ರಾಮಮಂದಿರ ವಿವಾದದ ಬಗ್ಗೆ ಮಾತುಕತೆಯ ನಿರರ್ಥಕ ಸಲಹೆ ಬೇಕಿಲ್ಲ ಸುಪ್ರಿಂ ಕೋರ್ಟ್ ತನ್ನ ಮುಂದಿರುವ ವಿಷಯದ ನ್ಯಾಯನಿರ್ಣಯ ಮಾಡಲಿ - ಸಿಪಿಐ(ಎಂ) ಪೊಲಿಟ್‍ಬ್ಯುರೊ

ಸಂಪುಟ: 
11
ಸಂಚಿಕೆ: 
14
Sunday, 26 March 2017

ದೇಶದ ಸರ್ವೋಚ್ಚ ನ್ಯಾಯಾಲಯ ಅಯೋ ಧ್ಯೆಯ ರಾಮಮಂದಿರ ವಿವಾದ ಒಂದು ‘ಸೂಕ್ಷ್ಮ’ ಮತ್ತು ‘ಭಾವನಾತ್ಮಕ’ ವಿಷಯ ಎಂದು ವರ್ಣಿಸುತ್ತ ಈ ವಿವಾದಾತ್ಮಕ ಪ್ರಶ್ನೆಯನ್ನು ಸೌಹಾರ್ಧಯುತವಾಗಿ ಇತ್ಯರ್ಥ ಮಾಡುವುದು ಅತ್ಯುತ್ತಮ ಎಂದು ಸೂಚಿಸಿದೆ. ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ ಈ ವಿವಾದದ ಬಗ್ಗೆ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುತ್ತ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠ  ಸಂಬಂಧಪಟ್ಟ ಪಾರ್ಟಿಗಳು ಒಟ್ಟಿಗೆ ಕುಳಿತು ಒಂದು ಒಮ್ಮತಕ್ಕೆ ಬರಬೇಕು, ಸುಬ್ರಮಣ್ಯ ಸ್ವಾಮಿ ಸಂಬಂಧಪಟ್ಟ ಪಾರ್ಟಿಗಳೊಂದಿಗೆ ಸಮಾಲೋಚಿಸಿ ಮಾರ್ಚ್ 31ರೊಳಗೆ ಈ ಕುರಿತ ನಿರ್ಧಾರದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿದೆ.

ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ ಎಸ್ ಖೇಹರ್ ಇನ್ನೂ ಮುಂದೆ ಹೋಗಿ ತಾನು ಈ ವಿಯದಲ್ಲಿ ಮಧ್ಯಸ್ಥಿಕೆ ನಡೆಸಲು ಸಿದ್ಧ ಎಂದೂ ಹೇಳಿದರು.

ಮುಖ್ಯ ನ್ಯಾಯಾಧೀಶರ ಸೂಚನೆ ಅನಗತ್ಯವಾದದ್ದು ಮತ್ತು ವಿವೇಕವಿಲ್ಲದ್ದು ಎಂದು ಸಿಪಿಐ(ಎಂ) ಪೊಲಿಟ್‍ಬ್ಯರೊ ಈ ಬಗ್ಗೆ ಪ್ರತಿಕ್ರಿಯಿಸುತ್ತ ಹೇಳಿದೆ. 

ಸುಪ್ರಿಂ ಕೋರ್ಟ್ ಅಲಹಾಬಾದ್ ಹೈಕೋರ್ಟಿನ ತೀರ್ಪಿನ ವಿರುದ್ಧ ಅಪೀಲುಗಳ ವಿಚಾರಣೆ ನಡೆಸಬೇಕಾಗಿದೆ. ಅದನ್ನು ಮಾಡುವ ಬದಲು ಮುಖ್ಯ ನ್ಯಾಯಾಧೀಶರು ಸಂಬಂಧಪಟ್ಟವರು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದಿರುವ ಸಿಪಿಐ(ಎಂ) ಈ ವಿಷಯದಲ್ಲಿ ಮಾತುಕತೆಗಳ ಒಂದು ದೊಡ್ಡ ಇತಿಹಾಸವೇ ಇದೆ ಎಂಬುದನ್ನು ನೆನಪಿಸಿದೆ. ಈ ಎಲ್ಲವೂ ನಿಷ್ಫಲಗೊಂಡಿವೆ. 1992ರಲ್ಲಿ ಬಾಬ್ರಿ ಮಸೀದೆಯ ಧ್ವಂಸದ ನಂತರ ಪರಿಸ್ಥಿತಿ ಬದಲಾಗಿದೆ. ಈಗ ಇನ್ನಷ್ಟು ಮಾತುಕತೆಗೆ ಅವಕಾಶವಿಲ್ಲ, ಏಕೆಂದರೆ ವಿವಾದಕ್ಕೆ ಸಂಬಂಧಪಟ್ಟ ಒಂದು ಪಕ್ಷ ಏಕಪಕ್ಷೀಯವಾಗಿ ಮಸೀದಿಯನ್ನು ಧ್ವಂಸಮಾಡುವ ಕ್ರಮ ಕೈಗೊಂಡಿದೆ. ಈಗ ಮಾತುಕತೆ ನಡೆಸಬೇಕು ಎಂದು ಉನ್ನತ ನ್ಯಾಯಾಲಯ ಸೂಚಿಸುವುದು ಹೇಗೆ ಕಾನೂನನ್ನು ಮುರಿಯಲಾಯಿತು ಮತ್ತು ಸಂವಿಧಾನವನ್ನು ತುಳಿಯಲಾಯಿತು ಎಂಬುದನ್ನು ಉಪೇಕ್ಷಿಸಿದಂತಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಸುಬ್ರಮಣ್ಯ ಸ್ವಾಮಿಗೆ ಸಂಬಂಧಪಟ್ಟವರು ಮಾತುಕತೆ ನಡೆಸಬಹುದೇ ಎಂದು ಸಮಾಲೋಚಿಸಲು ಮುಖ್ಯ ನ್ಯಾಯಾಧೀಶರು ಹೇಳಿರುವುದು ಕೂಡ ಆಕ್ಷೇಪಕಾರಿ ಸಂಗತಿ. ಮೊದಲನೆಯದಾಗಿ, ಸುಬ್ರಮಣ್ಯ ಸ್ವಾಮಿ ಈ ಕೇಸಿನ ಒಬ್ಬ ಅರ್ಜಿದಾರನಲ್ಲ. ಅಲ್ಲದೆ ಆತ ಮಸೀದಿಯನ್ನು ತೆಗೆದು ಆ ಸ್ಥಳದಲ್ಲಿ ಒಂದು ದೇವಸ್ಥಾನ ಕಟ್ಟಬೇಕು ಎಂದು ಪ್ರತಿಪಾದಿಸುವವರೆಂದು ಎಲ್ಲರಿಗೂ ಗೊತ್ತಿದೆ. 

ನ್ಯಾಯಾಂಗ ಪ್ರಕ್ರಿಯೆ ಬಾಬ್ರಿ ಮಸೀದಿಯಿದ್ದ ಭೂಮಿಯ ಒಡೆತನಕ್ಕೆ ಸಂಬಂಧಪಟ್ಟದ್ದು. ಸುಪ್ರಿಂ ಕೋರ್ಟ್ ತನ್ನ ಮುಂದಿರುವ ಈ ವಿಷಯದ ನ್ಯಾಯನಿರ್ಣಯ ಮಾಡಬೇಕು ಮತ್ತು ತನ್ನ ನ್ಯಾಯಾಂಗ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.