ಯೋಗಿ ಆದಿತ್ಯನಾಥ ಆಯ್ಕೆಯ ಬಗ್ಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯ ಅಪಹಾಸ್ಯ

ಸಂಪುಟ: 
11
ಸಂಚಿಕೆ: 
14
Sunday, 26 March 2017

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರ ನೇಮಕ ಬಿಜೆಪಿಯ ಒಂದು ಆಘಾತಕಾರಿ ನಿರ್ಧಾರ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಆರೆಸ್ಸೆಸ್‍ನ ಆಯ್ಕೆಯನ್ನು ಅದರ ರಾಜಕೀಯ ಅಂಗವಾದ ಬಿಜೆಪಿ ಕಾರ್ಯಗತ ಮಾಡಿದ್ದು, ಇದು ಒಂದು ಉದ್ದೇಶಪೂರ್ವಕ ನಡೆಯಾಗಿದೆ, ರಾಜ್ಯಕ್ಕೆ ಇದು ಶುಭಸೂಚಕವಲ್ಲ ಎಂದು ಅದು ಅಭಿಪ್ರಾಯ ಪಟ್ಟಿದೆ.

ಆದಿತ್ಯನಾಥ ಒಬ್ಬ ಸುಪರಿಚಿತ ಹಿಂದುತ್ವ ಮತಾಂಧ, ಕೋಮುವಾದಿ ಹಿಂಸಾಚಾರವನ್ನು ಉದ್ರೇಕಿಸಿರುವ ದಾಖಲೆ ಹೊಂದಿರುವಾತ. ಅವರ ಮೇಲೆ ಹಲವಾರು ಕ್ರಿಮಿನಲ್ ಕೇಸುಗಳಿವೆ. ಅಲ್ಲದೆ ಆತ ಉಗ್ರ ಜಾತಿವಾದಿ ಕಣ್ಣೋಟಗಳ ವ್ಯಕ್ತಿ.ಆದಿತ್ಯನಾಥರ ಆಯ್ಕೆ ಪ್ರಧಾನ ಮಂತ್ರಿಗಳು ಸದಾ ಹೇಳಿಕೊಳ್ಳುತ್ತಿರುವ ಅಭಿವೃದ್ಧಿ ತಮ್ಮ ಅಜೆಂಡಾ ಎಂಬ ದಾವೆ ಹುಸಿಯೆಂಬುದನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಇದು ಅವರದ್ದೇ ‘ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್’(ಎಲ್ಲರೊಂದಿಗೆ, ಎಲ್ಲರ ವಿಕಾಸ) ಘೋಷಣೆಯ ಅಪಹಾಸ್ಯವಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ.

ಇಂತಹ ಸನ್ನಿವೇಶದಲ್ಲಿ, ಉತ್ತರಪ್ರದೇಶದ ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳು ಕೋಮು ಸಾಮರಸ್ಯ ಕಾಪಾಡಿಕೊಳ್ಳಲು ಮತ್ತು ಸಂವಿಧಾನ ಒದಗಿಸಿರುವ ಖಾತರಿಗಳಿಗೆ ಅನುಗುಣವಾಗಿ ಎಲ್ಲ ಜನವಿಭಾಗಗಳ ಹಕ್ಕುಗಳ ರಕ್ಷಣೆಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನೀಡಿದೆ.