ಲಾಲ್ ಸಲಾಂ ಕಾಮ್ರೇಡ್ ಮದನ ಮಾಸ್ಟರ್

ಸಂಪುಟ: 
11
ಸಂಚಿಕೆ: 
15
Sunday, 2 April 2017

ಕಾಮ್ರೇಡ್ ಮದನ ಮಾಸ್ಟರ್ ರಿಗೆ ಅಂತಿಮ ವಿದಾಯ ನೀಡಲಾಯಿತು. ಗೇಣಿದಾರರು, ಮೂರ್ತೆದಾರರು ಗುಲಾಮರಂತೆ ಬದುಕುವ ಕಾಲಘಟ್ಟದಲ್ಲಿ ತುಳುನಾಡಿನ ಕುಗ್ರಾಮವೊಂದರಲ್ಲಿ ಹುಟ್ಟಿ (ಈಗ ಅದು ದಕ್ಷಿಣ ಕನ್ನಡದ ಗಡಿಗೆ ತಾಗಿಕೊಂಡಿರುವ ಕಾಸರಗೋಡಿನ ಗ್ರಾಮ. ಅಚ್ಚ ಕನ್ನಡನಾಡು.) ತನ್ನ ಹದಿಹರೆಯದಲ್ಲೇ ದಕ್ಷಿಣ ಕರಾವಳಿಯಲ್ಲಿ ಗೇಣಿದಾರರ ನಡುವೆ ಸಮರಶೀಲವಾಗಿ ಹುಟ್ಟಿಕೊಂಡ ಕಮ್ಯುನಿಸ್ಟ್ ಚಳವಳಿಯ ಭಾಗವಾದ ಮದನ ಮಾಸ್ಟರ್ ಪೇಟೆ ಪಟ್ಟಣಗಳ ಸಂಪರ್ಕಗಳೇ ಇಲ್ಲದ ಹಳ್ಳಿಗಾಡಿನಲ್ಲಿ ಶೋಷಿತ ಜನಕೋಟಿಗಳ ಸಂಘಟನೆಗೆ, ಅವರಿಗೆ ಓದು ಬರಹ ಕಲಿಸಲು ಟೊಂಕಕಟ್ಟಿದವರು. ಗೇಣಿದಾರರು ಜಮೀನ್ದಾರರ ವಿರುದ್ದ ಹೊಲ,ಗದ್ದೆಗಳಲ್ಲಿ ಕೆಂಬಾವುಟ ಊರಿ ದಂಗೆ ಎದ್ದಾಗ, ಅದರ ಜೊತೆಯಲ್ಲಿಯೇ ಜಮೀನ್ದಾರರ ಆಶ್ರಯದಾತರಾದ ವಸಾಹತುಶಾಹಿ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಹೋರಾಟ ನಡೆಸಿದಾಗ ಅದರ ಜೊತೆಯಲ್ಲಿದ್ದವರು ಮದನ ಮಾಸ್ಟರ್.

ಇಂಡಿಯಾದ ರಾಜಕೀಯ ಸ್ವಾತಂತ್ರ್ಯ, ಗೇಣಿದಾರರು ಭೂಮಿ ಪಡೆದದ್ದು, ಮೂರ್ತೆದಾರರು ಸ್ವಾಭಿಮಾನಿಗಳಾದದ್ದು. ಆ ನಂತರದ ದಿನಗಳಲ್ಲಿ ಕೆಂಬಾವುಟದ ಹೋರಾಟದ ದಿಂದ ಭೂಮಿಪಡೆದ ನಂತರದ ತಲೆಮಾರುಗಳು ಮತೀಯ ರಾಜಕಾರಣದ ಕಾಲಾಳುಗಳಾಗಿ ತುಳುನಾಡಿನಲ್ಲಿ ಅದೇ ಶೋಷಕ ವ್ಯವಸ್ಥೆಯ ಬಾವುಟ ಹಿಡಿದದ್ದು. ಹೀಗೆ ಒಂದು ಶತಮಾನದ ಬೆಳವಣಿಗೆ, ಪಲ್ಲಟ, ಸಾಧಕ, ಬಾಧಕಗೆಲ್ಲವುದಕ್ಕು ಸಾಕ್ಷಿಯಾಗಿ ಬದುಕಿದ ಹಿರಿಯ ಜೀವ ಕಣ್ಮರೆಯಾದ ಸಂದರ್ಭ, ವಿದಾಯದ ಮೆರವಣಿಗೆ ಈ ಕಾಲಘಟ್ಟದ ಮೌಲ್ಯಗಳನ್ನು ಸಂಕೇತಿಸುವಂತಿತ್ತು.

ಲಾಲ್ ಸಲಾಂ ಕಾಮ್ರೇಡ್ ಮದನ ಮಾಸ್ಟರ್. ನಿಮ್ಮ ಕೊಡುಗೆ, ಸಾಧನೆಗಳನ್ನು ಚಳವಳಿ ಸದಾ ನೆನಪಿಸಿಕೊಳ್ಳುತ್ತದೆ.