ಆರೆಸ್ಸೆಸ್ ಕೇಂದ್ರದಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಗೆ ತಕ್ಕ ಪ್ರತ್ಯುತ್ತರ

ಸಂಪುಟ: 
11
ಸಂಚಿಕೆ: 
14
Sunday, 26 March 2017

ನಾಗಪುರದ ರಾಷ್ಟ್ರಸಂತ ತುಕ್ದೊಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಪ್ರತಿವರ್ಷ ವಿಚಾರ ಸಂಕಿರಣಗಳನ್ನು ನಡೆಸುತ್ತದೆ. ಈ ವರ್ಷ ಮಾರ್ಚ್18-19ರಂದು ‘ಪ್ರಜಾಪ್ರಭುತ್ವದ ಅವನತಿ-ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಏರ್ಪಡಿಸಲು ನಿರ್ಧರಿಸಲಾಯಿತು. ಸೀತಾರಾಮ್ ಯೆಚುರಿಯವರು ಇದನ್ನು ಉದ್ಘಾಟಿಸುತ್ತಾರೆ ಎಂದೂ ನಿರ್ಧರಿಸಲಾಯಿತು. ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಯಿತು, ಪತ್ರಿಕೆಗಳಿಗೂ ತಿಳಿಸಲಾಯಿತು. ಒಂದು ತಿಂಗಳ ಹಿಂದೆ ಯೆಚುರಿಯವರಿಗೆ ವಿಶ್ವವಿದ್ಯಾಲಯ ವಿಮಾನ ಟಿಕೆಟುಗಳನ್ನೂ ಕಳಿಸಿತು. 

ಆದರೆ ಇದ್ದಕ್ಕಿದ್ದಂತೆ ಮಾರ್ಚ್ 14ರಂದು ವಿವಿಯ ಉಪಕುಲಪತಿ ಡಾ.ಎಸ್‍ಪಿ.ಕಾಣೆಯವರು ವಿಚಾರ ಸಂಕಿರಣವನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದರು. ಅದಕ್ಕೆ ಕಾರಣವೇನೂ ಕೊಡಲಿಲ್ಲ. ಉಪಕುಲಪತಿಗಳ ಈ ಪ್ರಕಟಣೆಗೆ ಪ್ರಗತಿಶೀಲ ಶಕ್ತಿಗಳು ಮತ್ತು ಅಂಬೇಡ್ಕರ್‍ವಾದಿ ಪ್ರಾಧ್ಯಾಪಕರುಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮಾಧ್ಯಮಗಳು ಉಪಕುಲಪತಿಗಳನ್ನು ಸಂಪರ್ಕಿಸಿದಾಗ ಇದಕ್ಕೆ ಸರಿಯಾದ ಅನುಮತಿ ಪಡೆಯಲಾಗಿರಲಿಲ್ಲ, ಆಡಳಿತ ನಿಯಮಾವಳಿಗಳನ್ನು ಉಲ್ಲಂಘಿಸಿ ಇದನ್ನು ಸಂಘಟಿಸಲಾಗಿತ್ತು ಎಂದು ಅವರು ಉತ್ತರಿಸಿದರು. ಇದು ನಿಜವಾಗಿರಲಿಲ್ಲ, ಏಕೆಂದರೆ ವಿವಿಯ ಪದವೀದಾನ ಸಭಾಂಗಣವನ್ನು ಕೊಡಲಾಗಿತ್ತು ಮತ್ತು ಸ್ವತಃ ಉಪಕುಲಪತಿಗಳೇ ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆ ವಹಿಸಬೇಕಾಗಿತ್ತು. 

ಪ್ರಖ್ಯಾತ ದಲಿತ ಸಾಹಿತಿ ಡಾ.ಯಶವಂತ ಮನೋಹರ್ ಮತ್ತಿತರ ಪ್ರಗತಿಪರರು ಇದ್ದ ನಿಯೋಗ ಉಪಕುಲಪತಿಗಳನ್ನು ಭೇಟಿ ಮಾಡಿತು. ನಂತರ ಉಪಕುಲಪತಿಗಳು ಮಾಧ್ಯಮಗಳಿಗೆ ನೀಡಿದ ಕಾರಣ ಎಂದರೆ ಸೀತಾರಾಮ್ ಯೆಚುರಿಯವರ ಭೇಟಿ ನಗರದಲ್ಲಿ ಕಾನೂನು ವ್ಯವಸ್ಥೆಯ ಸಮಸ್ಯೆ ಉಂಟುಮಾಡುತ್ತದೆ, ಗಲಭೆ ಉಂಟು ಮಾಡುತ್ತದೆ ಎಂದು ಕಾರ್ಯಕ್ರವನ್ನು ಮುಂದೂಡಲಾಗಿದೆ ಎಂದು.

ಉಪಕುಲಪತಿಗಳ ಈ ಹೇಳಿಕೆಯಿಂದ ಆಕ್ರೋಶಗೊಂಡ ಪ್ರಗತಿಪರರು ಮತ್ತು ಪ್ರಜಾಪ್ರಭುತ್ವವಾದಿಗಳು ಅದೇ ದಿನ ಅದೇ ವಿಷಯದಲ್ಲಿ ನಾಗಪುರದಲ್ಲಿ ಕಾರ್ಯಕ್ರಮ ನಡೆಸಿಯೇ ತೀರಬೇಕು ಎಂದು ನಿರ್ಧರಿಸಿದರು. ಏಕೆಂದರೆ ಆರೆಸ್ಸೆಸ್/ ಬಿಜೆಪಿಯ ಒತ್ತಡದಿಂದಲೇ ಉಪಕುಲಪತಿಗಳು ಅದನ್ನು ಮುಂದೂಡಿದ್ದಾರೆ ಎಂಬ ಬಗ್ಗೆ ಯಾರಿಗೂ ಸಂದೇಹವಿರಲಿಲ್ಲ. 

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕಾಲೇಜಿನ ಪ್ರಿನ್ಸಿಪಾಲರು ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮದ ದೀಕ್ಷೆ ತಗೊಂಡ ಚಾರಿತ್ರಿಕ ಮೈದಾನ ದೀಕ್ಷಾಭೂಮಿಯ ಸಮೀಪವೇ ಇರುವ ತಮ್ಮ ಕಾಲೇಜಿನ ಸಭಾಂಗಣವನ್ನು  ಕಾರ್ಯಕ್ರಮಕ್ಕೆ ಒದಗಿಸಿದರು. ಇದು ಮಹಾರಾಷ್ಟ್ರದಾದ್ಯಂತ ಮಾತ್ರವಲ್ಲ ದೇಶದಾದ್ಯಂತವೂ ದೊಡ್ಡ ಸುದ್ದಿಯಾಯಿತು. 

ಮಾರ್ಚ್ 18ರಂದು ನಗರದ ಪ್ರಗತಿಪರ ಶಕ್ತಿಗಳು ಯೆಚುರಿಯವರನ್ನು ಬರಮಾಡಿಕೊಂಡು ವಿಚಾರ ಸಂಕಿರಣವನ್ನು ನಡೆಸುವ ವರೆಗೆ ದಿನವಿಡೀ ವ್ಯಾಪಿಸಿದ ಕಾರ್ಯಕ್ರರಗಳನ್ನು ಹಮ್ಮಿಕೊಂಡರು.

ಯೆಚುರಿಯವರು ಬರಬೇಕಾಗಿದ್ದ ವಿಮಾನ ಒಂದು ಗಂಟೆ ತಡವಾಗಿದ್ದರೂ ಎಡಪಕ್ಷಗಳು, ರಿಪಬ್ಲಿಕನ್ ಪಕ್ಷದ ಎಲ್ಲ ಗುಂಪುಗಳು, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮುಂತಾದವುಗಳ ನೂರಾರು ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಕಾದಿದ್ದು ಯೆಚುರಿಯವರು ವಿಮಾನದಿಂದ ಇಳಿಯುತ್ತಿದ್ದಂತೆಯೇ ಲಾಲ್ ಸಲಾಮ್ ಮತ್ತು ಜೈಭೀಮ್ ಘೋಷಣೆಗಳೊಂದಿಗೆ ಅವರಿಗೆ ಭವ್ಯ ಸ್ವಾಗತ ನೀಡಿದರು. ಅವರನ್ನು 500ಕ್ಕೂ ಹೆಚ್ಚು ಮೋಟಾರು ಸೈಕಲ್‍ಗಳು ಮತ್ತು ಕಾರುಗಳಿದ್ದ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳದ ವರೆಗೂ ಕರೆದೊಯ್ದರು. ಮಾರ್ಗಮಧ್ಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮತ್ತು ನಂತರ ಸಂವಿಧಾನ ಚೌಕ್‍ದಲ್ಲಿ ಬಾಬಾಸಾಹೇಬರ ಪ್ರತಿಮೆಗೆ, ಮುಂದೆ ವಿಶ್ವ ವಿದ್ಯಾಲಯ ಆವರಣದಲ್ಲಿ ವಿದರ್ಭ ಪ್ರದೇಶದ ಪ್ರಖ್ಯಾತ ಸಾಮಾಜಿಕ ಸುಧಾರಕ ಡಾ.ಪಂಜಾಬ್‍ರಾವ್ ದೇಶಮುಖ್ ಪ್ರತಿಮೆಗೆ  ಯೆಚುರಿಯವರಿಂದ ಮಾಲಾರ್ಪಣೆಯ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.

ಮೆರವಣಿಗೆ ದೀಕ್ಷಾಭೂಮಿ ತಲುಪಿದಾಗ ಅಲ್ಲಿ ಯೆಚುರಿಯವರು ನಮನ ಸಲ್ಲಿಸಿ ವಿಚಾರ ಸಂಕಿರಣ ನಡೆಯಲಿದ್ದ ಸಭಾಂಗಣ ತಲುಪಿದಾಗ ಮಾಧ್ಮಮಗಳ ದಂಡು ಅವರನ್ನು ಕಾದಿತ್ತು. 

ವಿಚಾರ ಸಂಕಿರಣದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಜನ ಹೊರಗೆ ಮತ್ತು ಕಾಲೇಜು ಕಟ್ಟಡದ ಎಲ್ಲ ಅಂತಸ್ತುಗಳಲ್ಲೂ ನೆರೆದಿದ್ದರು. ಅವರಿಗಾಗಿ ಪ್ರತ್ಯೇಕ  ಸ್ಕ್ರೀನುಗಳನ್ನೂ ಹಾಕಲಾಯಿತು. 

ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಿ.ಸಿ.ಪವಾರ್ ಅಧ್ಯಕ್ಷತೆ ವಹಿಸಿದರು. ಐತಿಹಾಸಿಕ ದೀಕ್ಷಾಭೂಮಿಯ ಬಳಿ ಉಪನ್ಯಾಸ ಕೊಡುವ ಅವಕಾಶ ತನಗೊಂದು ಗೌರವದ ಸಂಗತಿ ಎಂದು ಭಾಷಣ ಆರಂಭಿಸಿದ ಯೆಚುರಿ ಸಂವಿಧಾನದ ಮೂರು ಮೂಲತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವಕ್ಕೆ ಬೆದರಿಕೆ ಬಂದಿದೆ, ಈ ತತ್ವಗಳನ್ನು ಅರ್ಥಮಾಡಿಕೊಂಡು, ಸ್ವೀಕರಿಸಿ ಅಂಗೀಕರಿಸದಿದ್ದರೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹೆಚ್ಚುತ್ತಲೇ ಹೋಗುತ್ತದೆ ಎಂದರು. ಸಂವಿಧಾನದ ಆಶಯಗಳ ಬಗ್ಗೆ ಮಾತಾಡಿದರು. ಈಗ ಸಮಾನತೆ ಹಿಂದೆಂದಿಗಿಂತಲೂ ಹೆಚ್ಚಿರುವ ಸಂಗತಿಯತ್ತ ಗಮನ ಸೆಳೆದರು. ಅಸಮಾನತೆ ಇಂದು ಅತಿ ದೊಡ್ಡ ಸವಾಲು, ಯುವಜನರು ಇದರ ವಿರುದ್ಧ ಐಕ್ಯತೆಯಿಂದ ಹೋರಾಡಬೇಕು, ಭಾರತದಲ್ಲಿ ಪ್ರಜಾಪ್ರಭುತ್ವ ಸಾಯುವುದಿಲ್ಲ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.

ಅಂತಿಮವಾಗಿ ವಿಧಾನಸಭಾ ಚುನಾವಣೆಗಳ ನಂತರದ ಸನ್ನಿವೇಶವನ್ನು ಪ್ರಸ್ತಾಪಿಸುತ್ತ ಯೆಚುರಿ  ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಟಾಪಿಸಿರುವುದು ಅಪಾಯಕಾರಿ ಸಂಕೇತ, ಇದನ್ನು ಎದುರಿಸಲು ಎಡ, ಜನವಾದಿ ಮತ್ತು ಜಾತ್ಯತೀತ ಶಕ್ತಿಗಳ ಒಂದು ಐಕ್ಯ ಹೋರಾಟ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಮೂಡಿಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಆರೆಸ್ಸೆಸ್‍ನ ಕೇಂದ್ರದಲ್ಲಿ ಅದರ ಕುಮ್ಮಕ್ಕಿನಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ, ಅದಕ್ಕೆ ಪ್ರಗತಿಪರ ಪ್ರಜಾಪ್ರಭುತ್ವವಾದಿ  ಶಕ್ತಿಗಳ ಪ್ರತ್ಯುತ್ತರವಾಗಿ ಯಶಸ್ವಿಯಾಗಿ  ನಡೆದ ಈ ಕಾರ್ಯಕ್ರಮ ಇಂತಹ ವಿಶ್ವಾಸವನ್ನು ಬಲಗೊಳಿಸಿದೆ.