ಟ್ರಂಪ್ ಗೆ ಮೊದಲ ಕಾಂಗ್ರೆಸ್ ಪರಾಭವ

ಸಂಪುಟ: 
11
ಸಂಚಿಕೆ: 
15
date: 
Sunday, 2 April 2017

ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಆಶ್ಚರ್ಯಕರವಾಗಿ ಪ್ರಾಥಮಿಕ ಚುನಾವಣೆಯಿಂದ ಆರಂಭಿಸಿ ಅಧ್ಯಕ್ಷೀಯ ಚುನಾವಣೆಯ ವರೆಗೂ ಪವಾಡದ ರೀತಿಯಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅಷ್ಟೇ ಆಶ್ಚರ್ಯಕರವಾಗಿ ಸೋಲುತ್ತಾ ನಡೆದಿದ್ದಾರೆ. ಅಧಿಕಾರ ವಹಿಸಿಕೊಂಡ ದಿನವೇ “ನೀವು ನಮ್ಮ ಅಧ್ಯಕ್ಷರಲ್ಲ” ಎಂಧು ಸಾರುವ ಬೃಹತ್ ಅದರಲ್ಲೂ ಮಹಿಳೆಯರ ಪ್ರದರ್ಶನಗಳು ನಡೆದವು. ಏಳು ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸಲು ಅಧ್ಯಕ್ಷೀಯ ಆಜ್ಞೆ ಮೂಲಕ ಹೊರಿಸಿದ ನಿರ್ಬಂಧಗಳನ್ನು ಕೋರ್ಟುಗಳು ರದ್ದು ಮಾಡಿದವು. ಈಗ ಟ್ರಂಪ್ ಅವರ ಪ್ರಮುಖ ಚುನಾವಣಾ ಭರವಸೆಯಾಗಿದ್ದ ‘ಒಬಾಮಕೇರ್’ ಆರೋಗ್ಯ ಯೋಜನೆಯನ್ನು ರದ್ದು ಮಾಡುವ ಮಸೂದೆ ಅಮೆರಿಕದಲ್ಲಿ ಕಾಂಗ್ರೆಸ್ ಎಂದು ಕರೆಯಲಾಗುವ ಸಂಸತ್ತಿನಲ್ಲಿ ಬಿದ್ದು ಹೋಗಿದೆ. ಟ್ರಂಪ್ ಮುಖಭಂಗ ಪೂರ್ಣವಾಗಿದೆ. ಇದೇ ಗತಿ ಅವರು ಯೋಜಿಸಿರುವ ಹಲವು ಇಂತಹ ಜನ-ವಿರೋಧಿ ಕ್ರಮಗಳಿಗೂ ಕಾದಿದೆಯೋ ಎಂದು ನೋಡಬೇಕಾಗಿದೆ.

ರಿಪಬ್ಲಿಕನ್ ಪಕ್ಷವೇ ಟ್ರಂಪ್ ಗೆ ಕೈಕೊಟ್ಟಿದೆ

ಅಮೆರಿಕ ಬಹುಶಃ ಅಭಿವೃದ್ಧ ದೇಶಗಳಲ್ಲಿ ಯಾವುದೋ ಒಂದು ರೂಪದಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆ ಇರದಿರುವ ಏಕಮಾತ್ರ ದೇಶ. ಇತರ ಕ್ಷೇತ್ರಗಳಂತೆ ಆರೋಗ್ಯ ಸೇವೆಯಲ್ಲೂ ತೀವ್ರ ಅಸಮಾನತೆ ಇದೆ. ಬಹುಪಾಲು ಆರೋಗ್ಯ ವಿಮೆ ಪಾವತಿಯ ರೂಪದಲ್ಲಿ ಅಮೆರಿಕನರು ಕೆಲಸ ಮಾಡುವ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡುತ್ತವೆ. ಉದ್ಯೋಗಿಯ ವೇತನ, ಕಂಪನಿಯ ಗಾತ್ರ ಸಾಮಥ್ರ್ಯ ಹೊಂದಿಕೊಂಡು ಆರೋಗ್ಯ ಸೇವೆ ಇರುತ್ತದೆ. ಅಂದರೆ ಸಂಘಟಿತ ಕ್ಷೇತ್ರದಲ್ಲಿ ಉದ್ಯೋಗ ಮಾಡದ ನಿರುದ್ಯೋಗಿಗಳಿಗೆ ಆರೋಗ್ಯ ಸೇವೆ ಇಲ್ಲ. ಯಾವುದೇ ರೀತಿಯ ಆರೋಗ್ಯ ಸೇವೆ ಇರದ ಸುಮಾರು ಶೇ. 15 ರಷ್ಟು ಇರುವ ಕೆಳ/ಕೆಳ ಮಧ್ಯಮ ವರ್ಗದ ಜನರಿಗಾಗಿ ಅಧ್ಯಕ್ಷ ಒಬಾಮ ಈಗ ‘ಒಬಾಮಕೇರ್’ ಎಂದು ಪ್ರಸಿದ್ಧವಾದ ಆರೋಗ್ಯ ಸೇವಾ ಯೋಜನೆ ಜಾರಿಗೆ ತಂದರು. ಇದನ್ನು ಮೊದಲಿನಿಂದಲೂ (ಟ್ರಂಪ್ ಅವರ) ರಿಪಬ್ಲಿಕನ್ ಪಕ್ಷ “ಮಾರುಕಟ್ಟೆ ನಿಯಮ”ಗಳನ್ನು ಉಲ್ಲಂಘಿಸುವ “ಸಮಾಜವಾದದ ವಾಸನೆ ಹೊಡೆಯುವ” ಯೋಜನೆ ಎಂದು ಟೀಕಿಸುತ್ತಾ ವಿರೋಧಿಸುತ್ತಾ ಬಂದಿತ್ತು. ಅದು ಅಷ್ಟು ‘ಕ್ರಾಂತಿಕಾರಿ’ಯಾಗೇನೂ ಇರಲಿಲ್ಲ. ಕನಿಷ್ಟ ಸವಲತ್ತುಗಳನ್ನು ಸೀಮಿತ ರೀತಿಯಲ್ಲಿ ಆರೋಗ್ಯ ವಿಮೆಯ ಮೂಲಕ ಕೊಡುವ ಈ ಆರೋಗ್ಯ ಯೋಜನೆಯನ್ನು ಒಬಾಮ ಆಡಳಿತದ ಉದ್ದಕ್ಕೂ ರಿಪಬ್ಲಿಕನ್ ಪಕ್ಷ ತಿದ್ದುಪಡಿಗಳ ಮೂಲಕ, ಬಜೆಟ್ ಕಡಿತಗಳ ಮೂಲಕ ಕುಂಠಿತಗೊಳಿಸುತ್ತ ಬಂದಿತ್ತು. ‘ಒಬಾಮಕೇರ್’ ರದ್ದು ಮಾಡುವುದು ರಿಪಬ್ಲಿಕನರ ಮತ್ತು ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ‘ಆಶ್ವಾಸನೆ’ಗಳಲ್ಲಿ ಒಂದಾಗಿತ್ತು. ಅಧ್ಯಕ್ಷ ಟ್ರಂಪ್ ಅವರನ್ನು ಬಹಳವಾಗಿ ಬೆಂಬಲಿಸಿದ ಕೆಳ/ಕೆಳ-ಮಧ್ಯಮ ವರ್ಗಗಳನ್ನು ‘ಒಬಾಮಕೇರ್’ ರದ್ದು ಮಾಡುವುದು ಜನ-ಪರ ಕ್ರಮ ಎಂದು ನಂಬಿಸಲಾಗಿತ್ತು ಎಂಬುದು ಜಗತ್ತಿನ ಸೋಜಿಗಗಳಲ್ಲಿ ಒಂದು. 

‘ಒಬಾಮಕೇರ್’ ಯೋಜನೆಯನ್ನು ಬದಲಿಸಿ ಅದರ ಪ್ರಗತಿಪರ ಅಂಶಗಳನ್ನು ಕಡಿತಗೊಳಿಸಿ ಟ್ರಂಪ್ ತಂದ ಹೊಸ ಮಸೂದೆ ಕಾಂಗ್ರೆಸ್ ನಲ್ಲಿ ಆಳುವ ರಿಪಬ್ಲಿಕನ್ ಪಕ್ಷದ ಬಹುಪಾಲು ಸದಸ್ಯರ ಬೆಂಬಲವೂ ಇಲ್ಲದೆ ಬಿದ್ದು ಹೋಯಿತು. ಇಲ್ಲಿ ಒಂದು ವಿಚಿತ್ರ ನಡೆದಿದೆ. ರಿಪಬ್ಲಿಕನ್ ಪಕ್ಷದ ಅತಿ-ಬಲಪಂಥೀಯ ಗುಂಪು ಟ್ರಂಪ್ ತಂದ ಹೊಸ ಮಸೂದೆಯಲ್ಲಿ ‘ಒಬಾಮಕೇರ್’ ನ ಕೆಲವು ಪ್ರಗತಿಪರ ಅಂಶಗಳು ಉಳಿದುಕೊಂಡಿವೆ ಎಂದು ವಿರೋಧಿಸಿದರು! ರಿಪಬ್ಲಿಕನ್ ಪಕ್ಷದ ಇನ್ನೊಂದು ಮಂದಗಾಮಿ ಗುಂಪು ‘ಒಬಾಮಕೇರ್’ ಯೋಜನೆಯನ್ನು ಬೆಂಬಲಿಸಿ ತಳಮಟ್ಟದಲ್ಲಿ ನಡೆದ ಪ್ರಚಾರಾಂದೋಲನದ ಒತ್ತಡಕ್ಕೆ ಸಿಲುಕಿ ಹೊಸ ಮಸೂದೆಯನ್ನು ವಿರೋಧಿಸಿತು. ಇಲ್ಲದಿದ್ದರೆ 2018ರಲ್ಲಿ ಬರುವ ಕಾಂಗ್ರೆಸ್(ಸಂಸತ್) ಚುನಾವಣೆಯಲ್ಲಿ ಜನ ತಿರುಗಿ ಬೀಳಬಹುದೆಂಬ ಭಯ ಅವರನ್ನು ಕಾಡಿತು. ಯಾವುದೇ ಮಸೂದೆ ಕಾಂಗ್ರೆಸ್ ನಲ್ಲಿ ಪಾಸಾಗಬೇಕಾದರೆ ಕಾಂಗ್ರೆಸ್ ಪ್ರತಿನಿಧಿಗಳ ಬಳಿ ‘ಲಾಬಿ’ ಮಾಡಬೇಕಾಗುತ್ತದೆ. ‘ಲಾಬಿ’ ಎಂದರೆ ಆಸಕ್ತ ವಾಣಿಜ್ಯ ಗುಂಪುಗಳು ಕೊಡುವ ‘ಲಂಚ’ವೂ ಇರಬಹುದು ಅಥವಾ ಸರಕಾರವಾದರೆ ಸದಸ್ಯರ ಕೆಲವು ಮೆಚ್ಚಿನ ಯೋಜನೆ ಅಥವಾ ಕೆಲಸಗಳನ್ನು ಮಾಡಿಸಿಕೊಡುವ ಆಶ್ವಾಸನೆ ಸಹ ಇರಬಹುದು. ಇಂತಹ ‘ಲಾಬಿ’ ನಿರ್ವಹಿಸುವ ಕೌಶಲ್ಯ ಅಥವಾ ಅನುಭವ ಅಧ್ಯಕ್ಷ ಟ್ರಂಪ್ ಅಥವಾ ಅವರ ತಂಡದ ಸದಸ್ಯರಲ್ಲಿ ಇಲ್ಲ ಎನ್ನಲಾಗಿದೆ. ರಿಪಬ್ಲಿಕನ್ ಪಕ್ಷದ ಎಲ್ಲಾ ಸದಸ್ಯರೂ ‘ಒಬಾಮಕೇರ್’ ವಿರುದ್ಧವಾಗಿದ್ದಾರೆ ಕಾಂಗ್ರೆಸ್ ನಲ್ಲಿ ರಿಪಬ್ಲಿಕನ್ ಪಕ್ಷದ ಬಹುಮತ ಇದೆ ಎಂದು ಟ್ರಂಪ್ ಯಾವುದೇ ಲಾಬಿ ಮಾಡದ್ದರಿಂದ ಈ ಪರಾಭವ ಉಂಟಾಗಿದೆ ಎಂದೂ ಹೇಳಲಾಗಿದೆ.

ಮೆಕ್ಸಿಕೊ ಗೋಡೆ ಯೋಜನೆಗೂ ಅದೇ ಗತಿ?

ಟ್ರಂಪ್ ಅವರ ಇನ್ನೊಂದು ಮೆಚ್ಚಿನ ಯೋಜನೆ, ಮೆಕ್ಸಿಕೊಗೆ 2000 ಮೈಲುಗಳ ಗೋಡೆ ಕಟ್ಟುವುದು. ಇದರ ವೆಚ್ಚ ಕೊಡಲು ಮೆಕ್ಸಿಕೊ ಸ್ಪಷ್ಟವಾಗಿ ನಿರಾಕರಿಸಿದೆ. ಆದ್ದರಿಂದ ಮೆಕ್ಸಿಕೊ ಗೋಡೆ ಕಟ್ಟಲು ಆಂತರಿಕವಾಗಿ ನಿಧಿ ಒದಗಿಸಬೇಕಾಗಿದೆ. ಇದಕ್ಕೆ ನಿಧಿ ಒದಗಿಸಲು ಸುಮಾರು 18 ಶತಕೋಟಿ ಡಾಲರುಗಳಷ್ಟು ಆರೋಗ್ಯ, ಶಿಕ್ಷಣ ಮುಂತಾದ ಹಲವು ಸಾಮಾಜಿಕ ಯೋಜನೆಗಳನ್ನು ಕಡಿತಗೊಳಿಸಲು ಟ್ರಂಪ್ ಯೋಚಿಸಿದ್ದಾರಂತೆ. ಇದಕ್ಕೆ ಇನ್ನೂ ದೊಡ್ಡ ಪ್ರತಿರೋಧ ಬರಲಿದೆ.  

ಟ್ರಂಪ್ ಅವರ ಮತ್ತ್ನೊಂದು ಮೆಚ್ಚಿನ ಯೋಜನೆ, ಆದಾಯ ತೆರಿಗೆ ಕಡಿತ ಮಾಡುವುದು. ಇದಕ್ಕಾಗಿಯೂ ಹಲವು ಸಾಮಾಜಿಕ ಉತ್ಪಾದಕ ಯೋಜನೆಗಳ ಕಡಿತ ಮಾಡಬೇಕಾಗುತ್ತದೆ. ಅದಕ್ಕೂ ದೊಡ್ಡ ಪ್ರತಿರೋಧ ನಿರೀಕ್ಷಿತವೇ.

ಪ್ಯಾರೀಸ್ ಒಪ್ಪಂದಕ್ಕೆ ಖೊಕ್  

ಹವಾಮಾನ ಬದಲಾವಣೆ ತೆಡಗಟ್ಟಲು ಮಾಡಲಾದ ಪ್ಯಾರೀಸ್ ಒಪ್ಪಂದಕ್ಕೆ ಕುತ್ತು ತರುವ ಕ್ರಮಗಳನ್ನು ಅಧ್ಯಕ್ಷ ಟ್ರಂಪ್ ಆಗಲೇ ತೆಗೆದುಕೊಂಡಿದ್ದಾರೆ.  ಪ್ಯಾರೀಸ್ ಒಪ್ಪಂದದ ಪ್ರಕಾರ ಇಂಗಾಲ ಸೂಸುವಿಕೆಯನ್ನು 2025ರೊಳಗೆ 2005ರ ಮಟ್ಟಕ್ಕಿಂತ ಶೇ.26-28ರಷ್ಟು ಕಡಿತ ಮಾಡಲು ಒಬಾಮ ಆಡಳಿತ “ಕ್ಲೀನ್ ಪವರ್ ಪ್ಲಾನ್” ಹಾಕಿತ್ತು. ಅದನ್ನು  ಅಧ್ಯಕ್ಷ ಟ್ರಂಪ್ ರದ್ದು ಪಡಿಸಿದ್ದಾರೆ. ಇಂಗಾಲ ಸೂಸುವಿಕೆಯನ್ನು ಕಡಿತ ಮಾಡಲು ಕಲ್ಲಿದ್ದಲು ವಿದ್ಯುತ್ ಘಟಕಗಳಲ್ಲಿ ಕಡಿತ ಮಾಡುವುದು ಅಗತ್ಯ. “ಕ್ಲೀನ್ ಪವರ್ ಪ್ಲಾನ್” ರಾಜ್ಯಗಳಿಗೆ ಕಲ್ಲಿದ್ದಲು ವಿದ್ಯುತ್ ಘಟಕಗಳಲ್ಲಿ ಕಡಿತ ಮಾಡಿ ಸೌರ ಮುಂತಾದ ಇತರ “ಕ್ಲೀನ್” ವಿದ್ಯುತ್ ಘಟಕಗಳಿಗೆ ಬದಲಾಯಿಸಲು ಸಮಯಬದ್ಧ ಟಾರ್ಗೆಟ್ ಕೊಟ್ಟಿತ್ತು.  “ಕ್ಲೀನ್ ಪವರ್ ಪ್ಲಾನ್” “ಕಲ್ಲಿದ್ದಲು ಮೇಲೆ ಯುದ್ಧ”  ಎಂದು ಟ್ರಂಪ್ ಕರೆಯುತ್ತಾ ಬಂದಿದ್ದಾರೆ. ಅಮೆರಿಕದ ಕಲ್ಲಿದ್ದಲು ಕೈಗಾರಿಕೆಗೆ ಉತ್ತೇಜನ ಕೊಡುವುದು ಅವರ ಇನ್ನೊಂದು ಚುನಾವಣಾ ಆಶ್ವಾಸನೆ. “ಕಲ್ಲಿದ್ದಲು ಮೇಲೆ ಯುದ್ಧ”ವನ್ನು ಕೊನೆಗೊಳಿಸಿದ್ದೇನೆ ಎಂದು ಟ್ರಂಪ್ ಘೋಷಿಸಿದ್ದಾರೆ. “ಹವಾಮಾನ ಬದಲಾವಣೆ”ದ ವೈಜ್ಞಾನಿಕತೆಯನ್ನು ಟ್ರಂಪ್ ಸಂಶಯದಿಂದ ನೋಡುತ್ತಾರೆ. ಅದು ಘಟಿಸುತ್ತಿದೆ ಎಂಬುದು ಖಚಿತವಲ್ಲ ಎಂಬ ಬಲಪಂಥೀಯ ನಿಲುವು ಅವರದು.

ಟ್ರಂಪ್ ಅಮೆರಿಕವನ್ನು ಪ್ಯಾರೀಸ್ ಒಪ್ಪಂದದಿಂದ ಹಿಂತೆಗೆಯುತ್ತಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ಯಾರೀಸ್ ಒಪ್ಪಂದದಿಂದ ಹಿಂತೆಗೆಯದಿದ್ದರೂ ಅದರ ಗುರಿಗಳನ್ನು ಮುಟ್ಟುವ ಯೋಜನೆ ಹಾಕಿಕೊಳ್ಳದೆ ಮುಟ್ಟದಿದ್ದರೂ ಅದಕ್ಕೆ ಕುತ್ತು ಖಂಡಿತ. ಏಕೆಂದರೆ ಚೀನಾದ ನಂತರ ಅತಿ ದೊಡ್ಡ ಇಂಗಾಲ ಸೂಸುವಿಕೆ ಇರುವ ಅಮೆರಿಕ ತನ್ನ ಬಾಧ್ಯತೆಗಳನ್ನು ಪೂರೈಸದಿದ್ದರೆ ಹಲವು ದೇಶಗಳು ಅದೇ ಕಾರಣ ಕೊಟ್ಟು ಅದನ್ನೇ ಮಾಡಬಹುದು. ಟ್ರಂಪ್ ಅವರ ಈ ಕ್ರಮಕ್ಕೆ ಅಮೆರಿಕದಲ್ಲೇ ಸೇರಿದಂತೆ ಜಗತ್ತಿನ ಎಲ್ಲೆಡೆ ತೀವ್ರ ವಿರೋಧ ಆಕ್ರೋಶ ವ್ಯಕ್ತವಾಗಿದೆ. ಬೇಜವಾಬ್ದಾರಿ ಕ್ರಮ ಎಂಬ ಟೀಕೆಗೆ ಗುರಿಯಾಗಿದೆ. ಅಮೆರಿಕ ರಿವರ್ಸ್ ಹೊಡೆದರೂ ಚೀನಾ, ಯುರೋಪಿಯನ್ ಕೂಟದ ದೇಶಗಳು ತಾವು ಪ್ಯಾರೀಸ್ ಒಪ್ಪಂದವನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಹಲವು ಪ್ರಮುಖ ಯುರೋಪಿಯನ್ ಕೂಟದ ದೇಶಗಳ ನಾಯಕರು ಟ್ರಂಪ್ ನೀತಿಗೆ ಪ್ರತೀಕಾರವಾಗಿ ಅಂತರ್ರಾಷ್ಟ್ರೀಯ ವಿದ್ಯುತ್ ಯೋಜನೆಗಳಲ್ಲಿ ಅಮೆರಿಕನ್ ಕಂಪನಿಗಳಿಗೆ ಬಹಿಷ್ಕಾರ ಹಾಕಬೇಕಾದೀತು ಎಂದು ಎಚ್ಚರಿಸಿದ್ದಾರೆ. ಪ್ಯಾರೀಸ್ ಒಪ್ಪಂದವನ್ನು ಧಿಕ್ಕರಿಸುವ ಕ್ರಮಗಳನ್ನು ಮುಂದುವರಿಸಿದರೆ ಅಮೆರಿಕನ್ ಉತ್ಪನ್ನಗಳಿಗೆ ತೆರಿಗೆ ಹಾಕುವುದಕ್ಕೆ ಅವಕಾಶಗಳಿವೆ ಎಂದೂ ಎಚ್ಚರಿಸಲಾಗಿದೆ. ಅಮೆರಿಕದ ಒಳಗೂ ಕ್ಯಾಲಿಫೋರ್ನಿಯಾ ಮುಂತಾದ ರಾಜ್ಯಗಳು ಟ್ರಂಪ್ ನೀತಿಯನ್ನು ಜಾರಿ ಮಾಡುವುದಿಲ್ಲ ಎಂದೂ ಹೇಳಿವೆ.

ಹೀಗೆ ಟ್ರಂಪ್ ಅವರ ಹಲವು ತಿಕ್ಕಲು ನೀತಿಗಳಿಗೆ ತಳಮಟ್ಟದಿಂದಲೂ ಇತರ ರಾಜಕೀಯ ಶಕ್ತಿಗಳಿಂದಲೂ, ಆಂತರಿಕವಾಗಿಯೂ ಅಂತರ್ರಾಷ್ಟ್ರೀಯವಾಗಿಯೂ ತೀವ್ರ ವಿರೋಧ-ಪ್ರತಿರೋಧಗಳು ಬರುತ್ತಿವೆ ಎಂಬುದು ನಿಜ. ಆದರೆ ಅವನ್ನು ಧಿಕ್ಕರಿಸಿ ತನ್ನ ತಿಕ್ಕಲು ನೀತಿಗಳನ್ನು ಮುಂದುವರೆಸಲು ಅಮೆರಿಕನ್ ಅಧ್ಯಕ್ಷರಿಗೆ ಅಗಾಧ ಅಧಿಕಾರಗಳೂ ಇವೆ ಎಂಬುದು ಅಷ್ಟೇ ನಿಜ.