ನಿಮ್ಮ ಪ್ರಶ್ನೆ

ಸಂಪುಟ: 
11
ಸಂಚಿಕೆ: 
14
Sunday, 2 April 2017

ಪ್ರಶ್ನೆ: ಬಹುಜನ ಸಮಾಜ ಪಾರ್ಟಿ ನಾಯಕಿ ಮಾಯಾವತಿ ಮತ್ತು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆಯಲ್ಲಿ ವಿದ್ಯುನ್ಮಾನ ಮತಪೆಟ್ಟಿಗೆ (ಇ.ವಿ.ಎಂ.- ಇಲೆಕ್ಟ್ರಾನಿಕ್ ವೋಟಿಂಗ್ ಮಶೀನ್)ಗಳನ್ನು ಅಕ್ರಮವಾಗಿ ದುರುಪಯೋಗ ಪಡೆಯಲು ವಿರೂಪಗೊಳಿಸಲಾಗಿದೆಯೆಂದು ಅಪಾದಿಸಿದ್ದು, ಈ ಅಪಾದನೆ ಬಗ್ಗೆ ಸಿಪಿಐ(ಎಂ) ಪಕ್ಷದ ನಿಲುವೇನು?

ಇ.ವಿ.ಎಂ. ವ್ಯವಸ್ಥೆ ಹಿಂದಿನ ಮತಪತ್ರ ಆ ಧಾರಿತ ಹಿಂದಿನ ಪದ್ದತಿಗಿಂತ ಉತ್ತಮವಾಗಿದೆ. ಮತಪತ್ರಗಳನ್ನು ಅಕ್ರಮವಾಗಿ ಹಾಕುವುದು, ಬೂತ್‍ಗಳನ್ನು ಆಕ್ರಮಿಸುವುದು ಇವೆಲ್ಲ ಹಿಂದಿನ ಪದ್ಧತಿಯಲ್ಲಿ ಸುಲಭವಾಗುತಿದ್ದವು. 

ಇ.ವಿ.ಎಂ ಸ್ವತಂತ್ರವಾದ ಯಂತ್ರವಾಗಿದ್ದು ಯಾವುದೇ ಕೇಂದ್ರ ಜಾಲದ ಭಾಗವಾಗಿರುವುದಿಲ. ಆದ್ದರಿಂದ ಅವುಗಳನ್ನು ಅಕ್ರಮವಾಗಿ ವಿರೂಪಗೊಳಿಸುವುದು ಸುಲಭಸಾಧ್ಯವಲ್ಲ ಹಾಗೂ ಮಾಡಬೇಕಿದ್ದರೆ ಪ್ರತಿಯೊಂದು ಮತ ಪೆಟ್ಟಿಗೆಯಲ್ಲೂ ಅಕ್ರಮ ಸಾಫ್ಟ್‍ವೇರ್ ಇಡಬೇಕಾಗುತ್ತದೆ. ಮತ್ತು ಅದಕ್ಕೆ ಹಲವು ಮಟ್ಟದ ಅಧಿಕಾರವರ್ಗ ಮತ್ತು ಚುನಾವಣಾ ಸಿಬ್ಬಂದಿ ಶಾಮೀಲಾಗಬೇಕಾಗುತ್ತದೆ.

ಇ.ವಿ.ಎಂ.ನಲ್ಲಿ ಅಕ್ರಮ ನಡೆಸಲು ಅಭ್ಯರ್ಥಿಗಳ ಕ್ರಮಸಂಖ್ಯೆ ಗೊತ್ತಿರಬೇಕು. ಅಭ್ಯರ್ಥಿಗಳ ಅಂತಿಮಪಟ್ಟಿ ತಿಳಿಯುವುದು ಉಮೇದುವಾರಿಕೆ ಹಿಂಪಡೆಯಲು ನಿರ್ಧಾರವಾದ ದಿನಾಂಕದ ನಂತರವೇ. ಈ ಪಟ್ಟಿ ಚುನಾವಣಾ ಅಧಿಕಾರಿಗಳಿಗೆ ಲಭ್ಯವಾಗುವುದು ಕೆಲವೇ ದಿನಗಳಿರುವಾಗ. ಹೀಗಿರುವಾಗ ಅಕ್ರಮ ಸಾಫ್ಟ್‍ವೇರ್ ಬಳಸಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಸುವುದು ಹೆಚ್ಚುಕಡಿಮೆ ಅಸಾಧ್ಯ. 

ಆದರೂ ಸಂಶಯ ಮತ್ತು ಅನುಮಾನಗಳು ಪ್ರತಿ ಚುನಾವಣೆ ನಂತರ ಹಿಂದೆಯೂ ಹಲವು ಬಾರಿ ಎದ್ದಿರುವುದರಿಂದ, ಸಿಪಿಐ(ಎಂ) ಯಾವೂದಾದರೂ ಕ್ರಮದಿಂದ ಪ್ರತಿಯೋಬ್ಬ ಮತದಾರ ಮಾಡಿರುವ ಮತವನ್ನು ಪರೀಕ್ಷಿಸಲು ಅವಕಾಶವಿರಬೇಕೆಂದು ಪ್ರತಿಪಾದಿಸುತ್ತದೆ. ಇ.ವಿ.ಎಂ.ನಲ್ಲಿ ಮತದಾರನಿಗೆ ತಾನು ನೀಡಿದ ಮತ ನಿಖರವಾಗಿ ಗಣನೆಗೆ ಬರುವುದರ ಬಗ್ಗೆ ಖಾತ್ರಿಯಿರಲಿಲ್ಲ. ಚುನಾವಣಾ ಆಯೋಗದ ಮುಂದೆ ಹಲವಾರು ಪಕ್ಷಗಳು ಹಲವು ಸುತ್ತಿನ ಮಾತುಕತೆ ನಡೆಸಿ ಇ.ವಿ.ಎಂ.ನಲ್ಲಿ ಮತದಾನ ಮಾಡಿದ ನಂತರ ಮತವನ್ನು ಪೇಪರ್‍ನಲ್ಲಿ ಮುದ್ರಿಸುವ ಸೂಚನೆ ನೀಡಿರುತ್ತದೆ. 

ಇಂತಹ ವ್ಯವಸ್ಥೆ ಮತ ಇ.ವಿ.ಎಂ.ನಲ್ಲಿ ಸರಿಯಾಗಿ ದಾಖಲಿಸಲಾಗಿದೆ ಎಂಬ ಖಾತ್ರಿಯನ್ನು ಮತದಾರನಿಗೆ ನೀಡುತ್ತದೆ. ಈ ರೀತಿ ಪೇಪರ್‍ನಲ್ಲಿ ಮುದ್ರಿತವಾದ ಮತದಾನದಿಂದ ಮುಂದೆ ಉಂಟಾಗಬಹುದಾದ ವ್ಯತ್ಯಾಸಗಳು, ತಪ್ಪುಗಳನ್ನು ಪುನಃ ಪರಿಶೀಲಿಸಲು ಆಡಿಟ್ ಮಾಡುವ ಅವಕಾಶವಿರುತ್ತದೆ. ಇಂತಹ (ವಿ,ವಿ,ಪಿ.ಎ.ಟಿ. - ವೋಟರ್ ವೆರಿಫೈಡ್ ಪೇಪರ್ ಅಡಿಟ್ ಟ್ರೈಲ್) ಪೇಪರ್ ಸಹಿತ ಇ.ವಿ.ಎಂ ವ್ಯವಸ್ಥೆ, 2014 ಚುನಾವಣೆಯಲ್ಲಿ 8 ಪಾರ್ಲಿಮೆಂಟ್ ಕ್ಷೇತ್ರದಲ್ಲೂ ಮತ್ತು ಇತ್ತೀಚಿನ 5 ರಾಜ್ಯ ಚುನಾವಣೆಯಲ್ಲಿ ಗೋವಾದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಬಳಸಲಾಗಿತ್ತು.

ಚುನಾವಣಾ ಆಯೋಗ 2019 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎಲ್ಲ ಲೋಕಸಭಾ ಕ್ಷೇತ್ರದಲ್ಲೂ ಪೇಪರ್ ಸಹಿತ ಇ.ವಿ.ಎಂ ವ್ಯವಸ್ಥೆ ಲಭ್ಯವಿರುವುದಾಗಿ ತಿಳಿಸಿರುತ್ತದೆ. ಆದರೆ ಇದು ಅಸಂಭವನೀಯ.  ಏಕೆಂದರೆ ಪೇಪರ್ ಸಹಿತ ಇ.ವಿ.ಎಂ ವ್ಯವಸ್ಥೆ ಪೂರ್ಣವಾಗಿ ಒದಗಿಸಲು  ಆಯೋಗಕ್ಕೆ ಬೇಕಾಗಿರುವ ಹಣವನ್ನು ಸರ್ಕಾರ ಒದಗಿಸಿರುವುದಿಲ್ಲ. ಈ ವ್ಯವಸ್ಥೆ ಮಾಡಲು ಬೇಕಾಗಿರುವುದು ರೂ. 3100 ಕೋಟಿ. ಸಿಪಿಐ(ಎಂ) ಕೇಂದ್ರ ಸರ್ಕಾರವನ್ನು ಈ ಮೊಬಲಗನ್ನು ಚುನಾವಣಾ ಆಯೋಗಕ್ಕೆ ಬಿಡುಗಡೆ ಮಾಡಲು ಆಗ್ರಹಪಡಿಸುತ್ತದೆ. ಇದರಿಂದ ಪೂರ್ಣ ಪ್ರಮಾಣದ ಪೇಪರ್ ಸಹಿತ ಇ.ವಿ.ಎಂ ವ್ಯವಸ್ಥೆಯನ್ನು  ಅಳವಡಿಸಬಹುದು.