ಪಂಜಾಬ್: ಮೋದಿ ಅಲೆಯನೇರಲಿಲ್ಲ, ನೋಟುರದ್ಧತಿಗೂ ತಿರಸ್ಕಾರ

ಸಂಪುಟ: 
11
ಸಂಚಿಕೆ: 
15
Sunday, 2 April 2017

ನೋಟುರದ್ಧತಿಗಾಗಿ ನನ್ನನ್ನು ಶಿಕ್ಷಿಸಬೇಡಿ, ನಾನು ಬೇರೆ ಬಹಳಷ್ಟು ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ಮಂತ್ರಿಯೊಬ್ಬರು ಚುನಾವಣಾ ಪ್ರಚಾರದ ವೇಳೆಗೆ ಗೋಗರೆದದ್ದು ದೊಡ್ಡ ಸುದ್ದಿಯಾಗಿತ್ತು. ಆತ ಸೋತಿದ್ದಾರೆ. ಪಂಜಾಬಿನಲ್ಲಿ ಗದ್ದೆಗಳಲ್ಲಿ ಭತ್ತದ ಕಟಾವು ಆಗಿ ಖರೀದಿಗೆ ಸಿದ್ಧವಾಗಿದ್ದ ಸಮಯದಲ್ಲಿ ಬಂದ ನೋಟುರದ್ಧತಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಕಷ್ಟ-ಕೋಟಲೆಗಳನ್ನು ಸೃಷ್ಟಿಸಿತು. ಆದರೂ ಚುನಾವಣಾ ಪ್ರಚಾರದ ವೇಳೆಯಲ್ಲಿ ಅದು ಒಂದು ಪ್ರಮುಖ ಪ್ರಶ್ನೆಯಾಗಲಿಲ್ಲ. ಏಕೆಂದರೆ ಎಸ್‍ಎಡಿ-ಬಿಜೆಪಿ ಕೂಟವನ್ನು ಟೀಕಿಸಲು ಕಾಂಗ್ರೆಸ್ ಮತ್ತು ಆಪ್ ಪಕ್ಷಕ್ಕೆ ಅದರ ದುರಾಡಳಿತದ ಇನ್ನೂ ಬಹಳಷ್ಟು ಅಂಶಗಳಿದ್ದವು.

ಪಂಜಾಬಿನಲ್ಲಿ ಕಾಂಗ್ರೆಸ್‍ನ ಭಾರೀ ಗೆಲುವು ಮತ್ತು ಅಧಿಕಾರಸ್ಥ ಅಕಾಲಿ-ಬಿಜೆಪಿ ಕೂಟದ ಭಾರೀ ಸೋಲು ಮೋದಿಯವರ ನೋಟುರದ್ಧತಿಯ ‘ಧೀರಕ್ರಮ’ಕ್ಕೆ ಮತ್ತು ಅವರ ಹೊಸ ಮಾದರಿ ರಾಜಕಾರಣಕ್ಕೆ ದೇಶಾದ್ಯಂತ ಅನುಮೋದನೆಯಿದೆ ಎಂಬ ಮಿಥ್ಯೆಯನ್ನು ಒಡೆದಿದೆ.

ಕಾಂಗ್ರೆಸ್ 117ರಲ್ಲಿ 77 ಸೀಟುಗಳನ್ನು ಗೆದ್ದಿದೆ. ಕಳೆದ ಬಾರಿ ಒಟ್ಟು 68 ಸ್ಥಾನಗಳಲ್ಲಿ ಗೆದ್ದು ಸರಕಾರ ರಚಿಸಿದ್ದ ಶಿರೋಮಣಿ ಅಕಾಲಿ ದಳ(ಎಸ್‍ಎಡಿ)-ಬಿಜೆಪಿ ಕೂಟದ ಬಲ ಈ ಬಾರಿ 18ಕ್ಕೆ ಇಳಿದಿದೆ. ಕಳೆದ ಬಾರಿ 56 ಸೀಟುಗಳನ್ನು ಪಡೆದಿದ್ದ ಎಸ್‍ಎಡಿ 15ಕ್ಕೆ ಇಳಿದರೆ, ಬಿಜೆಪಿಯ 12 ಈ ಬಾರಿ 3ಕ್ಕೆ ಇಳಿದಿದೆ. ಕಾಂಗ್ರೆಸ್ ಮತ್ತು ಅಧಿಕಾರಸ್ಥ ಕೂಟಕ್ಕೆ ಪ್ರಬಲ ಸವಾಲಾಗಿದ್ದ ಆಮ್‍ಆದ್ಮಿ ಪಾರ್ಟಿಯ ಸ್ಪರ್ಧೆಯೂ ಬೇರೆಡೆಗಳಂತೆ ಬಿಜೆಪಿ ಕೂಟಕ್ಕೆ ನೆರವಾಗಲಿಲ್ಲ.

ನಿಜ, ಬೇರೆಡೆಗಳಂತೆ ಮತಗಳಿಕೆಗೂ ಸೀಟುಗಳಿಕೆಗೂ ಇರುವ ಅಪಾರ ಅಂತರ ಇಲ್ಲಿಯೂ ಕಾಣಬಂದಿದೆ. ಮೊದಲ ಬಾರಿಗೆ ಸ್ಪರ್ಧಿಸಿ ನಿರೀಕ್ಷೆಯಂತೆ ಭಾರೀ ಗೆಲುವು ಸಾಧಿಸದಿದ್ದರೂ 20 ಸೀಟುಗಳನ್ನು ಪಡೆದ ಆಮ್ ಆದ್ಮಿ ಪಾರ್ಟಿ 23.7% ಮತಗಳಿಸಿದೆ. ಇದರಿಂದಾಗಿ ಮೂರನೇ ಎರಡು ಬಹುಮತ ಪಡೆದ ಕಾಂಗ್ರೆಸ್‍ನ ಮತಗಳಿಕೆಯೂ ಕಳೆದ ಬಾರಿಗೆ ಹೋಲಿಸಿದರೆ ಏರುವ ಬದಲು 1.4% ದಷ್ಟು ಇಳಿದಿದೆ. ಈ ಬಾರಿ ಅದು 38.5% ಮತ ಗಳಿಸಿದೆ. ಎಸ್‍ಎಡಿ ಮತಗಳಿಕೆ 25.2% ಗೆ ಇಳಿದೆ, ಕಳೆದ ಬಾರಿಗೆ ಹೋಲಿಸಿದರೆ 9.4% ದಷ್ಟು ಇಳಿಕೆಯಾಗಿದೆ. 5.4%  ಮತಗಳಿಸಿರುವ  ಬಿಜೆಪಿ ಕಳೆದ ಬಾರಿಗೆ ಹೋಲಿಸಿದರೆ ಕಳಕೊಂಡದ್ದು ಕೇವಲ1.8% ವಾದರೂ 9 ಸೀಟುಗಳನ್ನು ಕಳಕೊಳ್ಳಬೇಕಾಯಿತು.

ನೋಟುರದ್ಧತಿಗಾಗಿ ನನ್ನನ್ನು ಶಿಕ್ಷಿಸಬೇಡಿ, ನಾನು ಬೇರೆ ಬಹಳಷ್ಟು ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ಮಂತ್ರಿಯೊಬ್ಬರು ಚುನಾವಣಾ ಪ್ರಚಾರದ ವೇಳೆಗೆ ಗೋಗರೆದದ್ದು ದೊಡ್ಡ ಸುದ್ದಿಯಾಗಿತ್ತು. ಆತ ಸೋತಿದ್ದಾರೆ. ಪಂಜಾಬಿನಲ್ಲಿ ಗದ್ದೆಗಳಲ್ಲಿ ಭತ್ತದ ಕಟಾವು ಆಗಿ ಖರೀದಿಗೆ ಸಿದ್ಧವಾಗಿದ್ದ ಸಮಯದಲ್ಲಿ ಬಂದ ನೋಟುರದ್ಧತಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಕಷ್ಟ-ಕೋಟಲೆಗಳನ್ನು ಸೃಷ್ಟಿಸಿತು. ಆದರೂ ಚುನಾವಣಾ ಪ್ರಚಾರದ ವೇಳೆಯಲ್ಲಿ ಅದು ಒಂದು ಪ್ರಮುಖ ಪ್ರಶ್ನೆಯಾಗಲಿಲ್ಲ. ಆಳುವ ಕೂಟದ ಸೋಲಿಗೆ ಪ್ರಮುಖ ಕಾರಣವೇನೂ ಆಗಿರಲಿಲ್ಲ, ಹಲವು ಕಾರಣಗಳಲ್ಲಿ ಒಂದಾಗಿತ್ತಷ್ಟೇ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಏಕೆಂದರೆ ಎಸ್‍ಎಡಿ-ಬಿಜೆಪಿ ಕೂಟವನ್ನು ಸೋಲಿಸಲು ಅದರ ದುರಾಡಳಿತದ ಇನ್ನೂ ಬಹಳಷ್ಟು ಅಂಶಗಳಿದ್ದವು.

ಅದರಲ್ಲಿ ಒಂದು ಮುಖ್ಯ ಕಾರಣ ಕುಟುಂಬ ರಾಜಕಾರಣ. ಕಾಂಗ್ರೆಸ್‍ನದ್ದು ಕುಟುಂಬ ರಾಜಕಾರಣ ಎಂದು ಟೀಕಿಸುವ ಬಿಜೆಪಿ ಪಂಜಾಬಿನಲ್ಲಿ ಕುಟುಂಬ ರಾಜಕಾರಣದ ಅತಿ ಕೆಟ್ಟ ಮಾದರಿ, ಅಂದರೆ ರಾಜಕೀಯ ಮತ್ತು ವ್ಯಾಪಾರವನ್ನು ತಳಕು ಹಾಕಿರುವ  ಮಾದರಿಯಾದ  ಶಿರೋಮಣಿ ಅಕಾಲಿ ದಳದೊಂದಿಗೆ ಕೈಜೋಡಿಸಿದ್ದು ಅದರ ಕೋಮುವಾದಿ ರಾಜಕಾರಣದ ಗೋಸುಂಬೆತನದ ಇನ್ನೊಂದು ಅಧ್ಯಾಯ. 

ಈ ಚುನಾವಣೆಗಳಲ್ಲಿ ಅಧಿಕಾರ ಕಳಕೊಂಡ ಸರಕಾರದ ಮುಖ್ಯಮಂತ್ರಿಗಳ ಮಗನೇ ಉಪಮುಖ್ಯಮಂತ್ರಿ, ಪಕ್ಷದ ನಾಯಕತ್ವವೂ ಅದೇ ಕುಟುಂಬದ ಕೈಯಲ್ಲಿ, ಕಳೆದ ಹತ್ತು ವರ್ಷದ ಅವರ ಆಳ್ವಿಕೆಯಲ್ಲಿ ಅವರ ಸಾರಿಗೆ, ಹೊಟೇಲ್ ಮತ್ತಿತರ ವ್ಯವಹಾರಗಳು ದೊಡ್ಡಪ್ರಮಾಣದಲ್ಲಿ ಬೆಳೆದವು, ಇದು ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಿತು ಎಂಬುದು ಗಮನಾರ್ಹ. ಇದೂ, ಜತೆಗೆ ಈ ಕೂಟದ ದುರಾಡಳಿತದಿಂದಾಗಿ ವ್ಯಾಪಕಗೊಂಡ ಮಾದಕ ದೃವ್ಯ ಪಿಡುಗು ಕೊನೆಗೆ ಆ ಕೂಟಕ್ಕೆ ಮುಳುವಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಗೆಲುವು ಮುಖ್ಯವಾಗಿ ಎಸ್‍ಎಡಿ-ಬಿಜೆಪಿ ಕೂಟದ ದುರಾಡಳಿತದಿಂದ ಬೇಸತ್ತ ಜನ ನೀಡಿದ ನಕಾರಾತ್ಮಕ ಗೆಲುವು ಎನ್ನಬಹುದಾದರೂ ಬೇಸತ್ತ ಮತದಾರರಿಗೆ ಆಮ್ ಆದ್ಮಿ ಪಕ್ಷದ ಪರ್ಯಾಯ ಇದ್ದರೂ ಕಾಂಗ್ರೆಸನ್ನು ಆರಿಸಿಕೊಳ್ಳಲು ಕೂಡ ಕಾರಣಗಳಿವೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಆಮ್ ಆದ್ಮಿ ಪಕ್ಷ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಅಲೆಯ ನಡುವೆಯೂ ನಾಲ್ಕು ಸ್ಥಾನಗಳನ್ನು ಗಿಟ್ಟಿಸಿ ಸವಾಲು ಹಾಕಿದರೂ ನಂತರದ ಅದರ ವರ್ತನೆ, ಮುಖ್ಯವಾಗಿ ಪಂಜಾಬಿನಲ್ಲಿ ಅದರ ಪ್ರಭಾವವಿದ್ದ ಕ್ಷೇತ್ರಗಳಲ್ಲಿ ಮಾಜಿ ಅಕಾಲಿಗಳು, ಕಾಂಗ್ರೆಸಿಗರನ್ನೇ ಅಭ್ಯರ್ಥಿಗಳಾಗಿ ನಿಲ್ಲಿಸಿದ್ದು ಜನ ಅದನ್ನೊಂದು ಸಮರ್ಥ ರಜಕೀಯ ಪರ್ಯಾಯವಾಗಿ ಕಾಣದಂತೆ ಮಾಡಿದೆ ಎಂದು ಅದರ ಕೆಲವು ಸಮರ್ಥಕರೂ ಹೇಳುತ್ತಿದ್ದಾರೆ. 

ಕಳೆದ ವರ್ಷ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ರೈತರ ಆತ್ಮಹತ್ಯೆಗಳನ್ನು ಕಂಡಿರುವ ಈ ಕೃಷಿಪ್ರಧಾನ ರಾಜ್ಯದಲ್ಲಿ ಕೃಷಿಬಿಕ್ಕಟ್ಟು ಎಸ್‍ಎಡಿ-ಬಿಜೆಪಿ ಆಳ್ವಿಕೆಯಲ್ಲಿ ಸಂಪೂರ್ಣ ಹದಗೆಟ್ಟಿತು. ಕಾಂಗ್ರೆಸ್ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ, ಹಿಂದೆ 2002-07ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಸಾಲಮನ್ನಾದ ಒಂದು ದೊಡ್ಡ ಯೋಜನೆಯನ್ನು ರೂಪಿಸುವುದಾಗಿ ಭರವಸೆ ನೀಡಿದರು. ಮಾದಕ ವಸ್ತುಗಳ ಪಿಡುಗನ್ನು ಅಧಿಕಾರಕ್ಕೆ ಬಂದ ಕೂಡಲೇ ಮಟ್ಟ ಹಾಕವುದಾಗಿ ಸಾರಿದರು ಮತ್ತು ಪ್ರತಿಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಉದ್ಯೋಗದ ಭರವಸೆ ನೀಡಿದರು. 

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ವಚನಗಳನ್ನು ಪಾಲಿಸುವತ್ತ ಕ್ರಮಗಳನ್ನೂ ಘೋಷಿದ್ದಾರೆ. ಆದರೆ ಕಾಂಗ್ರೆಸ್‍ನ ನವ-ಉದಾರವಾದಿ ಧೋರಣೆಗಳ ದಿಕ್ಕನ್ನು ಇವರು ಬದಲಿಸಿ, ಆಮೂಲಕ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಒಂದು ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಯಾಗಿ ಬದುಕುಳಿಯಲು ನೆರವಾಗುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.