“ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ” ಸಮಾವೇಶದ ಕರೆ

ಸಂಪುಟ: 
11
ಸಂಚಿಕೆ: 
14
Sunday, 26 March 2017

ಮಾರ್ಚ್ 22ರಂದು ಬೆಂಗಳೂರಿನ ಸೆಕ್ರೆಟಾರಿಯಟ್ ಕ್ಲಬ್ ಸಭಾಂಗಣದಲ್ಲಿ ‘ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ’ ಕರ್ನಾಟಕ ರಾಜ್ಯ ಸಮಾವೇಶ ನಡೆಯಿತು. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುವ ನಾಶ ಮಾಡುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ಮತ್ತು ಪ್ರತಿರೋಧ ಈಗಾಗಲೇ ಆರಂಭವಾಗಿದ್ದು ಬೆಳೆಯುತ್ತಲೇ ಇದೆ. ಜಂಟಿ ಕ್ರಿಯಾ ರಂಗದಡಿಯಲ್ಲಿ ಬೆಂಗಳೂರಿನ ವಿವಿಧ ಸಾರ್ವಜನಿಕ ಉದ್ಯಮಗಳ ಕಾರ್ಮಿಕರು 2017ರ ಜನವರಿ 28ರಂದು ಬೃಹತ್ ಸಾಮೂಹಿಕ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಸಿದ್ದಾರೆ. 2017ರ ಜನವರಿ 29ರಂದು ಅಖಿಲ ಭಾರತ ಮಟ್ಟದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ ನಡೆದಿದೆ. ಇದರ ಮುಂದುವರಿಕೆಯೇ  ಮಾರ್ಚ್ 22ರಂದು ನಡೆದ ಸಮಾವೇಶ.

ಸಮಾವೇಶವನ್ನು ನಿಡುಮಾಮಿಡಿ ಮಠದ ಸ್ವಾಮಿಜಿ ಉದ್ಘಾಟಿಸಿದರು. ಸಮಾವೇಶದಲ್ಲಿ ನೂರಾರು ಸಾರ್ವಜನಿಕ ಉದ್ಯಮಗಳ ಕಾರ್ಮಿಕರಲ್ಲದೆ ಉಳಿದ ಆಸಕ್ತರೂ ಭಾಗವಹಿಸಿದ್ದರು. ಬೆಂಗಳೂರು ಸಾರ್ವಜನಿಕ ಉದ್ಯಮಗಳ ಯೂನಿಯನುಗಳ ಜಂಟಿ ಕ್ರಿಯಾ ರಂಗ (ಜೆ.ಎ.ಎಫ್) ಸಂಚಾಲಕ ಮೀನಾಕ್ಷಿಸುಂದರಂ, ಹಿರಿಯ ವಕೀಲ ಕೆ. ಸುಬ್ಬರಾವ್, ಸಿಐಟಿಯು ಉಪಾಧ್ಯಕ್ಷ ವಿ,ಜೆ,ಕೆ. ನಾಯರ್, ಎಐಟಿಯುಸಿ ಕಾರ್ಯದರ್ಶಿ ನಾಗರಾಜ್, ವಿಮಾ ನೌಕರರ ಸಂಘದ ನಾಯಕರಾದ ಎಸ್.ಕೆ.ಗೀತಾ, ಬಿ.ಎಸ್.ಎನ್.ಎಲ್. ಕಾರ್ಮಿಕರ ನಾಯಕ ಸುದರ್ಶನ್, ಸಿಪಿಐ(ಎಂ) ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ,  ಎಎಪಿ ಅಧ್ಯಕ್ಷ ಪೃಥ್ವಿ ಅವರುಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶ ಮಂಡಿಸಲಾದ ‘ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ’ ಘೋಷಣೆಯನ್ನು ಅಂಗೀಕರಿಸಿತು. ಘೋಷಣೆಯ ಭಾಗವಾಗಿ ಏಪ್ರಿಲ್-ಮೇ ಗಳಲ್ಲಿ ಬೆಂಗಳೂರು ಹಾಗೂ ರಾಜ್ಯದಾದ್ಯಂತ ವ್ಯಾಪಕ ಪ್ರಚಾರಾಂದೋಲನ, ಈ ವಿಷಯ ಕೇಂದ್ರೀಕರಿಸಿ ಮೇದಿನಾಚರಣೆ ಮೇ 10ರಂದು ಮುಷ್ಕರ, ಮೇ 25ರಂದು ಹರತಾಳ ಸೇರಿದಂತೆ ಹೋರಾಟದ ಕಾರ್ಯಕ್ರಮಗಳನ್ನೂ ರೂಪಿಸಿತು.

ಸಮಾವೇಶದ ಘೋಷಣೆಯನ್ನು ಈ ಕೆಳಗೆ ಇಡಿಯಾಗಿ ಕೊಡಲಾಗಿದೆ.

ಸಮಾವೇಶದ ಘೋಷಣೆ

ದಿನಾಂಕ 22.03.2017ರಂದು ಬೆಂಗಳೂರಿನಲ್ಲಿ ನಡೆದ ‘ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ’ ಸಮಾವೇಶವು ಕರ್ನಾಟಕದ ವಿವಿಧ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಸಂಯೋಜನಾತೀತವಾಗಿ (ಅವು ಸಂಯೋಜನೆಗೊಂಡ ಕೇಂದ್ರೀಯ ಸಂಘಟನೆಯ ಬೇಧವಿಲ್ಲದೆ) ಭಾಗವಹಿಸಿದ್ದರು. ಜಂಟಿ ಕ್ರಿಯಾ ರಂಗಗದಡಿಯಲ್ಲಿ ವಿವಿಧ ಸಾರ್ವಜನಿಕ ಉದ್ಯಮಗಳ ಕಾರ್ಮಿಕರು 2017ರ ಜನವರಿ 28ರಂದು ಕೈಗೊಂಡ ಬೃಹತ್ ಸಾಮೂಹಿಕ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಈ ಸಮಾವೇಶವು ಅವರೆಲ್ಲರನ್ನು ಅಭಿನಂದಿಸುತ್ತದೆ. ಅಂತೆಯೇ, 2017ರ ಜನವರಿ 29ರಂದು ಅಖಿಲ ಭಾರತ ಮಟ್ಟದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಈ ಸಮಾವೇಶವು ಜಂಟಿ ಕ್ರಿಯಾ ರಂಗದ ಕಾರ್ಮಿಕ ಸಂಘಟನೆಗಳನ್ನು ಅಭಿನಂದಿಸುತ್ತದೆ. ಬೆಂಗಳೂರು ಕೇಂದ್ರೋದ್ಯಮ ಕಾರ್ಮಿಕ ವರ್ಗದ ಚಳವಳಿಯ ತಾಯ್ನೆಲವಾಗಿದ್ದು, ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾರ್ವಜನಿಕ ವಲಯವನ್ನು ಸಂರಕ್ಷಿಸುವ ಐತಿಹಾಸಿಕ ಹೋರಾಟವನ್ನು ಕೈಗೊಂಡು, ಅದನ್ನು ಮುಂದುವರಿಸುತ್ತಲೇ, ಈಗ “ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ” ಹೋರಾಟಕ್ಕೆ ಮುನ್ನುಡಿ ಬರೆದು, ಈ ಬೀಜ ರೂಪದ ಹೋರಾಟವನ್ನು ಆರಂಭಿಸಿದ್ದನ್ನು ಈ ಸಮಾವೇಶವು ದಾಖಲಿಸುತ್ತದೆ.

ರಾಷ್ಟ್ರೀಯ ವಿಮೋಚನಾ ಸಂಗ್ರಾಮದ ಉತ್ಪನ್ನ : ನಮ್ಮ ಸಾರ್ವಜನಿಕ ವಲಯ

ರಾಷ್ಟ್ರೀಯ ವಿಮೋಚನಾ ಆಂದೋಳನದ ಭಾಗವಾಗಿ ನಮ್ಮ ದೇಶದಲ್ಲಿ ಸಾರ್ವಜನಿಕ ವಲಯದ ಪರಿಕಲ್ಪನೆ ಹುಟ್ಟಿ ಬಂದಿದೆ. 1931ರ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಕರಾಚಿ ಅಧಿವೇಶನದಲ್ಲಿ, ಇನ್ನಿತರ ವಿಚಾರಗಳೊಡನೆ, ನಮ್ಮ ದೇಶವು ಪರಕೀಯ ದಾಸ್ಯದಿಂದ ವಿಮೋಚನೆಗೊಂಡ ಬಳಿಕ, ನವಭಾರತವನ್ನು ಸಾರ್ವಜನಿಕ ವಲಯದ ಉದ್ಯಮಗಳ ಮೂಲಕ ನಿರ್ಮಿಸಬೇಕೆಂದು ನಿಶ್ಚಯಿಸಲಾಯಿತು. ಹೀಗಾಗಿ ರಾಷ್ಟ್ರೀಯ ಆರ್ಥಿಕ ಯೋಜನೆ ಮತ್ತು ಪ್ರಮುಖ ಉದ್ಯಮಗಳ ಬೀಜಗಳು ನಮ್ಮ ಸ್ವಾತಂತ್ರ್ಯ ಹೋರಾಟದ ಕುಲುಮೆಯಿಂದ ಹೊರಬಂದಿವೆ.

ಸ್ವಾತಂತ್ರ್ಯಾನಂತರ, ನಮ್ಮ ರಾಷ್ಟ್ರ ನಿರ್ಮಾಣವನ್ನು ಗಣಿಗಳಿಂದ, ಹೊಲ-ಗದ್ದೆಗಳಿಂದ ನಿರ್ಮಿಸಲಾರಂಭಿಸಿದೆವು. ನಮ್ಮ ದೇಶದ ಜನತೆಯ ರಟ್ಟೆಯ ಕಸುವಿನಿಂದ, ನಾವು ಆಣೆಕಟ್ಟುಗಳನ್ನು ನಿರ್ಮಿಸಿ ನಮ್ಮ ವಿಶಾಲ ದೇಶದ ಹೊಲಗಳಿಗೆ ನೀರುಣಿಸಿದೆವು. ದೇಶದ ಭೂಗರ್ಭವನ್ನು ಬಗೆದು ನಮ್ಮ ಜನತೆಯ ಸಮೃದ್ಧಿಗಾಗಿ ಗಣಿಗಾರಿಕೆ ಮಾಡಿದೆವು.

ಗಣಿಗಳಿಂದ ತೆಗೆದ ಖನಿಜದ ಉಕ್ಕಿನಲ್ಲಿ ಲೋಹೊದ್ಯಮವನ್ನು ನಿರ್ಮಿಸಿದೆವು. ಲೋಹೊದ್ಯಮದಿಂದ ಯಂತ್ರ ನಿರ್ಮಿತಿ ಕೈಗೊಂಡೆವು. ಯಂತ್ರೋದ್ಯಮದ ನೆಲೆಗಟ್ಟಿನ ಮೇಲೆ ಇನ್ನಿತರ ಉದ್ಯಮಗಳನ್ನು - ಎಲೆಕ್ಟ್ರಾನಿಕ್ಸ್, ವೈಮಾನಿಕ-ಅಂತರಿಕ್ಷ ಮತ್ತು ಐಟಿ ಉದ್ಯಮವನ್ನು ಕಟ್ಟಿ-ಬೆಳೆಸಿದೆವು. ನಮ್ಮ ದೇಶದ ಉದ್ದಗಲಕ್ಕೂ ರಸ್ತೆ, ಸೇತುವೆ, ಅಣೆಕಟ್ಟುಗಳನ್ನು ಕಟ್ಟಿದೆವು. ನಮ್ಮ ನಗರ - ಪಟ್ಟಣಗಳನ್ನು ನಿರ್ಮಿಸಿದೆವು. ಅವುಗಳನ್ನು ರೈಲು, ರಸ್ತೆ ಮತ್ತು ಫೆÇೀನಿನ ಮೂಲಕ ಬೆಸೆದೆವು. ನಮ್ಮ ಹಡುಗು - ನಮ್ಮದೇ ಹಡಗುಕಟ್ಟೆಗಳನ್ನು ನಿರ್ಮಿಸಿದೆವು. ನಮ್ಮ ದೇಶದ ಉದ್ಯಮಗಳಿಗೆ ಅಗತ್ಯ ವಿದ್ಯುತ್ತನ್ನು, ವಿದ್ಯುತ್ ಸ್ಥಾವರಗಳನ್ನು, ಆ ಸ್ಥಾವರಗಳ ಯಂತ್ರೋಪಕರಣಗಳೆಲ್ಲವನ್ನು ನಮ್ಮ ದೇಶದಲ್ಲೇ ನಿರ್ಮಿಸಿ ವಿದ್ಯುತ್  ಜಾಲವನ್ನು ಬೆಸೆದೆವು. ಆ ಮೂಲಕ ದೇಶದ ಅರ್ಥವ್ಯವಸ್ಥೆಯನಷ್ಟೇ ಬಲಗೊಳಿಸದೆ, ದೇಶದ ಜನತೆಯನ್ನು ಸಾಮಾಜಿಕ ನ್ಯಾಯದ ಮೂಲಕ ಸಬಲೀಕರಿಸಿದೆವು. ಒಂದೇ ಮಾತಿನಲ್ಲಿ ಹೇಳುವುದಾದರೆ, ನಮ್ಮ ಜನತೆಯು ಬೆವರಿನ ಹೊಳೆಯನ್ನು ಹರಿಸಿ, ಇಂದು ಭಾರತವನ್ನು ಕ್ಷಿಪಣಿಯುಕ್ತ ಭಾರತ, ಅಣುಶಕ್ತಿಯುಕ್ತ ಭಾರತ, ಐಟಿ ಉದ್ಯಮದ ರೂವಾರಿಯಾಗಿರುವ ಭಾರತವನ್ನು ನಿರ್ಮಿಸಿದ್ದೇವೆ. ಈ ಸಾರ್ವಜನಿಕ ವಲಯದ ಶಕ್ತಿಯಿಂದ ಭಾರತವು ವಿಶ್ವ ಮಟ್ಟದಲ್ಲಿ ಗುರುತಿಸಲೇಬಾಕಾದ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ.

ನಮ್ಮ ದೇಶದ ಪ್ರಮುಖ ಸಾರ್ವಜನಿಕ ವಲಯದ ಕಾರ್ಖಾನೆಗಳಿಗೆ ಬೆಂಗಳೂರು ತವರು ಮನೆಯಾಗಿದ್ದು ಕೇವಲ ಆಕಸ್ಮಿಕವಲ್ಲ. ರಕ್ಷಣಾ ಕ್ಷೇತ್ರವಾಗಲಿ, ಅಥವಾ ಯಾವುದೇ ಕ್ಷೇತ್ರದಲ್ಲಿ ಬೆಂಗಳೂರು ಮೊದಲ ಆಯ್ಕೆಯಾಗಲು, ಉತ್ತಮ ಹವಾಮಾನವಷ್ಟೇ ಅಲ್ಲ, ಅಥವಾ ನುರಿತ ಮಾನವ ಶಕ್ತಿಯ ಲಭ್ಯತೆಯಷ್ಟೇ ಅಲ್ಲ. ಬೆಂಗಳೂರು ನಗರವು ನಮ್ಮ ನೆರೆಯ-ಹೊರೆಯಾಗಿರುವ ಶತ್ರುರಾಷ್ಟ್ರಗಳ ಗಡಿಗಳಿಂದ ಬಹುದೂರದಲ್ಲಿದೆ. ಸಮುದ್ರ ತಟದಿಂದಲೂ ಸಾಕಷ್ಟು ದೂರ ಇದೆ. ಅಲ್ಲದೆ ಅಂದಿನ ಮೈಸೂರು ರಾಜರ ಪ್ರಗತಿಪರ ಧೋರಣೆಯಿಂದ ಭದ್ರಾವತಿಯ ಉಕ್ಕಿನ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕು, ಮೈಸೂರು ಸಾಬೂನು ಕಾರ್ಖಾನೆ, ಎಮ್‍ಇಐ ಇತ್ಯಾದಿಗಳು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಗೊಂಡು, ದೃಢ ಬುನಾದಿ ಮತ್ತು ಸೂಕ್ತ ವಾತಾವರಣ ನಿರ್ಮಿಸಿದ್ದವು. ನಮ್ಮ ರಾಜ್ಯದ ಇಂಜಿನಿಯರಿಂಗ್ ಸಾಮಥ್ರ್ಯದ ಆಧಾರದಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರವು ಎಚ್‍ಎಎಲ್, ಬಿಇಎಲ್, ಬೆಮೆಲ್, ಐಟಿಐ, ಎಚ್‍ಎಂಟಿ, ಬಿಎಚ್‍ಇಎಲ್ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿತು. ಆದರೆ ಇತ್ತೀಚೆಗೆ ಬಂದ ಕೆಲವು ಸರ್ಕಾರಗಳ ಕೆಟ್ಟ ನೀತಿಗಳ ಪರಿಣಾಮವಾಗಿ ಎಚ್‍ಎಂಟಿ ಕೈಗಡಿಯಾರ ಕಾರ್ಖಾನೆಯುನ್ನು ಮುಚ್ಚಲಾಗಿದೆ. ಖಾಸಗಿ ರಂಗದ ರಿಲಾಯಾನ್ಸ್, ಏರ್‍ಸೆಲ್, ಏರ್‍ಟೆಲ್, ಐಡಿಯಾ ಸಂಸ್ಥೆಗಳಿಗೆ ಅನುಕೂಲವಾಗಲು ಐಟಿಐ ಮತ್ತು ಬಿಎಸ್‍ಎನ್‍ಎಲ್‍ಗಳನ್ನು ಸರ್ಕಾರವು ಉದ್ದೇಶಪೂರ್ವಕವಾಗಿ ರೋಗಗ್ರಸ್ಥವಾಗಿಸಿದೆ.

ಕೇಂದ್ರ ಆಯವ್ಯಯಕ್ಕೆ ಸಾರ್ವಜನಿಕ ವಲಯದ ಅಪಾರ ಕೊಡುಗೆ

ಭಾರತ ಸರ್ಕಾರದ ವರಮಾನಕ್ಕೆ ಸಾರ್ವಜನಿಕ ಉದ್ಯಮಗಳ ವಾರ್ಷಿಕ ಕೊಡುಗೆ ಅಪಾರವಾಗಿದೆ. 2014-15ನೇ ಸಾಲಿನಲ್ಲಿ 235 ಸಾರ್ವಜನಿಕ ಉದ್ಯಮಗಳಿಂದ ಕೇಂದ್ರ ಸರ್ಕಾರಕ್ಕೆ ಲಭ್ಯವಾದ ಹಣಕಾಸಿನ ಸಂಪನ್ಮೂಲಗಳು ಈ ಕೆಳಕಂಡಂತಿದೆ:

2014-15ನೇ ವರ್ಷದಲ್ಲಿ ಭಾರತ ಸರ್ಕಾರಕ್ಕೆ ಸಾರ್ವಜನಿಕ ಉದ್ಯಮಗಳಿಂದ 1,69,199 ಕೋಟಿರೂಗಳ ವರಮಾನ ಲಭಿಸಿದೆ ಎಂಬುದು ಮೇಲ್ಕಂಡ ಕೋಷ್ಠಕದಿಂದ ಸ್ಪಷ್ಟವಾಗುತ್ತದೆ. ಅದಲ್ಲದೆ, ಕೇಂದ್ರೋದ್ಯಮದ ಉದ್ಯೋಗಿಗಳು ಪಾವತಿಸಿದ ಆದಾಯ ತೆರಿಗೆ, ಅವರು ತಮ್ಮ ವೇತನದಿಂದ ಖರೀದಿಸಿದ ವಸ್ತುಗಳಿಗೆ ಪಾವತಿಸಿದ ತೆರಿಗೆಗಳನ್ನು ಸೇರಿಸಿದರೆ ಈ ಮೊತ್ತವು ಇನ್ನಷ್ಟು ಹೆಚ್ಚಾಗುತ್ತದೆ.

ಈ ಮೊತ್ತದ ಕೊಡುಗೆಯನ್ನು ಪ್ರತಿ ವರ್ಷವೂ ಸಾರ್ವಜನಿಕ ವಲಯದ ಉದ್ಯಮಗಳು ನೀಡುತ್ತಿವೆ ಎಂದರೆ, ಅಷ್ಟರ ಮಟ್ಟಿಗೆ ಸಾಮಾನ್ಯ ಜನತೆಗೆ ತೆರಿಗೆಯ ಹೊರೆಯನ್ನು ಈ ಉದ್ಯಮಗಳು ಕಡಿಮೆ ಮಾಡುತ್ತಿವೆ ಎಂದು ತಿಳಿಯಬೇಕು. ಈ ಉದ್ಯಮಗಳು ಖಾಸಗಿ ಬಂಡವಾಳಗಾರರ ಪಾಲಾದರೆ, ಸರ್ಕಾರಕ್ಕೆ ಈ ವರಮಾನವು ಲಭ್ಯವಾಗದು, ಹಾಗೂ ಆ ಪ್ರಮಾಣದಲ್ಲಿ ಶ್ರೀಸಾಮಾನ್ಯನ ತೆರೆಗೆ ಹೊರೆಯು ಹೆಚ್ಚಾಗುತ್ತದೆ.

ಬೆಮೆಲ್‍ನ್ನು ಮಾರಾಟಕ್ಕಿಡಲಾಗಿದೆ; ಬಿಇಎಲ್ ಮತ್ತು ಎಚ್‍ಎಎಲ್‍ನ್ನು ಬಿಡಿಯಾಗಿ ಬಿಕರಿ ಮಾಡಲು ಸರ್ಕಾರ ಸಿದ್ಧವಾಗಿದೆ

ರಕ್ಷಣಾ ಸಚಿವಾಲಯದಡಿಯಲ್ಲಿ ಬೆಮೆಲ್ ಸಂಸ್ಥೆಯನ್ನು 11.05.1964ರಂದು ಸ್ಥಾಪಿಸಲಾಯಿತು. ಮುಖ್ಯವಾಗಿ ಬೆಮೆಲ್ ರಕ್ಷಣಾ ಪಡೆಗಳಿಗೆ ಬೃಹತ್ ಟ್ರಕ್ಕುಗಳನ್ನು ನಿರ್ಮಿಸುತ್ತಿದೆ. ಗಣಿಗಾರಿಕೆಗೆ ಅಗತ್ಯವಿರುವ ಬೃಹತ್ ಯಂತ್ರೋಪಕರಣಗಳನ್ನು ಬೆಮೆಲ್ ನಿರ್ಮಿಸುತ್ತಿದೆ. ಭಾರತೀಯ ರೈಲ್ವೆಗೆ ಬೆಮೆಲ್ ರೈಲು ಗಾಡಿ ನಿರ್ಮಿಸುತ್ತಿರುವ ಪ್ರಮುಖ ಸಂಸ್ಥೆ. ಈಗ ವಿಶ್ವ ದರ್ಜೆಯ ಮೆಟ್ರೋ ಕೋಚ್‍ಗಳನ್ನೂ ಬೆಮೆಲ್ ಬೆಂಗಳೂರು ಮತ್ತು ದೆಹಲಿ ಮೆಟ್ರೋಗೆ ನಿರ್ಮಿಸಿಕೊಟ್ಟಿದೆ. ಬೆಮೆಲ್ ನಮ್ಮ ರಾಜ್ಯದಲ್ಲಿ ಕೈಗಾರಿಕೀಕರಣಕ್ಕೆ ವಾತಾವರಣವನ್ನು ನಿರ್ಮಿಸಿ, ದೇಶವು ಯಂತ್ರೋಪರಣವನ್ನು ಆಮದು ಮಾಡಿಕೊಳ್ಳುವ ಹಂಗಿನಿಂದ ಪಾರುಮಾಡಿದೆ. ಬೆಮೆಲ್‍ನ ನಾಲ್ಕು ಘಟಕಗಳು - ಬೆಂಗಳೂರು, ಮೈಸೂರು, ಕೆಜಿಎಫ್ ಮತ್ತು ಕೇರಳದ ಪಾಲಕ್ಕಾಡ್‍ನಲ್ಲಿದೆ.

ಕೇಂದ್ರ ಸಚಿವ ಸಂಪುಟವು ದಿನಾಂಕ 06.01.2017ರಂದು ಬೆಮೆಲ್‍ನ ಶೇ. 26ರಷ್ಟು ಷೇರು ಬಂಡವಾಳವನ್ನು ಇಡಿಯಾಗಿ ಒಬ್ಬ ಪಾಲುದಾರನಿಗೆ ಮಾರಾಟ ಮಾಡಲು ನಿರ್ಧರಿಸಿದೆ. 1990 ಮತ್ತು 2007ರಲ್ಲಿ ಕೈಗೊಳ್ಳಲಾದ ಬಂಡವಾಳ ಹಿಂಪಡೆತದ ಪರಿಣಾಮವಾಗಿ ಈಗಾಗಲೇ ಒಟ್ಟು ಬೆಮೆಲ್‍ನ ಶೇ.45.97ರಷ್ಟು ಷೇರು ಬಂಡವಾಳ ಖಾಸಗಿಯವರ ಪಾಲಾಗಿದೆ. ಈಗ ಕೇಂದ್ರ ಸರ್ಕಾರದ ಬಳಿ ಇರುವ ಶೇ. 54.03ರಲ್ಲಿ ಷೇರು ಬಂಡವಾಳವಿದ್ದು, ಸಂಸ್ಥೆಯ ಶೇ. 26ರಷ್ಟನ್ನು ಮಾರಾಟ ಮಾಡಿದರೆ, ಬೆಮೆಲ್ ಖಾಸಗಿ ಸಂಸ್ಥೆಯಾಗಿ ಮಾರ್ಪಾಡಾಗುತ್ತದೆ. ಕೇಂದ್ರದ ತೀರ್ಮಾನ ಜಾರಿಯಾದಲ್ಲಿ, ನಮ್ಮ ದೇಶದ ಸಾರ್ವಭೌಮತೆ ಮತ್ತು ದೇಶೀಯ ಉತ್ಪಾದನಾ ಸಾಮಥ್ರ್ಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ. 

ಬೆಂಗಳೂರಿನ ಈ ಮೂರು ಉದ್ಯಮಗಳು - ಬಿಇಎಲ್, ಎಚ್‍ಎಎಲ್ ಮತ್ತು ಬೆಮೆಲ್ ಭಾರತ ಸರ್ಕಾರಕ್ಕೆ ವಿವಿಧ ರೂಪದಲ್ಲಿ 2015-16ನೇ ಸಾಲಿನಲ್ಲಿ ನೀಡಿದ ವರಮಾನದ ಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.

ಮುಂದುವರಿದು, ಕೇಂದ್ರ ಸರ್ಕಾರವು ಭಾರತ ಉಕ್ಕು ಪ್ರಾಧಿಕಾರದಡಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಭಾರತದ ಮೊದಲ ಉಕ್ಕಿನ ಕಾರ್ಖಾನೆಯನ್ನೂ ಮಾರಾಟ ಮಾಡಲು ನಿರ್ಧರಿಸಿದೆ. 

ಅಷ್ಟೇ ಅಲ್ಲದೆ, 2016ರಲ್ಲಿ ಆಗಸ್ಟ್‍ನಲ್ಲಿ ಬಿಇಎಲ್ ಸಂಸ್ಥೆಯ ಕಾಪು ನಿಧಿಯಿಂದ 2300 ಕೋಟಿ ರೂಗಳನ್ನು ‘ಬಯ್‍ಬ್ಯಾಕ್’ ಎಂಬ ವಿಚಿತ್ರ ಕ್ರಮದ ಮೂಲಕ ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ. ಅಲ್ಲದೆ, ಬಿಇಎಲ್ ಸಂಸ್ಥೆಯ ಶೇ. 5ರಷ್ಟು ಷೇರು ಬಂಡವಾಳವನ್ನು ವಿನಿಮಯ ವ್ಯಾಪಾರ ನಿಧಿ(ಇಟಿಎಫ್) ಎಂಬ ಅಪಮಾರ್ಗದ ಮೂಲಕ 1670 ಕೋಟಿ ರೂಗಳನ್ನು ಪಡೆದುಕೊಂಡಿದೆ. ಈ ನಿಧಿಯ ಯಜಮಾನಿಕೆಯನ್ನು ರಿಲಾಯನ್ಸ್ ಗೆ ನೀಡಲಾಗಿದೆ.

ಅದೇ ರೀತಿಯಲ್ಲಿ ಎಚ್.ಎ.ಎಲ್ ಸಂಸ್ಥೆಯ ಕಾಪು ನಿಧಿಯಿಂದ ಈಗಾಗಲೇ 5184 ಕೋಟಿ ರೂಗಳನ್ನು ದೋಚಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಎಚ್.ಎ.ಎಲ್‍ನ ಷೇರು ಬಂಡವಾಳವನ್ನು ಇನ್ನಷ್ಟು ಮಾರಾಟ ಮಾಡಲಾಗುವುದೆಂದು ತಿಳಿದು ಬಂದಿದೆ.

ಜನತೆಯ ಆಸ್ತಿಯನ್ನು ಮಾರಾಟ ಮಾಡಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ

ನಿಜಾರ್ಥದಲ್ಲಿ ಭಾರತ ಸರ್ಕಾರವು ಸಾರ್ವಜನಿಕ ವಲಯದ ಮಾಲೀಕನಲ್ಲ. ಸಾರ್ವಜನಿಕ ವಲಯದ ಉದ್ಯಮಗಳು ಜನತೆಯ ಆಸ್ತಿ. ಹೆಚ್ಚೆಂದರೆ ಸರ್ಕಾರವು ಅದರ ಸ್ಥಾಪಕ ಮತ್ತು ವಾರಸುದಾರನಷ್ಟೇ. ನಮ್ಮ ದೇಶದ ಜನತೆ ವಿಶೇಶವಾಗಿ, ದುಡಿಯುವ ವರ್ಗ ಮಾತ್ರವೇ ಸಾರ್ವಜನಿಕ ಉದ್ಯಮದ ಋಜು ಮಾಲೀಕರಾಗಲು ಸಾಧ್ಯ. ಈ ಉದ್ಯಮಗಳನ್ನು ನಡೆಸಿ, ಸರ್ಕಾರ ತನ್ನ ಖರ್ಚಿಗೆ ಅವುಗಳ ಉತ್ಪತ್ತಿಯನ್ನು ಬಳಿಸಿಕೊಳ್ಳಬಹುದು. ಅಂದರೆ ಸರ್ಕಾರ ಈ ಉದ್ಯಮಗಳ ಗೇಣಿದಾರನಷ್ಟೇ; ಗೇಣಿದಾರನು ಉತ್ಪಾದನೆಯನ್ನು ಮಾರಿಕೊಳ್ಳಬಹುದೇ ಹೊರತು, ಜಮೀನಿನನ್ನೇ ಮಾರಾಟ ಮಾಡಲು ಸಾಧ್ಯವಿಲ್ಲ.

ಸಾರ್ವಜನಿಕರ ಆಸ್ತಿಯನ್ನು ವಿವೇಚನೆಯಿಲ್ಲದೆ ಲೂಟಿ ಮಾಡುತ್ತಿರುವ ಸರ್ಕಾರದ ಈ ದುಷ್ಟ ಹುನ್ನಾರವನ್ನು ಈ ಸಮಾವೇಶವು ಖಂಡಿಸುತ್ತದೆ. ಮತ್ತು ಜನವಿರೋಧಿ ಮತ್ತು ರಾಷ್ಟ್ರವಿರೋಧಿಯಾಗಿರುವ ಸರ್ಕಾರದ ಅನೀತಿಯನ್ನು ಸೋಲಿಸಲು ಶತಾಯ-ಗತಾಯ ಶ್ರಮಿಸಲು ಕಟಿಬದ್ಧವಾಗಿದೆ. ಸಾರ್ವಜನಿಕರ ಆಸ್ತಿಯ ಖಾಸಗೀಕರಣವು ನಮ್ಮ ಭಾರತದ ಸಂವಿಧಾನದಲ್ಲಿ ಅಂತಃಗತವಾಗಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೇಲೆ ಎಸಗಿದ ನೇರ ದಾಳಿಯಾಗಿದೆ. ಆದ್ದರಿಂದ, ನಮ್ಮ ದೇಶದ ಜನತೆ, ಕಾರ್ಮಿಕರು, ಮಹಿಳೆಯರು, ಯುವಕರು - ಪ್ರತಿಯೊಬ್ಬರೂ ಸರ್ಕಾರದ ಈ ನೀತಿಯನ್ನು ವಿರೋಧಿಸಿ, ನಮ್ಮ ಹೋರಾಟವನ್ನು ಬೆಂಬಲಿಸಬೇಕೆಂದು ಈ ಸಮಾವೇಶವು ಕರೆ ನೀಡುತ್ತದೆ.

ಈ ಸಮಾವೇಶದ ಕರೆಯನ್ನು ಸಾಕ್ಷಾತ್ಕಾರಗೊಳಿಸಲು, ಜನತೆಯ ಆಸ್ತಿಯನ್ನು ಸಂರಕ್ಷಿಸಲು - ದೇಶದ ಜನರೆಲ್ಲರೂ ಬೆಂಬಲಿಸಿ, ಎಲ್ಲಾ ಹೋರಾಟದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇವೆ. ಸಾರ್ವಜನಿಕ ವಲಯ ಉಳಿಸಿ : ಭಾರತ ಉಳಿಸಿ  ಸಮಾವೇಶದ ತೀರ್ಮಾನದ ಪ್ರಕಾರ ಈ ಕೆಳಕಂಡ ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ :

  1. 2017ರ ಏಪ್ರಿಲ್ 1ರಿಂದ ಬೆಂಗಳೂರು ಮಹಾನಗರದ 198 ವಾರ್ಡುಗಳಲ್ಲಿ ಮತ್ತು ಕೋಲಾರ, ಮೈಸೂರು, ಮತ್ತು ಶಿವಮೊಗ್ಗದ ಎಲ್ಲಾ ತಾಲೂಕುಗಳಲ್ಲಿ ಜನ-ಜಾಗೃತಿ ಪ್ರಚಾರಾಂದೋಳನ.
  1. “ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ” ವಿಷಯ ಕೇಂದ್ರೀಕರಿಸಿ, ಎಲ್ಲಾ ಜನವಿಭಾಗಗಳನ್ನು ತೊಡಗಿಸಿ 2017ರ ಮೇ ದಿನವನ್ನು ಆಚರಿಸುವುದು; ಬೆಂಗಳೂರು ಮತ್ತು ಕರ್ನಾಟಕದ ಎಲ್ಲಾ ನಗರ-ಪಟ್ಟಣಗಳಲ್ಲಿ ಬೃಹತ್ ಮೆರವಣಿಗೆ.
  2. “ಸಾರ್ವಜನಿಕ ವಲಯ ಉಳಿಸಿ, ಭಾರತ ಉಳಿಸಿ” ಸಂದೇಶ ಸಾರುವ ವಾಹನ ಜಾಥಾ ಮೇ 3 ರಿಂದ ಮೇ15 ರವರೆಗೆ.
  3. ಎಲ್ಲಾ ಕೈಗಾರಿಕೆಗಳಲ್ಲಿ ಮೇ 10 ರಂದು ಮುಷ್ಕರದ ನೋಟಿಸ್ ಜಾರಿ ಮಾಡುವುದು.
  4. ಬೆಂಗಳೂರು, ಮೈಸೂರು, ಕೆಜಿಎಫ್, ಮತ್ತು ಶಿವಮೊಗ್ಗದಲ್ಲಿ ಮೇ 25 ರಂದು ಬೃಹತ್ ಹರತಾಳ ಮತ್ತು ಸಾರ್ವತ್ರಿಕ ಪ್ರತಿಭಟನೆ.

 

ಆದಾಯದ ವಿವರ                                                              ವರಮಾನ ಕೋಟಿ ರೂಗಳು

ತೆರೆಗೆ ಮುನ್ನಾ ಲಾಭ                                      1,50,232

ಭಾರತ ಸರ್ಕಾರಕ್ಕೆ ಜಮೆಯಾದ ತೆರಿಗೆ                  47,229

ಸಾಲಕ್ಕೆ ನೀಡಲಾದ ಬಡ್ಡಿ                                   56,801

ಭಾರತ ಸರ್ಕಾರಕ್ಕೆ ನೀಡಲಾದ ಲಾಭಾಂಶ              56,527

ಲಾಭಾಂಶಕ್ಕೆ ಸಂದಾಯವಾದ ತೆರಿಗೆ                     8,642

ಎಲ್ಲಾ ಮೌಲ್ಯಗಳು ಕೋಟಿ ರೂಗಳಲ್ಲಿ

ವರ್ಷ 2015-16        ವಹಿವಾಟು      ವಿವಿಧ ತೆರಿಗೆ ಬಾಬ್ತುಗಳ ಮೂಲಕ     ಲಾಭಾಂಶ        ಲಾಭಾಂಶದ ಮೇಲಿನ ತೆರಿಗೆ    ತೆರಿಗೆ-ಪೂರ್ವ ಲಾಭ

ಬಿಎಇಲ್             7521              451                           408                   83                        1809

ಬೆಮೆಲ್              3426              11.62                         16.66                3.39                     64.27

ಎಚ್.ಎ.ಎಲ್        16,736           1634                         627.32              128                      3,288

ಸಮಾವೇಶ ಅಂಗೀಕರಿಸಿದ ಹೋರಾಟದ ಕಾರ್ಯಕ್ರಮಗಳು

  • ಏಪ್ರಿಲ್-ಮೇ ಗಳಲ್ಲಿ ವ್ಯಾಪಕ ಪ್ರಚಾರಾಂದೋಲನ
  • ಈ ವಿಷಯ ಕೇಂದ್ರೀಕರಿಸಿ ಮೇ ದಿನಾಚರಣೆ 
  • ಮೇ 10 ರಂದು ಮುಷ್ಕರ, 
  • ಮೇ 25 ರಂದು ಹರತಾಳ