ಹುತಾತ್ಮ ದಿನಾಚರಣೆ

ಸಂಪುಟ: 
11
ಸಂಚಿಕೆ: 
14
Sunday, 26 March 2017

ಪ್ರತಿಗಾಮಿ ಶಕ್ತಿಗಳು ಕ್ರಾಂತಿಯ ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿವೆ

ಅಬಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತ್ತು ಸತ್ಯವನ್ನು ಹೇಳುವುದೇ ಅಪರಾದ ಎನ್ನುವ ಕಾಲಘಟಗಟದಲ್ಲಿ ನಾವು ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಮಾರ್ಗದಲ್ಲಿ ಹೋರಾಟ ಮಾಡಿ ಹುತಾತ್ಮರಾದ ಭಗತ್‍ಸಿಂಗ್, ರಾಜ್‍ಗುರು, ಸುಖ್‍ದೇವ್ ರವರುಗಳ ಹುತಾತ್ಮ ದಿನಾಚರಣೆಯನ್ನು ನಡೆಸುತ್ತಿದ್ದೇವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಕೆ.ದೊರೈರಾಜ್ ತಿಳಿಸಿದರು.

ಅವರು ಭಗತ್‍ಸಿಂಗ್, ರಾಜ್‍ಗುರು, ಸುಖ್‍ದೇವ್‍ರವರ ಹುತಾತ್ಮ ದಿನಾಚರಣೆಯ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ಸಂಘಟನೆಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈ ಮಹಾನ್ ನಾಯಕರು ಜಾತಿ, ಧರ್ಮಕ್ಕಾಗಿ ಹೋರಾಟ ನಡೆಸಿದವರಲ್ಲ ಇಡೀ ದೇಶದ ಜನರ ಸ್ವಾತಂತ್ರಯಕ್ಕಾಗಿ ಹೋರಾಟ ನಡೆಸಿದ ಈ ಯುವಕರು ಜಗತ್ತಿನ ನಾಯಕರು ಎಂದು ಅವರು ಭಗತ್‍ಸಿಂಗ್‍ರವರು ಹೇಳಿದಂತೆ ಕ್ರಾಂತಿ ಎಂದರೆ ಚೈತನ್ಯ ಎಂದಿದ್ದರು ಇಂದು ನಮ್ಮ ಸಮಾಜದಲ್ಲಿ ವ್ಯವಸ್ಥೆಗೆ ಹೊಂದಿಕೊಂಡು ಹೋಗುವ ಗುಣವನ್ನು ಬಂಡವಾಳಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ವ್ಯವಸ್ಥೆಯ ವಿರುದ್ದ ಬದಲಾವಣೆಗಾಗಿ ಕ್ರಾಂತಿಕಾರಿ ಹೋರಾಟ ನಡೆಸಿದ ಭಗತ್‍ಸಿಂಗ್‍ರವರ ಆದರ್ಶಗಳನ್ನು ವಿದ್ಯಾರ್ಥಿ-ಯುವಜನರು ಮೈಗೂಡಿಸಿಕೊಳ್ಳಬೇಕು ಎಂದ ಅವರು ಇಂದು ಪ್ರತಿಗಾಮಿ ಶಕ್ತಿಗಳು ಕ್ರಾಂತಿಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತವೆ ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಯುವಜನರು ಹೆಚ್ಚು ಹೆಚ್ಚು ಅಧ್ಯಯನ ಶೀಲರಾಗಬೇಕು ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ. ಎ.ಎಸ್. ಮಾತನಾಡಿ ಈ ರೀತಿಯ ಸಮಾಜಮುಖಿಯಾದ ಕೆಲಸಗಳು ಹೆಚ್ಚು ಹೆಚ್ಚು ನಡೆಯಬೇಕು, ಈ ರೀತಿಯಾಗಿ ಸಂಗ್ರಹವಾದ ರಕ್ತಗಳನ್ನು ನಾವು ಬಡಜನತೆಗೆ, ಬಾಣಂತಿಯರಿಗೆ, ನೀಡುತ್ತೇವೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‍ಮುಜೀಬ್ ಮಾತನಾಡಿ ಕ್ರಾಂತಿಕಾರಿಗಳು ಎಂದರೆ ಅಸಮಾನತೆಯ ವಿರುದ್ದ ಸಮಾನತೆಗಾಗಿ ಹೋರಾಟನಡೆಸುವವರು ಎಂದರ್ಥ. ಯಾವ ಉದ್ದೇಶಗಳನ್ನು ಇಟ್ಟು ಕೊಂಡು ಭಗತ್‍ಸಿಂಗ್ ಮತ್ತು ರಾಜ್‍ಗುರು, ಸುಖ್‍ದೇವ್‍ರವರು ನೇಣುಗಂಬ ಏರಿದರೂ ಆ ಆಶಯಗಳನ್ನು ಸರ್ಕಾರಗಳು ಇಂದು ಮೂಲೆಗುಂಪುಮಾಡುತ್ತಿವೆ. ಭಗತ್‍ಸಿಂಗ್ ಪಾರ್ಲಿಮೆಂಟ್‍ನಲ್ಲಿ ಬಾಂಬ್ ಹಾಕಿ ಒಡಿಹೋಗಲಿಲ್ಲ ಬದಲಾಗಿ ನಿಮ್ಮ ನೀತಿಗಳನ್ನು ಬದಲಾಯಿಸಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಬಂದನಕೊಳಗಾದರು. ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಜಾತಿ, ಧರ್ಮ, ಲಿಂಗತಾರತಮಮ್ಯಗಳ ವಿರುದ್ದ ವಿದ್ಯಾರ್ಥಿ-ಯುವಜನರು ಹೋರಾಟಗಳನ್ನು ನಡೆಸಬೇಕು ಎಂದರು. ಎಸ್.ಎಫ್.ಐನ ಜಿಲ್ಲಾಧ್ಯಕ್ಷ ಇ. ಶಿವಣ್ಣ ಮಾತನಾಡಿ ಸರ್ಕಾರಗಳು ವಿದ್ಯಾರ್ಥಿ-ಯುವಜನರನ್ನು ಕಡೆಗಣಿಸುತ್ತಿದ್ದು ಶಿಕ್ಷಣದ ಶುಲ್ಕಗಳನ್ನು ಹೆಚ್ಳಳಮಾಡುತ್ತಿವೆ ಈ ನೀತಿಗಳ ವಿರುದ್ದ ವಿದ್ಯಾರ್ಥಿಗಳು ಹೋರಾಟ ನಡೆಸಬೇಕು ಎಂದರು. ಡಿ.ವೈ.ಎಫ್.ಐ ನಗರಾಧ್ಯಕ್ಷ ಜಿ. ದರ್ಶನ್ ಮಾತನಾಡಿ ದೇಶದಲ್ಲಿನ ಬಡತನ ದಾರಿದ್ಯಗಳನ್ನು ಹೋಗಲಾಡಿಸಲು ಯುವಜನರು ಸಂಘಟಿತರಾಗಿ ಭಗತ್‍ಸಿಂಗ್‍ರವರ ಹಾದಿ ನಡೆಯಬೇಕು ಎಂದರು 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ ಮಾತನಾಡಿ ಅಸಮಾನತೆಯ ವಿರುದ್ದ ಸಮಾನತೆಗಾಗಿ ಹೋರಾಟ ನಡೆಸಿದ ಭಗತ್‍ಸಿಂಗ್ ಒಂದು ಕಡೆಯಾದರೆ ಶೋಷಿತ ಜನರ ಹಕ್ಕಿಗಾಗಿ  ಹೋರಾಟ ನಡೆಸಿ ಅಂಬೇಡ್ಕರ್ ಒಂದು ಕಡೆ ಇಂದು ನಮ್ಮನಾಳುತ್ತಿರುವ ಸರ್ಕಾರಗಳು ಭಗತ್‍ಸಿಂಗ್ ಮತ್ತು ಅಂಬೇಡ್ಕರ್ ಇಬ್ಬರನ್ನು ಕೇವಲ ವೋಟ್‍ಬ್ಯಾಂಕಿನ ರಾಜಕೀಯ ಮಾತ್ರ ಬಳಸಿಕೊಳ್ಳುತ್ತಿದ್ದು ಸಂವಿಧಾನದ ಯಾವ ಅಶಯಗಳನ್ನು ಈಡೇರಿಸುತ್ತಿಲ್ಲ ಎಂದ ಅವರು ಸಮಾಜವಾದಿ ರಾಷ್ಟ್ರಗಳಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಉಚಿತವಾಗಿ ನೀಡುತ್ತಿವೆ ನಮ್ಮ ದೇಶದ ಸಂವಿಧಾನ ಇವುಗಳನ್ನು ತಿಳಿಸಿದರೂ ಸಹ ಸರ್ಕಾರಗಳ ಇದರ ಜಾರಿಗೆ ಮುಂದಾಗಿಲ್ಲ ಎಂದ ಅವರು ಭಗತ್‍ಸಿಂಗ್ ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾನತೆಯ ನಾಡನ್ನು ಕಟ್ಟುವ ಕಡೆ ಯುವಜನರು ಮುಂದಾಗಬೇಕು ಎಂದರು. ಸಮುದಾಯದ ಲಕ್ಷಣ್ ಕ್ರಾಂತಿಗೀತೆ ಹಾಡಿದರು. ಡಿ.ವೈ.ಎಫ್.ಐನ  ಶರತ್‍ಕುಮಾರ್ ಸ್ವಾಗತಿಸಿ ವಂದಿಸಿದರು, ರವೀಂದ್ರ ಕಾರ್ಯಕ್ರಮ ನಿರೂಪಿಸಿದರು ಸಮಾರಂಭದಲ್ಲಿ ಸಿಐಟಿಯು ಜಿಲ್ಲಾಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಕಟ್ಟಡ ಕಾರ್ಮಿಕರ ಸಮಧ ಶ್ರೀಧರ್, ರಾಮಚಂದ್ರು ಮುಂತಾದರು ಭಾಗವಹಿಸಿದ್ದರು ನಂತರ ರಕ್ತದಾನ ಮಾಡಲಾಯಿತು.

ಭಗತ್ ಸಿಂಗ್‍ರ ಸಮಾಜವಾದಿ ಆಶಯಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಸಂಘಟಿತರಾಗಿ ಹೋರಾಟ ನಡೆಸಬೇಕು - ಪೀರು ರಾಠೋಡ

ಕ್ರಾಂತಿಕಾರಿಗಳಾದ ಹುತಾತ್ಮ ಭಗತ್ ಸಿಂಗ, ರಾಜಗುರು, ಹಾಗೂ ಸುಖದೇವ ರವರ ಸಮಾನತೆಯ ಸಮಾಜವಾದಿ ಪ್ರಜಾಪ್ರಭುತ್ವವನ್ನು ಕಟ್ಟಲು ವಿದ್ಯಾರ್ಥಿಗಳು ಎಸ್.ಎಫ್.ಐ ಸಂಘಟನೆ ಸೇರಿ ಹೋರಾಟ ನಡೆಸುವ ಮೂಲಕ ಆಶಯು ಈಡೇರಿಸಲು ಮುಂದಾಗಬೇಕು ಎಂದು ಎಸ್.ಎಫ್.ಐ ನ ಮಾಜಿ ಮುಖಂಡರಾದ ಪೀರು ರಾಠೋಡ ಹೇಳಿದರು.  

ಗದಗ ನಗರದ ಸರಕಾರಿ ಪದವಿ ಕಾಲೇಜಿನಲ್ಲಿ  ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಗದಗ ತಾಲ್ಲೂಕಾ ಸಮಿತಿ ಹಮ್ಮಿಕೊಂಡಿದ್ದ  ಕ್ರಾಂತಿಕಾರಿಗಳಾದ ಹುತಾತ್ಮ ಭಗತ್ ಸಿಂಗ, ರಾಜಗುರು, ಹಾಗೂ ಸುಖದೇವ ರವರ ಹುತಾತ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಗತ್‍ಸಿಂಗರವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದವರು. ದೇಶಕ್ಕೆ ಸಮಾಜವಾದಿ ಸಿಧ್ಧಾಂತದ ಸ್ವಾತಂತ್ರ್ಯ ಸಿಗಬೇಕು ಆ ಮೂಲಕ ಎಲ್ಲರಿಗೂ ಸಮಾನ ರೀತಿಯ ಆವಕಾಶ ಸಿಗಬೇಕು ಎಂದು ಹೋರಾಟ ನಡೆಸಿದವರು. ಅವರ ಪ್ರಕಾರ ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಎಂದಾದರೆ ಜನರ ಸ್ಥಿತಿ ಹಾಗೆಯೆ ಉಳಿಯುತ್ತದೆ. ಪುರಾತನ ಶೋಷಕ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾವಣೆಯೇ ನಿಜವಾದ ಸ್ವಾತಂತ್ರ್ಯ ಎಂದುಕೊಂಡವರು. ಪ್ರಗತಿಪರ ಆಶಯಗಳನ್ನು, ಜಾತ್ಯಾತೀತ ನಿಲುವನ್ನು ಇಟ್ಟುಕೊಂಡು ರಾಷ್ಟ್ರದ ಐಕ್ಯತೆಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ದುಡಿಯುತ್ತಿರುವ ಏಕಮಾತ್ರ ವಿದ್ಯಾರ್ಥಿ ಸಂಘಟನೆ  ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಎಂದು ಹೆಮ್ಮೆಯಿಂದ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕುಟುಂಬದಿಂದ ಬಂದ ಭಗತ್‍ಸಿಂಗ ತನ್ನ ಹನ್ನೆರಡನೇ ವಯಸ್ಸಿನಲ್ಲಿಯೇ ಶಾಲೆಯನ್ನು ತೊ ರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಈಡೀ ಜೀವನವನ್ನೆ ಸ್ವಾತಂತ್ರ್ಯಕ್ಕಾಗಿ ಮುಡಿಪಿಟ್ಟರು. ಆದರೆ ಈಗ ಸಿಕ್ಕಿರುವ ಸ್ವಾತಂತ್ರ್ಯ ಟಾಟಾ-ಬಿರ್ಲಾ ಅಂತಹವರಿಗೆ ಸಿಕ್ಕಿದೆ. ದೇಶದ ಜನ ಸಾಮಾನ್ಯರಿಗೆ ಅಲ್ಲ ಹಾಗಾಗಿ ತಾವೆಲ್ಲರೂ ಜನ ಸಾಮಾನ್ಯರಿಗೆ ನಿಜವಾದ ಭಗತ್‍ಸಿಂಗ್ ಆಶಯದ ಸ್ವಾತಂತ್ರಕ್ಕಾಗಿ ಹೋರಾಡ ಬೇಕು. ಆದರೆ ಇಂದು ಕೆಲವು ಕೋಮುವಾದಿ ಸಂಘಟನೆಗಳು ಹಾಗೂ ಪಕ್ಷಗಳು ಹುಸಿ ದೇಶ ಪ್ರೇಮವನ್ನು ಮೆರೆಸಿ ಈ ದೇಶದ ಜನರ ನಿಜವಾದ ದೇಶ ಪ್ರೇಮವನ್ನು ದೇಶದ್ರೋಹಕ್ಕೆ ಹೋಲಿಸುತ್ತಿರುವುದು ಖಂಡನೀಯ. ಆಡಳಿತರೂಢ ಪಕ್ಷದ ನೀತಿಯನ್ನು ವಿರೋಧಿಸಿದವರು ದೇಶದ್ರೋಹಿಗಳು, ಆಡಳಿತರೂಢ ಪಕ್ಷದ ನೀತಿಯನ್ನು ಬೆಂಬಲಿಸುವವರು ದೇಶಪ್ರೇಮಿಗಳು ಎಂದು ಸರ್ಟಿಫೀಕೇಟನ್ನು ನೀಡುವುದನ್ನು ನೋಡಿದರೆ ಮುಂದೊಂದು ದಿನ ಇವರು ಹಿಟ್ಲರನಂತೆ ವರ್ತಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ನಂತರ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಗದಗ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶಿವಾನಂದ ಬೋಸ್ಲೆ  ಮಾತನಾಡಿ ಭಗತ್‍ಸಿಂಗ್, ರಾಜಗುರು, ಸುಖದೇವರ ಆದರ್ಶಗಳನ್ನು ಎಲ್ಲಾ ವಿದ್ಯಾರ್ಥಿಗಳನ್ನು ಮೈಗೂಡಿಸಿಕೊಂಡು ಹುಸಿ ದೇಶ ಪ್ರೇಮದ ಬಗ್ಗೆ ಪ್ರಚಾರ ಮಾಡುತ್ತಿರುವವರ ವಿರುದ್ಧ ಹೋರಾಟ ನಡೆಸಿ ಈ ದೇಶದ ನಿಜವಾದ ದೇಶ ಪ್ರೇಮ ಜನಸಾಮಾನ್ಯರ ಅಭಿವೃದ್ಧಿಯಲ್ಲಿದೆ ಎಂದು ಹೇಳಿದ

ಭಗತ್ ಸಿಂಗ ಅವರು ಕೋರ್ಟನಲ್ಲಿ ನಿಂತಾಗ ಬ್ರೀಟಿಷರು ಹೇಳಿದ ಮಾತೆನೆಂದರೆ ನೀನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡರೆ ನಿನ್ನನ್ನು ಬಿಟ್ಟು ಬಿಡುತ್ತೆನೆ ಎಂದಾಗ ಭಗತ್‍ಸಿಂಗ ನಾನು ಯಾವುದೇ ಕಾರಣಕ್ಕೂ ತಪ್ಪು ಮಾಡಿಲ್ಲ ನಿಮ್ಮನ್ನು ದೇಶದಿಂದ ಹೊರಹಾಕಲು ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದ ಮಹಾನ್ ನಾಯಕ ಹುತಾತ್ಮ ಭಗತ್ ಸಿಂಗ. ಆದರೆ ಇಂದು ಭಗತ್ ಸಿಂಗ ಕನಸುಗಳು ಈಡೇರುತ್ತಿಲ್ಲ. ದೇಶದ ಸ್ವಾತಂತ್ರ್ಯ ಭ್ರಷ್ಠರಿಗೆ, ಅಧಿಕಾರಿಗಳ ಕೈಯಲ್ಲಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಇವತ್ತಿನ ರಾಜಕೀಯ ಶಿಕ್ಷಣವನ್ನು ಮಾರಾಟದ ಸರಕಾಗಿಸಿದೆ. ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬ ನೀತಿ ತರುತ್ತಿವೆ, ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿವೆ. ಸರ್ಕಾರಿ ಶಾಲಾ-ಕಾಲೇಜು-ಹಾಸ್ಟೆಲುಗಳಿಗೆ ಮೂಲಭೂತ ಸೌಕರ್ಯ ನೀಡದೇ ಬಡ-ಮಧ್ಯಮ-ಅಲ್ಪಸಂಖ್ಯಾತ-ದಲಿತ ವಿದ್ಯಾರ್ಥಿಗಳನ್ನು ವಂಚಿಸುತ್ತಿವೆ. ಜೊತೆಗೆ ಶಿಕ್ಷಣ ಹೊಂದಿದ ಯುವಕರಿಗೆ ಉದ್ಯೋಗ ನೀಡದೇ ನಿರುದ್ಯೋಗಿಗಳನ್ನಾಗಿ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಜೊತೆಗೆ ಸಮಸಮಜಕ್ಕಾಗಿ ವಿದ್ಯಾರ್ಥಿಗಳು ಹೋರಾಟಕ್ಕೆ ಮಂಂದಾಗಬೇಕು ಹಾಗೂ ಅನ್ಯಾಯದ ವಿರುಧ್ಧ ಹೋರಾಟ ನಡೆಸುವ ಮೂಲಕ ನ್ಯಾಯ ಪಡೆದುಕೊಳ್ಳಲು ಕರೆ ನೀಡಿದರು.

ಭಗತ್‍ಸಿಂಗ್ ಬಾಲ್ಯದಲ್ಲಿಯೆ ಸ್ವಾತಂತ್ರ್ಯ ಹೋರಾಟ ಆರಂಭಸಿದ ಧೃವತಾರೆ

ಹಾವೇರಿ: ಭಗತ್‍ಸಿಂಗ್ ಒಬ್ಬ ಅಪ್ರತಿಮ ದೇಶ ಪ್ರೇಮಿ, ದೇಶದ ಸ್ವಾತಂತ್ರ್ಯ ಹೋರಾಟದ ಧೃವತಾರೆ ಇಂದಿನ ಯುವ ಪೀಳಿಗೆಯ ಆದರ್ಶ, ಸ್ಫೂರ್ತಿಯ ನಾಯಕ ಎಂದು ಕಾರ್ಮಿಕ ಮುಖಂಡರಾದ ನಾರಾಯಣ ಕಾಳೆ ಹೇಳಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿಯು ನಗರದ ಟಿಎಂಎಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಭಗತ್‍ಸಿಂಗ್ ಮತ್ತು ಮೈಲಾರ ಮಹದೇವಪ್ಪನವರ ಹುತಾತ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ನಡೆಸುತ್ತಿರುವ ಬೀದಿ ನಾಟಕದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು.

ಭಗತ್‍ಸಿಂಗ್ 1919 ರಲ್ಲಿ ಜಲಿಯನ್ ವಾಲಾಭಾಗನಲ್ಲಿ ಡಯರ್ ಎಂಬ ಬ್ರಿಟಿಷ್ ಸೇನಾಧಿಕಾರಿ ನೀಡಿದ ಆದೇಶ 1560 ಸುತ್ತು ಗುಂಡುಗಳ ಹಾರಿಸಿ ಕೇವಲ 10 ನಿಮಿಷದಲ್ಲಿ 1516 ಜನ ಅಸುನೀಗಿದರು ಈ ಘಟನೆ ಭಗತ್‍ಸಿಂಗ್‍ರವರಲ್ಲಿ ಬಹಳ ಪರಿಣಾಮ ಬೀರಿತು, ಈ ಘಟನೆ ನಡೆದಾಗ ಭಗತ್‍ಸಿಂಗ್ ಶಾಲಾ ಬಾಲಕ ವಯಸ್ಸು ಕೇವಲ 12 ಆಗಿತ್ತು. ದೇಶದ ಸ್ವತಂತ್ರ್ಯ ಚಳುವಳಿಗೆ ತನ್ನದೆ ಆದ ಕೊಡುಗೆ ನೀಡಿದ ಭಗತ್‍ಸಿಂಗ್ ಮತ್ತು ಆತನ ಸಂಗಾತಿಗಲಾದ ರಾಜಗುರು, ಸುಖದೇವ್ ಸ್ವತಂತ್ರ ಭಾರತದ ಕನಸು ಕಂಡವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಷಿಯೇಶನ್‍ನನ್ನು ಕಟ್ಟಿದ ಭಗತ್ ಸಮಾಜವಾದಿ ರಾಷ್ಟ್ರ ನಿರ್ಮಾಣದ ಕನಸು ಹೊತ್ತವನು ಎಂದು ಹೇಳಿದರು.

ನಮ್ಮ ನೆಲದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಕೂಡಾ ದೇಶದ ಸ್ವಾತಂತ್ರ್ಯ ಚಳುವಳಿಯ ಒಂದು ಭಾಗವಾದವರು, ಅಹಿಂಸಾ ಮಾರ್ಗದ ಮೂಲಕ ಗಾಂಧಿಜಿಯವರ ತತ್ವದಲ್ಲಿ ನಂಬಿಕೆ ಇಟ್ಟವರು, 1943 ಎಪ್ರಿಲ್ 1 ರಂದು ಬ್ರಿಟಿಷ್ ಪೋಲಿಸ್‍ರ ಗುಂಡಿಗೆ ತಮ್ಮ ಎದೆಯನ್ನು ಒಡ್ಡಿ ಹುತಾತ್ಮರಾದ ಸಂಗಾತಿಗಳು. ಗಾಂಧಿಜಿ ಕರೆ ಕೊಟ್ಟಿದ್ದ ಚಲೇಜಾವ್ ಚಳುವಳಿ, ದಾಂಡಿ ಯಾತ್ರೆಯಲ್ಲಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಬಾಗವಹಿಸಿದ ಹೋರಾಟಗಾರ ಮೈಲಾರ ಮಹದೇವಪ್ಪ ದೇಶದ ಸ್ವತಂತ್ರ ಚಳುವಳಿಗೆ ತಮ್ಮ ಪ್ರಾಣ ಅರ್ಪಣೆ ಮಾಡಿದಾಗ ಅವರ ವಯಸ್ಸು ಕೇವಲ 32 ಆಗಿತ್ತು. ಅಲ್ಪ ವಯಸಿನಲ್ಲಿಯೆ ಮಹಾನ್ ತ್ಯಾಗ ಮಾಡಿದ ಹುತಾತ್ಮರನ್ನು ನೆನೆಯಬೇಕು ಎಂದರು.

ಕಲಾವಿದ ಬಸವರಾಜ ಶಿಗ್ಗಾಂವಿ ಮಾತನಾಡಿದರು, ವೇದಿಕೆ ಮೇಲೆ ಕಾಲೇಜಿನ ಸಿಬ್ಬಂದಿ ವಿಜಯಕುಮಾರ, ಎಸ್‍ಎಫ್‍ಐ ಅಖಿಲ ಭಾರತ ಮುಖಂಡರಾದ ರೇಣುಕಾ ಕಹಾರ ಉಪಸ್ಥಿತರಿದ್ದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ ಆಶಯಗಳನ್ನು ಜಾರಿ ಮಾಡಲು ನಾವೆಲ್ಲ ಪಣ ತೊಡಬೇಕು ಎಂದು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಸುವ ಮೂಲಕ ಎಸ್‍ಎಫ್‍ಐ, ಡಿವೈಎಫ್‍ಐ, ಜೆಎಂಎಸ್ ಕಾರ್ಯಕರ್ತರು ಪ್ರತಿಜ್ಞೆಗೈದರು.

ಮೈಸೂರ್ ಬ್ಯಾಂಕ್ ವೃತ್ತದ ಬಳಿ ಇರುವ ಹುತಾತ್ಮ ಸ್ತಂಭವನ್ನು ಆಕ್ರಮಿಸಿರುವ ಶನಿದೇವರ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾಯಿತು. ಅಕ್ರಮವಾಗಿ ಉದ್ಭವಗೊಂಡಿರುವ ಶನಿ ದೇವಸ್ತಾನವನ್ನು ತೆರುವುಗೊಳಿಸಿ ಸ್ಮಾರಕವನ್ನು ರಕ್ಷಿಸುವ ಕೆಲಸ ಮಾಡಬೇಕು ಇಲ್ಲದೇ ಹೋದಲ್ಲಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ, ಚಿಂತಕರಾದ ಜಿ.ಎನ್. ನಾಗರಾಜ್, ಲೇಖಕಿ ವಸೂಂಧರಾ ಭೂಪತಿ, ಜೆಎಂಎಸ್ ನ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ವಿಮಲಾ, ಎಸ್‍ಎಫ್‍ಐ ನ ರಾಜ್ಯಾಧ್ಯಕ್ಷರಾದ ವಿ.ಅಂಬರೀಶ್, ಡಿವೈಎಫ್‍ಐ ರಾಜ್ಯ ಮುಖಂಡ ನಿಧಿನ್ ಮಾತನಾಡಿದರು.

ಈ ವೇಳೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ, ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಮುಖಂಡರಾದ ಕೆ.ಶಾರದಾ, ಚಿಕ್ಕರಾಜು ಎಸ್, ಮಹೇಶ್, ಸಿ.ಅಮರೇಶ್, ವೇಗಾನಂದ್, ದಿಲೀಪ್ ಶೆಟ್ಟಿ, ವೆಂಕಟೇಶ್, ಹನಮಂತ ದುರ್ಗದ್, ತೇಜಸ್ವಿನಿ, ಸೇರಿದಂತೆ ಅನೇಕರಿದ್ದರು.