ಆರೋಗ್ಯ ಇಲಾಖೆಗೆ `ಯಶಸ್ವಿನಿ' ಸೇರಿಸಲು ವಿರೋಧ

ಸಂಪುಟ: 
11
ಸಂಚಿಕೆ: 
14
date: 
Sunday, 26 March 2017

ಸಹಕಾರ ಇಲಾಖೆಯಲ್ಲಿ ಈಗ ಇದ್ದು ಚೆನ್ನಾಗಿ ನಡೆಯುತ್ತಿರುವ `ಯಶಸ್ವಿನಿ' ಆರೋಗ್ಯ ಯೋಜನೆಯನ್ನು ಆರೋಗ್ಯ ಇಲಾಖೆಯ  ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ತರುವ ಸರಕಾರದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. `ಯಶಸ್ವಿನಿ' ಯೋಜನೆಯ ಫಲಾನುಭವಿಗಳಾದ ರೈತರು, ಸಹಕಾರಿ ಸಂಘಗಳು, ಸಹಕಾರ ಇಲಾಖೆ ಮತ್ತು ಹಲವು ಶಾಸಕರು ಸಹ ಈ ನಡೆಯನ್ನು ವಿರೋಧಿಸಿದ್ದಾರೆ.

ಸಹಕಾರ ಇಲಾಖೆಯಲ್ಲಿ 2003ರಿಂದ ಚೆನ್ನಾಗಿ ನಡೆಯುತ್ತಿರುವ ಮತ್ತು ಲಕ್ಷಾಂತರ ರೈತರಿಗೆ ಪ್ರಯೋಜನ ವಾಗಿರುವ ದೇಶದ ಅತಿ ದೊಡ್ಡ ಯಶಸ್ವಿ ಮಾದರಿ ಯೋಜನೆ ಆಗಿರುವ `ಯಶಸ್ವಿನಿ' ಯನ್ನು ಇಷ್ಟು ತರಾತುರಿಯಲ್ಲಿ ಆರೋಗ್ಯ ಇಲಾಖೆಯ  ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ತರುವ ಅಗತ್ಯವೇನು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಸದಸ್ಯರ ಸಂಖ್ಯೆ 40.4 ಲಕ್ಷದಿಂದ 43.71 ಲಕ್ಷಕ್ಕೆ ಏರಿದೆ. ಯಶಸ್ವಿನಿ ಸದಸ್ಯರ ಮೇಲೆ ಮಾಡಿದ ಖರ್ಚು 162.7 ಕೋಟಿ ರೂ,ನಿಂದ 293.4 ಕೋಟಿ ರೂ.ಗೆ ಏರಿತ್ತು. 

ಯಶಸ್ವಿನಿ 823 ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಕುಟುಂಬವೊಂದಕ್ಕೆ ರೂ. 2 ಲಕ್ಷ  ಕ್ಯಾಶ್ ಲೆಸ್ ಚಿಕಿತ್ಸೆ ಒದಗಿಸುವ ಯೋಜನೆ. ಕುಟುಂಬದ ಸದಸ್ಯರೊಬ್ಬರಿಗೆ ರೂ. 300 ಸದಸ್ಯತ್ವ ಶುಲ್ಕವಿರುವ ಈ ಯೋಜನೆ ಜನಪ್ರಿಯವಾಗಿದೆ. ಆದ್ದರಿಂದ ಅದರ ಸದಸ್ಯತ್ವ ಏರುತ್ತಲೇ ಇದೆ. 

ಆದರೆ ಆರೋಗ್ಯ ಇಲಾಖೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳಲ್ಲಿ - ಬಿಪಿಎಲ್ ಕುಟುಂಬಗಳಿಗೆ ಇರುವ ವಾಜಪೇಯಿ ಆರೋಗ್ಯಶ್ರೀ, ಎಪಿಎಲ್ ಕುಟುಂಬಗಳಿಗೆ ಇರುವ ರಾಜೀವ್ ಆರೋಗ್ಯ ಭಾಗ್ಯ, ಸರಕಾರಿ ನೌಕರರಿಗೆ ಇರುವ ಜ್ಯೋತಿ ಸಂಜೀವಿನಿ, ಅಫಘಾತಕ್ಕೆ ಬಲಿಯಾದವರಿಗೆ ಇರುವ ಮುಖ್ಯಮಂತ್ರಿ ಸಾಂತ್ವನ, ಕೇಂಧ್ರದ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನಾ ಸೇರಿವೆ. ಕಳೆದ ಕೆಲವು ತಿಂಗಳುಗಳಿಂದ ಕೆಲವು ಆಸ್ಪತ್ರೆಗಳು  ಸರಕಾರದಿಂದ ಹಣ ಪಾವತಿ ವಿಳಂಬವಾಗುತ್ತಿದೆ ಎಂದು ಆಪಾದಿಸಿ ಈ ಯೋಜನೆಯಡಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುತ್ತಿಲ್ಲ. ಈ ಯೋಜನೆಗಳ ಬಿಕ್ಕಟ್ಟಿಗೂ, ಯಶಸ್ವಿನಿ ಬಗೆಗೆ ಈ ನಡೆಗೂ ಏನಾದರೂ ಸಂಬಂಧವಿದೆಯೇ ಎಂದು ಹಲಲವರು ಸಂಶಯ ಪಡುತ್ತಿದ್ದಾರೆ.