ಕಲ್ಪವೃಕ್ಷದ ನಾಡು ಬರಡಾಗುತ್ತಿದೆ

ಸಂಪುಟ: 
11
ಸಂಚಿಕೆ: 
16
Sunday, 9 April 2017

ತೆಂಗನ್ನು ಬೆಳೆಯುವ ಕಲ್ಪವೃಕ್ಷದ ನಾಡು ಇಂದು ಬರಡಾಗಿ ಪರಿಣಮಿಸುತ್ತಿದೆ. ಕಳೆದ 4-5 ವರ್ಷಗಳ ನಿರಂತರ ಬರಗಾಲದಿಂದಾಗಿ ಅಂತರ್ಜಲದ ಮಟ್ಟ ತೀವ್ರ ಕುಸಿತವನ್ನು ಕಂಡು ತೆಂಗು ಸಂಪೂರ್ಣ ನಾಶದ ಹಂಚಿಗೆ ತಲುಪುತ್ತಿದೆ. ರಾಜ್ಯದಲ್ಲಿ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಹಾಸನ ಜಿಲ್ಲೆಯೂ ಒಂದು. ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ತೆಂಗನ್ನು ಪ್ರಮುಖ ತೋ ಟಗಾರಿಕಾ ಬೆಳೆಯಾಗಿ ಬೆಳೆಯಲಾಗುತ್ತದೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು ಇಂದು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಬೆಳೆ ಮೇಲೆ ಮಾಡಿದ ಸಾಲಗಳನ್ನು ತೀರಿಸಲಾಗದೆ ಆತ್ಮಹತ್ಯೆಯ ದಾರಿಯನ್ನು ತುಳಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ತೆಂಗು ಬೆಳೆಗಾರರನ್ನು ಸಂಘಟಿಸಿ ಚಳುವಳಿ ರೂಪಿಸುವ ಸಂದರ್ಭದಲ್ಲಿ ಬೆಳಕಿಗೆ ಬಂದ ಕೆಲವು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದಾಗಿದೆ.

ತೆಂಗು ಬೆಳೆಯುವ ರೈತರ ಸಂಕಷ್ಟಗಳು: 

ತೆಂಗು ತೋಟಗಾರಿಕಾ ಬೆಳೆಯಾಗಿದ್ದು ಇದು ಬಹುವಾರ್ಷಿಕ ಬೆಳೆಯಾಗಿದೆ. ಒಂದು ಭಾರಿ ತೆಂಗಿನ ಸಸಿಯನ್ನು ನೆಟ್ಟರೆ ಅದು ಫಲ ಕೊಡಲು ಕನಿಷ್ಟ 8 ವರ್ಷಗಳು ಬೇಕಾಗುತ್ತದೆ. ಮಾತ್ರವಲ್ಲ ಒಮ್ಮೆ ತೆಂಗಿನ ತೋಟವನ್ನು ಪ್ರಾರಂಭಿಸಿದರೆ ಅದು ಬೇರೆ ಬೆಳೆಗಳ ರೀತಿ ನಷ್ಟವಾಯಿತು ಎನ್ನುವ ಕಾರಣಕ್ಕಾಗಿ ಬದಲಾಯಿಸಲು ಸಾದ್ಯವಿಲ್ಲ. ತೆಂಗು, ಅಡಿಕೆ ಬೆಳೆಯುವ ರೈತರಿಗೆ ಅಥವಾ ಬಹುತೇಕ ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಇರುವ ಮೂಲಭೂತ ಸಮಸ್ಯೆಯಾಗಿದೆ. ತೆಂಗಿಗೆ ನೀರಿನ ಪೂರೈಕೆ ಬಹಳ ಮುಖ್ಯವಾಗಿದೆ. ಆದರೆ ಕಳೆದ 4-5 ವರ್ಷಗಳಿಂದ ಮಳೆ ಇಲ್ಲದೆ ತೀವ್ರ ಬರಗಾರವಿರುವುದರಿಂದ ಕೆರೆಗಳಲ್ಲಿ ನೀರಿಲ್ಲದಾಗಿದೆ ಮಾತ್ರವಲ್ಲ ಅಂತರ್ಜಲ ಬತ್ತಿ ಹೋಗಿರುವುದರಿಂದ ಕೊಳವೆ ಬಾವಿಗಳಲ್ಲೂ ನೀರು ಸಂಪೂರ್ಣ ನಿಂತು ಹೋಗಿದೆ. ಇವೆಲ್ಲವುಗಳ ನಡುವೆ ತೆಂಗಿಗೆ ಅದರದೇ ಆದ ಕೆಲವು ವಿಶೇಷ ರೋಗಗಳಾದ ನುಸಿರೋಗ, ಕಾಂಡ ಕೊರೆತ, ಕೆಂಪು ದ್ರಾವಣ ಸೂಸುವುದು ಈ ರೀತಿಯ ರೋಗಗಳಿಂದ ಮರಗಳನ್ನು ಆರೈಕೆ ಮಾಡುವುದು ರೈತರಿಗೆ ಒಂದು ಸವಾಲಿನ ಪ್ರಶ್ನೆಯಾಗಿದೆ. 

ಮಾರುಕಟ್ಟೆಯ ಸಮಸ್ಯೆ : 

ಇವೆಲ್ಲಾ ಸಮಸ್ಯೆಗಳ ನಡುವೆ ಬೆಳೆದ ಅಲ್ಪಸ್ವಲ್ಪ ಫಸಲು ಕೈಗೆ ಬಂದರೆ ಅದಕ್ಕೆ ಸರಿಯಾದ ಮಾರುಕಟ್ಟೆಯಾಗಲೀ ಅಥವಾ ನ್ಯಾಯಯುತ ಬೆಲೆಯಾಗಲಿ ಸಿಗುತ್ತಿಲ್ಲ. ಎಳನೀರು, ತೆಂಗಿನ ಕಾಯಿ ಮತ್ತು ಕೊಬ್ಬರಿ ಇವುಗಳು ಪ್ರಮುಖವಾಗಿ ಮಾರುಕಟ್ಟೆಗೆ ಬರುವ ತೆಂಗಿನ ಉತ್ಪನ್ನಗಳಾಗಿದ್ದು ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಒಂದು ಕ್ವಿಂಟಾಲ್‍ಗೆ 6000 ದಿಂದ 6500 ರೂಗಳು ಮಾತ್ರವಾಗಿದೆ. ಕೃಷಿ ತಜ್ಞರಾದ ಡಾ.ಎಂ.ಎಸ್.ಸ್ವಾಮಿನಾಥನ್ ನವರ ಆಯೋಗವು ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವಾಗ ಉತ್ಪಾದನಾ ವೆಚ್ಚದ ಜೊತೆಗೆ ಶೇ 50 ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕೆಂದು ಶಿಫಾರಸ್ಸು ನೀಡಿದ್ದಾರೆ. ಭಾತರದ ಕೃಷಿ ಉತ್ಪನ್ನಗಳ ವೆಚ್ಚವನ್ನು ಅಂದಾಜು ಮಾಡುವ ಕಮಿಷನ್ ಫಾರ್ ಅಗ್ರಿಕಲ್ಚರಲ್ ಕಾಸ್ಟ್ ಅಂಡ್ ಪ್ರೈಸ್‍ನ ಶಿಫಾರಸ್ಸು ಕರ್ನಾಟಕದಲ್ಲಿ ಸರಾಸರಿ ಅಂದಾಜು ಒಂದು ಕ್ವಿಂಟಾಲ್ ಕೊಬ್ಬರಿಯನ್ನು ಉತ್ಪಾದಿಸಲು 7,858 ರೂ ವೆಚ್ಚವಾಗುತ್ತದೆ. ಇದಕ್ಕೆ ಶೇಕಡ 50 ರಷ್ಟು ಅಂದರೆ 3,929 ನ್ನು ಸೇರಿಸಿದರೆ ಒಂದು ಕ್ವಿಂಟಾಲ್‍ಗೆ ಕೊಬ್ಬರಿಗೆ ಕನಿಷ್ಟ 11,787 ರೂ ಬೆಲೆ ನಿಗದಿಯಾಗಬೇಕು ಇದನ್ನೇ ನಾವು ಎಂಎಸ್‍ಪಿ (ಮಿನಿಮಮ್ ಸಪೋರ್ಟ್ ಪ್ರೈಸ್) ‘ಬೆಂಬಲ ಬೆಲೆ’ ಎಂದು ಕರೆಯುವುದು. ಆದರೆ ಈ ಬೆಲೆಗೂ ಇಂದು ಮಾರುಕಟ್ಟೆಯಲ್ಲಿರುವ ಬೆಲೆಗೂ ಅಜಗಜಾಂತರ ವ್ಯತ್ಯಾಸಗಳಿದ್ದು ಕರ್ನಾಟಕ ಪ್ರಾಂತ ರೈತ ಸಂಘ ಡಾ.ಸ್ವಾಮಿನಾಥನ್‍ರವರ ಶಿಫಾರಸ್ಸಿನ ಆಧಾರದ ಮೇಲೆ ಬೆಲೆ ನಿಗದಿ ಮಾಡಿ ಸರ್ಕಾರವೇ ಮಾರುಕಟ್ಟೆ ಒದಗಿಸಬೇಕೆಂದು ಒತ್ತಾಯಿಸುತ್ತದೆ.

ಕೇರಳ ಮಾದರಿಯ ಪರಿಹಾರ: 

ಇತ್ತೀಚಿನ ದಿನಗಳಲ್ಲಿ ತೆಂಗಿನ ವಿಚಾರವನ್ನು ಯಾರೇ ಮಾತನಾಡಿದರೂ ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕೆಂದು ಚರ್ಚೆಯಾಗುತ್ತಿದೆ. ಕೇರಳ ಮಾದರಿ ಬಗ್ಗೆ ಆ ರಾಜ್ಯದ ರೈತ ಮುಖಂಡರನ್ನು ಸಂಪರ್ಕಿಸಿ ಕೆಲವು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಕೇರಳದಲ್ಲಿ ಪ್ರತಿಯೊಂದು ತೆಂಗಿನ ಮರಕ್ಕೆ ಸರ್ಕಾರದಿಂದಲೇ ನೇರವಾಗಿ ವಿಮೆ ಮಾಡಿಸಲಾಗುವುದು. ಈ ವಿಮೆಯ ಪ್ರೀಮಿಯಂ ಹಣವನ್ನು ಸರ್ಕಾರವೇ ಭರಿಸುತ್ತದೆ. ವಿಮೆ ಮಾಡಿಸಿದ ಮರ ಯಾವುದೇ ಕಾರಣಗಳಿಂದ ನಾಶವಾದರೂ ಪ್ರತೀ ಮರಕ್ಕೆ 2,000 ರೂ ಪರಿಹಾರ ದೊರಕುತ್ತದೆ. ವಿಮೆ ಮಾಡಿಸದ ಮರಗಳಿಗೆ 500 ರೂ ಪರಿಹಾರ ಕೊಡಲಾಗುತ್ತಿದೆ. ಕೇರಳದಲ್ಲಿ ತೆಂಗಿನಕಾಯಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗೆ ಸರ್ಕಾರ ಪ್ರತಿ ಕಾಯಿಗೆ 3 ರೂ ಸೇರಿಸಿ ಸರ್ಕಾರಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡುತ್ತದೆ. ತೆಂಗಿನ ವ್ಯಾಲ್ಯೂ ಆಡೆಡ್ ಪ್ರಾಡೆಕ್ಟ್ ಕೈಗಾರಿಕೆಗಳಾದ ತೆಂಗಿನ ಎಣ್ಣೆ ತಯಾರಿಕೆ, ಕೊಬ್ಬರಿ ಎಣ್ಣೆ ತಯಾರಿಕೆ, ತೆಂಗಿನ ಪೌಡರ್ ತಯಾರಿಕೆ, ನಾರಿನ ವಸ್ತುಗಳ ತಯಾರಿಕೆ, ಎಳನೀರಿನ ಟೆಟ್ರಾ ಪ್ರಾಕ್ ತಯಾರಿಕೆ ಇನ್ನೂ ಮುಂತಾದ ಕೈಗಾರಿಕೆಗಳನ್ನು ಸರ್ಕಾರ ಸ್ಥಾಪಿಸುವುದರ ಜೊತೆಗೆ ರೈತರು ಸಹಕಾರಿ ಪದ್ದತಿಯ ಮೂಲಕ ಇಂತಹ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅದಕ್ಕೆ ಪ್ರೋತ್ಸಾಹಧನದ ಜೊತೆಗೆ ಮಾರುಕಟ್ಟೆಯ ಖಾತ್ರಿಯನ್ನೂ ಒದಗಿಸುತ್ತದೆ. ಕೇರಳದಲ್ಲಿ ಎಡರಂಗ ಸರ್ಕಾರ ಪೆಪ್ಸಿ, ಕೊಕ್ಕಾಕೋಲಾ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ಅದರ ಬದಲಿಗೆ ಎಳನೀರನ್ನ ಟೆಟ್ರಾ ಪ್ಯಾಕ್‍ಗಳ ಮೂಲಕ ಸರಬರಾಜು ಮಾಡುತ್ತಿದೆ. ಜೊತೆಗೆ ಪ್ರತೀ ತೆಂಗು ಬೆಳೆಗಾರರಿಗೂ ಮಾಸಿಕ ಪಿಂಚಣಿ 1100 ರೂಗಳನ್ನು ಸರ್ಕಾರ ಕೊಡುತ್ತಿದೆ. 

ತೆಂಗು ಪುನಶ್ಚೇತನವೆಂಬ ಕಣ್ಣೊರೆಸುವ ನಾಟಕ: 

ತೋಟಗಾರಿಕಾ ಇಲಾಖೆಯ ಅಂದಾಜಿನ ಪ್ರಕಾರವೇ ಹಾಸನ ಜಿಲ್ಲೆ ಒಂದರಲ್ಲೆ 66,206 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು ಇದರಲ್ಲಿ ಅರಸೀಕೆರೆ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲೇ 53,037 ಹೆಕ್ಟೇರ್ ನಷ್ಟು ತೆಂಗಿನ ಬೆಳೆ ಇದೆ. ಇದರಲ್ಲಿ ಚನ್ನರಾಯಪಟ್ಟಣ ಒಂದರಲ್ಲೇ ಸುಮಾರು 6,000 ಹೆಕ್ಟೇರ್ ಪ್ರದೇಶದಲ್ಲಿನ ತೆಂಗು ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಈ ಅಂದಾಜು ಮೂರು ತಿಂಗಳ ಹಿಂದಿನದಾಗಿದ್ದು ಈಗ ಇನ್ನೂ ಶೇ. 20 ರಷ್ಟು ಹೆಚ್ಚು ಬೆಳೆ ನಾಶವಾಗಿರಬಹುದೆಂದು ಅಧಿಕಾರಿಗಳ ಅಂದಾಜು. ಅಂದರೆ ಗ್ರಾಮ ಗ್ರಾಮಗಳಲ್ಲಿ ನಿಖರವಾದ ಸರ್ವೆಗಳನ್ನು ನಡೆಸದೆಯೇ ಮೇಲ್ಮಟ್ಟದ ಅಂದಾಜಿನಲ್ಲಿಯೇ ಪರಿಸ್ಥಿತಿ ಇಷ್ಟೊಂದು ಭೀಕರವಾಗಿರುವಾಗ ಇನ್ನು ರೈತರ ಬೇಡಿಕೆಯಂತೆ ಗ್ರಾಮವಾರು ಪ್ರತೀ ರೈತರ ತೋಟಗಳನ್ನು ಸರ್ವೆ ಮಾಡಿಸಿದರೆ ಅದರ ತೀವ್ರತೆ ಬಗ್ಗೆ ಇನ್ನೂ ಹೆಚ್ಚು ತಿಳಿಯುತ್ತದೆ. ಇದುವರೆಗೂ ನಾಶವಾಗಿರುವ ತೆಂಗು ಬೆಳೆಯನ್ನು ಪುನಶ್ಚೇತನ ಮಾಡುವ ಉದ್ದೇಶದಿಂದ ಸರ್ಕಾರ ಜಿಲ್ಲೆಗೆ 316 ಲಕ್ಷ ರೂ. ಗಳನ್ನು ಖರ್ಚು ಮಾಡಿದೆ ಎಂದು ವರದಿ ನೀಡುತ್ತದೆ. ಅದರಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ 82 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಅಂದರೆ 6,000 ಹೆಕ್ಟೇರ್ ತೆಂಗು ನಾಶವಾಗಿದ್ದರೆ ಒಂದು ಹೆಕ್ಟೇರ್‍ಗೆ ಸರಾಸರಿ 1366 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ರೈತರ ಅಂದಾಜಿನ ಪ್ರಕಾರ ಒಂದು ಹೆಕ್ಟೇರ್‍ಗೆ ಸರಾಸರಿ 125 ತೆಂಗಿನ ಮರಗಳನ್ನು ಬೆಳೆಯಬಹುದು ಅಂದರೆ ಈಗ ಸರ್ಕಾರ ತೆಂಗು ಪುನಶ್ಚೇತನಕ್ಕೆಂದು ಒಂದು ಮರಕ್ಕೆ 10 ರೂಪಾಯಿಗಳನ್ನು ಖರ್ಚು ಮಾಡಿದೆ ಇದರಿಂದ ತೆಂಗಿನ ಪುನಶ್ಚೇತನ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಸರ್ಕಾರಗಳ ಇಂತಹ ನೀತಿಗಳೇ ಇಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ರೈತರು ಸಾಲ ಮನ್ನಾ ಮಾಡಿ ಎಂದು ಬೇಡಿಕೆ ಇಟ್ಟರೆ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ದೂರು ಹೇಳುವುದು ಬಿಟ್ಟರೆ ರೈತರ ಬಗ್ಗೆ ಪ್ರಾಮಾಣಿಕ ಕಾಳಜಿಯನ್ನ ವ್ಯಕ್ತಪಡಿಸಲಿಲ್ಲ. ಬದಲಾಗಿ ಅಂತಿಮವಾಗಿ ಎರಡೂ ಸರ್ಕಾರಗಳು ರೈತರ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರಯಾಗುತ್ತದೆ ಎಂದು ಘೋಷಿಸಿವೆ. ಆದರೆ ಇಲ್ಲೊಂದು ಪ್ರಶ್ನೆ ಎಲ್ಲರನ್ನೂ ಯಾವಾಗಲೂ ಕಾಡುತ್ತಿರುತ್ತದೆ. ಅದೇನಂದರೆ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡುವಾಗ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲವೇ? 

ತೆಂಗು ಬೆಳೆಗಾರರ ಹೋರಾಟ: 

ತೆಂಗು ಬೆಳೆಗಾರರ ಸಮಸ್ಯೆ ಇಷ್ಟೊಂದು ತೀವ್ರವಾಗಿರುವುದನ್ನು ಗಮನಿಸಿದ ಕರ್ನಾಟಕ ಪ್ರಾಂತ ರೈತ ಸಂಘವು ಚನ್ನರಾಯಪಟ್ಟಣ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ತೆಂಗು ಬೆಳೆಗಾರರ ಸಮಾವೇಶವನ್ನು ಸಂಘಟಿಸಿ ಅಲ್ಲಿ ತೆಂಗು ಬೆಳೆಗಾರರ ಹೋರಾಟ ಸಮಿತಿಯನ್ನು ರಚಿಸಿ ಅದರ ನೇತೃತ್ವದಲ್ಲಿ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಏಪ್ರಿಲ್ 1ರಂದು ಚನ್ನರಾಯಪಟ್ಟಣ ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಲಾಯಿತು. ಅಂದು ನಡೆದ ಈ ಹೋರಾಟದಲ್ಲಿ ಕೆಳಕಂಡ ಹಕ್ಕೊತ್ತಾಯಗಳನ್ನು ಇಡಲಾಗಿದೆ. 

ಹಕ್ಕೊತ್ತಾಯಗಳು:  

  1. ನಷ್ಟಕ್ಕೊಳಗಾಗಿರುವ ತೆಂಗಿನ ಮರಗಳನ್ನು ಕೂಡಲೇ ನಿಖರವಾಗಿ ಸರ್ವೆ ಮಾಡಬೇಕು.
  2. ತೆಂಗು ಬೆಳೆ ನಷ್ಟ ಪರಿಹಾರವನ್ನು ಕೇರಳ ಮಾದರಿಯಲ್ಲಿ ನೀಡಬೇಕು.
  3. ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ವರ್ಷಕ್ಕೆ ಒಂದು ಭಾರಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತರಬೇಕು.
  4. ತೋಟಗಾರಿಕಾ ಇಲಾಖೆಯೇ ತೆಂಗಿನ ತೋಟಗಳಿಗೆ ಹನಿ ನೀರಾವರಿ ಪದ್ದತಿಯನ್ನು ಉಚಿತವಾಗಿ ಅಳವಡಿಸಿಕೊಡಬೇಕು.
  5. ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು.
  6. ತೆಂಗಿನ ಉತ್ಪನ್ನಗಳಾದ ತೆಂಗಿನಕಾಯಿ ಮತ್ತು ಕೊಬ್ಬರಿಗೆ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಲೆ ನಿಗದಿ ಮಾಡಿ ಸರ್ಕಾರವೇ ಮಾರುಕಟ್ಟೆ ಒದಗಿಸಬೇಕು.
  7. ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೆಂಗಿನ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸಬೇಕು.
  8. ರೈತರ ಕೊಳವೆ ಬಾವಿಗಳ ನೋಂದಣಿಯನ್ನು ಉಚಿತವಾಗಿ ಮಾಡಬೇಕು ಮತ್ತು ದಿನಪೂರ್ತಿ ವಿದ್ಯುತ್ ನೀಡಬೇಕು.
  9. ಎಲ್ಲಾ ರೈತರಿಗೂ ಬೆಳೆ ವಿಮೆ ಮತ್ತು ಬರ ಪರಿಹಾರ ನೀಡಬೇಕು.

ಎಚ್.ಆರ್.ನವೀನ್‍ಕುಮಾರ್, ಹಾಸನ