ತೆಂಗು ಬೆಳೆಗಾರರ ಸಮಾವೇಶ

ಸಂಪುಟ: 
11
ಸಂಚಿಕೆ: 
13
Sunday, 19 March 2017

ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಿದರೆ ಮಾತ್ರ ರೈತರು ಉಳಿಯಬಹುದು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಪ್ರಮುಖ ಬೆಳೆ ತೆಂಗು ಇಲ್ಲಿಯ ಬಹುತೇಕ ರೈತರು ಇದೇ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ತೆಂಗನ್ನ ಕಲ್ಪವೃಕ್ಷ ಎಂದು ಕರೆಯುತ್ತಾರೆ ಆದರೆ ಇದೇ ಕಲ್ಪವೃಕ್ಷದ ನಾಡು ಇಂದು ಬರಡಾಗಿ ಪರಿವರ್ತನೆಯಾಗುತ್ತಿದೆ. ಒಂದೆಡೆ ಮಳೆಯ ಅಭಾವ ಬರಗಾರದಿಂದಾಗಿ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದರೆ ಇನ್ನೊಂದೆಡೆ ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಸರಿಯಾದ ಬೆಲೆ ಸಿಗದಿರುವುದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ಬೆಳೆವಾರು ರೈತರನ್ನು ಸಂಘಟಿಸಲು ಮತ್ತು ಅವರ ಸಮಸ್ಯೆಗಳನ್ನು ಗುರುತಿಸಿ ಹೋರಾಟಗಳನ್ನು ಕಟ್ಟಿಬೆಳೆಸಲು ರಾಜ್ಯ ಮಟ್ಟದಲ್ಲಿ ಯೋಜನೆಯನ್ನು ರೂಪಿಸಿದೆ ಇದರ ಭಾಗವಾಗಿ ಚನ್ನರಾಯ ಪಟ್ಟಣ ತಾಲ್ಲೂಕಿನಲ್ಲಿ ನಡೆದ ತೆಂಗು ಬೆಳೆಗಾರರ ಸಮಾವೇಶದ ಕುರಿತು ಒಂದು ವರದಿ.

ಕೃಷಿ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ವೈಜ್ಷಾನಿಕ ಬೆಲೆ ಸಿಗದಿರುವುದರಿಂದ ರೈತರು ಅತ್ಯಂತ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆಯ ದಾರಿಯನ್ನು ತುಳಿಯುತ್ತಿದ್ದಾರೆ. ರೈತರನ್ನು ಈ ಪರಿಸ್ಥಿತಿಯಿಂದ ಹೊರತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ತಜ್ಞರಾದ ಡಾ.ಎಂ.ಎಸ್.ಸ್ವಾಮಿನಾಥನ್‍ರವರ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಮಾದನಾ ವೆಚ್ಚಕ್ಕೆ ಶೇ.50 ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಿದರೆ ಮಾತ್ರ ರೈತರು ಉಳಿಯಬಹುದು ಆಮೂಲಕ ಕೃಷಿ ಮತ್ತು ದೇಶ ಉಳಿಯಲು ಸಾಧ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆಯವರು ಹೇಳಿದರು. ಇಂದು ಚನ್ನರಾಯಪಟ್ಟಣದ ಕರ್ನಾಟಕ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ಏರ್ಪಡಿಸಿದ್ದ ತೆಂಗು ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಸಿಗೆ ನೀರೆರೆಯುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ಮಾರುತಿ ಮಾನ್ಪಡೆಯವರು 1991 ರ ನವ ಉದಾರೀಕರಣ ನೀತಿಗಳ ಪರಿಣಾಮ ಕೃಷಿ ಅತ್ಯಂತ ಬಿಕ್ಕಟ್ಟಿಗೆ ಸಿಲುಕುತ್ತಿದೆ. ನಮ್ಮ ದೇಶದಲ್ಲಿ ಬೆಳೆಯುವ ತೆಂಗು, ರೇಷ್ಮೆ, ತೊಗರಿ ಮುಂತಾದ ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಗಳಲ್ಲಿ ಕಡಿಮೆ ದರಗಳಿಗೆ ಮಾರಾಟ ಮಾಡುತ್ತಿರುವುದರಿಂದ ಇಲ್ಲಿಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ.  ತೆಂಗು ಬೆಳೆಯುವ ರೈತರು ಕಳೆದ ಐದಾರು ವರ್ಷಗಳ ನಿರಂತರ ಬರಗಾಲದಿಂದಾಗಿ ಅಂತರ್ಜಲದ ಮಟ್ಟ ತೀವ್ರ ಕುಸಿತದಿಂದಾಗಿ ತೆಂಗಿನ ಬೆಳೆ ನಷ್ಟವಾಗುತ್ತಿದ್ದು ಇಳುವರಿ ಕುಸಿದಿದೆ. ಮತ್ತೊಂದೆಡೆ ಕೈಗೆ ಬಂದ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸಕಾರಗಳು ಕೇರಳ ಮಾದರಿಯಲ್ಲಿ ತೆಂಗು ಬೆಳೆ ನಷ್ಟ ಪರಿಹಾರಕ್ಕಾಗಿ ವಿಷೇಶ ಪ್ಯಾಕೇಶ್ ಘೋಷಿಸಿ ಈ ಭಾಗದ ಕೆರೆಗಳಿಗೆ ಕನಿಷ್ಟ ವರ್ಷಕ್ಕೆ ಒಂದು ಬಾರಿಯಾದರೂ ನೀರನ್ನು ತುಂಬಿಸಿದರೆ ಅಂತರ್ಜಲದ ಮಟ್ಟ ಉತ್ತಮಗೊಂಡು ತೆಂಗಿನ ಬೆಲೆ ಉತ್ತಮವಾಗಿ ಫಲ ನೀಡಲಿದೆ. ಇದಕ್ಕಾಗಿ ತೆಂಗುಬೆಳೆಗಾರರು ಸಂಘಟಿತರಾಗಿ ಹೋರಾಟಮಾಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಸಮಾವೇಶದ ಮೊದಲಿಗೆ ಪ್ರಾಸ್ಥಾವಿಕ ನುಡಿಗಳನ್ನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್ ಕುಮಾರ್ ರವರು ಜಿಲ್ಲೆಯಲ್ಲಿ 66,206 ಎಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು ಇದರಲ್ಲಿ ಚನ್ನರಾಯಪಟ್ಟಣ ಎರಡನೇ ಸ್ಥಾನದಲ್ಲಿದ್ದು 25,200 ಎಕ್ಟೇರ್‍ಗಳಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಆದರೆ ಕಳೆದ ಹಲವು ವರ್ಷಗಳ ಬರಗಾಲ ಮತ್ತು ನುಸಿ ರೋಗ ಮತ್ತಿತರೆ ರೋಗಗಳಿಂದಾಗಿ ಸುಮಾರು 6 ಸಾವಿರ ಎಕ್ಟೇರ್ ಪ್ರದೇಶದ ತೆಂಗಿನ ಬೆಳೆ ನಾಶವಾಗಿದ್ದು ಈ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರಗಳಿಂದ ಯಾವುದೇ ರೀತಿಯ ಪರಿಹಾರಗಳನ್ನು ಇದುವರೆಗು ನೀಡಲಾಗಿಲ್ಲ. ಮತ್ರವಲ್ಲದೆ ಕೇರಳ ಮಾದರಿಯಲ್ಲಿ ತೆಂಗಿನ ಉತ್ಪಾದನೆಗಳನ್ನು ವಿವಿಧ ರೀತಿಯಲ್ಲಿ ಬಳಕೆಮಾಡಿ ಅವುಗಳಿಗೆ ಸ್ಥಳೀಯ ಮಾರುಕಟ್ಟೆಗಳನ್ನು ಒದಗಿಸುವು ಯಾವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಇದರಿಂದ ಕೃಷಿಗಾಗಿ ಸಾಲ ಮಾಡಿದ ರೈತರು ಸಾಲಗಳನ್ನು ತೀರಿಸಲಾಗದೆ ಸಾವಿಗೆ ಶರಣಾಗುತ್ತಿದ್ದಾರೆ ಎಂದರು.

ಸಮಾವೇಶದ ಅದ್ಯಕ್ಷತೆ ವಹಿಸಿದ್ದ ಎಚ್.ಎಸ್.ಮಂಜುನಾಥ್‍ರವರು ಮಾತನಾಡುತ್ತ ಚನ್ನರಾಯಪಟ್ಟಣ ತಾಲ್ಲೂಕಿನ ರೈತರು ತೆಂಗು ಬೆಳೆದು ನಷ್ಟ ಅನುಭವಿಸುತ್ತಿದ್ದರೂ ಪರ್ಯಾಯ ಬೆಳೆ ಮಾಡದಂತಹ ಅತಂತ್ರ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ತೆಂಗು ಬಹುವಾರ್ಷಿಕ ಬೆಳೆಯಾಗಿರುವುದರಿಂದ ಈ ಬೆಳೆಯನ್ನು ಉಳಿಸಲು ಆ ಮೂಲಕ ರೈತ ಸಮುದಾಯವನ್ನು ಉಳಿಸಲು ಪ್ರಭಲ ರೈತ ಚಳುವಳಿಯನ್ನು ಕಟ್ಟಿ ಬೆಳೆಸಬೇಕಿದೆ ಎಂದರು.

ಸಮಾವೇಶದಲ್ಲಿ ಕೆಪಿಆರ್‍ಎಸ್‍ನ ಜಿಲ್ಲಾ ಕಾರ್ಯದರ್ಶಿ ವಸಂತ್‍ಕುಮಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿ ರವಿ ನಾಯಕ್, ರೈತ ಮುಖಂಡರಾದ ಮಂಜೇಗೌಡ ಮತ್ತು ನಿವೃತ್ತ ಪ್ರಾಂಶುಪಾಲರಾದ ಮೇಲಗಿರಿಗೌಡರವರು ಉಪಸ್ಥಿತರಿದ್ದರು

ಸಮಾವೇಶದ ಸ್ವಾಗತವನ್ನು ವಾಸುದೇವ್ ಕಲ್ಕೆರೆ ಮಾಡಿದರು ನಿರೂಪಣೆಯನ್ನು ಡಿ.ಎಲ್.ರಾಘವೇಂದ್ರ ಮಾಡಿದರು.

ಸಮಾವೇಶದ ಕೊನೆಯಲ್ಲಿ 20 ಸದಸ್ಯರನ್ನೊಳಗೊಂಡ ಚನ್ನರಾಯಪಟ್ಟಣ ತಾಲ್ಲೂಕು ತೆಂಗು ಬೆಳೆಗಾರರ ಹೋರಾಟ ಸಮಿತಿಯನ್ನು ರಚಿಸಲಾಯಿತು. ಇದರ ಸಂಚಾಲಕರಾಗಿ ಎಚ್.ಎಸ್.ಮಂಜುನಾಥ್ ಆಯ್ಕೆಯಾದರು. ಮತ್ತು ಏಪ್ರಿಲ್ 1 ರಂದು ನಷ್ಟಕ್ಕೊಳಗಾಗಿರುವ ತೆಂಗಿಗೆ ಪರಿಹಾರಕ್ಕೆ ಆಗ್ರಹಿಸಿ ಮತ್ತು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸಬೇಕೆಂದು ಒತ್ತಾಯಿಸಿ ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.