ಅಂಗನವಾಡಿ ತಾಯಂದಿರ ವೇತನದ ರಾಜಕೀಯ, ಅರ್ಥಶಾಸ್ತ್ರ

ಸಂಪುಟ: 
11
ಸಂಚಿಕೆ: 
14
Sunday, 26 March 2017
 • ಐ.ಸಿ.ಡಿ.ಎಸ್. ಯೋಜನೆಯನ್ನು ಪೂರ್ವ ಪ್ರಾಥಮಿಕ ಶಿಕ್ಷಣದ ಒಂದು ಸಾಧನವಾಗಿ, ಅದರ ಜೊತೆಗೆ ಶಿಶು ಅಭಿವೃದ್ಧಿಯನ್ನು ಮೇಳವಿಸಿ ಒಂದು ಪೂರ್ಣ ಪ್ರಮಾಣದ ಯೋಜನೆಯಾಗಿ ಮಾಡದೆ ಕೇವಲ ಅಲ್ಪ ಸಮಯದ ಗೌರವಧನದ ಕೆಲಸವಾಗಿ ಪರಿಗಣಿಸಿದ್ದು ಅಂದಿನ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೂಲ ಅಪರಾಧ.
 • ಮುಂದೆ ಕೆಜಿ- ಕಿಂಡರ್ ಗಾರ್ಟನ್ ಶಿಕ್ಷಣ ಪ್ರಾಮುಖ್ಯತೆ ಪಡೆದುಕೊಂಡ ಮೇಲೂ ಮುಂದಿನ ಯಾವ ಕೇಂದ್ರ ಸರ್ಕಾರವೂ ಇದನ್ನು ಮಾರ್ಪಡಿಸದಿದ್ದದ್ದು ಬಡ ಮಕ್ಕಳ ಶಿಕ್ಷಣದ ಮೇಲಿನ ಅಲಕ್ಷ್ಯ ಮತ್ತು ಧಾಳಿ.
 • 1957 ರ ಪ್ರಥಮ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಮ್ಯೂನಿಸ್ಟ್ ಪಕ್ಷ, ನಂತರ 1967 ರಲ್ಲಿ ತಮಿಳುನಾಡಿನ ಡಿಎಂಕೆ, 1983 ರ ನಂತರ ಕರ್ನಾಟಕದ ಜನತಾ ಪಕ್ಷ, ಆಂಧ್ರದ ತೆಲುಗುದೇಶಂ ಮೊದಲಾದ ಎಂಟು ರಾಜ್ಯ ಸರ್ಕಾರಗಳು, ಕಾಂಗ್ರೆಸ್, ಬಿಜೆಪಿ ಹೊರತಾಗಿ ಇತರೆಲ್ಕ ರಾಜಕೀಯ ಪಕ್ಷಗಳು ಜ್ಯೋತಿ ಬಸುರವರ ನೇತೃತ್ವದಲ್ಲಿ ಮಾಡಿದ ಒಕ್ಕೊರಲ ಒತ್ತಾಯ - ರಾಜ್ಯಗಳಿಗೆ ದೇಶದ ತೆರಿಗೆ ಸಂಪನ್ಮೂಲದಲ್ಲಿ ಶೇಕಡಾ 75 ಭಾಗ ರಾಜ್ಯಗಳಿಗೆ ನೀಡಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಸಂಪನ್ಮೂಲಗಳ ಜೊತೆಗೆ ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು . ಅದನ್ನುಕಾಂಗ್ರೆಸ್ ಕೇಂದ್ರ ಸರ್ಕಾರ ತಿರಸ್ಕರಿಸಿತು.
 • ಇತ್ತೀಚೆಗೆ ಜಾಗತೀಕರಣ ತಂದ ಕಾಂಗ್ರೆಸ್ ಹಾಗೂ ನಂತರದ ಬಿಜೆಪಿ ಸರ್ಕಾರಗಳು ರಾಜ್ಯ ಸರ್ಕಾರಗಳ ಅಧಿಕಾರ, ಸಂಪನ್ಮೂಲಗಳ ಮೇಲೆ ನಿತ್ಯ ಧಾಳಿ ನಡೆಸುತ್ತಾ ಬಂದಿವೆ. 1996 ರ ಸಂಯುಕ್ತ ರಂಗ ಸರ್ಕಾರ ಬಹಳ ಸ್ವಲ್ಪ ಮಾತ್ರ ಉತ್ತಮ ಪಡಿಸಲು ಪ್ರಯತ್ನಿಸಿತು.
 • ಈಗಿನ ಮೋದಿ ಬಿಜೆಪಿ ಸರ್ಕಾರ ರಭಸದಿಂದ ರಾಜ್ಯಗಳ ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದೆ. ಅದರ ಫಲವೇ 90: 10 ಪ್ರಮಾಣವನ್ನು 60:40 ಭಾಗವನ್ನಾಗಿ ಪರಿವರ್ತಿಸಿದ್ದು. ನೀತಿ ಆಯೋಗ ರದ್ದು, ಸರ್ವ ಶಿಕ್ಷಣ ಅಭಿಯಾನ ಮೊದಲಾದ ಅನೇಕ ಯೋಜನೆಗಳಲ್ಲಿ ಕಡಿತ ಮಾಡಿದೆ. 
 • ಇಂದು ದೊಡ್ಡ ಗದ್ದಲ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರು, ಸಂಸದರು ಒಮ್ಮೆಯೂ ಈ ಯಾವ ಬಗ್ಗೆಯೂ ದನಿಯೆತ್ತಲಿಲ್ಲ. 
 • ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ದೃಢವಾಗಿ, ಬಲವಾಗಿ ವಿರೋಧಿಸಲಿಲ್ಲ. ಜನರಿಗೆ ಈ ಬಗ್ಗೆ ಸಾರಿ ಹೇಳಲಿಲ್ಲ. ಕೇಂದ್ರ ಸರ್ಕಾರಕ್ಕೆ ನಿಯೋಗಗಳನ್ನು ಕೊಂಡೊಯ್ದು ಪ್ರತಿಭಟಿಸಲಿಲ್ಲ . ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತಿನ ಸಭೆಗಳಲ್ಲಿ ಪ್ರಬಲ ದನಿಯೆತ್ತಲಿಲ್ಲ. ರಾಜ್ಯದ ಜನತೆಯನ್ನು ಕೂಡ ಈ ಬಗ್ಗೆ ಹೋರಾಟಕ್ಕೆ ಇಳಿಸಬಹುದಾಗಿತ್ತು . ಇಳಿಸಲಿಲ್ಲ.
 • ಇದರ ಅರ್ಥ ರಾಜ್ಯ ಸರ್ಕಾರ ಕೇಂದ್ರದ ಈ ಹೇರಿಕೆಯನ್ನು ಒಪ್ಪಿಕೊಂಡಿದೆ ಎಂದೇ ಅರ್ಥ. ಈ ಮೌನ ಒಪ್ಪಿಗೆ ನೀಡಿದ ಮೇಲೆ ಅದರಂತೆ ರಾಜ್ಯ ಸರ್ಕಾರವೇ ಹೊಣೆಯನ್ನು ಹೊರಬೇಕು.
 • ಕಮ್ಯೂನಿಸ್ಟ್ ನೇತೃತ್ವದ ಎಡರಂಗ ಸರ್ಕಾರಗಳು ನಿರಂತರವಾಗಿ ಈ ಬಗ್ಗೆ ಪ್ರಬಲ ದನಿಯೆತ್ತಿವೆ. ಅಖಿಲ ಭಾರತ ಕಾರ್ಮಿಕ ಮುಷ್ಕರಗಳ ಒಂದು ಮುಖ್ಯ ಒತ್ತಾಯಗಳಲ್ಲಿ ಅಂಗನವಾಡಿಗಳಿಗೆ ಹಣ ಕಡಿತವೂ ಸೇರಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿಯೂ ಒಮ್ಮೆಯೂ ಈ ಪ್ರಯತ್ನಗಳನ್ನು ಬೆಂಬಲಿಸಲಿಲ್ಲ.
 • ಆದರೂ ಕೇರಳ ಎಡರಂಗ ಸರ್ಕಾರ ಅಂಗನವಾಡಿ ನೌಕರರ ವೇತನ 10,000 ನೀಡುವುದರಲ್ಲಿ ವ ಪಡಿತರದಲ್ಲಿ ಅಕ್ಕಿ ಜೊತೆಗೆ ಬೇಳೆ, ಬೇಳೆಕಾಳುಗಳು, ಎಣ್ಣೆ, ಮೆಣಸಿನಕಾಯಿ ಮೊದಲಾದ ಅನೇಕ ಅಗತ್ಯ ವಸ್ತುಗಳನ್ನು ನೀಡುವುದರಲ್ಲಿ, ಮಾಸಿಕ ವೇತನಗಳನ್ನು 1000 ರೂಗಿಂತ ಹೆಚ್ಚಿಸುವುದರಲ್ಲಿ ( ರಾಜ್ಯದಲ್ಲಿ ಕೇವಲ 500 ) ಕೇಂದ್ರದ ಮೇಲೆ ಹೊಣೆ ಹಾಕುತ್ತಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.
 • ಕರ್ನಾಟಕಕ್ಕಿಂತ ಬಹಳ ಕಡಿಮೆ ಬಜೆಟ್ ಇರುವ ಕೇರಳದಲ್ಲಿ ಅಂಗನವಾಡಿಯವರಿಗೆ, ಇತರೆಲ್ಲಾ ದುಡಿವ ಜನರಿಗೆ, ಬಡ ಜನರಿಗೆ ಇರುವ ಪಾಲು ಕರ್ನಾಟಕ ಬಜೆಟ್ ನಲ್ಲಿ ಏಕಿಲ್ಲ? 

ಕರ್ನಾಟಕದಲ್ಲಿ ಇರುವ ಹೆಚ್ಚಿನ ಸಂಪನ್ಮೂಲವನ್ನು ಬಳಸಿ ಹೆಚ್ಚು ಆದಾಯ ಏಕೆ ಪಡೆದುಕೊಳ್ಳುತ್ತಿಲ್ಲ.?

ಈ ಪ್ರಶ್ನೆಗಳನ್ನು ಎತ್ರಬೇಕಾಗಿದೆ. ಅಂಗನವಾಡಿಯ ತಾಯಂದಿರಿಗೆ ನ್ಯಾಯ ಸಲ್ಲಿಸಿ. ಕನಿಷ್ಠ 10,000 ರೂ ನೀಡಬೇಕು. 

ಕರ್ನಾಟಕ ರಾಜ್ಯ ಸರ್ಕಾರ, ಮೋದಿ ಸರ್ಕಾರ ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ಪ್ರಬಲ ದನಿಯೆತ್ತಲಿ. ಹೋರಾಟ ಮಾಡಲಿ. ನಾವೆಲ್ಲ ಬೆಂಬಲಿಸೋಣ.

- ಜಿ.ಎನ್. ನಾಗರಾಜ್