ಬಡತನ ನಿವಾರಣೆಗಾಗಿ ಇನ್ನು ಶ್ರೀಮಂತರಿಗೆ ‘ಸಹಾಯ ಹಸ್ತ’! ಮೋದಿ ಸರಕಾರದ ಇನ್ನೊಂದು ತಿರುವು-ಮುರುವು ತರ್ಕ

ಸಂಪುಟ: 
11
ಸಂಚಿಕೆ: 
14
date: 
Sunday, 26 March 2017

ಬಡವರಿಗೆ ‘ಸಹಾಯ ಹಸ್ತ’ ಚಾಚುವ ‘ಕಲ್ಯಾಣ ಕ್ರಮಗಳ ಖರ್ಚುಗಳು ಬಡವರ ಸಬಲೀಕರಣಕ್ಕೆ ಅಡ್ಡಿ ಎಂದು ಬಿಂಬಿಸುವ ಪ್ರಧಾನಿಯವರ ಮಾತುಗಳಿಗೆ ಸೈದ್ಧಾಂತಿಕ ಆಧಾರವಿಲ್ಲ. ಅದರ ಬದಲು ಕಾರ್ಪೊರೇಟ್‍ಗಳಿಗೆ ‘ಸಹಾಯ ಹಸ್ತ’ ಚಾಚಿ ಬಡವರ ಸಬಲೀಕರಣ ಮಾಡಬಹುದು ಎಂಬ ಅವರ ಇಂಗಿತ ಯಾವುದು ತನಗೆ ಹಿತವೋ ಅದರಲ್ಲೇ ಎಲ್ಲರ ಹಿತವೂ ಇದೆ ಎಂಬ ಹಣಕಾಸು ಬಂಡವಾಳದ ಸಿದ್ಧಾಂತವನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿರುವುದನ್ನೂ ತೋರಿಸುತ್ತದೆ. 

ಇಂತಹ ತಿರುವುಮುರುವುಗೊಳಿಸಿದ ತರ್ಕಗಳು ನೋಟುರದ್ಧತಿಯೊಂದಿಗೆ ಆರಂಭವಾಗಿವೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಬರಲಿವೆ.-ಪ್ರೊ. ಪ್ರಬಾತ್ ಪಟ್ನಾಯಕ್

ಇಲ್ಲಿಯವರೆಗೂ ಬಡವರಿಗೆ ‘ಸಹಾಯ ಹಸ್ತ’ ಚಾಚುವುದು ಸರ್ಕಾರದ ನೀತಿಯಾಗಿತ್ತು. ಅದರ ಬದಲಾಗಿ, ಇನ್ನುಮುಂದೆ ಬಡವರ ‘ಸಬಲೀಕರಣ’ದ  ಅವಕಾಶ ಕಲ್ಪಿಸುವುದೇ ತಮ್ಮ ಸರ್ಕಾರದ ನೀತಿಯಾಗಿರುತ್ತದೆ ಎಂಬುದಾಗಿ, ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪತ್ರಿಕೆಗಳು ಈ ಅಂಶವನ್ನು ಒತ್ತಿಹೇಳುವ ಜೊತೆಗೆ ಇದು ‘ಕಲ್ಯಾಣ’ ಪರಿಕಲ್ಪನೆಯಿಂದ ‘ಅಭಿವೃದ್ಧಿ’ಯತ್ತ ಹೊರಳುವ ಸೂಚನೆ ಎಂದು ಶ್ಲಾಘಿಸಿವೆ. ಸರ್ಕಾರದ ನೀತಿ ಇನ್ನುಮುಂದೆ ಬದಲಾಗುವ ಲಕ್ಷಣಗಳಿರುವುದರಿಂದ ಅದರ ಪರಿಣಾಮಗಳ ಪರಿಶೀಲನೆ ಅಗತ್ಯ. 

ಆಭಿವೃದ್ಧಿಗೆ ಬದಲಾಗಿ ‘ಸಹಾಯ ಹಸ್ತ’ ಚಾಚುವುದನ್ನು ಅದರತ್ತ ಕೈಯೊಡ್ಡಬೇಕಾದವರೂ ಇಷ್ಟಪಡುವುದಿಲ್ಲ ಮತ್ತು ಅದನ್ನು ಸಮರ್ಥಿಸುವವರಿಗೂ ಅದು ಮೊದಲನೆಯ ಆಯ್ಕೆಯಲ್ಲ. ಯಾವ ರೀತಿಯ ಅಭಿವೃದ್ಧಿಯ ಮೂಲಕವಾಗಿ ಬಡವರು ನಿಜಕ್ಕೂ ಏಳಿಗೆ ಹೊಂದುವಂತಹ ಅವಕಾಶಗಳನ್ನು ಕಲ್ಪಿಸಬಹುದು ಎಂಬುದೇ ಮುಖ್ಯವಾದ ವಿಷಯ. ಏಕೆಂದರೆ, ಕಳೆದ ಎರಡು ದಶಕಗಳಿಂದ ಜಾರಿಯಲ್ಲಿರುವ ನವ-ಉದಾರ ಆರ್ಥಿಕ ನೀತಿಗಳಿಂದಾಗಿ ಕೃಷಿಯೂ ಸೇರಿದಂತೆ ಕಿರು ಉತ್ಪಾದನೆ ನಶಿಸುತ್ತಿದೆ. ಮೂರು ಲಕ್ಷಕ್ಕೂ ಹೆಚ್ಚು ಮಂದಿ ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಈ ಆರ್ಥಿಕ ನೀತಿಗಳಿಂದ ಸಿಡಿದು ಹೊರ ಬರದ ಹೊರತು ಬಡವರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವ ನಿರೀಕ್ಷೆ ಅರ್ಥವಿಲ್ಲದ್ದು. ನವ-ಉದಾರ ಆರ್ಥಿಕ ನೀತಿಗಳ ಫಲಾನುಭವಿಗಳಾದ ಕಾರ್ಪೊರೇಟ್ ಕುಳಗಳೊಂದಿಗೆ ಆಪ್ತ ಸಂಬಂಧ ಹೊಂದಿರುವ ಮೋದಿಯವರು ಈ ನೀತಿಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಕಾರ್ಪೊರೇಟ್ ಕುಳಗಳಿಗೆ ಮೋದಿಯವರ ಬಗ್ಗೆ ಅದೆಷ್ಟು ಭರವಸೆ ಇದೆಯೆಂಬುದು ಚುನಾವಣಾ ಫಲಿತಾಂಶದ ನಂತರ ಷೇರು ಸೂಚ್ಯಂಕದ ಭಾರಿ ಏರಿಕೆಯಲ್ಲಿ ವ್ಯಕ್ತವಾಯಿತು.

ಕೃಷಿಗೆ ಸಂಬಂಧಿಸಿದಂತೆ, ಸಣ್ಣ ರೈತರ ಸಾಲ ಮನ್ನಾ ಮತ್ತು ಉಳಿದವರಿಗೆ ಬಡ್ಡಿ ರಹಿತ ಕೃಷಿ ಸಾಲ ಒದಗಿಸುವ ಎರಡು ಆಶ್ವಾಸನೆಗಳನ್ನು ಮೋದಿ ಕೊಟ್ಟಿದ್ದಾರೆ. ಅವೆರಡನ್ನೂ ಈಡೇರಿಸುತ್ತಾರೆಂದು ಭಾವಿಸಿ, ಅದರ ಬಗ್ಗೆ ಪರಿಶೀಲಿಸಬಹುದು. ಆದರೆ ಒಂದೇ ಒಂದು ಸಲ ಸಣ್ಣ ರೈತರ ಸಾಲ ಮನ್ನಾ ಮಾಡುವುದರಿಂದ ಕೃಷಿ ವಹಿವಾಟು ಚೇತರಿಸಿಕೊಳ್ಳುವುದಿಲ್ಲ. ಅದು ಚೇತರಿಸಿಕೊಳ್ಳಬೇಕು ಎಂದಾದರೆ, ಬೇಸಾಯ ಲಾಭದಾಯಕವಾಗುವ ಪರಿಸ್ಥಿತಿ ಮರಳಿಬರುವಂತೆ ನೋಡಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಳಿತಗಳಿಂದಾಗಿ ಕೃಷಿ ಉತ್ಪನ್ನಗಳು ಆಮದಾಗುತ್ತಿವೆ. ಈ ಆಮದುಗಳಿಂದ ರೈತರಿಗೆ ರಕ್ಷಣೆ ಒದಗಿಸಬೇಕು. ಈ ಹೊತ್ತಿನಲ್ಲಿ, ಮೋದಿಯವರ ತವರು ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರ, ಅವರೇ ಆರಿಸಿದ ಮುಖ್ಯಮಂತಿ ಇದ್ದಾಗಲೂ ಶೇಂಗಾ ಬೆಲೆ ಕುಸಿದಿದೆ. ಒಂದೇ ಒಂದು ಸಲ ಸಣ್ಣ ಪ್ರಮಾಣದ ಸಾಲ ಮನ್ನಾಮಾಡುವುದರಿಂದ ಅವರಿಗೆ ಸ್ವಲ್ಪ ನೆಮ್ಮದಿ ಸಿಗಬಹುದಲ್ಲದೆ ಕೃಷಿ ಸಮಸ್ಯೆ ಬಗೆಹರಿಯುವುದಿಲ್ಲ. ಹಿಂದೆ ಇದ್ದ ಯುಪಿಎ ಸರ್ಕಾರವೂ ಒಂದು ದೊಡ್ಡ ಪ್ರಮಾಣದ ಕೃಷಿ ಸಾಲ ಮನ್ನಾ ಮಾಡಿತ್ತು. ಅದರಿಂದಾಗಿ ಕೃಷಿ ಬಿಕ್ಕಟ್ಟು ನಿಂತಿಲ್ಲ. ಆಗಿದ್ದೇನೆಂದರೆ, 2011-12ರ ನಂತರದಲ್ಲಿ ಆಹಾರ ಧಾನ್ಯಗಳ ತಲಾ ಉತ್ಪಾದನೆಯ ಇಳಿಕೆ.

ಇನ್ನು ಬಡ್ಡಿ ರಹಿತ ಸಾಲದ ಬಗ್ಗೆ ಹೇಳುವುದಾದರೆ, ವಿದೇಶಿ ಬ್ಯಾಂಕ್‍ಗಳು ಮತ್ತು ಖಾಸಗಿ ಬ್ಯಾಂಕ್‍ಗಳು ಈಗ ಜಾರಿಯಲ್ಲಿರುವ ಆದ್ಯತಾ ವಲಯದ ಕೃಷಿಗೆ ಇಂತಿಷ್ಟು ಸಾಲ ಮಂಜೂರು ಮಾಡಬೇಕೆಂಬ ಕಟ್ಟುಪಾಡುಗಳನ್ನೇ ಯಾವ ಭಯವೂ ಇಲ್ಲದೆ ಉಲ್ಲಂಘಿಸುತ್ತಿವೆ. ಇನ್ನು ಅವು ಬಡ್ಡಿ ರಹಿತ ಸಾಲ ಕೊಡುವ ಮಾತೇ ಇಲ್ಲ. ಬಡ್ಡಿ ರಹಿತ ಸಾಲ ಕೊಡುವಂತೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಮೇಲೆ ಸರ್ಕಾರ ಒತ್ತಡ ಹಾಕಬಹುದು. ಆದರೆ, ಸರ್ಕಾರದಲ್ಲಿರುವವರ ಪ್ರೀತಿ ಪಾತ್ರ ಕಂಪೆನಿಗಳು ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ, ಸರ್ಕಾರದ ಒತ್ತಡದಿಂದಾಗಿ ಕೊಟ್ಟ ಬೃಹತ್ ಪ್ರಮಾಣದ ಸಾಲಗಳು (ಸುಮಾರು ಏಳು ಲಕ್ಷ ಕೋಟಿ ರೂಪಾಯಿಗಳು) ವಸೂಲಾಗದ ಸ್ಥಿತಿಯಲ್ಲಿವೆ. ಅದೇ ರೀತಿಯಲ್ಲಿ, ರೈತರಿಗೆ ಬಡ್ಡಿ ರಹಿತ ಸಾಲ ಕೊಡುವಂತೆ ಒತ್ತಾಯಿಸಿದರೆ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಅದೇ ಒಂದು ದೊಡ್ಡ ವಿಷಯವಾಗಬಾರದು. ಸರ್ಕಾರ ಬ್ಯಾಂಕುಗಳಿಗೆ ಹಣ ಒದಗಿಸಬೇಕು. ಆದರೆ, ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಸಗಿಯವರ ಬಂಡವಾಳದ ಪಾಲನ್ನು ಹೆಚ್ಚಿಸುವ ತರಾತುರಿಯಲ್ಲಿರುವ ಈ ಸರ್ಕಾರ, ಬ್ಯಾಂಕುಗಳ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಮುಂದಿಟ್ಟು, ಅವುಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಹುನ್ನಾರದಲ್ಲಿದೆ. ಅದು ನೆರವೇರಿದರೆ, ಬಡ್ಡಿ ರಹಿತ ಸಾಲಗಳು ಹೇಳ ಹೆಸರಿಲ್ಲದಂತಾಗುತ್ತವೆ. ರೈತರಿಗೆ ಬಡ್ಡಿ ಇಲ್ಲದೆ ಸಾಲ ಕೊಡುವ ಮೋದಿಯವರ ಆಶ್ವಾಸನೆ ಸ್ವಾಗತಾರ್ಹವಾಗಿದ್ದರೂ, ಈ ಆಶ್ವಾಸನೆಯು ಬಾಲದ ತುದಿಯಲ್ಲಿರುವ ಮುಳ್ಳಿನಂತಿದೆ.

ಇದನ್ನೇ ಇನ್ನೂ ಸರಳವಾಗಿ ಹೇಳುವುದಾದರೆ, ಬೇಸಾಯ ಲಾಭದಾಯಕವಾಗುವ ಪರಿಸ್ಥಿತಿ ಮರಳುವಂತೆ ಮಾಡದ ಹೊರತು, ಬೆಲೆ ಏರಿಳಿತಗಳಿಂದ ರೈತರಿಗೆ ರಕ್ಷಣೆ ಸಿಗದ ಹೊರತು, ಕಿರು ಉತ್ಪಾದನೆ ಮತ್ತು ಕೃಷಿ ವಲಯಗಳಲ್ಲಿ ಚೇತÀರಿಕೆಯಾಗುವುದಿಲ್ಲ ಮತ್ತು ಅವು ಚೇತರಿಸಿಕೊಳ್ಳದ ಹೊರತು ಈ ವಲಯಗಳಲ್ಲಿ ಉದ್ಯೋಗಾವಕಾಶÀಗಳು ಸೃಷ್ಠಿಯಾಗುವ ಪ್ರಶ್ನೆಯೇ ಇಲ್ಲ. ಬೇಸಾಯ ಲಾಭದಾಯಕವಾಗುವುದು, ಬೆಲೆ ಏರಿಳಿತಗಳಿಂದ ರೈತರಿಗೆ ರಕ್ಷಣೆ ಕೊಡುವುದು ಮತ್ತು ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಕ್ರಮಗಳು  ಕೃತಿಗಿಳಿಯಬೇಕಾದರೆ, ನವ-ಉದಾರ ಆರ್ಥಿಕ ನೀತಿಗಳ ಆಳ್ವಿಕೆಯ ಹಿಡಿತದಿಂದ ಬಿಡಿಸಿಕೊಳ್ಳಬೇಕಾಗುತ್ತದೆ. ಆ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಮೋದಿ ಸರ್ಕಾರಕ್ಕಿಲ್ಲ. 

ಕಿರು ಉತ್ಪಾದನೆ ಮತ್ತು ಕೃಷಿ ವಲಯಗಳು ಚೇತರಿಕೆಯಾಗುವಂತೆ ಮಾಡುವುದರ ಬದಲು ನೋಟು ರದ್ದತಿಯ ಮೂಲಕ ಮೋದಿ ಸರ್ಕಾರವು ಈ ವಲಯಗಳಿಗೆ ಮಾರಣಾಂತಿಕ ಪೆಟ್ಟು ಕೊಟ್ಟಿದೆ. ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆದ್ದಿರುವುದರಿಂದ ನೋಟು ರದ್ದತಿಯ ಆಘಾತ ಇರಲಿಲ್ಲವೆಂದಲ್ಲ. ಅದೇ ರೀತಿಯಲ್ಲಿ, ಜಿಡಿಪಿ ಬೆಳವಣಿಗೆ ದರ ಇಳಿದಿಲ್ಲ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿದರೆ ನೋಟು ರದ್ದತಿಯ ಆಘಾತ ಇರಲಿಲ್ಲವೆಂದಲ್ಲ. ನೋಟು ರದ್ದತಿ ಉಂಟುಮಾಡಿದ ರಾಜಕೀಯ ಅಡ್ಡ ಪರಿಣಾಮಗಳು ಹೆಚ್ಚಿಗೆ ಇತ್ತೊ ಅಥವಾ ಕಡಿಮೆ ಇತ್ತೊ ಎಂಬುದಕ್ಕಿಂತಲೂ ಮುಖ್ಯವಾಗಿ ಕಿರು ಉತ್ಪಾದನೆ ಮತ್ತು ಕೃಷಿ ವಲಯಗಳ ಮೇಲೆ ಅದು ನಿಸ್ಸಂಶಯವಾಗಿಯೂ ಬಲವಾದ ಪೆಟ್ಟು ಕೊಟ್ಟಿದೆ. ಮೋದಿಯವರ ತವರು ರಾಜ್ಯದಲ್ಲೇ ರೈತರು ನೋಟು ರದ್ದತಿಯ ವಿರುದ್ಧವಾಗಿ ಬೀದಿಗಿಳಿದು ಪ್ರತಿಭಟಿಸಿ ಪೋಲೀಸರ ದಬ್ಬಾಳಿಕೆ ತುತ್ತಾಗಿದ್ದಾರೆ.

ಈ ಪರಿಸ್ಥಿತಿಯಲ್ಲಿ, ಬಡವರಿಗೆ ಸಬಲೀಕರಣದ ಅವಕಾಶಗಳನ್ನು ಕಲ್ಪಿಸುವುದಾಗಿ ಮೋದಿಯವರು ಹೇಳುವಾಗ, ಅವರು ಮುಖ್ಯವಾಗಿ ಕಾರ್ಪೊರೇಟ್ ವಲಯದ ವಿಸ್ತರಣೆಯ ಮೂಲಕ ಉದ್ಯೋಗಾವಕಾಶ ಒದಗಿಸುವ ಗುರಿ ಇಟ್ಟುಕೊಂಡಿರುವುದು ಕಾಣುತ್ತದೆ. ಸಾರ್ವಜನಿಕ ವಲಯದ ವಿಸ್ತರಣೆ ಆಗಬಹುದಾದ ಯಾವ ಪ್ರಸ್ತಾಪವೂ ಈಗ ಇಲ್ಲದಿರುವುದರಿಂದ, ಮೋದಿಯವರ ನಿರೀಕ್ಷೆಯಂತೆ ಉದ್ಯೋಗಾವಕಾಶಗಳ ಸೃಷ್ಠಿ ಕಾರ್ಪೊರೇಟ್ ವಲಯದಲ್ಲೇ ಆಗಬೇಕಾಗುತ್ತದೆ. ಕಾರ್ಪೊರೇಟ್ ವಲಯದ ಮೇಲೆ ಸರ್ಕಾರ ಈ ನಿರೀಕ್ಷೆ ಇಟ್ಟುಕೊಂಡಾಗ, ಕಾರ್ಪೊರೇಟ್‍ಗಳು ಸರ್ಕಾರದಿಂದ ಹೆಚ್ಚುವರಿ ‘ಪ್ರೋತ್ಸಾಹ ಧನ’(incentives) ನಿರೀಕ್ಷಿಸುತ್ತವೆ. ಬಡವರಿಗೆ ‘ಸಹಾಯಹಸ್ತ’ ಚಾಚುವ ಪದ್ಧತಿಯನ್ನು ಬದಲಾಯಿಸುವ ಮೋದಿಯವರ ಮಾತುಗಳ ಅರ್ಥವು ಈಗ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಮಾಡುತ್ತಿರುವ ಖರ್ಚನ್ನು ನಿಲ್ಲಿಸಿ ಅದೇ ಹಣವನ್ನು ಕಾರ್ಪೊರೇಟ್ ಕುಳಗಳಿಗೆ ಹಸ್ತಾಂತರಿಸುವುದೇ ಆಗುತ್ತದೆ. ಮೋದಿಯವರ ವಿಚಾರ ಚೌಕಟ್ಟು ಮತ್ತು ಆರ್ಥಿಕ ವ್ಯವಹಾರ ಕೌಶಲ್ಯಗಳ ದೃಷ್ಟಿಕೋನದ ಮೂಲಕ ಅವರ ಈ ಮಾತುಗಳನ್ನು ಗಮನಿಸಿದಾಗ ಅವರ ನಿರ್ಧಾರದ ಬಗ್ಗೆ ಯಾರಿಗಾದರೂ ಹೊಳೆಯುವ ಅನ್ನಿಸಿಕೆ ಇದೊಂದೇ.

‘ಸಹಾಯಹಸ್ತ’ ಚಾಚುವ ವೆಚ್ಚದ  ಹಣವನ್ನು ಕಾರ್ಪೊರೇಟ್‍ಗಳಿಗೆ ಹಸ್ತಾಂತರಿಸುವ ಬಗ್ಗೆ ಇನ್ನೂ ಸ್ವಲ್ಪ ವಿವರವಾಗಿ ಪರಿಶೀಲಿಸಬಹುದು. ಇಂತಹ ಒಂದು ತಿರೋಗಾಮಿ ವರ್ಗಾವಣೆ ಆಗುತ್ತದೆ ಎಂದು ಊಹಿಸಿಕೊಳ್ಳೋಣ. ಆಗ, ಬಡವರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆಯೇ? ಮೋದಿಯವರ ಯೋಚನೆ ಸಾಕಾರಗೊಳ್ಳಬೇಕು ಎಂದಾದರೆ, ಕಾರ್ಪೊರೇಟ್‍ಗಳು ವರ್ಗಾವಣೆಯಾಗಿ ಪಡೆದ ಹಣವನ್ನು ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಕು. ಆದರೆ, ಖಾಸಗಿ ಕಾರ್ಪೊರೇಟ್‍ಗಳು ಯಾವುದೇ ವಲಯದಲ್ಲಿ ಮಾಡುವ ಹೂಡಿಕೆಯು ಆ ವಲಯದ ಉತ್ಪನ್ನಗಳಿಗೆ ಎಷ್ಟು ಬೇಡಿಕೆ ಉಂಟಾಗಬಹುದು ಎಂಬ ಅವರ ನಿರೀಕ್ಷೆಯ ಮೇಲೆ ಅವಲಂಬಿತವಾಗಿರುತ್ತದೆ. (ಒಂದು ವೇಳೆ, ಖಾಸಗಿ ಕಾರ್ಪೊರೇಟ್‍ಗಳು ಕಿರು ಉತ್ಪಾದನೆ ಮತ್ತು ಕೃಷಿ ವಲಯಗಳನ್ನು ಅತಿಕ್ರಮಿಸಿ ಅಲ್ಲಿ ಹೂಡಿಕೆಮಾಡಿದಾರೆ, ಈ ವಲಯದಲ್ಲಿರುವ ಉದ್ಯೋಗಗಳು ನಾಶವಾಗುತ್ತವೆ. ಬಡವರ ಪರಿಸ್ಥಿತಿ ಇನ್ನಷ್ಟು ಹಾಳಾಗುತ್ತದೆ. ಈ ಪರಿಸ್ಥಿತಿಯನ್ನು ವಸಾಹತುಶಾಹಿಯ ಕಾಲದಲ್ಲಿ ಉಂಟಾಗಿದ್ದ  deindustrialisation, ಅಂದರೆ ಅಕೈಗಾರೀಕರಣದ ಪರಿಸ್ಥಿತಿಗೆ ಹೋಲಿಸಬಹುದು) ಬಡವರ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿರುವ ಹಣವನ್ನು ಪ್ರೋತ್ಸಾಹ ಧನದ ಹೆಸರಿನಲ್ಲಿ ಕಾರ್ಪೊರೇಟ್‍ಗಳಿಗೆ ವರ್ಗಾಯಿಸುವ ಕ್ರಮದಿಂದಲೇ ಮಾರುಕಟ್ಟೆ ವಿಸ್ತಾರಗೊಳ್ಳುವುದಿಲ್ಲ. ಬದಲಿಗೆ, ಕುಗ್ಗುತ್ತದೆ. ಏಕೆಂದರೆ, ಒಟ್ಟಾರೆ ಬಳಕೆ(ಉಪಭೋಗ) ಕಡಿಮೆಯಾಗಿರುತ್ತದೆ. ಹಾಗಾಗಿ, ಕಾರ್ಪೊರೇಟ್‍ಗಳು ಈ ಪ್ರೋತ್ಸಾಹ ಧನವನ್ನು ನೀಟಾಗಿ ಜೇಬಿಗಿಳಿಸುತ್ತಾರೆ, ಯಾವುದೇ ಹೆಚ್ಚುವರಿ ಹೂಡಿಕೆಯನ್ನೇ ಮಾಡದೆ.

ವಾಸ್ತವವಾಗಿ, ‘ಸಹಾಯಹಸ್ತ’ ಮತ್ತು ‘ಅಭಿವೃದ್ಧಿ’ ಇವೆರಡೂ ಬೇರೆ ಬೇರೆಯೇ ಎಂದು ತಿಳಿಯುವುದೇ ಒಂದು ತಪ್ಪು. ಅವು ಬೇರೆ ಬೇರೆಯೇ ಎಂದು ಕಾರ್ಪೊರೇಟ್ ಬಂಡವಾಳ ಮತ್ತು ಅದರ ಹಿಡಿತದಲ್ಲಿರುವ ಮಾಧ್ಯಮಗಳು ತುತ್ತೂರಿ ಊದುತ್ತವೆ. ಅದೇ ಹಾಡನ್ನು ಚಾಚೂತಪ್ಪದೆ ಮೋದಿಯವರೂ ಹಾಡುತ್ತಿದ್ದಾರೆ. ಏಕೆಂದರೆ, ಅವರು ಬಡವರಿಗೆ ಸಿಗುತ್ತಿರುವ ಸಹಾಯದ್ರವ್ಯನ್ನು ಪ್ರೋತ್ಸಾಹಧನದ ಹೆಸರಿನಲ್ಲಿ ಬಂಡವಾಳಗಾರರಿಗೆ ವರ್ಗಾಯಿಸಲು ಹೊರಟಿದ್ದಾರೆ. 

ಬೇಡಿಕೆ ಹೆಚ್ಚಿದಾಗ ಮಾತ್ರ ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಏರುತ್ತದೆ. ಬಡವರ ಕಲ್ಯಾಣದ ಖರ್ಚುಗಳು ಬೇಡಿಕೆ ಹೆಚ್ಚಿಸುವ ಪಾತ್ರ ನಿರ್ವಹಿಸುತ್ತವೆ. ಜನ ಕಲ್ಯಾಣದ ಖರ್ಚು ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಿಸುವಂತಹ ಒಂದು ಸಾಧನ. ಬೇಡಿಕೆ ಹೆಚ್ಚಿದಾಗ ಹೂಡಿಕೆಯೂ ಏರುತ್ತದೆ ಮತ್ತು ಬೆಳವಣಿಗೆಯೂ ಉನ್ನತ ಮಟ್ಟದಲ್ಲಿರುತ್ತದೆ. ಜನ ಕಲ್ಯಾಣದ ಖರ್ಚು ಬೆಳವಣಿಗೆಯ ಹಾದಿಯಲ್ಲಿ ಅಡ್ಡ ನಿಲ್ಲುವುದಿಲ್ಲ. ಬೆಳವಣಿಗೆ ತರುವಲ್ಲಿ ಅದೊಂದು ಸಾಧನವಾಗುತ್ತದೆ. ಆದ್ದರಿಂದ, ಜನ ಕಲ್ಯಾಣದ ಖರ್ಚುಗಳು, ಉದ್ಯೋಗ ಸೃಷ್ಟಿಸುವ ಒಂದು ಸಾಧನ. ಅದರಿಂದಾಗಿ ಬಡವರಿಗೆ ಅವಕಾಶಗಳು ಒದಗುತ್ತವೆ. 

‘ಬಡವರಿಗೆ ಅವಕಾಶಗಳನ್ನು ಒದಗಿಸುವುದು’ ಮತ್ತು ಅವರ ಕಲ್ಯಾಣಕ್ಕಾಗಿ ಮಾಡುವ ಖರ್ಚುಗಳು, ಈ ಎರಡರಲ್ಲಿ ವ್ಯತ್ಯಾಸವಿದೆ ಎಂದು ಹೇಳುವ ಮೋದಿಯವರು ಒಂದರ ವಿರುದ್ಧ ಇನ್ನೊಂದನ್ನು ಎತ್ತಿ ಕಟ್ಟುತ್ತಿದ್ದಾರೆ. ಕಲ್ಯಾಣ ಖರ್ಚುಗಳು ಬಡವರಿಗೆ ಅವಕಾಶ ಒದಗಿಸುವಲ್ಲಿ ಅಡ್ಡ ಬರುತ್ತವೆ ಎಂದು ಹೇಳುವ ಅವರ ಮಾತುಗಳಿಗೆ ಸೈದ್ಧಾಂತಿಕ ಆಧಾರವಿಲ್ಲ. ಇದು, ಅವರಿಗೆ ಅರ್ಥಶಾಸ್ತ್ರದ ಅರಿವಿಲ್ಲ ಎಂಬುದನ್ನೂ ಮತ್ತು ಯಾವುದು ತನಗೆ ಹಿತವೋ ಅದರಲ್ಲೇ ಎಲ್ಲರ ಹಿತವೂ ಇದೆ ಎಂಬ ಹಣಕಾಸು ಬಂಡವಾಳದ ಸಿದ್ಧಾಂತವನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿರುವುದನ್ನೂ ತೋರಿಸುತ್ತದೆ. 

ವಿಚಾರಗಳನ್ನು ತಲೆ ಕೆಳಗು ಮಾಡಿ ತರ್ಕದಲ್ಲಿ ತೊಡಗುವುದು ಮೋದಿ ಸರ್ಕಾರದ ಸ್ವಭಾವದ ಹೆಗ್ಗುರುತು. ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಅನೌಪಚಾರಿಕ ವಲಯ ಮತ್ತು ಬಡವರಿಗೆ ಹೇಳತೀರದ ಉಪಟಳಕೊಟ್ಟ ನೋಟು ರದ್ದತಿಯ ಕ್ರಮವು ಶ್ರೀಮಂತರ ವಿರುದ್ಧವಾಗಿದೆ ಎಂದು ಬಿಂಬಿಸಲಾಯಿತು. ಕೆಲವು ಪತ್ರಿಕೆಗಳು ಅದನ್ನು ಶ್ರೀಮಂತರ ವಿರುದ್ಧ ಹೂಡಿದ ‘ವರ್ಗ ಸಮರ’ ಎಂದೂ ಬಣ್ಣಿಸಿದವು. ಅದೇ ರೀತಿಯಲ್ಲಿ, ಸರ್ಕಾರವು ಬಡವರ ಏಳಿಗೆಗಾಗಿ ಮಾಡುತ್ತಿರುವ ತೀರಾ ಕಡಿಮೆ ಮಟ್ಟದ ಕಲ್ಯಾಣ ಖರ್ಚುಗಳನ್ನೂ ಕತ್ತರಿಸಿ, ಅದನ್ನು ಶ್ರೀಮಂತರಿಗೆ ವರ್ಗಾವಣೆ ಮಾಡ ಬಯಸುವ ಕ್ರಮವನ್ನು ‘ಬಡವರಿಗೆ ಅವಕಾಶ ಒದಗಿಸುವ ಕ್ರಮ’ವೆಂದು ವರ್ಣಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ, ತಿರುವು-ಮುರುವಿನ ತರ್ಕಗಳು ಹೆಚ್ಚಿನ ಮಟ್ಟದಲ್ಲಿ ಎದುರಾಗಲಿವೆ. ನಾವದಕ್ಕೆ ತಯಾರಾಗಿರಬೇಕು.

(Inversion of Reason:Eradicating Poverty with Doles for the Rich  ಲೇಖನದ ಭಾವಾನುವಾದ)

- ಕೆ.ಎಂ. ನಾಗರಾಜ್