32 ಕ್ರಿಮಿನಲ್ ಕೇಸುಗಳು ಮತ್ತು ಉತ್ತಮ ಆಳ್ವಿಕೆ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಉತ್ತರ ಪ್ರದೇಶದ 402 ಶಾಸಕರಲ್ಲಿ 143 ಮಂದಿ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. 107 ಮಂದಿ ಗಂಭೀರ ಸ್ವರೂಪದ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ಲೆಕ್ಕಹಾಕಿದೆ.

ಇವರಲ್ಲಿ ಮುಖ್ಯಮಂತ್ರಿಗಳು ಸೇರಿರುವುದಿಲ್ಲ. ಏಕೆಂದರೆ ಅವರು ಸದ್ಯ ಶಾಸಕರಲ್ಲ. ಲೋಕಸಭಾ ಸದಸ್ಯರು.

2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಾಗ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ ಅವರ ಮೇಲೆ 10 ಕ್ರಿಮಿನಲ್ ಕೇಸುಗಳಲ್ಲಿ  16 ಆರೋಪಗಳಿವೆ. ಇವುಗಳು ಕ್ರಿಮಿನಲ್ ಬೆದರಿಕೆ, ಗಲಭೆ, ಶಾಂತಿ ಕದಡುವ ಪ್ರಯತ್ನ, ಉದ್ದೇಶಪೂರ್ವಕ ಅಪಮಾನ, ಪೂಜಾಸ್ಥಾನವನ್ನು ಅಪವಿತ್ರಗೊಳಿಸುವುದು, ಅಕ್ರಮ ಪ್ರವೇಶ, ಇತರರ ಜೀವಕ್ಕೆ ಮತ್ತು ವೈಯಕ್ತಿಕ ಸುರಕ್ಷಿತೆಗೆ ಧಕ್ಕೆ, ಧರ್ಮ, ಜನಾಂಗ, ಹುಟ್ಟು ಸ್ಥಳ, ನಿವಾಸ, ಭಾಷೆಯ ಆಧಾರದಲ್ಲಿ ಸಮುದಾಯಗಳ ನಡುವೆ ವೈಷಮ್ಯ ಹುಟ್ಟಿಸುವುದು, ಕೊಲೆ ಪ್ರಯತ್ನ ಇತ್ಯಾದಿ ಸೇರಿವೆ.

ಅವರೇ ಒಪ್ಪಿಕೊಂಡಿರುವ ಈ 10 ಕೇಸುಗಳಲ್ಲದೆ ಇನ್ನೂ 22 ಕೇಸುಗಳನ್ನು ಅಲಹಾಬಾದಿನ 8 ಮಂದಿ ಹಿರಿಯ ವಕೀಲರು ಮತ್ತು ನಾಗರಿಕರು ಅಲಹಾಬಾದ್ ಹೈಕೋರ್ಟಿಗೆ ಮಾರ್ಚ್ 25ರಂದು ಸಲ್ಲಿಸಿದ ಮನವಿಯಲ್ಲಿ ಪಟ್ಟಿ ಮಾಡಿದ್ದಾರೆ.

ಎಪ್ರಿಲ್ 2 ರಂದು ಅಲಹಾಬಾದ್ ಹೈಕೋರ್ಟಿನ ಒಂದೂವರೆ ಶತಮಾನೋತ್ಸವದ  ಮುಕ್ತಾಯ ಸಮಾರಂಭಕ್ಕೆ  ಇದೇ ಹೈಕೊರ್ಟಿನಲ್ಲಿ ದೀರ್ಘಕಾಲದಿಂದ ಹಲವಾರು ಗಂಭೀರ ಕೇಸುಗಳನ್ನು ಎದುರಿಸುತ್ತಿರುವ ಯೋಗಿ ಆದಿತ್ಯನಾಥರನ್ನು ಅತಿಥಿಯಾಗಿ ಆಹ್ವಾನಿಸಬಾರದು  ಎಂದು ಕೋರಿ ಈ ಎಂಟು ಮಂದಿ ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಈ ಮನವಿ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಗಳು ಮತ್ತು ಸುಪ್ರಿಂ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶರುಗಳು ಭಾಗವಹಿಸುವ ಈ ಸಮಾರಂಭದಲ್ಲಿ ಅವರೊಂದಿಗೆ ಇದೇ ನ್ಯಯಾಲಯದಲ್ಲಿ ಹಲವಾರು ಗಂಭೀರ ಕೇಸುಗಳನ್ನು ಎದುರಿಸುತ್ತಿರುವವರು ಪೀಠಾಸೀನರಾಗುವುದು ಈ ನ್ಯಾಯಾಲಯದ ಸ್ವಾತಂತ್ರ್ಯ ಮತ್ತು ಘನತೆಗೆ ಕುಂದು ತರುತ್ತದೆ ಎಂದು ಈ ಮನವಿಯಲ್ಲಿ ಹೇಳಿರುವುದಲ್ಲದೆ 2013ರ ಕ್ರಿಮಿನಲ್ ರಿಟ್‍ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಂ.24343ರ ಭಾಗವಾಗಿ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನೂ ನಡೆಸಬೇಕು ಎಂದು ಅವರು ಕೋರಿದ್ದಾರೆ.

ಹೊಸ ಶಾಸಕರಲ್ಲಿ 80% ಕೋಟ್ಯಧೀಶ್ವರರು

2012 ರಲ್ಲಿ ಆರಿಸಲ್ಪಟ್ಟ ಉತ್ತರಪ್ರದೇಶದ ವಿಧಾನ ಸಭೆಯಲ್ಲಿ 67% ಕೋಟ್ಯಧೀಶ್ವರರಿದ್ದರು. ಈ ಬಾರಿ ಅದು 80% ಕ್ಕೆ ಏರಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್(ಎಡಿಆರ್) ಲೆಕ್ಕ ಹಾಕಿದೆ. 

ಮರು ಚುನಾವಣೆಗೊಂಡ 92 ಸದಸ್ಯರ ಆಸ್ತಿಗಳಲ್ಲಿ ಕಳೆದ 5 ವರ್ಷಗಳಲ್ಲಿ 87% ಏರಿಕೆಯಾಗಿದೆ.