ಬಿಬಿಎಂಪಿ : ಎಲ್ಲದರಲ್ಲೂ ಕಳಪೆ ಪ್ರಗತಿ

ಸಂಪುಟ: 
11
ಸಂಚಿಕೆ: 
14
date: 
Sunday, 26 March 2017

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ)  ಮಾರ್ಚ್ 25ರಂದು 2017-18ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ, ಎಲ್ಲಾ ರಂಗಗಳಲ್ಲೂ ಕಳಪೆ ಪ್ರಗತಿಯ ಚಿತ್ರಣ ಎದುರಾಗುತ್ತಿದೆ. ಒಟ್ಟಾರೆ ಸಂಪನ್ಮೂಲ ಕ್ರೋಡೀಕರಣದಲ್ಲಿ, ಆಸ್ತಿ ತೆರಿಗೆ ಸಂಗ್ರಹದಲ್ಲಿ, ಅದರ ಬಳಕೆಯಲ್ಲಿ, ಕಲ್ಯಾಣ. ಕಾರ್ಯಕ್ರಮಗಳ ಜಾರಿಯಲ್ಲಿ, ಗುತ್ತಿಗೆದಾರರ ಬಾಕಿ ಪಾವತಿಯಲ್ಲಿ ಹೀಗೆ ಎಲ್ಲಾ ರಂಗಗಳಲ್ಲೂ ಹಿಂದೆ ಬಿದ್ದಿದೆ. 

ಬಿಬಿಎಂಪಿಯು 2016-17ನೇ ಸಾಲಿನಲ್ಲಿ  9,353.1 ಕೋಟಿ (ಪರಿಷ್ಕೃತ ಅಂದಾಜಿನ ಪ್ರಕಾರ)  ಗಾತ್ರದ ಬಜೆಟ್ ಮಂಡಿಸಿತ್ತು. 9351.03 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದುವರೆಗೆ 6 ಸಾವಿರ  ಕೋಟಿಯಷ್ಟು ಸಂಪನ್ಮೂಲ ಕ್ರೋಡೀಕರಣ ಮಾತ್ರ ಸಾಧ್ಯವಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ 3,800 ಕೋಟಿ ಅನುದಾನವೂ ಸೇರಿದೆ. `ರಾಜ್ಯ ಸರ್ಕಾರ ಎರಡು ವರ್ಷಗಳಿಗೆ (2016-17 ಹಾಗೂ 2017-18ನೇ) 7,300 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಪಾಲಿಕೆಗೆ ಇದುವರೆಗೆ ಬಿಡುಗಡೆಯಾಗಿರುವುದು 1,327 ಕೋಟಿ  ಮಾತ್ರವಂತೆ. ಈ ವರ್ಷ 2,100 ಕೋಟಿ ಆಸ್ತಿ ತೆರಿಗೆ  ಸಂಗ್ರಹವಾಗಿದೆ.  ಇದರಲ್ಲಿ ಕಳೆದ ಸಾಲಿನ ಬಾಕಿ ತೆರಿಗೆ ಹಾಗೂ ಸೆಸ್ ಕೂಡಾ ಸೇರಿದೆ.  ಈ ವರ್ಷದ ಆಸ್ತಿ ತೆರಿಗೆಯ ಪಾಲು - 1,900 ಕೋಟಿ ಮಾತ್ರ ಎಂದು ವರದಿಯಾಗಿದೆ.

ಕಳೆದ ಸಾಲಿನ ಬಜೆಟ್ನಲ್ಲಿ ಮೀಸಲಿಟ್ಟಿದ್ದ ಅನುದಾನಗಳ ಪೈಕಿ  ಶೇ 40ರಷ್ಟೂ ಬಳಕೆಯಾಗಿಲ್ಲ. ಪೌರ ಕಾರ್ಮಿಕರಿಗೆ ಬಿಸಿಯೂಟ ಕಾರ್ಯಕ್ರಮವೊಂದನ್ನು ಹೊರತುಪಡಿಸಿ ಬಹುತೇಕ ಕಲ್ಯಾಣ ಕಾರ್ಯಕ್ರಮಗಳು ಇನ್ನೂ ಆರಂಭವಾಗಿಲ್ಲ. ಆರಂಭವೇ ಆಗದ ಕಾರ್ಯಕ್ರಮಗಳ ಪಟ್ಟಿ ದೊಡ್ಡದಿದೆ - ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಒದಗಿಸುವ `ನಮ್ಮ ಮನೆ' ಕಾರ್ಯಕ್ರಮ, ಹಿರಿಯ ನಾಗರಿಕರಿಗೆ ಮನೆ ನಿರ್ಮಿಸಿಕೊಡುವ `ಸಂಧ್ಯಾ ಕುಟೀರ' ಕಾರ್ಯಕ್ರಮ, ಮಹಿಳೆಯರಿಗಾಗಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ, ಬೀದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಮಾರುಕಟ್ಟೆ ವಲಯ, ಬಿಬಿಎಂಪಿ ಶಾಲೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇತ್ಯಾದಿ. 

ಬಳಕೆಯಾದ ಅನುದಾನದಲ್ಲಿ ಶೇ. 62ರಷ್ಟು  (ಅಂದರೆ ಸುಮಾರು 2282 ಕೋಟಿ ರೂ.) ಬಾಕಿ ಇರುವ ಗುತ್ತಿಗೆದಾರರ ಬಿಲ್ ಪಾವತಿಗೆ ಖರ್ಚು ಮಾಡಲಾಗಿದೆ. ಇದರಲ್ಲಿ ಕೇವಲ ಶೇ. 14ರಷ್ಟು ಮಾತ್ರ 2016-17ರ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಇದಾದ ಮೇಲೂ ಸುಮಾರು 1700 ಕೋಟಿ ರೂ.ಗಳಷ್ಟು ಗುತ್ತಿಗೆದಾರರ ಬಿಲ್ ಪಾವತಿ ಇನ್ನೂ ಬಾಕಿ ಇದೆ, ಎಂದು ಜನಾಗ್ರಹ ವೆಬ್ ಸೈಟಿನಲ್ಲಿ ಹಾಕಲಾಧ ಬಿಲ್ ರಿಜಿಸ್ಟರ್ ನ ವಿಶ್ಲೇಷಣೆ ಮಾಡಿ ಹೇಳಿದೆ.

ಇವು ಬಿಬಿಎಂಪಿಯ ಅಧಿಕೃತ ಅಂಕೆಸಂಖ್ಯೆಗಳ ಮೇಲೆ ಆಧಾರಿತವಾದವುಗಳಲ್ಲ. ಆದರೆ ವಾಸ್ತವಕ್ಕೆ ಹತ್ತಿರವಾಗಿರುವಂತಹುದು. ಬಿಬಿಎಂಪಿಯ ಬಜೆಟ್ ಹೊರ ಬಿದ್ದ ಮೇಲೆನೇ ಪೂರ್ಣ ಚಿತ್ರ ಸಿಗಲಿದೆ.