ಕಲಬುರ್ಗಿ : ಮಹಿಳೆಯರ ನಿರ್ಭೀತ ನಡಿಗೆ

ಸಂಪುಟ: 
11
ಸಂಚಿಕೆ: 
15
Sunday, 2 April 2017

"ಈ ರಸ್ತೆ ನಮ್ಮದು, ಈ ರಾತ್ರಿ ನಮ್ಮದು, ನಿರ್ಭಯದ ಬದುಕು ನಮ್ಮದು" ಎಂಬ ಘೋಷಣೆಯೊಂದಿಗೆ ಮಾರ್ಚ್ 25ರ ರಾತ್ರಿ ಎಲ್ಲಾ ಕಡೆಗಳಿಂದ ಮಹಿಳೆಯರು ಬಂದು ಭಾಗವಹಿಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಕೇವಲ ಭಾಷಣ ಮತ್ತು ಒಂದು ವೇದಿಕೆಗೆ ಮಾತ್ರ ಸೀಮಿತವಾಗಿರದೆ ಅದು ಒಂದು ಹೊಸ ಅರಿವನ್ನು ಮೂಡಿಸುವ ದಿನವಾಗಬೇಕು ಎಂಬ ದೃಷ್ಟಿಯಿಂದ ರಾತ್ರಿಯಲ್ಲಿ ಆಚರಿಸಬೇಕು ಎಂದು ನಿರ್ಧರಿಸಿದೆವು.

ಹಾಸ್ಟೆಲುಗಳು, ಸ್ಲಂಗಳು, ಹಳ್ಳಿಗಳಿಂದ 500ಕ್ಕೂ ಹೆಚ್ಚು ಮಹಿಳೆಯರು ಬಂದರು.  ಮಹಿಳೇಯರ 5 ತಂಡಗಳನ್ನು ರಚಿಸಲಾಗಿತ್ತು. ರಂಗಮಂದಿರ, ಅಪ್ಪಾ ದೇವಾಲಯ, ಸೂಪರ್ ಮಾರ್ಕೆಟ್, ತೀರಂದಾಜ್ ಟಾಕೀಸ್ ಮತ್ತು ಜಿಲ್ಲಾ ಪಂಚಾಯತ್ ಕಚೇರಿಯಿಂದ ಮಹಿಳೆಯರ ತಂಡಗಳು ಹೊರಟು ಕಲಬುರ್ಗಿಯ ಬೀದಿಗಳಲ್ಲಿ  ಮೇಣದ ಬತ್ತಿ ಹಿಡಿದುಘೋಷಣೆಗಳನ್ನು ಕೂಗುತ್ತಾ  ಮೆರವಣಿಗೆ ಮಾಡಿ  ಜಗತ್ ವೃತ್ತಕ್ಕೆ ಬಂದು ಸೇರಿದರು. ನೆರೆದ ಮಹಿಳೆಯರನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆ ನಾಯಕಿ ನೀಲಾ ಕೆ, ಮತ್ತು ಜಿಲ್ಲಾ ಸಿಇಒ  ಹೆಪ್ಸಿಬಾ ರಾಣಿ ಕೊರ್ಲಪತಿ ಮಾತನಾಡಿದರು. ಸಭೆ ಮಧ್ಯರಾತ್ರಿ 1.30 ವರೆಗೆ ನಡೆಯಿತು.  

ಹೆಚ್ಚಿನ ಮಹಿಳೆಯರು ರಾತ್ರಿ ಸಮಯದಲ್ಲಿ ಹೊರಗೆ ಬಂದದ್ದು ಮೊದಲ ಬಾರಿ ಆಗಿತ್ತು. ಅದರಲ್ಲೂ ವಿಶೇಷವೆಂದರೆ ಯಾವದೇ ಜಾತಿ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿದ ಸಮಯ ಆ ಘಳಿಗೆಯಾಗಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಅರಿವಿನ ದಿನವಾಯಿತು.

ಇದು ನಿರ್ಭೀತ ನಡಿಗೆಯ ಝಲಕ್ ... ಮಾರ್ಚ್ 25ರ ರಾತ್ರಿ ಬಂದರು ಈ ಯುವತಿಯರು ಮಹಿಳೆಯರು ... ಅಂಜದೆ ಅಳುಕದೆ .. ದೀವಟಿಗೆ ಹಿಡಿದು ಬಂದರು. ಬೆಳಕು ಹೊತ್ತು ತಂದರು .. ನಿರ್ಭಯದ ದನಿಯೆತ್ತಿ ಮೊಳಗಿಸಿದರು ಘೋಷಣೆಗಳ 'ಈ ರಾತ್ರಿಗಳು ನಮ್ಮವು, ಈ ರಸ್ತೆಗಳು ನಮ್ಮವು, ನಾವು ಮಹಿಳೆಯರು, ನಿರ್ಭಯದ ಬದುಕು ನಮ್ಮದು'. ಜಗತ್ ವೃತ್ತಕ್ಕೆ ನಾಲ್ಕು ದಿಕ್ಕಿನಿಂದ ನಡೆದು ಬಂದರು .. 'ಒಂದಲ್ಲ ಒಂದು ದಿನ ಈ ನೆಲದ ಹೆಣ್ಣುಗಳು ಮೆರವಣಿಗೆ ಹೊರಡುತ್ತಾರೆ' ಹೊರಟೆ ಬಂದರು .. ನಿಜ ಹೇಳಲೇ ಈ ಎಲ್ಲರ ಹೃದಯದಲ್ಲಿ ಅಗ್ನಿ ಪರ್ವತವೇ ಇತ್ತು .. ನಿಯಂತ್ರಣ ಗಡಿ-ರೇಖೆಗಳ ಕಿತ್ತೆಸೆವ ಹುಮ್ಮಸ್ಸು .. ಹೆಜ್ಜೆ ಹಾಕಿದರು ಹಾಡಿಗೆ .. ಚಪ್ಪಾಳೆ ತಟ್ಟಿದರು ಗಾನಕ್ಕೆ 

- ನೀಲಾ ಕೆ