Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಭಾಸ್ಕರ ಗೌಡರಿಗೆ ‘ಸಹಯಾನ ಸಮ್ಮಾನ’ ಪ್ರದಾನ..

ಸಂಪುಟ: 
11
ಸಂಚಿಕೆ: 
15
Sunday, 2 April 2017

ಪರದೆಯ ಹಿಂದೆ ದುಡಿದ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ- ಕಪ್ಪೆಕೆರೆ ಭಾಗವತರು.

“ಯಕ್ಷಗಾನ ಇಂದು ಹಲವು ಬದಲಾವಣೆ ಕಾಣುತ್ತಿದೆ. ಈಗ ಯಕ್ಷಗಾನ ಅತಿ ತ್ವರಿತಗತಿಯಲ್ಲಿದೆ. ಭಾವನೆ ಬೇಡ, ಅಭಿನಯ ಬೇಡ, ಭಾವನಾತ್ಮಕ ಮಾತು ಬೇಡ, ಔಚಿತ್ಯಪೂರ್ಣ ಪಾತ್ರ ಚಿತ್ರಣ ಬೇಡ ಎನ್ನುವಂತಾಗಿದೆ. ಯಾರು ಮಂಡಿ ಹಾಕುತ್ತಾರೋ, ಕುಪ್ಪಳಿಸುತ್ತಾರೋ ಅವರೇ ದೊಡ್ಡ ಕಲಾವಿದರು ಎನ್ನಿಸಿಕೊಳ್ಳುತ್ತಿದ್ದಾರೆ. ಒಂದು ಪ್ರಸಂಗವನ್ನು ರಾತ್ರಿಯಿಡೀ ವಿವರವಾಗಿ, ಸೂಕ್ಷ್ಮವಾಗಿ ಆಡುತ್ತಿದ್ದ ಕಾಲ ಇತ್ತು. ಇಂದು 4-5 ಪ್ರಸಂಗಗಳನ್ನು ಒಂದೇ ರಾತ್ರಿ ಆಡಿ ಮುಗಿಸುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಕಲಾವಿದನಾಗಲೀ ಹಿಮ್ಮೇಳದವರಾಗಲೀ ಪ್ರೇಕ್ಷಕರಿಗೆ ಏನನ್ನು ಕೊಡಲು ಸಾಧ್ಯ? ಹಿಂದೆ ಒಂದು ಪದ್ಯಕ್ಕೆ ಇಂತಿಷ್ಟೇ ಕುಣಿತ, ಹಿತಮಿತವಾದ ಮಾತು ಅಭಿನಯಕ್ಕೆ ಆದ್ಯತೆ ಭಾಷೆಯ ಸ್ವರಾಘಾತವನ್ನೂ ಒಳಗೊಂಡಂತೆ ಶಬ್ದೋಚ್ಛಾರಕ್ಕೆ ಮಾನ್ಯತೆ ಇತ್ತು. ಈಗ ಅದ್ಯಾವುದೂ ಇಲ್ಲ. ಯಕ್ಷಗಾನದ ನಿಜವಾದ ಆಸಕ್ತರು ಇದರಿಂದ ದೂರವಾಗುತ್ತಿದ್ದಾರೆ.” ಎಂದು ಹಿರಿಯ ಭಾಗವತರು, ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರೂ ಆದ ಕಪ್ಪೆರೆಕೆ ಸುಬ್ರಾಯ ಭಾಗವತರು ಹೇಳಿದರು. ಅವರು ಕೆರೆಕೋಣದ  ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ ಸಹಯಾನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ, ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಹೆಸರಾಂತ ಯಕ್ಷಗಾನ ಕಲಾವಿದರೂ ಶಿಕ್ಷಕರೂ ಆದ ದಿ. ಜಿ.ಎಸ್. ಭಟ್ ನೆನಪಿನಲ್ಲಿ ಪ್ರತಿ ವರ್ಷ ನೀಡುವ 5000-00 ರೂ ಹಮ್ಮಿಣಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡ ಸಹಯಾನ ಸಮ್ಮಾನವನ್ನು ಯಕ್ಷಗಾನದ ವೇಷಭೂಷಣ ಮತ್ತು ಪ್ರಸಾದನ ಕಲಾವಿದ ಭಾಸ್ಕರ ಗೌಡ, ಆಡುಕುಳ ಇವರಿಗೆ ನೀಡಿ ಮಾತನಾಡುತ್ತಿದ್ದರು. 

ಮುಂದುವರಿದು “ನಾನು ಬಾಲ್ಯದಲ್ಲಿ ಯಾರೊಡನೆ ಬೆರೆತೆನೋ ಯಾರಿಂದ ರಂಗಕ್ಕೆ, ಕತೆಗೆ ಬೇಕಾದ ಮೌಲ್ಯಗಳನ್ನು ತಿಳಿದುಕೊಂಡೆನೋ ಅಂತಹ ಆರ್.ವಿ.ಭಂಡಾರಿ ಮತ್ತು ಜಿ.ಎಸ್.ಭಟ್ ಧಾರೇಶ್ವರ ಇವರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿಯ ಸಂಗತಿ. ಇವರಿಬ್ಬರೊಂದಿಗೆ ನಾನು ನನ್ನ 22 ನೇ ವಯಸ್ಸಿನಿಂದ ಸ್ನೇಹ ಗಳಿಸಿದ್ದೇನೆ. ಒಡನಾಡಿಯಾಗಿದ್ದೇನೆ. ಜಿ. ಎಸ್ ಭಟ್ ಅವರ ಹಲವು ನಾಯಕ, ಪ್ರತಿ ನಾಯಕ ಪಾತ್ರವನ್ನು ರಂಗದ ಮೇಲೆ ಕುಣಿಸಿದ್ದೇನೆ. ಹಿತಮಿತವಾದ ಕುಣಿತ, ಮಾತು, ಯಕ್ಷಗಾನಕ್ಕೆ ಒಗ್ಗುವ ದೇಹಸಿರಿ ನನಗೆ ಈಗಲೂ ನೆನಪಿನಲ್ಲಿದೆ. ಆರ್. ವಿ. ಭಂಡಾರಿಯವರಂತೆ ಕರ್ಣನ ಪಾತ್ರ ಕಟ್ಟಿಕೊಡುವವರು ಯಾರೂ ಇರಲಿಲ್ಲ. ಅದ್ಭುತ ಕಂಠ ಸಿರಿ ಅವರದು. ಪೌರಾಣಿಕ ಕತೆಯನ್ನು ಈಗಿನ ಹೊಸತನ ಸೇರಿಸಿ ಪಾತ್ರದ ಔಚಿತ್ಯಕ್ಕೆ ಚ್ಯುತಿ ಬರದಂತೆ ಜನಮೆಚ್ಚುಗೆ ಗಳಿಸಿದವರು. ದಿವಂಗತ ಜಿ. ಎಸ್. ಭಟ್ ಮತ್ತು ಆರ್. ವಿ. ಭಂಡಾರಿಯವರಲ್ಲಿ ಮಾತ್ರವಲ್ಲದೇ ಇಂದು ಸನ್ಮಾನ ಸ್ವೀಕರಿಸುತ್ತಿರುವ ಭಾಸ್ಕರ ಗೌಡರಲ್ಲಿಯೂ ಯಕ್ಷಗಾನದ ಪ್ರೀತಿ ಬದ್ಧತೆ, ಕಲ್ಮಶ ರಹಿತ ಪ್ರಾಮಾಣಿಕ ಮನೋಭಾವ ಇದೆ. ಎಲ್ಲರೂ ಹಿಮ್ಮೇಳ-ಮುಮ್ಮೇಳದವರಿಗೆ ಸನ್ಮಾನ ಮಾಡುತ್ತಾರೆ. ಆದರೆ ಪರದೆಯ ಹಿಂದೆ 40-45 ವರ್ಷಗಳ ಕಾಲ ದುಡಿದ ವೇಷಭೂಷಣ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ. ವಸ್ತ್ರ ವಿನ್ಯಾಸ ನೋಡಿದೊಡನೆ ಆ ಪಾತ್ರ ಯಾವುದು ಎಂದು ಗುರುತಿಸುವ ರೀತಿಯಲ್ಲಿ (ಪ್ರತಿಯೊಂದು ಪಾತ್ರಕ್ಕೆ ಪ್ರತ್ಯೇಕ ವಸ್ತ್ರ ವಿನ್ಯಾಸ) ವೇಷ ಭೂಷಣ ಮತ್ತು ವಸ್ತ್ರ ವಿನ್ಯಾಸ ಮಾಡಿದರೆ ಭಾಸ್ಕರ ಗೌಡರವರು ಯಕ್ಷಗಾನದ ಚರಿತ್ರೆಯಲ್ಲಿ ಮೊದಲಿಗರಾಗಿ ಉಳಿಯುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಲಿ” ಎಂದು ಅವರಿಗೆ ಶುಭ ಹಾರೈಸಿದರು. 

ಅಕಾಡೆಮಿ ಪ್ರಶಸ್ತಿ ಪಡೆದ ಸುಬ್ರಾಯ ಭಾಗವತರನ್ನು ಸಹಯಾನದ ಪರವಾಗಿ ವಿಷ್ಣು ನಾಯ್ಕ ಮತ್ತು ಇಂದಿರಾ ಭಂಡಾರಿ ಶಾಲು ಹೊದೆಸಿ ಅಭಿನಂಧಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ ಗೌಡರವರು “ಹಿಂದೆ ತಲೆಯ ಮೇಲೆ ಪೆಟ್ಟಿಗೆ ಹೊತ್ತುಕೊಂಡು ಹೋಗುವ ಕಾಲದಿಂದ ಈವರೆಗೆ ನಾನು ಶ್ರದ್ಧೆಯಿಂದ ಈ ಕೆಲಸ ಮಾಡಿದ್ದೇನೆ. ರಾತ್ರಿಯಲ್ಲಿ ಮುವತ್ತು ನಲವತ್ತು ಪಾತ್ರಗಳಿಗೆ ಬಣ್ಣ ಹಚ್ಚಿದ್ದಿದೆ. ಮಕ್ಕಳಿಗೂ ಅವರವರ ದೇಹ ರಚನೆಗೆ ಅನುಗುಣವಾಗಿ ವಸ್ತ್ರ ವಿನ್ಯಾಸ ಮಾಡಿದ್ದಿದೆ. ಈ ಕೆಲಸವನ್ನು ಸುಮಾರು 45 ವರ್ಷಗಲಿಂದ ಮುಂದುವರೆಸುತ್ತಲೆ ಬಂದಿದ್ದೇನೆ.” ಎಂದರು. 

ಭಾಸ್ಕರ ಗೌಡರ ಕುರಿತು ಕಲಾವಿದ ಗಣೇಶ ಭಂಡಾರಿ ಅಭಿನಂದನಾ ಮಾತುಗಳನ್ನಾಡಿದರು. ಉದಯ ಜಿ. ಭಟ್ ಉಪಸ್ಥಿರಿದ್ದು ಮಾತನಾಡಿದರು. ಸಹಯಾನದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತನ್ನ ಬಾಲ್ಯದಲ್ಲಿ ಯಕ್ಷಗಾನ ವೇಷವನ್ನು ನಿರ್ವಹಿಸಿದ ಪರಿಯನ್ನು ನೆನಪಿಸಿಕೊಂಡರು. ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ ನಾಯ್ಕ ವಂದಿಸಿದರು. ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. 

ಸಭಾ ಕಾರ್ಯಕ್ರಮದ ನಂತರ ವಿಶ್ವರಂಗಭೂಮಿ ದಿನದ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಜುಳಾ ಸುಬ್ರಹ್ಮಣ್ಯ ಅವರ ಅಭಿನಯದ “ರಾಧಾ” ನಾಟಕ ಅಭಿನಯಿಸಲ್ಪಟ್ಟಿತು. ಸುಧಾ ಆಡುಕಳ ಅವರು ರಚಿಸಿದ ನಾಟಕವನ್ನು ಡಾ. ಶ್ರೀಪಾದ ಭಟ್ ಅವರು ನಿರ್ದೇಶಿಸಿದ್ದರು. ವಿದ್ಯಾಧರ ಕಟತೋಕ ಅವರು ಸ್ವಾಗತಿಸಿದರೆ ಮಾಧವಿ ಭಂಡಾರಿ ನೆನಪಿನ ಕಾಣಿಕೆ ಕೊಟ್ಟು ವಂದಿಸಿದರು.

ವಿಠಲ ಭಂಡಾರಿ