ಮಾರುತಿ ಸುಝುಕಿ ಕಾರ್ಮಿಕರಿಗೆ ಶಿಕ್ಷೆ: ಸರಕಾರ-ಮಾಲಕರ ದುಷ್ಟಕೂಟದ ಶಾಮೀಲು ಅಧಿಕಾರದ ದುರುಪಯೋಗದ ನಾಚಿಕೆಗೆಟ್ಟ ಪ್ರದರ್ಶನ -ಸಿಐಟಿಯು

ಸಂಪುಟ: 
11
ಸಂಚಿಕೆ: 
14
Sunday, 26 March 2017

ಮಾರುತಿ ಸುಝುಕಿ ಕಂಪನಿಯ ಮನೇಸರ್ ಸ್ಥಾವರದಲ್ಲಿ 2012ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಗುರ್‍ಗಾಂವ್‍ನ ಅಡಿಶನಲ್ ಸೆಶನ್ಸ್ ನ್ಯಾಯಾಲಯ 13 ಕಾರ್ಮಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಇನ್ನೂ ನಾಲ್ಕು ಕಾರ್ಮಿಕರಿಗೆ 5 ವರ್ಷಗಳ ಸಜೆ ವಿಧಿಸಿದೆ. ಇದು ಅತ್ಯಂತ ದುಃಖದ ಮತ್ತು ನೋವಿನ ಸಂಗತಿ ಎಂದು ಸಿಐಟಿಯು ಹೇಳಿದೆ.

ಈ ಫ್ಯಾಕ್ಟರಿಯ ಒಬ್ಬ ಮ್ಯಾನೇಜರ್ ಕೊಲೆಯಾದ 2012ರ ಹಿಂಸಾಚಾರ ಮಾಲಕರ ಬಾಡಿಗೆ ಗೂಂಡಾಗಳ ಕೃತ್ಯ, ಅವರನ್ನು ಕಾರ್ಮಿಕರ ಸಂಘಗಳನ್ನು ಮುರಿಯಲು ಆಧಾರ ಕಲ್ಪಿಸಲಿಕ್ಕಾಗಿ ಬಳಸಲಾಗಿತ್ತು. ಈ ಘಟನೆಗೆ ಯಾವ ರೀತಿಯಲ್ಲೂ ಹೊಣೆಗಾರರಲ್ಲದ ಕಾರ್ಮಿಕರನ್ನು ರಾಜ್ಯ ಆಡಳಿತ, ಪೋಲಿಸ್ ಇಲಾಖೆ ಮತ್ತು ಮಾಲಕರ ದುಷ್ಟಕೂಟ  ಸೃಷ್ಟಿಸಿದ ಸುಳ್ಳು ಸಾಕ್ಷ್ಯಗಳ ಆಧಾರದಲ್ಲಿ ಶಿಕ್ಷಿಸಲಾಗಿದೆ. ಇದು ಅಧಿಕಾರದ ದುರುಪಯೋಗದ ನಾಚಿಕೆಗೆಟ್ಟ ಪ್ರದರ್ಶನ ಎಂದು ಸಿಐಟಿಯು ಬಲವಾಗಿ ಟೀಕಿಸಿದೆ.

ಒಬ್ಬ ಮ್ಯಾನೇಜತ್ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಸತ್ತ ಈ ಘಟನೆಯಲ್ಲಿ 546 ಖಾಯಂ ಮತ್ತು ಸುಮಾರು 1800 ಕ್ಯಾಶುವಲ್ ಕಾರ್ಮಿಕರನ್ನು ಕೆಲಸದಿಂದ ಹೊರಗಟ್ಟಲಾಯಿತು, 213 ಕಾರ್ಮಿಕರ ಮೇಲೆ ಕೊಲೆ ಆಪಾದನೆ ಹಾಕಿ ಜೈಲಿಗಟ್ಟಲಾಯಿತು.  ಅವರಲ್ಲಿ 117 ಮಂದಿಯನ್ನು ನಾಲ್ಕೂವರೆ ವರ್ಷಗಳ ಜೈಲುವಾಸದ ನಂತರ ಈಗ ಖುಲಾಸೆ ಮಾಡಲಾಗಿದೆ.

ಹರ್ಯಾಣ ಸರಕಾರ ಈ ಕೇಸ್‍ಗಾಗಿ ಒಬ್ಬ ಖಾಸಗಿ ವಕೀಲ ಕೆಟಿಎಸ್‍ತುಲಸಿಗೆ ಸರ್ಕರದ ಖಜಾನೆಯಿಮದ 9 ಕೋಟಿ ರೂ. ಸಂಭಾವನೆ ನೀಡಿದೆ ಎಂದೂ ತಿಳಿದು ಬಂದಿದೆ.

ಇಷ್ಟಾದರೂ ಗುರುಗಾಂವ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಆಂದೋಲನವನ್ನು ದಮನ ಮಾಡುವ ಹರ್ಯಾಣ ಸರಕಾರ ಮತ್ತು ಬಂಡವಾಳಶಾಹಿಗಳ ಹೀನ ಶಾಮೀಲಿಗೆ ಪೂರ್ಣವಾಗಿ ಸಾಧ್ಯವಾಗಿಲ್ಲ. 

ಮಾರ್ಚ್ 16ರಂದು ಈ ಪ್ರದೇಶದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈ ತೀರ್ಪಿನ ಪ್ರತಿಭಟನಾರ್ಥ ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದರು. 

ಮಾರ್ಚ್ 18ರ ಸಂಜೆಯ ಶಿಫ್ಟ್‍ನಲ್ಲಿ ಗುರ್‍ಗಾಂವ್/ ಮಾನೇಸರ್‍ನ ಮಾರುತಿ ಮತ್ತು ಅದರ ಎಲ್ಲ ಉಪಘಟಕಗಳ ಕಾರ್ಮಿಕರು ಒಂದು ಗಂಟೆಯ ಮುಷ್ಕರ ನಡೆಸಿದರು. ಗುರ್‍ಗಾಂವ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಸಂಘಗಳು ಶಿಕ್ಷೆಗೊಳಗಾಗಿರುವ ಕಾರ್ಮಿಕರೊಂದಿಗೆ ಸೌಹಾರ್ದ ವ್ಯಕ್ತಪಡಿಸುವ ಐಕ್ಯ ಕಾರ್ಯಾಚರಣೆಗಳನ್ನು ನಡೆಸುವ ಯೋಜನೆ ರೂಪಿಸುತ್ತಿವೆ. ಇದರಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದೂ ಸೇರಿದೆ.

ಸಿಐಟಿಯು ಕಾರ್ಮಿಕರ ಈ ತಕ್ಷಣದ ಮತ್ತು ಐಕ್ಯ ಸ್ಪಂದನೆಯ ಬಗ್ಗೆ ಅವರನ್ನು ಅಭಿನಂದಿಸುತ್ತ ಕಾರ್ಮಿಕ ಆಂದೋಲನ ಈ ರೀತಿಯ ಸರಕಾರ-ಮಾಲಕ ದುಷ್ಟಕೂಟದ ದುಷ್ಟ ಕೃತ್ಯಗಳನ್ನು ಒಪ್ಪುವುದಿಲ್ಲ, ಅವುಗಳೆದುರು ತಲೆ ಬಾಗುವುದಿಲ್ಲ ಎಂದು ಎಚ್ಚರಿಸಿದೆ. 

ಅನ್ಯಾಯದ ವಿರುದ್ಧ, ಮತ್ತು ಕಾನೂನು ಸಮರ ನಡೆಸುವಲ್ಲಿಯೂ ಮಾರುತಿ ಕಾರ್ಮಿಕರ ಹೋರಾಟದೊಂದಿಗೆ ಸೌಹಾರ್ದ ವ್ಯಕ್ತಪಡಿಸುವಂತೆ ಸಿಐಟಿಯು ತನ್ನ ಎಲ್ಲ ರಾಜ್ಯಸಮಿತಿಗಳಿಗೆ, ಸಂಬದ್ಧ ಸಂಘಗಳಿಗೆ ಹಾಗೂ ಸಮಸ್ತ ಕಾರ್ಮಿಕ ಆಂದೋಲನಕ್ಕೆ ಕರೆ ನೀಡಿದೆ. 

ಭಗತ್ ಸಿಂಗ್ ಹುತಾತ್ಮ ದಿನದಂದು ಸಂಕಲ್ಪ ದಿನಾಚರಣೆ

ಬ್ರಿಟಿಶರ ಕಾಲದಲ್ಲಿ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುವ ಒಂದು ಮಸೂದೆಗೆ ಪ್ರತಿಭಟನೆಯಾಗಿ ಬಾಂಬೆಸೆದ ಭಗತ್ ಸಿಂಗ್, ಸುಖದೇವ ಮತ್ತು ರಾಜ್‍ಗುರು ಅವರು ನೇಣುಗಂಬಕ್ಕೇರಿದ ಮಾರ್ಚ್ 23ನ್ನು ಈ ವರ್ಷ ಆಳುವ ವರ್ಗಗಳ ಕಾರ್ಮಿಕ-ವಿರೋಧಿ ಧೋರಣೆಗಳ ವಿರುದ್ಧ ಹೋರಾಟ ನಡೆಸುವ ಸಂಕಲ್ಪದ ದಿನವಾಗಿ ಆಚರಿಸಲು ಸಿಐಟಿಯು ಹರ್ಯಾಣ ರಾಜ್ಯಸವಿತಿ ನಿರ್ಧರಿಸಿದೆ.

ಈಗ ಖುಲಾಸೆಯಾಗಿರುವ ಕಾರ್ಮಿರಕಿಗೆ ಪುರ್ಣ ಪರಿಹಾರ ನೀಡಬೇಕು, ಇವರು ಮತ್ತು ಆಗ ತೆಗೆದು ಹಾಕಿದ ಎಲ್ಲ ಕಾರ್ಮಿರಕನ್ನು ಮತ್ತೆ ಕೆಲಸಕ್ಕೆ ತಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.