ಆಗುತ್ತದೆ. ಅರ್ಥವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವಾಗ ಹೆಚ್ಚಿನ ಮಟ್ಟದ ಹೂಡಿಕೆಯಾಗುತ್ತದೆ. ಅಂದರೆ, ಹೂಡಿಕೆಗಳು ವರಮಾನದ ಮಟ್ಟಕ್ಕಿಂತಲೂ ಮುಖ್ಯವಾಗಿ, ಬೆಳವಣಿಗೆ ದರವನ್ನು ಅವಲಂಬಿಸಿರುತ್ತವೆ. ಈ ಮಾತು, ದೀರ್ಘ ಕಾಲ ಬಾಳುವ ಗೃಹೋಪಯೋಗಿ ವಸ್ತುಗಳ ಮೇಲಿನ ಖರ್ಚುಗಳಿಗೂ ಅನ್ವಯಿಸುತ್ತದೆ. ಬೆಳೆಯುತ್ತಿರುವ ಅರ್ಥವ್ಯವಸ್ಥೆಯಲ್ಲಿ, ಜನ ತಮ್ಮ ಉದ್ಯೋಗ ಉಳಿಸಿಕೊಳ್ಳುವ ಮತ್ತು ಹೆಚ್ಚಿಗೆ ಸಂಬಳ ಪಡೆಯುವ ವಿಶ್ವಾಸ ಹೊಂದಿರುತ್ತಾರೆ. ಅದರಿಂದಾಗಿ, ವರಮಾನ ಸಧ್ಯದಲ್ಲಿ ಇರುವ ಮಟ್ಟದಲ್ಲೇ ಅವರು ದೀರ್ಘ ಕಾಲ ಬಾಳುವ ಅನೇಕ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾರೆ. ಅರ್ಥವ್ಯವಸ್ಥೆಯಲ್ಲಿ ಸ್ಥಗಿತತೆ ಇದ್ದರೆ ಕೊಳ್ಳಲು ಜನ ಮುಂದಾಗುವುದಿಲ್ಲ.

ಆರ್ಥಿಕ ಮಂದಗತಿ

ಆದ್ದರಿಂದ, ಇಂತಹ ಖರ್ಚುಗಳ ಮಟ್ಟವು, ವರಮಾನವನ್ನು ಅವಲಂಬಿಸದೆ, ಬೆಳವಣಿಗೆ ದರವನ್ನು ಅವಲಂಬಿಸುತ್ತದೆ. ಬೆಳೆಯುತ್ತಿರುವ ಅರ್ಥವ್ಯವಸ್ಥೆಯಲ್ಲಿ, ನೋಟು ರದ್ದತಿಯ ಪರಿಣಾಮವಾಗಿ, ನಗದು ಹಣದ ಕೊರತೆ ಉಂಟಾಗಿದ್ದರಿಂದ, ಬೆಳವಣಿಗೆಯ ದರ ಇಳಿಕೆಯಾಗಿದೆ ಎಂದು ಈಗ ಅಂದುಕೊಳ್ಳೋಣ. ಈ ಸನ್ನಿವೇಶದಲ್ಲಿ ಹೂಡಿಕೆಗಳು ಇಳಿಯುತ್ತವೆ. ಅದೇ ಸಮಯದಲ್ಲಿ ಬೇಡಿಕೆಯೂ ಕುಸಿಯುವುದರಿಂದ ಬೆಳವಣಿಗೆ ದರ ಇನ್ನೂ ಕೆಳಗೆ ಇಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಗದು ಕೊರತೆ ನಿವಾರಣೆಯಾದರೂ(ಅಂದರೆ, ಠೇವಣಿ ಮಾಡಿದ್ದ ರದ್ದಾದ ನೋಟುಗಳಿಗೆ ಸಮನಾದ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಪಡೆಯುವುದು), ಸಾಧಾರಣ ಪರಿಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಏಕೆಂದರೆ, ನಗದು ಕೊರತೆಯ ಕಾಲದ ತೊಡಕುಗಳು ಉಂಟುಮಾಡಿದ್ದ ಹಾನಿ ಬಹಳ ಕಾಲ ಗಟ್ಟಿಯಾಗಿ ಉಳಿಯುವುದರಿಂದ, ಅರ್ಥವ್ಯವಸ್ಥೆಯ ಗತಿ ಬಹಳ ಕಾಲ ಮಂದವಾಗಿಯೇ ಉಳಿಯುತ್ತದೆ.

ಅರ್ಥವ್ಯವಸ್ಥೆಯ ಗತಿ ಮಂದವಾಗಿರುವುದರಿಂದ, ಕಿರು ಉತ್ಪಾದನಾ ವಲಯ ಮತ್ತಷ್ಟು ಹಾನಿಗೊಳಗಾಗುತ್ತದೆ. ನಗದು ಕೊರತೆಯಿಂದ ಉಂಟಾದ ಅದರ ಕಷ್ಟ ಕೋಟಲೆಗಳು, ಕೊರತೆ ನಿವಾರಣೆಯಾದ ನಂತರವೂ, ಬೇಡಿಕೆ ಕೊರತೆಯಿಂದಾಗಿ ಉಲ್ಬಣಗೊಳ್ಳುತ್ತವೆ. ಅಂತಹ ಮಂದ ಗತಿಯಿಂದಾಗಿ, ಸಂಬಳ ಕಡಿತ ಮತ್ತು ನಿರುದ್ಯೋಗ ಉಂಟಾಗಿ ಕೆಲಸಗಾರರ ಪರಿಸ್ಥಿತಿ ಸಂಪೂರ್ಣವಾಗಿ ಹಾಳಾಗುತ್ತದೆ.

ಇಮ್ಮಡಿ ತಪ್ಪು

ಹಾಗಾಗಿ, ನೋಟು ರದ್ದತಿ ಬೀರಿದ್ದ ಅನರ್ಥಕರ ಪರಿಣಾಮಗಳು ಮುಗಿದು ಹೋಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳುವ ರೀತಿಯಲ್ಲಿ ವಾದಿಸುವುದು ಎರಡು ಪಟ್ಟು ತಪ್ಪಾಗುತ್ತದೆ. ಮೊದಲಿಗೆ, ರದ್ದಾದ ನೋಟುಗಳಿಗೆ ಸಮ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಪಡೆಯುವ ಮೂಲಕ ಈ ಅನರ್ಥಕರ ಪರಿಣಾಮಗಳಿಂದ ಪಾರಾಗಬಹುದು ಅಂದುಕೊಂಡರೂ, ನಾವು ರದ್ದಾದ ನೋಟುಗಳಿಗೆ ಸಮ ಪ್ರಮಾಣದ ಹೊಸ ನೋಟು ಪಡೆಯುವ ಪರಿಸ್ಥಿತಿಯಿಂದ ಇನ್ನೂ ಬಹಳ ದೂರದಲ್ಲಿದ್ದೇವೆ. ಎರಡನೆಯದಾಗಿ, ರದ್ದಾದ ನೋಟುಗಳಿಗೆ ಸಮ ಪ್ರಮಾಣದ ಹೊಸ ನೋಟು ಪಡೆಯುವ ಪರಿಸ್ಥಿತಿ ಒಂದು ವೇಳೆ ಇದ್ದರೂ, ನಗದು ಕೊರತೆಯಿಂದ ಉಂಟಾಗಿದ್ದ ಹಾನಿ ಬಹಳ ಕಾಲದವರೆಗೆ ಗಟ್ಟಿಯಾಗಿ ಉಳಿದ ಪರಿಣಾಮಗಳು ಅರ್ಥವ್ಯವಸ್ಥೆಯ ಗತಿ ಮಂದಗೊಳ್ಳುವ ಮೂಲಕ ವ್ಯಕ್ತವಾಗುತ್ತವೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನೋಟು ರದ್ದತಿಯು ಉಂಟುಮಾಡಿದ ಹಾನಿಕಾರಕ ಪರಿಣಾಮಗಳು ತತ್‍ಕ್ಷಣದಲ್ಲಿ ದುಡಿಯುವ ಜನತೆಯ ಮೇಲೆ ಬಿದ್ದ ನಂತರ, ಇನ್ನೂ ಹೆಚ್ಚಿನ ಹಾನಿಕಾರಕ ಪರಿಣಾಮಗಳು ಹಿಂಬಾಲಿಸುತ್ತವೆ - ನಗದು ಕೊರತೆಯಿಂದ ಅಲ್ಲದಿದ್ದರೂ, ನಗದು ಕೊರತೆಯಿಂದಲೇ ಆರಂಭವಾದ ಬೇಡಿಕೆ ಕೊರತೆ ಕಾರ್ಯಪ್ರವೃತ್ತವಾದುದರಿಂದಾಗಿ. 

ನೋಟು ರದ್ದತಿಯಿಂದಾಗಿ ಯಾವುದೇ ಹಾನಿಕಾರಕ ಪರಿಣಾಮಗಳು ಜನತೆಯನ್ನು ತಟ್ಟಿಲ್ಲ ಎಂದು ಈಗ ಕೆಲವರು ವಾದಿಸುತ್ತಾರೆ. ಅವರ ವಾದಗಳು ಆಶ್ರಯಿಸುವ ಅಂಶಗಳು ಎರಡಿವೆ. ಒಂದು, ಕೇಂದ್ರೀಯ ಅಂಕಿ ಅಂಶಗಳ ಸಂಸ್ಥೆ ಬಿಡುಗಡೆ ಮಾಡಿರುವ ಮೂರನೆ ತ್ರೈಮಾಸಿಕದ ಜಿಡಿಪಿ ಅಂದಾಜು ದರ [ವಿವರಗಳು ಮಾರ್ಚ್13-19, 2017ರ ಜನಶಕ್ತಿ, ಸಂಚಿಕೆ-12ರಲ್ಲಿವೆ]. ಇನ್ನೊಂದು, ಉತ್ತರ ಪ್ರದೇಶದಲ್ಲಿ ಬಿಜೆಪಿಯ ವಿಜಯ. ನೋಟು ರದ್ದತಿಯ ಫಲವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ. ಆದ್ದರಿಂದ, ನೋಟು ರದ್ದತಿಯಿಂದಾಗಿ ಜನರಿಗೆ ತೊಂದರೆಯಾಗಿತ್ತು ಎಂದು ವಾದಿಸಿದ್ದು ತಪ್ಪು ಎಂಬುದಾಗಿ ಕೆಲವು ಮಂದಿ ಇತ್ತೀಚಿನ ದಿನಗಳಲ್ಲಿ ಮಂಡಿಸುತ್ತಿರುವ ವಾದವು ವಿಚಿತ್ರವಾಗಿದೆ. ಏಕೆಂದರೆ, ಈ ವಾದವು, ಬಂಡವಾಳಶಾಹಿ ದೇಶಗಳ ಚುನಾವಣೆಗಳಲ್ಲಿ ಜನತೆ ಬೂಜ್ರ್ವಾ ಪಕ್ಷಗಳನ್ನು ಅಧಿಕಾರ ಪಡೆಯಲು ಆರಿಸುವುದರಿಂದ, ಬಂಡವಾಳಶಾಹಿ ವ್ಯವಸ್ಥೆಯು ಶೋಷಣೆಯಿಂದ ಕೂಡಿದೆ ಎಂದು ವಾದಿಸುವವರ ವಾದವೇ ತಪ್ಪು ಎನ್ನುವ ಕುತರ್ಕದ ವಾದವನ್ನು ಹೋಲುತ್ತದೆ. ಇಂತಹ ವಾದವು, ಒಂದು ವೈಜ್ಞಾನಿಕ ಪ್ರತಿಪಾದನೆಗೂ ಮತ್ತು ಜನಜನಿತ ಅಭಿಪ್ರಾಯಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಗ್ರಹಿಸದೆ ಗೊಂದಲ ಮಾಡಿಕೊಂಡು ಯಾವುದೋ ಒಂದು ಅಭಿಪ್ರಾಯವನ್ನು ಸತ್ಯವೆಂದು ನಂಬುವಂತೆ ಜನರ ಮನವೊಲಿಸಲು ಸಾಧ್ಯವಾದರೆ ಅದು ಸತ್ಯವೇ ಆಗಿರಬೇಕು ಎಂದು ಸೂಚಿಸಿದಂತಾಗುತ್ತದೆ. ನೋಟು ರದ್ದತಿಯ ಪರಿಣಾಮಗಳು ವೈಜ್ಞಾನಿಕ ಅಧ್ಯಯನದ ವಿಷಯ. ಚುನಾವಣೆಗಳಲ್ಲಿ ಜನ ವ್ಯಕ್ತಪಡಿಸುವ ಅಭಿಪ್ರಾಯವು ಆ ಅಧ್ಯಯನದ ಫಲಿತಾಂಶವನ್ನು ನಿರ್ಧರಿಸುವುದಿಲ್ಲ.