ಬಂಡವಾಳಶಾಹಿ ಆರ್ಥಿಕತೆ ಮತ್ತು ಜಾಹಿರಾತು ಉದ್ಯಮ

ಸಂಪುಟ: 
11
ಸಂಚಿಕೆ: 
13
date: 
Sunday, 19 March 2017
Image: 

ಉದ್ಯಮಿ-ವ್ಯಾಪಾರಿಗಳು ಜಾಹಿರಾತು ಸಂಸ್ಥೆಗಳಿಗೆ ಕೊಡುವ ಅಗಾಧ ಮೊತ್ತದ ಹಣ ವ್ಯಾಪಾರದ ಖರ್ಚು ಎಂದು ಪರಿಗಣಿತವಾಗುವುದರಿಂದ ಅದಕ್ಕೆ ತೆರಿಗೆ ಇಲ್ಲ. ಇದರ ಹೊರೆ ಜನಸಾಮಾನ್ಯ ಬಳಕೆದಾರರು ಮತ್ತು ದುಡಿಮೆಗಾರರ ಮೇಲೆ ಎರಡು ಪಟ್ಟಾಗಿ ಬೀಳುತ್ತಿದೆ. ಒಂದು: ಉದ್ಯಮಿ-ವ್ಯಾಪಾರಿಗಳು ಜಾಹಿರಾತಿನ ವೆಚ್ಚವನ್ನು ಸರಕು-ಸೇವೆಗಳ ಮಾರಾಟದ ಬೆಲೆಯಲ್ಲಿ ಸೇರಿಸುವುದರಿಂದ ಈ ಸಂಬಂಧ ಉದ್ಯಮಿ-ವ್ಯಾಪಾರಿಗಳು ಸರ್ಕಾರದಿಂದ ಪಡೆಯುವ ತೆರಿಗೆ ರಿಯಾಯತಿಯ ಹೊರೆಯನ್ನು ಬಳಕೆದಾರರೇ ಹೊತ್ತುಕೊಂಡಿದ್ದಾರೆ. ಎರಡು: ಸರ್ಕಾರದ ಒಟ್ಟು ಆದಾಯಕ್ಕೆ ಸೇರಬೇಕಾಗಿದ್ದ ಹಣದ ಮೊತ್ತ ಜಾಹಿರಾತು ಖರ್ಚಿನ ತೆರಿಗೆ ರಿಯಾಯಿತಿಯ ಹೆಸರಿನಲ್ಲಿ ಉದ್ಯಮಿ-ವ್ಯಾಪಾರಿಗಳಲ್ಲೇ ಉಳಿಯುವುದರಿಂದ ವಾರ್ಷಿಕ ಆಯ-ವ್ಯಯದ ಮಂಡನೆಯಲ್ಲಿ ತೋರಿಸುವ ವಿತ್ತೀಯ ಕೊರತೆ ಅನವಶ್ಯಕವಾಗಿ ದೊಡ್ಡದಾಗುತ್ತದೆ.

ಜಾಹಿರಾತು ವ್ಯಾಪಾರದ ಅವಿಭಾಜ್ಯ ಅಂಗ. ದುಡಿಯುವ ಜನರ ಮುಂದಾಳತ್ವದಲ್ಲಿ ಸಂಘಟಿತಗೊಂಡ ಸಮಾಜವಾದೀ ಆರ್ಥಿಕತೆಯಲ್ಲಿ ವ್ಯಾಪಾರ ಎಂಬುದು ಕೇವಲ ಸರಕು ಮತ್ತು ಸೇವೆಗಳ ವಿನಿಮಯ ವ್ಯವಸ್ಥೆಯಾಗಿರುತ್ತದೆ. ಅಂಥ ವ್ಯಾಪಾರದಲ್ಲಿ ಜಾಹಿರಾತುಗಳು ಸರಕು ಮತ್ತು ಸೇವೆಗಳ ಬೆಲೆ, ಗುಣಮಟ್ಟ, ಲಭ್ಯತೆ ಮತ್ತು ಅವನ್ನು ಜನರಿಗೆ ಒದಗಿಸುವ ಸಂಸ್ಥೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಕೊಡುವಂಥ ಪ್ರಕಟಣೆಗಳಾಗಿರುತ್ತವೆ.

ನಾವಿರುವ ಬಂಡವಾಳಶಾಹಿ ಆರ್ಥಿಕತೆಯಲ್ಲಿ ವ್ಯಾಪಾರ ಕೇವಲ ಸರಕು-ಸೇವೆಗಳ ವಿನಿಮಯ ವ್ಯವಸ್ಥೆ ಮಾತ್ರ ಅಲ್ಲ. ಜನರ ಗಳಿಕೆಯ ಬಹುಭಾಗವನ್ನು, ಲಾಭ, ಬಡ್ಡಿ, ಬಾಡಿಗೆ ಮತ್ತು ಕಮೀಷನ್‍ಗಳ ರೂಪದಲ್ಲಿ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ವರ್ಗಾಯಿಸುವ ಆರ್ಥಿಕ ಚಟುವಟಿಕೆ. ಇದರಲ್ಲಿ ಹಣ ಕೇವಲ ಸರಕು-ಸೇವೆಗಳ ವಿನಿಮಯದ ಮಾಧ್ಯಮವಾಗಿರದೆ, ಬಂಡವಳಿಗರ ಪರವಾಗಿ ಉತ್ಪಾದನೆಯ ಮೌಲ್ಯದ ಮೇಲೆ ಸವಾರಿಮಾಡುವ ವಿಶೇಷ ಸರಕಾಗಿ ಬಳಕೆಯಾಗುತ್ತದೆ. ಅಂದರೆ ಹಣ ಯಾವುದೇ ಸರಕು-ಸೇವೆಯ ವಿನಿಮಯ ಮೌಲ್ಯದ ಅಳತೆಗೋಲು, ಗುಣಮಟ್ಟ, ಲಭ್ಯತೆ ಮತ್ತು ಬೇಡಿಕೆ-ಪೂರೈಕೆಗಳನ್ನು ನಿರ್ಧರಿಸುವ ಅಗೋಚರ ಶಕ್ತಿಯಾಗುತ್ತದೆ. ಹೀಗಾಗಿ ಹಣದ ಉತ್ಪಾದನೆ ಸರಕು-ಸೇವೆಗಳ ಉತ್ಪಾದನೆಗಿಂತ ಹೆಚ್ಚು ಮುಖ್ಯವಾಗುತ್ತದೆ. ಹಣದ ಉತ್ಪಾದನೆ ಮತ್ತು ಹರಿವನ್ನು ನಿಯಂತ್ರಿಸುವ ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಬಂಡವಳಿಗರ ಕೈಲೇ ಇರುವವರೆಗೆ ಹಣವೇ ಎಲ್ಲಕ್ಕಿಂತ ಮುಖ್ಯವಾದ ಬದುಕಿನ ಸಾಧನವಾಗಿರುತ್ತದೆ. ವ್ಯಾಪಾರವೇ, ಕೃಷಿ ಉತ್ಪನ್ನಗಳೂ ಸೇರಿದಂತೆ, ಎಲ್ಲ ಉತ್ಪಾದನೆಯನ್ನೂ ನಿಯಂತ್ರಿಸುವ ಆರ್ಥಿಕ ಚಟುವಟಿಕೆಯಾಗಿರುತ್ತದೆ. ಜನರ ಪ್ರತಿಭೆ, ಬುದ್ಧಿವಂತಿಕೆ, ಕ್ರಿಯಾಶೀಲತೆ, ಸೃಜನಶೀಲತೆ, ಕಲೆ-ಸಾಹಿತ್ಯಸೃಷ್ಟಿ, ಸೌಂದರ್ಯಪ್ರಜ್ಞೆ, ನೈತಿಕತೆ, ಸುಖ-ನ್ಯಾಯ-ನೆಮ್ಮದಿಗಳ ಪರಿಕಲ್ಪನೆಗಳು ಸಹ ಹಣವನ್ನು ಆಧರಿಸಿ ರೂಪುಗೊಳ್ಳುತ್ತವೆ. ಅಂಥ ಸಮಾಜದಲ್ಲಿ ಹಣ ಮಾಡುವವರು ಬುದ್ಧಿವಂತರೆಂದೂ, ಹಣವನ್ನು ಕಳೆದುಕೊಳ್ಳುವವರು ದಡ್ಡರೆಂದೂ ಪರಿಗಣಿಸಲ್ಪಡುತ್ತಾರೆ. ಜಾಹಿರಾತು ಸರಕು-ಸೇವೆಗಳ ಬಗೆಗಿನ ಮಾಹಿತಿಗಳ ಪ್ರಕಟಣೆಗೆ ಸೀಮಿತಗೊಳ್ಳದೆ ಜನರ ಅಗತ್ಯಗಳು ಯಾವುವು ಎಂಬುದನ್ನು ತಾನೇ ನಿರ್ಧರಿಸುವ, ನಿರ್ದೇಶಿಸುವ, ಸೃಷ್ಟಿಸುವ ಮತ್ತು ನಿಯಂತ್ರಿಸುವ ವಿಶೇಷ ವ್ಯಾಪಾರವಾಗುತ್ತದೆ.

ಸರಕು-ಸೇವೆಗಳ ಬೆಲೆ ಆಧಾರಿತ ವಿನಿಮಯದಲ್ಲಿ ಮಾರುವವರನ್ನು ವ್ಯಾಪಾರಿಗಳೆಂದೂ, ಕೊಳ್ಳುವವರನ್ನು ಗ್ರಾಹಕರೆಂದೂ ಗುರುತಿಸುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಕೊಳ್ಳುವವರಲ್ಲಿಯೂ ‘ಬಳಕೆಗಾಗಿ ಕೊಳ್ಳುವವರು’ ಮತ್ತು ‘ಮಾರುವುದಕ್ಕಾಗಿ ಕೊಳ್ಳುವವರು’ ಎಂಬ ಎರಡು ವಿಧದ ಗ್ರಾಹಕರಿದ್ದಾರೆ ಎಂಬುದನ್ನು ಎಲ್ಲರೂ ಗಮನಿಸುವುದಿಲ್ಲ. ಸರಕು-ಸೇವೆಗಳನ್ನು ಮತ್ತೆ ಮಾರುವುದಕ್ಕಾಗಿ ಕೊಳ್ಳುವ ಗ್ರಾಹಕರು ವ್ಯಾಪಾರಿಗಳೇ. ಮತ್ತೆ ಮಾರದೆ ತಮ್ಮ ಬಳಕೆಗಾಗಿ ಕೊಳ್ಳುವ ಗ್ರಾಹಕರು ಮಾತ್ರ ಬಳಕೆದಾರರು. ವ್ಯಾಪಾರಿಗೆ ಕೊಳ್ಳುವಾಗಲೂ ಲಾಭವಾಗಬೇಕು. ಮಾರುವಾಗಲೂ ಲಾಭವಾಗಬೇಕು. ತನ್ನ ವ್ಯಾಪಾರದ ಅಗತ್ಯಗಳಾದ, ಬಂಡವಾಳ ಹೂಡಿಕೆ, ದಾಸ್ತಾನುವೆಚ್ಚ, ಸಂಚಾರ-ಸಾಗಣೆವೆಚ್ಚ, ಕಟ್ಟಡದ ಬಾಡಿಗೆ, ವೈಯಕ್ತಿಕ ಜೀವನವೆಚ್ಚಗಳು ಮಾತ್ರವಲ್ಲ, ತನ್ನ ವೈಯಕ್ತಿಕ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಜಾಹಿರಾತಿನ ವೆಚ್ಚ ಎಲ್ಲವನ್ನೂ ಸರಕು-ಸೇವೆಗಳ ಮಾರಾಟದ ಬೆಲೆಯಲ್ಲಿ ಸೇರಿಸಿ ಬಳಕೆದಾರನ ಮೇಲೆ ಹೇರುವುದು ಬಂಡವಾಳಶಾಹಿ ವ್ಯಾಪಾರದಲ್ಲಿ ಸರ್ವಸಮ್ಮತವಾದ ಕ್ರಮ. ಅಷ್ಟೇ ಅಲ್ಲ ಗ್ರಾಹಕರ ಪರವಾಗಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನೂ ಪೂರ್ಣವಾಗಿ ಸಲ್ಲಿಸದೆ, ಅಲ್ಲೂ ಲಾಭ ಮಾಡಿಕೊಳ್ಳುವ ವ್ಯಾಪಾರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸುಲಭಸಾಧ್ಯ. ಅಂಥ ಲಾಭದ ಒಂದಂಶವನ್ನು ತೆರಿಗೆ ಅಧಿಕಾರಿಗಳಿಗೆ ಲಂಚವಾಗಿ, ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಕೊಟ್ಟು ಕ್ಷೇಮವಾಗಿರುವ ಸೌಲಭ್ಯ ಭಾರತದ ವಾಣಿಜ್ಯ ಪ್ರಪಂಚದಲ್ಲಿ ಎಲ್ಲ ಕಾಲದಲ್ಲೂ ಇದೆ. ಆದರೆ ಬಳಕೆದಾರರು ಮಾತ್ರ ವೃತ್ತ ಪತ್ರಿಕೆಗಳೂ ಸೇರಿದಂತೆ ಏನನ್ನು ಕೊಳ್ಳುವಾಗಲೂ ಮಾರುವವರು ಕೇಳಿದಷ್ಟನ್ನು ಕೊಡಲೇಬೇಕು. ಕೊಂಡದ್ದರಲ್ಲಿ ಬಳಸಿ ಉಳಿದದ್ದನ್ನು ಅಥವಾ ಹಳತಾದದ್ದನ್ನು ಮಾರುವಾಗ, ಅವನ್ನು ಕೊಳ್ಳುವ ವ್ಯಾಪಾರಿಯು ಕೊಟ್ಟಷ್ಷನ್ನು ಪಡೆದು ತೃಪ್ತರಾಗಬೇಕು. ಬಳಕೆದಾರರು ಕೊಳ್ಳುವಾಗ ಚಿನ್ನ-ಬೆಳ್ಳಿಯ ಆಭರಣ, ವೃತ್ತಪತ್ರಿಕೆ-ನಿಯತಕಾಲಿಕೆಗಳಿಗೆ ಕೊಡುವ ಬೆಲೆಯನ್ನು ಬಳಸಿದ ಚಿನ್ನ-ಬೆಳ್ಳಿಯ ಆಭರಣಗಳು, ರದ್ದಿಕಾಗದವನ್ನು ಮಾರುವಾಗ ಬಳಕೆದಾರರಿಗೆ ಸಿಗುವ ಬೆಲೆಗೆ ಹೋಲಿಸಿದರೆ ಈ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ, ಬಳಕೆದಾರರು ಹೊಸದಾಗಿ ಕೊಳ್ಳಲಿ ಅಥವಾ ಹಳತನ್ನು ಮಾರಲಿ ಅವರು ಕಳೆದುಕೊಳ್ಳುವುದು ಹೆಚ್ಚು, ಪಡೆದುಕೊಳ್ಳುವುದು ಕಡಿಮೆ.

ಪ್ರತ್ಯಕ್ಷ ಪರೋಕ್ಷ ತೆರಿಗೆ

ಸರ್ಕಾರವೆಂದರೆ ಜನರು ತಮ್ಮ ಉದ್ಯೋಗ, ಶಿಕ್ಷಣ, ಆರೋಗ್ಯ, ನೀರು ಮತ್ತು ಆಹಾರಗಳ ಪೂರೈಕೆಯನ್ನು ಸಂಘಟಿಸಿ ನಿಯಂತ್ರಿಸಲು ಮಾಡಿಕೊಂಡಿರುವ ಏರ್ಪಾಡು. ಇದು ಚಲಾಯಿಸುವ ಅಧಿಕಾರ ಜನರು ಕೊಟ್ಟಿದ್ದು. ಇದರ ಬಳಕೆ ಜನರ ಒಳಿತಿಗಾಗಿ. ಈ ಏರ್ಪಾಡಿನ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಜನರು ತಮ್ಮ ಗಳಿಕೆಯ ಒಂದು ಭಾಗವನ್ನು ಸರ್ಕಾರಕ್ಕೆ ಕೊಡುತ್ತಾರೆ. ಅದೇ ತೆರಿಗೆ.    ಬಳಕೆದಾರರು ತಮ್ಮ ಆದಾಯದ ಮೇಲೆ ಕೊಡುವ ನೇರ ತೆರಿಗೆಯನ್ನಲ್ಲದೆ ಸರಕು ಮತ್ತು ಸೇವೆಗಳನ್ನು ಕೊಳ್ಳುವಾಗ ನಾನಾ ರೂಪದ ಪರೋಕ್ಷ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಅದರಲ್ಲಿ ಸರ್ಕಾರವು ಜನರ ಹೆಸರಿನಲ್ಲಿ ಮಾಡುವ ದೇಶೀಯ ಮತ್ತು ಜಾಗತಿಕ ಸಾಲಗಳ ಮರುಪಾವತಿ, ಬಡ್ಡಿಗಳ ವೆಚ್ಚವೂ ಸೇರಿರುತ್ತದೆ. ಸಾಲಮಾಡುವ ಸರ್ಕಾರಗಳನ್ನು ಬಳಕೆದಾರರಾದ ಜನರು ಚುನಾಯಿಸಿದ್ದಾರೆಂಬ ಒಂದೆ ಕಾರಣಕ್ಕಾಗಿ ಈ ಸಾಲಗಳ ಅಗತ್ಯ, ಅನಿವಾರ್ಯತೆ, ಬಡ್ಡಿಯ ದರ ಮತ್ತು ಸಾಲಗಾರರು ವಿಧಿಸುವ ಶರತ್ತುಗಳ ಮೇಲೆ ಜನರಿಗೆ ಯಾವ ನಿಯಂತ್ರಣವೂ ಇಲ್ಲ.

ನೇರ ತೆರಿಗೆಯಲ್ಲಿ ಬಳಕೆದಾರರ ನಿಗದಿತ ಮೊತ್ತಕ್ಕಿಂತ ಕೆಳಗಿನ ಆದಾಯಕ್ಕೆ, ನಿರ್ದಿಷ್ಟ ಶರತ್ತುಗಳಿಗೊಳಪಟ್ಟು ಕೆಲವು ರಿಯಾಯಿತಿಗಳು ದೊರೆಯುತ್ತವೆ. ಆದರೆ ಪರೋಕ್ಷ ತೆರಿಗೆಯಲ್ಲಿ ಅಂಥಾ ಯಾವುದೇ ರಿಯಾಯಿತಿಗಳಿಲ್ಲ.

ಬಳಕೆದಾರ-ತೆರಿಗೆದಾರರಿಗೆ ಹೋಲಿಸಿದರೆ ವ್ಯಾಪಾರಿ-ತೆರಿಗೆದಾರರಿಗೆ ಸರ್ಕಾರ ಕೊಡುವ ತೆರಿಗೆ ವಿನಾಯಿತಿಗಳು ಸಂಖ್ಯೆಯಲ್ಲೂ, ಮೌಲ್ಯದಲ್ಲೂ ಅತಿ ಹೆಚ್ಚು. ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸುವುದಕ್ಕಾಗಿ ಮಾಡುವ ಎಲ್ಲ ಖರ್ಚುಗಳನ್ನೂ ಅವರ ಒಟ್ಟು ಆದಾಯದಲ್ಲಿ ಕಳೆದು ಉಳಿದಿದ್ದಕ್ಕೆ ಮಾತ್ರ ತೆರಿಗೆಕೊಟ್ಟರೆ ಸಾಕು. ಇದಲ್ಲದೆ ಹೊಸದಾಗಿ ಪ್ರಾರಂಭಿಸುವ ಉದ್ಯಮಗಳಿಗೆ ಭೂಮಿ, ನೀರು, ವಿದ್ಯುತ್ ಮುಂತಾದ ಮೂಲ ಸೌಲಭ್ಯಗಳನ್ನು ಪುಕ್ಕಟೆಯಾಗಿ, ಅಥವಾ ನಂಬಲಸಾಧ್ಯವೆನಿಸುವಷ್ಟು ಕಡಿಮೆ ಬೆಲೆಯಲ್ಲಿ ಜನರಿಂದ ಚುನಾಯಿತವಾದ ಸರ್ಕಾರ ಒದಗಿಸುತ್ತದೆ. ಅತ್ಯಂತ ಕಡಿಮೆ ಬಡ್ಡಿಯಲ್ಲಿ ಕೋಟ್ಯಾಂತರ ರೂ. ಸಾಲ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತದೆ. ಕೋಟ್ಯಾಂತರ ರೂ. ಮೌಲ್ಯದ ತೆರಿಗೆಗಳನ್ನು ಮನ್ನಾ ಮಾಡುತ್ತದೆ. ಉದ್ಯಮಿಗಳು ಪಡೆದ ಸಾಲವನ್ನು ಮರುಪಾವತಿಸದೆ ಸುಸ್ತಿದಾರರಾದರೆ ಆ ಹಣವನ್ನು ಬ್ಯಾಂಕುಗಳು ತಮ್ಮ ಒಟ್ಟು ಆಯದ ಲೆಕ್ಕದಿಂದ ಕೈಬಿಡುತ್ತಾರೆ.

ದುಡಿಮೆಗಾರರು ಮತ್ತು ರೈತರೂ ಸೇರಿದಂತೆ ಬಳಕೆದಾರರಿಗೆ ಈ ಯಾವ ಸೌಲಭ್ಯಗಳಾಗಲಿ, ರಿಯಾಯತಿಗಳಾಗಲಿ ಇಲ್ಲ. ಬಳಕೆದಾರರು ಮಾಡುವ ಸೀಮಿತ ಮೌಲ್ಯದ ಉಳಿತಾಯಕ್ಕೆ ಷರತ್ತಿಗೊಳಪಟ್ಟ ತೆರಿಗೆ ವಿನಾಯತಿ ಇದೆ. ಆದರೆ ಖರ್ಚಿಗೆ ಅವರ ಆದಾಯ ತೆರಿಗೆಯಲ್ಲಿ ಯಾವ ರಿಯಾಯಿತಿಯೂ ಇಲ್ಲ. ಆದರೆ ಉದ್ಯಮಿ-ಮಾರಾಟಗಾರರು ಅವರ ವ್ಯಾಪಾರವೃದ್ಧಿಗಾಗಿ ಮಾಡುವ ಎಲ್ಲ ಖರ್ಚುಗಳಿಗೂ ತೆರಿಗೆ ವಿನಾಯಿತಿ ಇದೆ.

ಉದ್ಯಮಿ-ವ್ಯಾಪಾರಿಗಳು ಜಾಹಿರಾತು ಸಂಸ್ಥೆಗಳಿಗೆ ಕೊಡುವ ಅಗಾಧ ಮೊತ್ತದ ಹಣ ವ್ಯಾಪಾರದ ಖರ್ಚು ಎಂದು ಪರಿಗಣಿತವಾಗುವುದರಿಂದ ಅದಕ್ಕೆ ತೆರಿಗೆ ಇಲ್ಲ. ಜಾಹಿರಾತು ಸಂಸ್ಥೆಗಳು ಮಾಡುವುದೂ ವ್ಯಾಪಾರವೇ. ಅವರು ತಮ್ಮ ವ್ಯಾಪಾರದ ವೃದ್ಧಿಗೆಂದು ಮಾಡಿದ ಖರ್ಚೆಂದು ಲೆಕ್ಕ ಕೊಡುವ ಆದಾಯಕ್ಕೂ ತೆರಿಗೆ ಇಲ್ಲ. ಇಷ್ಟು ಸಾಲದೆಂಬಂತೆ ವ್ಯಾಪಾರಿ-ಉದ್ಯಮಿಗಳು ದೇಶ-ವಿದೇಶಗಳಲ್ಲಿ, ತಮ್ಮ ವೈಯಕ್ತಿಕ, ಐಷಾರಾಮಿ ಪ್ರವಾಸಕ್ಕೆಂದು ಮನಸೋಇಚ್ಛೆ ಮಾಡುವ ಲಕ್ಷಾಂತರ ರೂಗಳ ಖರ್ಚುಗಳನ್ನೂ ವ್ಯಾಪಾರವೃದ್ಧಿಯ ಖರ್ಚೆಂದು ತೋರಿಸಿ ತೆರಿಗೆ ವಿನಾಯಿತಿ ಪಡೆಯಲು ಪ್ರಯತ್ನಿಸುತ್ತಾರೆ. ಭ್ರಷ್ಟ ಅಧಿಕಾರಿಗಳಾದರೆ ತೆರಿಗೆ ವಿನಾಯತಿಯು ಅನಾಯಾಸವಾಗಿ ಸಿಗುತ್ತದೆ. ಅಥವಾ ಅಧಿಕಾರಿಗಳೇ ತೆರಿಗೆ ತಪ್ಪಿಸುವ ಒಳದಾರಿಗಳನ್ನು ತೋರಿಸುತ್ತಾರೆ. ಅದಾಗದಿದ್ದರೆ ವಕೀಲರ ಸಹಾಯದಿಂದ ಕಾನೂನುವ್ಯಾಜ್ಯಗಳಲ್ಲಿ ಕಾಲಹರಣ ಮಾಡಿ ತೆರಿಗೆಯಾಗಿ ಕೊಡಬೇಕಾದ ಹಣವನ್ನೂ ವ್ಯಾಪಾರದಲ್ಲಿ ತೊಡಗಿಸುತ್ತಾರೆ. ವ್ಯಾಜ್ಯ ತೀರ್ಮಾನವಾಗುವ ಹೊತ್ತಿಗೆ ಸಲ್ಲಿಸಬೇಕಾಗಿದ್ದ ಮೊತ್ತದ ಅನೇಕಪಟ್ಟನ್ನು ಲಾಭವಾಗಿ ಪಡೆದಿರುತ್ತಾರೆ. ವಕೀಲರ ಖರ್ಚನ್ನೂ ಅದರಿಂದಲೇ ಸರಿದೂಗಿಸುತ್ತಾರೆ.

ಜಾಹಿರಾತು ಉದ್ದಿಮೆ

ಸಮಾಜವಾದೀ ಆರ್ಥಿಕತೆಯಲ್ಲಿ ಸರ್ಕಾರ ಜನರ ಪರವಾಗಿ ದೇಶದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಅವಕ್ಕೆ ಜನರು ಕೊಡುವ ತೆರಿಗೆಗಳನ್ನು ಸೇರಿಸಿ ಜನರ ಜೀವನಮಟ್ಟವನ್ನು ಸುಧಾರಿಸುವಂಥ ಯೋಜನೆಗಳಿಗಾಗಿ ಖರ್ಚುಮಾಡುತ್ತದೆ. ಇದನ್ನೇ ದೇಶದ ಅಭಿವೃದ್ಧಿ ಎನ್ನುವುದು. ಆದರೆ ಬಂಡವಾಳವಾದೀ ಆರ್ಥಿಕತೆಯಲ್ಲಿ ಸರ್ಕಾರ ಜನರ ಹೆಸರನ್ನು ಹೇಳಿ, ಬಂಡವಳಿಗರ ಹಿತವನ್ನು ಕಾಯುವಂತೆ ‘ಅಭಿವೃದ್ಧಿ’ಯನ್ನು ಕೈಗೊಳ್ಳುತ್ತದೆ. ಜನರಿಂದ ಚುನಾಯಿತರಾದರೂ ದೇಶದ ಅಭಿವೃದ್ಧಿಯಲ್ಲಿ ಜನರ ಪ್ರತಿನಿಧಿ ಸಂಸ್ಥೆಯಾಗದೆ, ಬಂಡವಳಿಗರ ಪ್ರತಿನಿಧಿಯಾಗಿ, ಕೈಗೊಂಬೆಯಾಗಿ, ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತದೆ. ಜಾಗತೀಕರಣೋತ್ತರ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಂತ್ರಿಕವಾಗಿ ಜನರಿಂದಲೇ ಚುನಾಯಿತಗೊಂಡಿದ್ದರೂ ವಾಸ್ತವದಲ್ಲಿ ಬೆರಳೆಣಿಕೆಯ ಬಂಡವಳಿಗರ ಪಾರುಪತ್ತೆಗಾರರಾಗಿ ಕೆಲಸಮಾಡುತ್ತಿವೆ. ಕೆಲವು ಸಂದರ್ಭಗಳಲ್ಲಿ ಉದ್ಯಮಿ-ವ್ಯಾಪಾರಿಗಳೇ ನೇರವಾಗಿ ಜನಪ್ರತಿನಿಧಿಗಳಾಗಿ ಚುನಾಯಿತರಾಗಿ ಸರ್ಕಾರವನ್ನು ರಚಿಸಿದ್ದಾರೆ. ಬಂಡವಳಿಗರ ಹಿತಕಾಯುವ ಅಧಿಕಾರಿ, ವಕೀಲ ಮತ್ತು ನ್ಯಾಯಾಧೀಶರ ಕೂಟವನ್ನು ರಚಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ.

ಕಳೆದ 30 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಜಾಹಿರಾತು ಉದ್ದಿಮೆ-ವ್ಯಾಪಾರ ಗಣನೀಯವಾಗಿ ಬೆಳೆದಿದೆ. ಜಾಹಿರಾತೆಂದರೆ ಬದುಕಲು ಅನಗತ್ಯವಾದ ಸರಕು-ಸೇವೆಗಳನ್ನು ಅಗತ್ಯವೆಂದು ನಂಬಿಸುವ ಪ್ರಚಾರ ಎಂಬ ಹಳೆಯ ನಿರ್ವಚನೆ ಈಗ ಬದಲಾಗಿದೆ. ಯಾವುದನ್ನೆಲ್ಲಾ ಬದುಕಿನ ಅಗತ್ಯಗಳೆಂದು, ಪ್ರತಿಷ್ಠಿತ ಜೀವನದ ಪೂರ್ವಾಗತ್ಯಗಳೆಂದು ಜಾಹಿರಾತು ಉದ್ಯಮಿಗಳು ಸರಕು-ಸೇವೆಗಳ ಉದ್ಯಮಿ-ವ್ಯಾಪಾರಿಗಳ ಪರವಾಗಿ ಪ್ರಚಾರ ಮಾಡುತ್ತಾರೋ ಅವೆಲ್ಲವೂ ಆಧುನಿಕ ಜೀವನದ ಅಗತ್ಯಗಳಾಗಿ ಮಾರ್ಪಟ್ಟಿವೆ. 2016ರಲ್ಲಿ ಸುಮಾರು 51 ಸಾವಿರ ಕೋಟಿ ಎಂದು ಅಂದಾಜಿಸಲಾದ ಜಾಹೀರಾತು ಉದ್ಯಮ ವಾರ್ಷಿಕವಾಗಿ ಶೇ. 16 (ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು) ದರದಲ್ಲಿ ಬೆಳೆಯುತ್ತಿದೆ. ಇದು ಒಟ್ಟು ಜಿಡಿಪಿಯ ಶೇ. 0.4 ಪಾಲು ಹೊಂದಿದೆ.

ಪ್ರಮುಖ ನಗರಗಳಲ್ಲಿ ದೊಡ್ಡ ದೊಡ್ಡ ಫಲಕಗಳಲ್ಲಿ, ಬಣ್ಣ ಬಣ್ಣದ ಬೆಳಕುಗಳಲ್ಲಿ ಕಣ್ಣಿಗೆ ರಾಚುತ್ತಿದ್ದ ಜಾಹಿರಾತುಗಳು ಈಗ ಎಲ್ಲೆಂದರಲ್ಲಿ ಜಾಗಪಡೆದಿವೆ. ಖಾಲಿನಿವೇಶನ, ಕಟ್ಟಡ, ಗೋಡೆ, ಲೈಟುಕಂಬ, ವಾಹನಗಳು ಎಲ್ಲಿ ನೋಡಿದರೂ ಜಾಹಿರಾತುಗಳೇ. ವೃತ್ತ ಪತ್ರಿಕೆ-ನಿಯತಕಾಲಿಕೆಗಳ ಒಳಪುಟ, ಹಿಂಪುಟಗಳಲ್ಲಿ, ವಿಶೇಷ ಸಂಚಿಕೆ, ಸ್ಮರಣ ಸಂಚಿಕೆಗಳ ನಿಯಮಿತ ಸ್ಥಳಾವಕಾಶಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದ ಜಾಹಿರಾತುಗಳು ಈಗ ಮುಖಪುಟವನ್ನೇ ಆಕ್ರಮಿಸುವಷ್ಟು ಬಲ ಪಡೆದಿವೆ. ಜನಪ್ರಿಯ ಪತ್ರಿಕೆಗಳ ಶೇಕಡ 45 ಭಾಗ ಜಾಹಿರಾತುಗಳಿಗೆಂದೇ ಬಳಕೆಯಾಗುತ್ತಿದೆ. ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆಗಳಲ್ಲಿ ಮೊದಲು ಜಾಹಿರಾತಿಗೆ ಜಾಗಕೊಟ್ಟು ಉಳಿದ ಸ್ಥಳವನ್ನು ಮಾತ್ರ ಸುದ್ದಿ ಪ್ರಕಟಣೆಗೆ ಬಳಸಬೇಕೆಂದು ಮಾಲೀಕರು ತಾಕೀತು ಮಾಡುತ್ತಿದ್ದಾರೆ. ಮಾರುಕಟ್ಟೆ, ಅಂಗಡಿ-ಮುಂಗಟ್ಟು ಮತ್ತು ಹಾದಿ-ಬೀದಿಗಳಿಗೆ ಸೀಮಿತವಾಗಿದ್ದ ಸರಕು-ಸೇವೆಗಳ ವ್ಯಾಪಾರವನ್ನು ಮನೆಯೊಳಕ್ಕೇ ನುಗ್ಗಿಸಿರುವ ಟೀವಿ ವಾಹಿನಿಗಳನ್ನು ಜಾಹಿರಾತುಗಳ ಮೂಲಕ ಉದ್ಯಮಿ-ವ್ಯಾಪಾರಿಗಳು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮ ಹಿತಾಸಕ್ತಿಯನ್ನು ಆರ್ಥಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಬೆಂಬಲಿಸುವಂಥ ಜನಾಭಿಪ್ರಾಯವನ್ನು ಸೃಷ್ಟಿಸುತ್ತಿದ್ದಾರೆ. ಜನಸಮುದಾಯದ ವಿರಾಮವನ್ನು ಬೆರಳೆಣಿಕೆಯ ಉದ್ಯಮಿಗಳ ಕೇಂದ್ರೀಕೃತ ನಿಯಂತ್ರಣಕ್ಕೆ ಒಳಪಡಿಸಲು ಜಾಲತಾಣಗಳು ಮತ್ತು ಮೊಬೈಲ್ ಫೋನ್ ಮೂಲದ ಜಾಹಿರಾತುಗಳು ಬಳಕೆಯಾಗುತ್ತಿವೆ. ಬಹುಶಃ ಆಹಾರ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸರಕು-ಸೇವೆಗಳ ಬಗೆಗೂ ಜಾಹಿರಾತುಗಳು ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಜಾಹಿರಾತಿನ ವೆಚ್ಚ ಯಾರು ಕೊಡುತ್ತಾರೆ?

ಜಾಹಿರಾತುಗಳ ಹಿಂದೆ ಬಹು ಮುಖ್ಯವಾದ ಮನೋವೈಜ್ಞಾನಿಕ ತತ್ವವೊಂದಿದೆ. ಬಳಕೆದಾರರನ್ನು ಸೆಳೆಯುವ ಎಲ್ಲ ವ್ಯಾಪಾರ ತಂತ್ರಗಳೂ ಬಳಕೆದಾರರನ್ನು ಅವರ ವೈಚಾರಿಕ ಮತ್ತು ವಿಮರ್ಶಾತ್ಮಕ ಪ್ರಜ್ಞೆಗಳು ಎಚ್ಚರಗೊಳ್ಳುವ ಮೊದಲೇ ಮಗುವಿನ ಸ್ಥಿತಿಯಲ್ಲಿ ಮುಟ್ಟುವಂತಿರಬೇಕು. ಮೆದುಳಿನಲ್ಲಿರುವ ಕಣ್ಣು-ಕಿವಿ-ಮೂಗು-ನಾಲಗೆ-ಸ್ಪರ್ಶಗಳ ಕೇಂದ್ರಗಳನ್ನು ಉದ್ದೀಪಿಸುವ ಬಣ್ಣ, ಧ್ವನಿ-ಶಬ್ದ, ಸುವಾಸನೆ, ರುಚಿ ಮತ್ತು ನಯಸ್ಪರ್ಶದ ಭ್ರಮೆಯನ್ನು ಕಲ್ಪಿತ ಅನುಭವದ ಮೂಲಕ ಸೃಷ್ಟಿಸಬೇಕು. ಉದಾಹರಣೆಗೆ, ಜಾಹಿರಾತು ತಾರೆಯ ಗುಲಾಬಿಯ ನಸುಗೆಂಪಿನ ಕೆನ್ನೆ, ಮನಮೋಹಕ ಧ್ವನಿ, ಹಿನ್ನೆಲೆಯಲ್ಲಿ ಚಿತ್ತಾಕರ್ಷಕ ಸಂಗೀತವಿರುವ ಆಹ್ಲಾದಕರ ಬಣ್ಣಗಳ ಕೋಣೆ, ಸುವಾಸನೆಯಿದೆ ಎಂಬಂತೆ ಮೂಗರಳಿಸಿ ಮೇಲೆತ್ತಿದ ತಲೆ, ಆಹಾ ಎಂದು ಚಪ್ಪರಿಸುವ ಚೆರಿ ಅಥವಾ ಕಿತ್ತಲೆ ಬಣ್ಣದ ಪಾನಕ, ಉಟ್ಟಿರುವ ಅರೆ ಪಾರದರ್ಶಕ ನವಿರು ಬಣ್ಣಗಳ ಉಡುಪು ಎಲ್ಲವೂ ಸೇರಿ ಬ್ಲೇಡಿನಿಂದ ಹಿಡಿದು ಕಾಂಡೋಮಿನ ತನಕ ಯಾವ ಸರಕನ್ನು ಬೇಕಾದರೂ ಬಳಕೆದಾರರ ಮೆದುಳಿನೊಳಕ್ಕೆ ನುಗ್ಗಿಸಬಹುದು. ಅವರು ಅದೇನೆಂದು ಅರ್ಥಮಾಡಿಕೊಳ್ಳುವ ಮೊದಲೇ ಆ ಸರಕಿನ ಬಗ್ಗೆ ಅವರ ಸಮ್ಮತಿ ಬೇರೂರಿರುತ್ತದೆ. ಇಂಥ ಸಂದೇಶವನ್ನು ಅರೆಜಾಗೃತ, ಕಾತರದ ಮನಸ್ಥಿತಿಯಲ್ಲಿನ ಯಾವುದೇ ವಯಸ್ಸಿನ ವ್ಯಕ್ತಿಯ ಕಣ್ಣು-ಕಿವಿಗಳಿಗೆ ಪದೇ ಪದೇ ರಾಚಿದರೆ ಆ ಸಂದೇಶ ಅಲ್ಲಿ ತಳವೂರಿ, ಸರಕು-ಸೇವೆಗಳನ್ನು ಕೊಳ್ಳುವ ಸಂದರ್ಭದಲ್ಲಿ ಬಳಕೆದಾರರ ಆಯ್ಕೆ-ಸಮ್ಮತಿಗಳನ್ನು ಮಾರಾಟಗಾರರ ಪರವಾಗಿ ನಿಯಂತ್ರಿಸುತ್ತದೆ. ಹೀಗಾಗಿ ಜಾಹಿರಾತುಗಳಿಗೆ ಉದ್ಯಮಿ-ವ್ಯಾಪಾರಿಗಳು ಹೇರಳವಾಗಿ ಹಣ ಸುರಿಯುತ್ತಾರೆ. ಹೀಗೆ ಅಗಾಧ ಮೊತ್ತದ ಹಣವನ್ನು ಪಡೆಯುವ ಜಾಹಿರಾತು ಉದ್ಯಮಕ್ಕೆ ಪ್ರತಿಭಾನ್ವಿತ ಕಲಾವಿದರು, ಅನುಭವಿ ತಂತ್ರಜ್ಞರು ಬೇಕು. ಆದ್ದರಿಂದ ಅವರ ಪ್ರತಿಭೆ-ಜನಪ್ರಿಯತೆಗಳನ್ನು ಬಳಸಿಕೊಳ್ಳಲು ಧಾರಾಳವಾಗಿ ಹಣ ಕೊಟ್ಟು ಅವರನ್ನು ಜಾಹಿರಾತು ಉದ್ಯಮ ಆಕರ್ಷಿಸುತ್ತದೆ. ಸೂಪರ್ ಸ್ಟಾರ್‍ಗಳು, ದೈತ್ಯ ಪ್ರತಿಭೆಯ ಕ್ರೀಡಾಪಟುಗಳು ಮತ್ತು ಧೃಶ್ಯ-ಶ್ರವ್ಯ ಮಾಧ್ಯಮಗಳ ಕಲಾವಿದರು ಉದ್ಯಮ-ವ್ಯಾಪಾರಿಗಳ ಉತ್ಪನ್ನಗಳನ್ನು ಜಾಹಿರಾತುಗಳ ಮೂಲಕ ಕೀರ್ತಿಸುವ ಬುಡುಬುಡುಕೆ ದಾಸರಾಗುವುದೂ ಸುಲಭವಾಗಿ ಕೈಗೆ ಬರುವ ಈ ಹಣಕ್ಕಾಗಿಯೇ.

ಮುಖ್ಯವಾದ ಪ್ರಶ್ನೆ, ಜಾಹಿರಾತುಗಳ ಪ್ರಕಟಣೆಯ ಮೂಲಕ ಸರಕು-ಸೇವೆಗಳ ಉದ್ಯಮಿ-ವ್ಯಾಪಾರಿ ಮತ್ತು ಜಾಹಿರಾತುಗಳ ಉದ್ಯಮಿ-ವ್ಯಾಪಾರಿಗಳ ನಡುವೆ ಕೈ ಬದಲಾಯಿಸುವ ಅಗಾಧ ಹಣದ ಮೂಲ ಯಾವುದು? ಅದನ್ನು ಎಲ್ಲಿಂದ, ಹೇಗೆ ಪಡೆಯಲಾಗುತ್ತಿದೆ? ಈ ಹಣದ ಮೌಲ್ಯವನ್ನು ಯಾರು ಸೃಷ್ಟಿಸುತ್ತಿದ್ದಾರೆ? ಜಾಹಿರಾತಿನ ವೆಚ್ಚವನ್ನು ಅಂತಿಮವಾಗಿ ಯಾರು ಕೊಡುತ್ತಿದ್ದಾರೆ?

ಹಣ ಈ ಮೊದಲೇ ಹೇಳಿದಂತೆ ಸರಕು-ಸೇವೆಗಳ ವಿನಿಮಯದ ಮಾಧ್ಯಮ. ಇದನ್ನು ಬಿಟ್ಟರೆ  ಹಣಕ್ಕೆ ತನ್ನದೇ ಆದ ಅಸ್ತಿತ್ವವಿಲ್ಲ. ಆದರೆ ಅದು ಚಿನ್ನ-ಬೆಳ್ಳಿ, ಭೂಮಿ ಮತ್ತಿತರ ಸಂಪತ್ತಿನ ರೂಪಗಳಿಗಿಂತ ಸುಲಭವಾಗಿ ವೇಷ ಬದಲಾಯಿಸುವ ಮಾಯಾವಿ ಸರಕು. ಅದರ ವ್ಯಾಪಾರ ಬ್ಯಾಂಕುಗಳ ಮೂಲಕ. ಬ್ಯಾಂಕುಗಳಿಲ್ಲದೆ ವ್ಯಾಪಾರವಿಲ್ಲ. ವಿನಿಮಯದಲ್ಲಿ ಹಣ ಯಾವ ಸರಕು-ಸೇವೆಯ ರೂಪವನ್ನು ಬೇಕಾದರೂ ತಾಳಬಹುದು. ಆದ್ದರಿಂದ ಬಂಡವಾಳವಾದೀ ಆರ್ಥಿಕತೆಯಲ್ಲಿ ವ್ಯಾಪಾರದ ಜೀವರಸವೇ ಹಣ. ಈ ಜೀವರಸವನ್ನು ದುಡಿಮೆಗಾರರ ಶ್ರಮಶಕ್ತಿಯನ್ನು ಹಿಂಡಿ ಪಡೆದ ಮಿಗತೆ ಮೌಲ್ಯದ ರೂಪಗಳಾದ ಬಡ್ಡಿ, ಬಾಡಿಗೆ, ಲಾಭ ಮತ್ತು ಕಮೀಷನ್ನುಗಳಿಂದ ಬಂಡವಳಿಗರು ತಯಾರು ಮಾಡುತ್ತಾರೆ. ದುಡಿಮೆಗಾರರ ಮೈಲ್ಲಿರುವ ಶ್ರಮಶಕ್ತಿಗೆ ಜೀವವಿದೆ. ಹಣಕ್ಕೆ ಜೀವವಿಲ್ಲ. ಆದರೆ ಶ್ರಮಶಕ್ತಿಯ ವಿನಿಮಯ ಮೌಲ್ಯವನ್ನು ಪಡೆದಿರುವುದರಿಂದ ಅದನ್ನು ಜೀವರಹಿತ ಶ್ರಮಶಕ್ತಿ ಅಥವಾ ಸಂಚಿತ ಶ್ರಮಶಕ್ತಿ ಎನ್ನುತ್ತಾರೆ. ಜಾಹಿರಾತುಗಳ ಮೂಲಕ ಕೈ ಬದಲಾಯಿಸುವ ಅಗಾಧ ಮೊತ್ತದ ಹಣ ವಾಸ್ತವವಾಗಿ ದುಡಿಮೆಗಾರರ ಸಂಚಿತ ಶ್ರಮಶಕ್ತಿಯೇ. ಒಮ್ಮೆ ಅವರಿಂದ ಬೇರ್ಪಟ್ಟಿತೆಂದರೆ ಅದು ಉದ್ಯಮಿ-ವ್ಯಾಪಾರಿಗಳನ್ನು ಸೇರುತ್ತದೆ. ಬಳಕೆದಾರರನ್ನು ಮುಟ್ಟಿ ವ್ಯಾಪಾರದ ಮೂಲಕ ಅವರಲ್ಲಿರುವ ಶ್ರಮಶಕ್ತಿಯ ಸಂಚಿತ ರೂಪವನ್ನು ಹೀರಿಕೊಂಡು ಬಂಡವಳಿಗರನ್ನು ಸೇರುತ್ತದೆ.

ಜಾಹಿರಾತಿನ ವೆಚ್ಚ - ದುಪ್ಪಟ್ಟು ತೆರಿಗೆ

ಬಳಕೆದಾರರ ಬೇಡಿಕೆ-ಅಗತ್ಯಗಳಿಗಿಂತ ಹೆಚ್ಚಿನ ಸರಕು-ಸೇವೆಗಳ ಅತ್ಯುತ್ಪಾದನೆ ಸಮಾಜವಾದೀ ಆರ್ಥಿಕತೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಅದೇ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಬಂಡವಳಿಗರಿಗೆ ಲಾಭ-ಬಡ್ಡಿ-ಬಾಡಿಗೆಗಳ ಇಳಿಮುಖ ಬೆಳವಣಿಗೆಗೆ ದಾರಿಮಾಡುತ್ತದೆ. ಹೀಗೆ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಒಂದು ಕಡೆ ದುಡಿಮೆಗಾರರ ಉದ್ಯೋಗಗಳನ್ನು ಕಡಿತಗೊಳಿಸಿದರೆ, ಮತ್ತೊಂದು ಕಡೆ ಸರಕು-ಸೇವೆಗಳ ಶೀಘ್ರ ಮಾರಾಟಕ್ಕಾಗಿ ಎಲ್ಲೆ ಮೀರಿದ ಜಾಹಿರಾತಿನ ಅಗತ್ಯ ಬೀಳುತ್ತದೆ. ಇಂದಿನ ಜಾಹಿರಾತು ವ್ಯಾಪಾರ ವೃದ್ಧಿಸಲು ಇದೇ ಮೂಲಕಾರಣ. ಸರಕು-ಸೇವೆಗಳ ಅತ್ಯುತ್ಪಾದನೆ ವಿನಿಮಯ ಸರಕಾದ ಹಣದ ಅತ್ಯುತ್ಪಾದನೆಗೂ ದಾರಿ ಮಾಡಿಕೊಟ್ಟಿದ್ದು ಈ ಕಾಲದಲ್ಲಿ ಭಾರತದ ಬಂಡವಳಿಗರು ಎದುರಿಸುತ್ತಿರುವ ಮತ್ತೊಂದು ಬಿಕ್ಕಟ್ಟು. ಇದರಿಂದಾಗಿ ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಿತು. ಹಣದುಬ್ಬರ ಹೆಚ್ಚಾಯಿತು. ಬೆಲೆಗಳು ಗಗನಕ್ಕೇರಿದವು. ಜನಸಾಮಾನ್ಯರ ಕಷ್ಟಗಳು ಒಂದಾದ ಮೇಲೊಂರಂತೆ ಹೆಚ್ಚುತ್ತಾ ಹೋದವು. ಯಾವುದು ಸಮಾಜವಾದೀ ಆರ್ಥಿಕತೆಯಲ್ಲಿ ಏಕಕಾಲಕ್ಕೆ ಸಮೃದ್ಧಿಯಾಗಬಹುದಿತ್ತೊ ಅದೇ ಬಂಡವಾಳವಾದೀ ಆರ್ಥಿಕತೆಯಲ್ಲಿ ಆರೋಗ್ಯಕ್ಕೆ ಮಾರಕವಾಗಿ ಬೆಳೆಯುವ ಕ್ಯಾನ್ಸರ್ ಆಯಿತು. ಸ್ವಂತ ಕೈಕಾಲುಗಳೇ ಹೊರಲಾರದಷ್ಟು ಬೊಜ್ಜು ಬೆಳೆದರೆ ಆರೋಗ್ಯ ಹೇಗೆ ಸಾಧ್ಯ? ಬಂಡವಳಿಗರಿಗೆ ಮಾರಕವಾದ ಈ ಬೆಳವಣಿಗೆಯನ್ನು ತಡೆಯಲು ಕೈಗೊಂಡ ತಾತ್ಕಾಲಿಕ ಕ್ರಮ ಐನೂರು, ಸಾವಿರ ರೂ ನೋಟುಗಳ ಅಮಾನ್ಯೀಕರಣ. ಇದರಿಂದ ಸದ್ಯಕ್ಕೆ ಅನುಕೂಲವಾಗಿದ್ದು ಬಂಡವಳಿಗರಿಗೆ. ಸಾಕಷ್ಟು ತೊಂದರೆಯಾಗಿದ್ದು ಜನಸಾಮಾನ್ಯರಾದ ಬಳಕೆದಾರರಿಗೆ, ಮುಖ್ಯವಾಗಿ ದುಡಿಮೆಗಾರರಿಗೆ.

ಸಂಚಿತ ಶ್ರಮಶಕ್ತಿಯ ವಿನಿಮಯ ಮಾಧ್ಯಮದ ರೂಪವಾದ ಹಣ ಜನರು ಸರ್ಕಾರಕ್ಕೆ ಕೊಡುವ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೇ ಅಭಿವೃದ್ಧಿಗಾಗಿ ಖರ್ಚುಮಾಡಲು ಸರ್ಕಾರಕ್ಕೆ ಸಿಗುವ ಒಟ್ಟು ಮೊತ್ತ. ಇದರಲ್ಲಿ ಸೇರಬೇಕಾಗಿದ್ದು ಮಿತಿಗೊಳಪಟ್ಟು ತೆರಿಗೆ ವಿನಾಯತಿಯಾಗಿ ತೆರಿಗೆದಾರರ ಬಳಿ ಉಳಿಯುವ ಹಣದ ಒಟ್ಟು ಮೊತ್ತ ನಗಣ್ಯ. ಆದರೆ ಉದ್ಯಮ-ವ್ಯಾಪಾರಗಳ ವೃದ್ಧಿಗಾಗಿ ಮಾಡಿದ ವೆಚ್ಚವೆಂದು, ಜಾಹಿರಾತುಗಳಿಗಾಗಿ ಉದ್ಯಮಿ-ವ್ಯಾಪಾರಿಗಳು ಮಾಡುವ ಮಿತಿಯಿಲ್ಲದ ವೆಚ್ಚ ತೆರಿಗೆ ವಿನಾಯತಿಯಾಗಿ ಸರ್ಕಾರದ ಒಟ್ಟು ಆದಾಯದಲ್ಲಿ ಕಡಿತಗೊಳ್ಳುವ ಹಣದ ಮೊತ್ತ ನಗಣ್ಯವಲ್ಲ. ಇಡೀ ಭಾರತದಲ್ಲಿ, ಎಲ್ಲ ಉದ್ಯಮ-ವ್ಯಾಪಾರಿಗಳ ವಾರ್ಷಿಕ ವಹಿವಾಟಿನಲ್ಲಿ ಅವರು ತಮ್ಮ ಲೆಕ್ಕಪತ್ರ ವರದಿಯಲ್ಲಿ ತೆರಿಗೆ ರಿಯಾಯತಿಗೆಂದು ನಮೂದಿಸುವ ಜಾಹಿರಾತು ವೆಚ್ಚವನ್ನು ಲೆಕ್ಕ ಹಾಕಿದರೆ ಎಷ್ಟು ಅಗಾಧ ಹಣ ಸರಕಾರದ ಆದಾಯಕ್ಕೆ ಸೇರಬೇಕಾಗಿತ್ತೆಂಬ ಅಂದಾಜು ಸಿಗುತ್ತದೆ. ಇದಕ್ಕೆ ಸಂಬಂಧಿಸಿದ ಒಟ್ಟು ಅಂಕಿ ಅಂಶಗಳು ಎಲ್ಲೂ ಸಿಗುವುದಿಲ್ಲ.

ಇದರ ಹೊರೆ ಜನಸಾಮಾನ್ಯ ಬಳಕೆದಾರರು ಮತ್ತು ದುಡಿಮೆಗಾರರ ಮೇಲೆ ಎರಡು ಪಟ್ಟಾಗಿ ಬೀಳುತ್ತಿದೆ. ಒಂದು: ಉದ್ಯಮಿ-ವ್ಯಾಪಾರಿಗಳು ಜಾಹಿರಾತಿನ ವೆಚ್ಚವನ್ನು ಸರಕು-ಸೇವೆಗಳ ಮಾರಾಟದ ಬೆಲೆಯಲ್ಲಿ ಸೇರಿಸುವುದರಿಂದ ಈ ಸಂಬಂಧ ಉದ್ಯಮಿ-ವ್ಯಾಪಾರಿಗಳು ಸರ್ಕಾರದಿಂದ ಪಡೆಯುವ ತೆರಿಗೆ ರಿಯಾಯತಿಯ ಹೊರೆಯನ್ನು ಬಳಕೆದಾರರೇ ಹೊತ್ತುಕೊಂಡಿದ್ದಾರೆ. ಎರಡು: ಸರ್ಕಾರದ ಒಟ್ಟು ಆದಾಯಕ್ಕೆ ಸೇರಬೇಕಾಗಿದ್ದ ಹಣದ ಮೊತ್ತ ಜಾಹಿರಾತು ಖರ್ಚಿನ ತೆರಿಗೆ ರಿಯಾಯಿತಿಯ ಹೆಸರಿನಲ್ಲಿ ಉದ್ಯಮಿ-ವ್ಯಾಪಾರಿಗಳಲ್ಲೇ ಉಳಿಯುವುದರಿಂದ ವಾರ್ಷಿಕ ಆಯ-ವ್ಯಯದ ಮಂಡನೆಯಲ್ಲಿ ತೋರಿಸುವ ವಿತ್ತೀಯ ಕೊರತೆ ಅನವಶ್ಯಕವಾಗಿ ದೊಡ್ಡದಾಗುತ್ತದೆ. ಮತ್ತು ಅಭಿವೃದ್ಧಿಗಾಗಿ ಮಾಡುವ ಸಾಲದ ಹೊರೆಯೂ ಅನವಶ್ಯಕವಾಗಿ ಹೆಚ್ಚಾಗುತ್ತದೆ. ಈ ಹೊರೆಗಳನ್ನು ಮತ್ತೆ, ಬಳಕೆದಾರರಾದ ಸಾಮಾನ್ಯಜನರು ಮತ್ತು ದುಡಿಮೆಗಾರರೇ ಹೊರಬೇಕಾಗುತ್ತದೆ.

ಈ ದುಪ್ಪಟ್ಟು ಹೊರೆಯನ್ನು ತಪ್ಪಿಸಲು ಇರುವ ಮಾರ್ಗ ಒಂದೇ. ಉದ್ಯಮಿ-ವ್ಯಾಪಾರಿಗಳಿಗೆ ಜಾಹಿರಾತುಗಳ ವೆಚ್ಚಕ್ಕೆಂದು ಕೊಡಮಾಡುತ್ತಿರುವ ತೆರಿಗೆ ರಿಯಾಯತಿಯನ್ನು ಕೂಡಲೇ ನಿಲ್ಲಿಸುವುದು. ಇದರಿಂದ ಜಾಹಿರಾತುಗಳ ಹಾವಳಿ ಕಡಿಮೆಯಾಗುತ್ತದೆ. ಅನವಶ್ಯಕವಾದ ವ್ಯಾಪಾರವಾಗಿ ಬೆಳೆಯುತ್ತಿರುವ ಜಾಹಿರಾತು ಉದ್ಯಮಕ್ಕೆ ಕಡಿವಾಣ ಬೀಳುತ್ತದೆ. ಬಳಕೆದಾರರ ಮೇಲೆ ಬೀಳುತ್ತಿರುವ ದುಪ್ಪಟ್ಟು ಹೊರೆ ತಗ್ಗುತ್ತದೆ. ಹೇಗಿದ್ದರೂ ಸರಕು-ಸೇವೆಗಳ ಬೆಲೆಯಲ್ಲಿ ಇತರ ವೆಚ್ಚಗಳೊಂದಿಗೆ ಜಾಹಿರಾತುಗಳ ವೆಚ್ಚವನ್ನು ಸೇರಿಸುವುದರಿಂದ ಉದ್ಯಮಿ-ವ್ಯಾಪಾರಿಗಳ ನೈಜ ಆದಾಯವೇನೂ ಕಡಿಮೆಯಾಗುವುದಿಲ್ಲ.

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ