ವಿಧಾನಸಭಾ ಚುನಾವಣೆಗಳು 2017 ಮತ್ತು ನಂತರ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಸ್ಮಶಾನ#ಕಬ್ರಿಸ್ತಾನದಿಂದ ಹಿಂಬಾಗಿಲಿಂದ ಸರಕಾರದ ವರೆಗೆ - ಎಲ್ಲವೂ ‘ನವಭಾರತ ನಿರ್ಮಾಣ’ಕ್ಕಾಗಿ 

ಬಹುನಿರೀಕ್ಷಿತ 2017ರ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಬಂದು ಐದು ರಾಜ್ಯಗಳಲ್ಲಿ ಹೊಸ ಸರಕಾರಗಳು ರಚನೆಗೊಂಡಿವೆ. ಇವು ಎಲ್ಲರನ್ನು ಜತೆಗೊಯ್ಯುವ ಸರಕಾರಗಳು, ಈ ಮೂಲಕ ನವ ಭಾರತ ಮೂಡಿಬರುತ್ತಿದೆ ಎಂದಿದ್ದಾರೆ ಮಾನ್ಯ ಪ್ರಧಾನ ಮಂತ್ರಿಗಳು ಉತ್ತರಪ್ರದೇಶದಲ್ಲಿ ‘ಅಭೂತಪೂರ್ವ’ ಗೆಲುವು ಪಡೆದ ಹುರುಪಿನಲ್ಲಿ. ಈ ಸರಕಾರಗಳು ರಚನೆಗೊಂಡ ರೀತಿ ಮತ್ತು ನಂತರದ ಘಟನೆಗಳು, ವಿಶೇಷವಾಗಿ ಉತ್ತರಪ್ರದೇಶದಲ್ಲಿನ ಘಟನೆಗಳು ಇದನ್ನು ಸಮರ್ಥಿಸುತ್ತವೆಯೇ? ಒಂದು ನೋಟ ಇಲ್ಲಿದೆ. 

ಉತ್ತರಪ್ರದೇಶದ ‘ಅಭೂತಪೂರ್ವ’ ಫಲಿತಾಂಶದ ಹಿಂದೆ-ಮುಂದೆ

ಬಿಜೆಪಿ ಮತ್ತು ಅದರ ಎರಡು ಮಿತ್ರಪಕ್ಷಗಳು 403ರಲ್ಲಿ 325 ಸೀಟುಗಳನ್ನು ಗೆದ್ದುಕೊಂಡ ಭಾರೀ ವಿಜಯದ ಒಂದು ವಾರದ ವಿಳಂಬದ ನಂತರ ಅಲ್ಲಿ ಕೊನೆಗೂ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಅವರ ಜತೆಗೆ  ಇಬ್ಬರನ್ನು ಉಪಮುಖ್ಯಮಂತ್ರಿಗಳಾಗಿಯೂ ಆರಿಸಲಾಯಿತು. ಆದರೆ ಈ ಮೂವರೂ ಈ ಚುನಾವಣೆಗಳಲ್ಲಿ ಉತ್ತರಪ್ರದೇಶದ ಜನತೆ ಆರಿಸಿದ ಶಾಸಕರಲ್ಲ ಎಂಬುದು ಗಮನಾರ್ಹ. 

ಈ ಬಗ್ಗೆ ಮಾಧ್ಯಮಗಳಲ್ಲಿ ವಿಶ್ಲೇಷಣೆಗಳು ಪ್ರಕಟವಾಗುತ್ತಲೇ ಇವೆ. ಇವುಗಳೊಂದಿಗೆ ಉತ್ತರಪ್ರದೇಶದ 2017ರ ಫಲಿತಾಂಶಗಳು ನಿಜವಾಗಿಯೂ ಅಭೂತಪೂರ್ವವೇ, ಬಹಳಷ್ಟು ಪ್ರಚಾರವಾಗಿರುವಂತೆ ಅವು ಪ್ರತಿಪಕ್ಷಗಳು ಧೂಳೀಪಟವಾಗಿರುವುದನ್ನು ಸೂಚಿಸುತ್ತವೆಯೇ ಎಂಬ ಬಗ್ಗೆಯೂ ವಿಶ್ಲೇಷಣೆಗಳು ನಡೆಯುತ್ತಿವೆ.

ನಿಜ, ನಮ್ಮ ದೇಶದಲ್ಲಿನ ಈಗಿನ ಚುನಾವಣಾ ಪದ್ಧತಿಯಲ್ಲಿ ಈ ವಿಜಯ ಅಭೂತಪೂರ್ವ. 

  • 2012ರಲ್ಲಿ ಕೇವಲ 47 ಸೀಟುಗಳನ್ನು ಗೆದ್ದು 15% ಮತಗಳಿಸಿದ್ದ ಬಿಜೆಪಿ ಈ ಭಾರಿ 39.7% ಮತ ಗಳಿಸಿ 312 ಸೀಟುಗಳನ್ನು ಪಡೆದಿದೆ. 
  • 29% ಮತ ಗಳಿಸಿ 224 ಸೀಟುಗಳನ್ನು ಗಳಿಸಿದ್ದ ಎಸ್‍ಪಿ ಗಳಿಕೆ ಈ ಬಾರಿ 47ಕ್ಕೆ ಇಳಿದಿದೆ. ಮತಗಳಿಕೆ 22%ಕ್ಕೆ ಇಳಿದಿದೆ. ಅಂದರೆ 7% ಇಳಿಕೆ.
  • 26% ಮತ ಗಳಿಸಿ 80 ಸಿಟುಗಳನ್ನು ಪಡೆದಿದ್ದ ಬಿಎಸ್‍ಪಿಯ ಗಳಿಕೆ 19ಕ್ಕೆ ಇಳಿದಿದೆ. ಮತಗಳಿಕೆ 22% ಅಂದರೆ 4% ಇಳಿಕೆ.
  • 12% ಮತಗಳಿಸಿ 28 ಸೀಟುಗಳನ್ನು ಪಡೆದಿದ್ದ ಕಾಂಗ್ರೆಸ್ ಗಳಿಕೆ 7ಕ್ಕೆ ಇಳಿದಿದೆ.. ಆದರೆ ಮತಗಳಿಕೆಯಲ್ಲಿ ಇಳಿಕೆ 6%.

ಇನ್ನು 2014ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಮತಗಳಿಕೆಯ % ಪ್ರಮಾಣ ಹೀಗಿದೆ:

                 2014             2017

ಬಿಜೆಪಿ          42.3               39.5

ಎಸ್‍ಪಿ          22.2              21.8

ಬಿಎಸ್‍ಪಿ       19.6               22.2

ಕಾಂಗ್ರೆಸ್        7.5                 6.2

ಅಂದರೆ 2014ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ‘ಅಭೂತಪೂರ್ವ’ ಎಂಬುದು ಅರ್ಥಹೀನವಾಗುತ್ತದೆ. ವಾಸ್ತವವಾಗಿ ಎಸ್‍ಪಿ ಮತಗಳಿಕೆ ಕೇವಲ 0.4% ಇಳಿದಿದೆ, ಕಾಂಗ್ರೆಸಿನದ್ದು 1.3% ಹಾಗೂ ಬಿಜೆಪಿಯದ್ದು ಎಲ್ಲಕ್ಕಿಂತ ಹೆಚ್ಚು 2.8% ಇಳಿಕೆ. ತದ್ವಿರುದ್ಧವಾಗಿ ಬಿಎಸ್‍ಪಿಯ ಮತಗಳಿಕೆ 2.6% ದಷ್ಟು ಹೆಚ್ಚಿದೆ.

ಒಟ್ಟು ಮತಗಳಿಕೆಯಲ್ಲೂ ಈ ‘ಅಭೂತಪೂರ್ವ’ ವಿಜಯದಲ್ಲಿ ಬಿಜೆಪಿ 2014ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ  84,185 ಮತಗಳನ್ನು ಹೆಚ್ಚಿಗೆ ಪಡೆದಿದೆ. ಎಸ್‍ಪಿ  9.34 ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ ಹಾಗೂ ಬಿಎಸ್‍ಪಿ 32 ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ.

ಅಂದರೆ ಪ್ರಧಾನಮಂತ್ರಿಗಳ ಮ್ಯಾರಥಾನ್ ಪ್ರಚಾರದಿಂದ ಧೂಳೀಪಟವಾಗಿವೆ ಎಂದಿರುವ ಪಕ್ಷಗಳ ಜನಬೆಂಬಲ 2014ಕ್ಕೆ ಹೋಲಿಸಿದರೆ ಕಡಿಮೆಯಾಗುವ ಬದಲು ವಾಸ್ತವವಾಗಿ ಹೆಚ್ಚಿದೆ. ಆದರೂ ಬಿಜೆಪಿ ಈ ‘ಅಭೂತಪೂರ್ವ’ ವಿಜಯ ಗಳಿಸಿದ್ದರೆ ಅದು ಒಂದೆಡೆ ವಿವಿಧ ಜಾತಿ ಗುಂಪುಗಳನ್ನು ಓಲೈಸಿ ಅವನ್ನು ಎಸ್‍ಪಿ ಮತ್ತು ಬಿಎಸ್‍ಪಿಗೆ ಎದುರಾಗಿ ನಿಲ್ಲಿಸಿ, ಇನ್ನೊಂದೆಡೆಯಲ್ಲಿ ಮುಸ್ಲಿಮರ ವಿರುದ್ಧ ಲಂಗುಲಗಾಮಿಲ್ಲದ ಅಪಪ್ರಚಾರ ನಡೆಸಿ ಹಿಂದೆಂದೂ ಕಾಣದಷ್ಟು ಧ್ರುವೀಕರಣ ಮಾಡಿ ನಮ್ಮ ದೋಷಪೂರ್ಣ ಚುನಾವಣಾ ವ್ಯವಸ್ಥೆಯ ಪೂರ್ಣ ಪ್ರಯೋಜನ ಗಿಟ್ಟಿಸುವ ಮೂಲಕ ಎಂಬುದು ಸ್ಪಷ್ಟ.

ಡಿ. ಉಮಾಪತಿಯವರು ( ಪ್ರಜಾವಾಣಿ, ಮಾರ್ಚ್20 ) ಈ ಕೆಳಗಿನ ಮಾಹಿತಿಯನ್ನು ಕಲೆ ಹಾಕಿದ್ದಾರೆ.

  • ಎಸ್‍ಪಿ+ಕಾಂಗ್ರೆಸ್ ಬಿಜೆಪಿಗೆ ಸೋತ 203 ಸೀಟುಗಳಲ್ಲಿ ಎರಡನೇ ಸ್ಥಾನದಲ್ಲಿವೆ
  • ಬಿಎಸ್‍ಪಿ 116 ಸೀಟುಗಳಲ್ಲಿ ಎರಡನೇ ಸ್ಥಾನದಲ್ಲಿವೆ, 
  • ಬಿಜೆಪಿ ಗೆದ್ದ 198 ಸೀಟುಗಳಲ್ಲಿ ಈ ಎರಡು ಪಕ್ಷಗಳು ಗಳಿಸಿದ ಮತಗಳ ಮೊತ್ತ ಬಿಜೆಪಿ ಗಳಿಕೆಗಿಂತ ಹೆಚ್ಚು.

ಈ ಲೆಕ್ಕಾಚಾರದ ಪ್ರಕಾರ ಬಿಹಾರದಂತೆ ‘ಮಹಾಕೂಟ’ ಏರ್ಪಟ್ಟಿದ್ದರೆ ಬಿಜೆಪಿಯ ಕೋಮುಧ್ರುವೀಕರಣ ಫಲ ಕೊಡುತ್ತಿರಲಿಲ್ಲ, ಪ್ರಧಾನ ಮಂತ್ರಿಗಳ ಮಹಾಪ್ರಯತ್ನದ ಹೊರತಾಗಿಯೂ 125ಕ್ಕಿಂತ ಹೆಚ್ಚು ಸೀಟುಗಳು ಸಿಗುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. 

ನಿಜ. ಇದೀಗ ‘ರೆ’ಗಳ ಪ್ರಶ್ನೆ. ಉತ್ತರಪ್ರದೇಶದಲ್ಲಿ ‘ಸವರ್ಣೀಯರ ಪ್ರಾಬಲ್ಯವನ್ನು ಮತ್ತೆ ಸ್ಥಾಪಿಸಲು ಸಾಧ್ಯವಾದರೆ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಬಹುದು ಎಂಬ ಬಿಜೆಪಿ/ಆರೆಸ್ಸೆಸ್ ಲೆಕ್ಕಾಚಾರ  ಈ ಬಾರಿ ಯಶಸ್ವಿಯಾಗಿದೆ. ಆದರೆ ಬಿಜೆಪಿಯ ಮುಂದೆ ಈಗಿರುವ ಸವಾಲೆಂದರೆ ಮೇಲ್ಜಾತಿಗಳು, ಅತ್ಯಂತ ಹಿಂದುಳಿದ ಜಾತಿಗಳು ಮತ್ತು ನಿರ್ಬಲ ದಲಿತ ವಿಭಾಗಗಳನ್ನು ಸೇರಿಸಿ ಕಟ್ಟಿದ ಈ ಸೌಧವನ್ನು ಮುಂದಿನ ಚುನಾವಣೆಯ ವರೆಗೆ ಉಳಿಸಿಕೊಳ್ಳುವುದು ಎನ್ನುತ್ತಾರೆ ಇನ್ನೊಬ್ಬ ರಾಜಕೀಯ ವಿಶ್ಲೇಷಕರಾದ ರಾಧಿಕಾ ರಾಮಶೇಷನ್ ( ಇಪಿಡಬ್ಲ್ಯು, ಮಾರ್ಚ್ 25). 

ಈ ದಿಕ್ಕಿನಲ್ಲಿ ಬಿಜೆಪಿ ಆಗಲೇ ಹೆಜ್ಜೆಯಿಟ್ಟಿದೆ. ಹೊಸ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಬಿಜೆಪಿ ಪ್ರಣಾಳಿಕೆಯನ್ನು ಜಾರಿ ಮಾಡುವ ಹೆಸರಲ್ಲಿ  ಗೋಮಾಂಸ ನಿಷೇಧವನ್ನು ಜಾರಿಗೊಳಿಸುವ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಆರಂಭವಾಗಿವೆ, ರಾಜ್ಯದ ಹೈಕೋರ್ಟ್ ಕೂಡ ರೇಗುವಂತಾಗಿದೆ, ರೋಮಿಯೋ-ವಿರೋಧಿ ಪೋಲಿಸ್‍ಗಿರಿಯನ್ನೂ ಆರಂಭಿಸಲಾಗಿದೆ. ಆದರೆ ಆದರೆ  ಪ್ರಧಾನ ಮಂತ್ರಿಗಳು ಚುನಾವಣಾ ಪ್ರಚಾರದ ವೇಳೆಯಲ್ಲಿ ಸಾರಿ ಸಾರಿ ನೀಡಿರುವ ರೈತರ ಸಾಲಮನ್ನಾದ  ವಚನದ ನೆನಪೂ ಹೊಸ ಬಿಜೆಪಿ ಸರಕಾರಕ್ಕೆ ಇದ್ದಂತಿಲ್ಲ.

‘ಕಾಂಗ್ರೆಸ್‍ಮುಕ್ತ’ ಉತ್ತರಾಖಂಡದ ಬದಲು ‘ಕಾಂಗ್ರೆಸ್‍ಯುಕ್ತ’ ಬಿಜೆಪಿ ಸರಕಾರ 

ವಾಜಪೇಯಿ-ಅಡ್ವಾಣಿ ಕಾಲದಲ್ಲಿ ‘ಭಿನ್ನ ಮಾದರಿ ಪಕ್ಷ’ ಎಂಬ ಬಿಜೆಪಿ ಘೋಷಣೆ ಈಗ ಮೋದಿ-ಶಾ ಕಾಲದಲ್ಲಿ ‘ಕಾಂಗ್ರೆಸ್‍ಮುಕ್ತ ಭಾರತ’ ಎಂದು ಬದಲಾಗಿದೆ. ಆದರೆ ಸದ್ಯಕ್ಕಂತೂ ಅದು ಕಾಂಗ್ರೆಸ್‍ಯುಕ್ತ ಬಿಜೆಪಿಯ ಘಟ್ಟದಲ್ಲಿದೆ ಎಂದೊಬ್ಬ ರಾಜಕೀಯ ವೀಕ್ಷಕರು ಹೇಳಿದ್ದಾರೆ. ಈ ಬಾರಿ ಅದು ಭಾರೀ ವಿಜಯಗಳಿಸಿರುವ ಉತ್ತರಾಖಂಡ ಇದಕ್ಕೊಂದು ಜ್ವಲಂತ ಉದಾಹರಣೆಯಂತಿದೆ.

ಉತ್ತರಾಖಂಡ ವಿಧಾನಸಭೆಯ 70 ಸೀಟುಗಳಲ್ಲಿ ಬಿಜೆಪಿ 15ನ್ನು ಇತ್ತೀಚಿನ ವರೆಗೂ ಕಾಂಗ್ರೆಸ್‍ನಲ್ಲಿದ್ದವರಿಗೆ ಕೊಟ್ಟಿತ್ತು. ಎರಡನೇ ಸ್ಥಾನಕ್ಕಿಳಿದ ಮಣಿಪುರ ಮತ್ತು ಗೋವದಲ್ಲಿ ತಕ್ಷಣವೇ ಮುಖ್ಯಮಂತ್ರಿ ಗಳನ್ನು ಆಯ್ಕೆ ಮಾಡಿದ ಪಕ್ಷಕ್ಕೆ ಭಾರೀ ಬಹುಮತ ಪಡೆದ ಈ ರಾಜ್ಯದ ಮುಖ್ಯಮಂತ್ರಿಯನ್ನು ಆರಿಸಲು ಒಂದು ವಾರ ಬೇಕಾಯಿತು. ಕೊನೆಗೂ ಅದು ಆಯ್ಕೆ ಮಾಡಿದ ಕಟ್ಟಾ ಆರೆಸ್ಸೆಸ್ಸಿಗ ತ್ರಿವೇಂದ್ರ ಸಿಂಗ್ ರಾವತ್ ‘ಎಂದೂ ತನ್ನ ನಿಷ್ಠೆಯನ್ನು ಬದಲಿಸಿದವರಲ್ಲ’ ಎಂದು ಅವರನ್ನು ಅಭಿನಂದಿಸುತ್ತ ಕೇಂದ್ರ ಗೃಹಮಂತ್ರಿಗಳೂ ಆಗಿರುವ ಹಿರಿಯ ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಹೇಳಿರುವುದು  ಅವರ ಜತೆಗೆ ಪ್ರತಿಜ್ಞೆ ಸ್ವೀಕರಿಸಿದ ಎಂಟು ಮಂತ್ರಿಗಳಲ್ಲಿ  ಐದು ಮಂದಿ ಇನ್ನೂ ಬಹಳಷ್ಟೇನೂ ಮಾಜಿಯಾಗಿರದ ಕಾಂಗ್ರೆಸ್ ಮುಖಂಡರಾಗಿದ್ದವರು ಎಂಬಂತಹ ಸಂದರ್ಭದಲ್ಲಿ ಅರ್ಥಪೂರ್ಣ.

ಕಳೆದ ಚುನಾವಣೆಗಳಲ್ಲಿ 32 ಸಿಟುಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದ್ದ ಕಾಂಗ್ರೆಸ್ ಪಕ್ಷ ಬಿಎಸ್‍ಪಿ, ಯುಕೆಡಿ ಮತ್ತು ಪಕ್ಷೇತರರ ಬೆಂಬಲದಿಂದ ವಿಜಯ ಬಹುಗುಣ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ಕೇವಲ 1 ಸೀಟು ಕಡಿಮೆ ಗಳಿಸಿದ್ದ ಬಿಜೆಪಿ ಪ್ರತಿಪಕ್ಷವಾಗಬೇಕಾಯಿತು. ಆದರೆ 2013ರಲ್ಲಿ ರಾಜ್ಯವನ್ನು ತಲ್ಲಣಗೊಳಿಸಿದ ಪ್ರವಾಹ ಪೀಡಿತರಿಗೆ ಪರಿಹಾರ ಒದಗಿಸುವಲ್ಲಿನ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ 2014ರಲ್ಲಿ ವಿಜಯ ಬಹುಗುಣ ಸ್ಥಾನದಲ್ಲಿ ಹರೀಶ್ ರಾವುತ್ ಅವರನ್ನು ಮುಖ್ಯಮಂತ್ರ್ರ್ರಿ ಮಾಡಲಾಯಿತು. ಆ ಮಾಜೀ ಕಾಂಗ್ರೆಸ್ ಮುಖ್ಯಮಂತ್ರಿ ಮುಂದೆ ಕಾಂಗ್ರೆಸ್ ಸರಕಾರದ ವಿರುದ್ಧ ಬಂಡಾಯದ ನೇತೃತ್ವ ವಹಿಸಿದರು. ಮಾರ್ಚ್ 2016 ರಲ್ಲಿ ಬಹುಮತ ಕಳಕೊಂಡಿದೆ ಎಂದು  ಮೋದಿ ಸರಕಾರ ಹೇರಿದ ರಾಷ್ಟ್ರಪತಿ ಆಳ್ವಿಕೆಯನ್ನು ಮೇ 2016ರಲ್ಲಿ ಸುಪ್ರಿಂ ಕೋರ್ಟ್ ರದ್ದು ಮಾಡಿತು. ನಂತರ  ಭ್ರಷ್ಟಾಚಾರದ ಆಪಾದನೆ ಹೊತ್ತ ಈ ಮಾಜೀ ಕಾಂಗ್ರೆಸ್ ಮುಖ್ಯಮಂತ್ರಿಯನ್ನು  ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಸೇರಿಸಿ ‘ಶುದ್ಧೀಕgರಿಸ’ಲಾಯಿತು. ಅವರ ಜತೆಗಿನ ‘ಬಂಡಾಯಗಾರರು’ ಕೂಡ ಬಿಜೆಪಿ  ಸೇರಿ ಇದ್ದಕ್ಕಿದ್ದಂತೆ ‘ರಾಷ್ಟ್ರೀಯವಾದಿ’ಗಳಾದರು.

ಈ ಹಿನ್ನೆಲೆಯಲ್ಲಿ ನಡೆದ 2017ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಮತಗಳಿಕೆಯಲ್ಲಿ  ಆದ ಇಳಿಕೆ ಕೇವಲ 0.29%. ಆದರೆ 33.5% ಮತ ಗಳಿಸಿದರೂ ಅದರ ಸೀಟುಗಳ ಸಂಖ್ಯೆ 11ಕ್ಕೆ ಇಳಿಯಿತು. 46.5% ಮತ ಗಳಿಸಿದ ಬಿಜೆಪಿಯ ಸೀಟುಗಳ ಸಂಖ್ಯೆ 57 ಕ್ಕೇರಿತು. 7ಶೇ. ಮತಗಳಿಸಿರುವ ಬಿಎಸ್‍ಪಿ ಗೆ ಒಂದೂ ಸ್ಥಾನ ಸಿಕ್ಕಿಲ್ಲ. ಇದ್ದ 3 ಸೀಟುಗಳನನು ಕಳಕೊಂಡಿತು.

2000ದಲ್ಲಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರವಿದ್ದಾಗ ಉತ್ತರ ಪ್ರದೇಶದಿಂದ ಪ್ರತ್ಯೇಕಿಸಿ ರಚನೆಗೊಂಡ ಈ ರಾಜ್ಯದಲ್ಲಿ ಪರ್ಯಾಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಆಡಳಿತ ನಡೆಸಿವೆ.  ರಾಜ್ಯ ರಚನೆಗೊಂಡು 2002 ರಲ್ಲಿ ಮೊದಲ ವಿಧಾನಸಭಾ ಚಉನಾವಣೆಗಳು ನಡೆಯುವ ವರೆಗಿನ ಎರಡು ವರ್ಷಗಳಲ್ಲಿ ಇದು ಇಬ್ಬರು ಬಿಜೆಪಿ ಮುಖ್ಯಮಂತ್ರಿಗಳನ್ನು ಕಂಡಿತು.

2002ರಲ್ಲಿ ಕಾಂಗ್ರೆಸ್ ಸರಕಾರ ಬಂತು. 2007ರಲ್ಲಿ  ಕಾಮಗ್ರೆಸ್ ಸೋತು ಬಿಜೆಪಿ ಸರಕಾರ ಬಂತು. 2012ರಲ್ಲಿ ಅದು  ಅಧಿಕಾರ ಕಳಕೊಳ್ಳುವ ವರೆಗಿನ 5 ವರ್ಷಗಳಲ್ಲಿ 3 ಬಿಜೆಪಿ ಮುಖ್ಯಮಂತ್ರಿಗಳನ್ನು ಕಂಡಿತು. ಇಬ್ಬರನ್ನು ಭ್ರಷ್ಟಾಚಾರದ ಆರೋಪದಲ್ಲಿ ಬದಲಿಸಲಾಗಿತ್ತು. 

ಈ ಹಿನ್ನೆಲೆಯಲ್ಲಿ 2012ರಲ್ಲಿ ಬಹುಮತ ಗಳಿಸದಿದ್ದರೂ ಅತಿ ದೊಡ್ಡ ಪಕ್ಷವಾಗಿ ಸರಕಾರ ರಚಿಸಿದ ಕಾಂಗ್ರೆಸ್ ಆಳ್ವಿಕೆಯಲ್ಲೂ ಈ ರಾಜ್ಯ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿತು.

ಹೀಗೆ  ತ್ರಿವೇಂದ್ರ ಸಿಂಗ್ ರಾವತ್ ಈ ರಾಜ್ಯದ 16 ವರ್ಷಗಳ ಅಸ್ತಿತ್ವದಲ್ಲಿ 9ನೇ ಮುಖ್ಯಮಂತ್ರಿ. 

ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೆ ಪ್ರಧಾನ ಮಂತ್ರಿ ಮೋದಿಯವರ  ವರ್ಚಸ್ಸಿನ ಪೂರ್ಣ ಪ್ರಯೋಜನ ಪಡೆಯುವ ಬಿಜೆಪಿ ರಣತಂತ್ರವೇನೋ ಯಶಸ್ವಿಯಾಯಿತು. ಆದರೆ  ಈ ಬಾರಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ 4 ಮಾಜೀ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸಿನಿಂದ ಅಧಿಕಾರ ಸಿಗಲಿಲ್ಲ ಎಂದು ಪಕ್ಷಾಂತರ ಹೊಂದಿದ ಇನ್ನು ಒಬ್ಬ ಪ್ರಮುಖ ಮುಖಂಡರೂ ಇದ್ದರು. ಆದ್ದರಿಂದಲೇ ಹೊಸ ಮುಖ್ಯಮಂತ್ರಿಯ ಹೆಸರನ್ನು ಸೂಚಿಸಲು ಅದಕ್ಕೆ ಒಂದು ವಾರ ಬೇಕಾಯಿತು.  

ಆದ್ದರಿಂದ 2002-07ರ ಒಂದು ಅವಧಿಯನ್ನು ಬಿಟ್ಟು ಪ್ರತಿ ಬಾರಿಯೂ ಒಂದಕ್ಕಿಂತ ಹೆಚ್ಚು ಮುಖ್ಯಮಂತ್ರಿಗಳನ್ನು ಕಂಡಿರುವ ಈ ಪರಂಪರೆ’ಯ ಹಿನ್ನೆಲೆಯಲ್ಲಿ ನಿಷ್ಟ ಆರೆಸ್ಸೆಸ್ಸಿಗ ಭಾರೀ ಬಹುಮತ ವಿದ್ದರೂ, ಬಾರೀ ಆಂತರಿಕ ಸ್ಪರ್ಧೆಯೂ ಇರುವ ಪಕ್ಷದಿಂದ ಉತ್ತಮ ಆಳ್ವಿಕೆ ನೀಡಬಲ್ಲರೇ ಎಂಬ ಪ್ರಶ್ನೆ ಖಂಡಿತವಾಗಿಯೂ ಈ ರಾಜ್ಯದ ಜನತೆಯನ್ನು ಬಾಧಿಸುತ್ತಲೇ ಇರುತ್ತದೆ.

(ಮುಂದಿನ ವಾರ: ಮಣಿಪುರ ಮತ್ತು ಗೋವದಲ್ಲಿ ಮತದಾರರು ತಿರಸ್ಕರಿಸಿದರೂ ಬಿಜೆಪಿ ಸರಕಾರಗಳು)

2017ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಮತಗಳಿಕೆಯಲ್ಲಿ ಆದ ಇಳಿಕೆ ಕೇವಲ 0.29%. ಆದರೆ 33.5% ಮತ ಗಳಿಸಿದರೂ ಅದರ ಸೀಟುಗಳ ಸಂಖ್ಯೆ 11ಕ್ಕೆ ಇಳಿಯಿತು. 46.5% ಮತ ಗಳಿಸಿದ ಬಿಜೆಪಿಯ ಸೀಟುಗಳ ಸಂಖ್ಯೆ 57 ಕ್ಕೇರಿತು. 7 ಶೇ. ಮತಗಳಿಸಿರುವ ಬಿಎಸ್‍ಪಿ ಗೆ ಒಂದೂ ಸ್ಥಾನ ಸಿಕ್ಕಿಲ್ಲ. ಇದ್ದ 3 ಸೀಟುಗಳನ್ನು ಕಳಕೊಂಡಿತು.