Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅಂಗನವಾಡಿ ಅಕ್ಕಂದಿರೊಡನೆ ನಾವು

ಸಂಪುಟ: 
11
ಸಂಚಿಕೆ: 
14
Sunday, 26 March 2017

ಅಂಗನವಾಡಿ ಅಕ್ಕಂದಿರ ಹೋರಾಟಕ್ಕೆ ಸಾಹಿತಿ, ಬುದ್ಧಿಜೀವಿ, ಕಲಾವಿದರ, ಸಹೃದಯರ ಬೆಂಬಲ ಹರಿದು ಬಂತು. ಹಲವರು - ರಹಮತ್ ತರಿಕೆರೆ, ಬಾನು ಮುಷ್ತಾಕ್, ಬಿ ಸುರೇಶ, ಚಿನ್ನಸ್ವಾಮಿ ಸೋಸಲೆ, ಡಿ ಉಮಾಪತಿ, ಹೆಚ್.ಎಸ್. ಅನುಪಮ, ಪೀರ್ ಬಾಶಾ, ಅರುಣ್ ಜೋಳದಕೂಡ್ಲಿಗಿ, ಕಿರಣ್ ಗಾಜನೂರು ಮುಂತಾದವರು ಸಂದೇಶ ಕಳಿಸಿದರು. ಇನ್ನೂ ಹಲವರು - ಸಾಲುಮರದ ತಿಮ್ಮಕ್ಕ, ಪ್ರಗತಿಪರ ನಟ ನಟ ಚೇತನ್, ಬಿಗ್ ಬಾಸ್ ಪ್ರಥಮ್, ಕಿರಿಕ್ ಕೀರ್ತಿ, ನಟಿ ಪ್ರಿಯಾ ಹಾಸನ್ ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು. ಅದರ ಕೆಲವು ಝಲಕ್ ಗಳು.

ಯಾಕೊ ಏನೊ, ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಬೀದಿಯಲ್ಲಿ ಮಲಗಿದ ದೃಶ್ಯವು ಯುದ್ಧಗ್ರಸ್ತ ರಣರಂಗವನ್ನೂ ನೆನಪಿಸಿತು; ಅದರೊಳಗೆ ಒಬ್ಬ ತಾಯಿ ಬೆರಳೆತ್ತಿ ಏನನ್ನೊ ಹೇಳುತ್ತ ಅಳುತ್ತಿರುವ ದೃಶ್ಯವು ಬದುಕುಳಿಯುವುದಕ್ಕೆ ಮಾಡುತ್ತಿರುವ ಕೊನೆಯ ಸೆಣಸಾಟದಂತೆ ಭಾಸವಾಯಿತು. ಸಾವಿರಾರು ಮಕ್ಕಳನ್ನು ಉಣಿಸಿ ಬೆಳೆಸುವ ತಾಯಂದಿರು, ತಾವೇ ಮಕ್ಕಳಾಗಿ ಅಳುವುದು ಕಂಡು ಮನಸ್ಸು ಕದಡಿದೆ. ಪ್ರಭುತ್ವ ಇವರ ಬೇಡಿಕೆಗಳಿಗೆ ಕೂಡಲೇ ಇದಕ್ಕೆ ಸ್ಪಂದಿಸಬೇಕು. ಸಂವೇದನೆ ಇರುವ ಸರ್ಕಾರ ಇಂತಹ ತಬ್ಬಲಿಗಳಿಗೆ ಮಿಡಿಯದೆ ಇನ್ನಾರಿಗೆ ಮಿಡಿಯಬೇಕು? ಈ ತಾಯಂದಿರ ಹೋರಾಟಕ್ಕೆ ಜಯಸಿಕ್ಕಿಯೇ ಅವರು ಊರಿಗೆ ಮರಳುವಂತಾಗಲಿ. ಅವರ ಜತೆಗೆ ನಾನಿರುವೆ.

~ ಡಾ.ರಹಮತ್ ತರೀಕೆರೆ, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ

''ಮನೆಯೇ ಮೊದಲ ಪಾಠ ಶಾಲೆ..ಜನನಿ ತಾನೆ ಮೊದಲ ಗುರುವು..ಜನನಿಯಿಂದ ಪಾಠ ಕಲಿತ ಜನರು ಧನ್ಯರು...'' ಪದ್ಯ ಓದಿದ್ದೆವು ಶಾಲೆಯಲ್ಲಿ....ಅಂಗನವಾಡಿ ತಾಯಂದಿರು ಈ ಪದ್ಯ ನೆನಪಿಸಿದರು. ತಾಯಿ ಒಡಲು ಉರಿಯಬಾರದು....

-  ಡಿ.ಉಮಾಪತಿ, ಹಿರಿಯ ಪತ್ರಕರ್ತರು

ಸಹಜವಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ವರ್ಷಕ್ಕೆ ನಾಲ್ಕೈದು ಬಾರಿ ಸ್ಟ್ರೈಕ್ ಮಾಡುತ್ತಾರೆ. ಇದು ತಮ್ಮ ಬೇಡಿಕೆಗಳನ್ನು ಈಡೇರಿಸುವ ಹಕ್ಕೊತ್ತಾಯದ ನಿರಂತರ ಚಳವಳಿ. ಹೀಗೆ ನಿಲ್ಲದ ಹೋರಾಟ ಮಾಡಿದ ಫಲವೆಂದರೆ, ಸದ್ಯಕ್ಕೆ ಹುಸಿರಾಡುವಷ್ಟು ಸಂಬಳ ಸಿಗುತ್ತಿದೆ. ಇಂತಹ ಚಳವಳಿಗೆ ಬಾಲ್ಯದಲ್ಲಿ ಅವ್ವನ ಜತೆ ಹತ್ತಾರು ಬಾರಿ ಹೋಗಿದ್ದೇನೆ?. ಇವರನ್ನು `ಅನುತ್ಪಾದಕ' ಎನ್ನುವ ಮಾರುಕಟ್ಟೆಯ ಪರಿಭಾಷೆಯಲ್ಲಿ ಕೇಂದ್ರ ಸರಕಾರ ಪರಿಭಾವಿಸುತ್ತಿರುವುದು ದೊಡ್ಡ ದುರಂತವಾಗಿದೆ.   ಹಾಗಾಗಿ ಅಂಗನವಾಡಿ ಮಹಿಳೆಯರು ಇಂದು ದೇಶವ್ಯಾಪಿ ಬೆಸೆವ ದೊಡ್ಡ ಹೋರಾಟಗಳನ್ನು ತೀವ್ರಗೊಳಿಸಬೇಕಿದೆ. ಅವರ ಕನಸುಗಳನ್ನು ಜೀವಂತವಾಗಿಟ್ಟುಕೊಂಡೇ ಕೇಂದ್ರ ಸರಕಾರದ ಉತ್ಪಾದಕ ವ್ಯಾಖ್ಯಾನದ ಅಮಾನವೀಯತೆಯನ್ನು ಬಯಲು ಮಾಡಬೇಕಿದೆ. ಇದೀಗ ರಾಜ್ಯ ಸರಕಾರದ ಬಜೆಟ್ ಮಂಡನೆಯತ್ತ ಅಂಗನವಾಡಿ ನೌಕರರು ಆಸೆಗಣ್ಣುಗಳಿಂದ ಕಾಯುತ್ತಿದ್ದಾರೆ. ರಾಜ್ಯ ಸರಕಾರವಾದರೂ ಇವರನ್ನು ಗೌರವಿಸುವ ವೇತನ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾಗಲಿ.

- ಅರುಣ್ ಜೋಳದಕೂಡ್ಲಿಗಿ, ಹಂಪಿ ವಿವಿ

ಇಂದು ತಮ್ಮ ಕಾನೂನಾತ್ಮಕ ವೇತನದ ಹಕ್ಕುಗಳಿಗಾಗಿ ಬೆಂಗಳೂರಿನ ಬೀದಿಯಲ್ಲಿ ನಿಂತು, ಮಳೆ, ಬಿಸಿಲೆನ್ನದೆ ಹೋರಾಡುತ್ತಿರುವ ಅಂಗನವಾಡಿ ತಾಯಂದಿರು, ಅವರ ಬೇಡಿಕೆಯ ಜೊತೆ ಜೊತೆಗೆ ಅಳದಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆ ಪ್ರಜೆಗಳಾಗಿ ನೋಡುವ ನಮ್ಮ ಸಂಪ್ರದಾಯಿಕ ವ್ಯವಸ್ತೆ ರೂಢಿಸಿಕೊಂಡು ಬಂದ ಧೋರಣೆಯನ್ನು ಪ್ರಶ್ನಿಸುತ್ತಿದ್ದಾರೆ ಅನ್ನಿಸುತ್ತಿದೆ.

ಇನ್ನಾದರೂ ಪ್ರಭುತ್ವ ಎಚ್ಚೆತ್ತುಕೊಂಡು ತೊಡಕುಗಳನ್ನು ನಿವಾರಿಸಿ ಅವರ ಬೇಡಿಕೆಗೆ ಸ್ಪಂದಿಸಲೇಬೇಕಿದೆ. ಎಕೆಂದರೆ ನನಗೆ ಅವರಲ್ಲಿ ನಾವು ಸಂಪ್ರದಾಯಿಕವಾಗಿ ನೋಡುವ ಮಹಿಳೆ ಕಾಣುತ್ತಿಲ್ಲ ಬದಲಾಗಿ ತನ್ನ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಸಂಪೂರ್ಣ ಅರಿವಿರುವ ದುಡಿಯುವ ವರ್ಗದ ಪ್ರತಿನಿಧಿಯಂತೆ ಕಾಣುತ್ತಿದ್ದಾಳೆ. ಆ ಪ್ರಜ್ಞೆಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಇಂದು ನಮ್ಮ ನಾಗರಿಕ ಸಮುದಾಯ ಆಕೆಯೊಟ್ಟಿಗೆ ನಿಲ್ಲಬೇಕಿದೆ...

- ಡಾ. ಕಿರಣ್.ಎಂ ಗಾಜನೂರು, ರಿಸರ್ಚ್ ಫೆಲೊ, ಕುವೆಂಪು ವಿ.ವಿ.

ಅಂಗನವಾಡಿಗ ಹೋಗುವವರು ಬಹುತೇಕ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಪ್ರತಿದಿನ ಮಕ್ಕಳನ್ನು ಪೋಷಿಸುವ ಜೊತೆಯಲ್ಲಿ ಜನಗಣತಿ,ಮಾರಕರೋಗಿಗಳ ಗಣತಿ. ನಿಯಂತ್ರಣ ಹಾಗು ತಿಳುವಳಿಕೆ ನೀಡುವ ಜವಬ್ದಾರಿ, ಬಾಣಂತಿ, ಬಸಿರು ಹೆಣ್ಣುಮಕ್ಕಳಿಗೆ ತಾಯಂದಿರಾಗಿ ಅಪೌಷ್ಠಿಕತೆಯ ಸಂಶೋಧಕರಾಗಿ ಸರಕಾರ ನೀಡುವ ಯಾವ ಕೆಲಸವನ್ನು ಕಿಂಚಿತ್ತು ಮುಜುಗರ ಪಟ್ಟಿಕೊಳ್ಳದೆ ದುಡಿಯುತ್ತಿರುವ ಅಂಗನವಾಡಿ ತಾಯಂದಿರು ಇಂದು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಹೋರಾಟ ನಡೆಸುತ್ತಿರುವುದು ನಿಜಕ್ಕು ಶೋಚನೀಯ ಸಂಗತಿ. ಈ ಅಂಗನವಾಡಿ ತಾಯಂದಿರ ಹೋರಾಟಕ್ಕೆ ನನ್ನ ಹಾಗು ನನ್ನಂತವರ ಬೆಂಬಲವಿದೆಯಂದು ಹೇಳುತ್ತ ಇವರ ಹೋರಾಟ ಜಯವಾಗಲೆಂದು ಆಶಿಸುತ್ತೇನೆ.

- ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ

ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಸಂಬಳ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವ ಕುರಿತು ಒಪ್ಪಿಗೆ ಸೂಚಿಸಿದೆ. ಏಪ್ರಿಲ್ 19 ರ ಬದಲಾಗಿ ಏಪ್ರಿಲ್ 10 ಕ್ಕೆ ಸಭೆ ನಿಗದಿಯಾಗಿದೆ.

- ಜಿ.ವಿ. ಶ್ರೀರಾಮರೆಡ್ಡಿ,  ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

ಸರಕಾರ ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸಿರುವುದರಿಂದ ಅಂಗನವಾಡಿ ನೌಕರರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಡೆಯಲಾಗುತ್ತಿದೆ. ಏಪ್ರಿಲ್ 10 ಸಭೆಯಲ್ಲಿ ಸರಕಾರ ಒಪ್ಪಿಕೊಂಡಿದ್ದನ್ನು ಜಾರಿ ಮಾಡದೇ ಹೋದಲ್ಲಿ ರಸ್ತೆಯಲ್ಲಿ ನಡೆದ ಹೋರಾಟ ಮುಖ್ಯಮಂತ್ರಿಯವರ ಮನೆಗೆ ವಿಸ್ತರಣೆ ಆಗುತ್ತದೆ. 

 - ಎಸ್. .ವರಲಕ್ಷ್ಮಿ, ಸಿಐಟಿಯು ರಾಜ್ಯಾಧ್ಯಕ್ಷರು

ಅಂಗನವಾಡಿ ಕಾರ್ಯಕರ್ತೆಯರು ಕಳೆದ ಮೂರು ದಿನಗಳಿಂದ ಬಿಸಿಲಿನಲ್ಲಿ ಕರಗುತ್ತ ತಮ್ಮ ಮಾಸಿಕ ಖುತು ಚಕ್ರದ ಬವಣೆಯನ್ನು ಎದುರಿಸುತ್ತ ಮತ್ತು ಎಳೆಯ ಕೂಸುಗಳನ್ನು ಕಟ್ಟಿಕೊಂಡು ಇಡುತ್ತಿರುವ ಬೇಡಿಕೆ ಪ್ರಭುತ್ವದ ಕಿವಿಗೆ ಕೇಳಿಸುತ್ತಿಲ್ಲವೇ? ಇನ್ನು ಹೇಗೆ ಕೇಳಿಸಬೇಕು? ಈ ದುರ್ಗತಿಯ ವ್ಯವಸ್ಥೆ ಇನ್ನು ಯಾವ ಮಟ್ಟಕ್ಕೆ ಇಳಿಯುತ್ತದೆ? ಪ್ರಭುತ್ವಕ್ಕೆ ಮಾನವೀಯತೆ ಒಂದಿಷ್ಟಾದರೂ ಇದೆ ಎನ್ನುವುದಾದಲ್ಲಿ ಕೂಡಲೇ ಅವರ ಅಳಲನ್ನು ನಿವಾರಿಸುವ ಕೆಲಸವಾಗಲಿ. ಅಂಗನವಾಡಿ ಅಮ್ಮಂದಿತ ಜೊತೆ ನಾನೂ ಇದ್ದೇನೆ. 

ಬಾನು ಮುಷ್ತಾಕ್, ಸಾಹಿತಿಗಳು

ಅಂಗನವಾಡಿ ತಾಯಂದಿರ ವೇತನ ಹೆಚ್ಚಿಸುವ ನಿಟ್ಟಿನಲ್ಲಿ ಜನಪರ ಎಂದು ಹೇಳಿಕೊಳ್ಳುವ ಸರಕಾರ ಒಂದು ದಿನವೂ ತಡಮಾಡಬಾರದು. ಈ ವಿಷಯದಲ್ಲಾಗುವ ಒಂದು ನಿಮಿಷದ ವಿಳಂಬವೂ ಜನವಿರೋಧದ್ದಾಗುತ್ತದೆ. ನಿಜ ಕೇಂದ್ರ ಸರಕಾರ ತನ್ನ ಪಾಲಿನ ಹಣ ಕಡಿತಗೊಳಿಸಿದೆ. ಇದು ಅಮಾನವೀಯವಾದದ್ದು. ಆದರೆ ಕೇಂದ್ರ ನೀಡದ ಹೊರತು ತಾನು ನೀಡಲಾರೆ ಎಂಬ ತರ್ಕವೂ ಇನ್ನಷ್ಟು ಅಮಾನವೀಯದ್ದಾಗುತ್ತದೆ. ದಿನದ ಆರುತಾಸಿನ ದುಡಿಮೆ ಅರೆಕಾಲಿಕ ಎಂಬ ತರ್ಕ ಅರ್ಥಹೀನವಾದುದ್ದು. ಈ ಅವಧಿ ಮುಗಿಸಿ ಬೇರೆಡೆ ಕೂಲಿಗೆ ಹೋಗಲು ಸಾಧ್ಯವೇ? ಈ ಆರು ತಾಸಿನಂತೆ ತಿಂಗಳು ದುಡಿದು 10 ಸಾವಿರ ವೇತನ ಪಡೆಯಲು ಈ ಪರಿ ಅನ್ನ ನೀರಿಲ್ಲದೇ, ಶೌಚ ಸೌಲಭ್ಯವಿಲ್ಲದೇ ಹಸುಗೂಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಬೀದಿಯಲ್ಲಿ ಕಳೆದು ಹೋರಟ ಮಾಡಬೇಕಾಗಿ ಬಂದಿರುವುದು ನಿಜಕ್ಕೂ ನಾಚಿಕೆಗೇಡು. ಸರ್ಕಾರ ಈ ಕೂಡಲೆ ಅಂಗನವಾಡಿ ತಾಯಂದಿರ ವೇತನ 10 ಸಾವಿರಕ್ಕೆ ಹೆಚ್ಚಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದೇ ಹೋದರೆ ಈ ಸರ್ಕಾರ ಇನ್ನಷ್ಟು ತೀವ್ರ ಪ್ರತಿರೋಧ ತಂದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಬಿ. ಪೀರ್ ಬಾಷಾ, ಚಿಂತಕ

ಅಂಗನವಾಡಿ ಕಾರ್ಯಕರ್ತೆಯರು ಮೂಲಸೌಕರ್ಯಗಳು, ಸೌಲಭ್ಯಗಳು, ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಬದುಕುವ ವೇತನವೂ ಇಲ್ಲದೆ ಅತಿಯಾದ ದುಡಿತಕ್ಕೆ ಒಳಗಾಗಿದ್ದಾರೆ. ಉದ್ಯೋಗಭದ್ತೆಯೂ ಇಲ್ಲದೆ ಸದಾ ಆತಂಕದಲ್ಲೇ ಬದುಕುತ್ತಿದ್ದಾರೆ. ಉದ್ಯೋಗ ಪ್ರತಿ ಪ್ರಜೆಯ ಹಕ್ಕು. ಸಾಮಥ್ರ್ಯಕ್ಕೆ ತಕ್ಕ ಉದ್ಯೋಗ ಮತ್ತು ಶ್ರಮಕ್ಕೆ ತಕ್ಕ ವೇತನ ಎಲ್ಲ ಉದ್ಯೋಗಸ್ಥರಿಗೂ ದೊರೆಯಬೇಕು. ಎಂದೇ ಈ ಮಹಿಳೆಯರಿಗೆ ಸೂಕ್ತ ವೇತನ ಹಾಗೂ ಆರೋಗ್ಯಕರ ಕೆಲಸದ ವಾತವರಣ ಸಿಗಲೇಬೇಕು ಎಂದು ಒತ್ತಾಯಿಸುತ್ತ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವೂ ಅಂಗನವಾಡಿ ಸೋದರಿಯರ ಹೋರಾಟವನ್ನು ಬೆಂಬಲಿಸುತ್ತದೆ.

ಡಾ. ಅನುಪಮಾ. ಎಚ್.ಎಸ್., ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ