ಉದ್ಯಮಿಯ `ಘನತೆಗೆ ಧಕ್ಕೆ': `ದಿ ವೈರ್' ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

ಸಂಪುಟ: 
11
ಸಂಚಿಕೆ: 
13
Sunday, 19 March 2017

ಮಾಧ್ಯಮ ದೊರೆಯ `ಸೆನ್ಸಾರ್'

ಬೆಂಗಳೂರಿನ ನಾಗರಿಕ ಹಕ್ಕುಗಳ ಹೋರಾಟಗಾರನೆಂದು ಪೋಸು ಕೊಡುವ, ಆದರೆ ತೀವ್ರ `ಕಮ್ಯುನಿಸ್ಟ್-ವಿರೋಧಿ' ಪ್ರಚಾರಕ, ಕೇರಳದ ಎನ್.ಡಿ.ಎ. ನಾಯಕ, ಏಶ್ಯಾನೆಟ್-ಸುವರ್ಣ ಮಾಧ್ಯಮ ದೊರೆ, ಕರ್ನಾಟಕದಿಂದ ರಾಜ್ಯಸಭೆ ಸೀಟು ಖರೀದಿಸಿದ ಭೂಪ, ಕಾರ್ಮಿಕ-ವಿರೋಧಿ ಬಿ.ಪಿ.ಎಲ್. ಗುಂಪಿನ ಮಾಲಕ - ಮುಂತಾದ ಹಲವು `ಮುಖ'ಗಳಿರುವ, ಡಾ. ರಾಜೀವ ಚಂದ್ರಶೇಖರ್ ಅವರ ಹೊಸದೆರಡು `ಮುಖ'ಗಳನ್ನು ಬಯಲು ಮಾಡಿದ `ದಿ ವೈರ್' ಪತ್ರಿಕೆ ಮೇಲೆ `ಸೆನ್ಸಾರ್ ಶಿಪ್' ಹೊರಿಸಿ ತಮ್ಮ ನಿಜವಾದ ಪ್ರಜಾಪ್ರಭುತ್ವ-ವಿರೋಧಿ ಮುಖ ತೋರಿಸಿರುವ ಬಗೆಗಿನ ವರದಿ ಓದಿ:

ದೇಶದ ಡಿಜಿಟಲ್ ಪತ್ರಿಕೋದ್ಯಮದಲ್ಲಿ `ಸ್ವತಂತ್ರ' ಮಾಧ್ಯಮವಾಗಿ ದಾಪುಗಾಲಿಡುತ್ತಿರುವ `ದಿ ವೈರ್ ಡಾಟ್ ಇನ್' ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಸಂಸದ, ಉದ್ಯಮಿ ರಾಜೀವ್ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು `ಘನತೆಗೆ ಧಕ್ಕೆ ಮಾಡುವ' ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ `ದಿ ವೈರ್' ಪ್ರಕಟಿಸಿದ ಎರಡು ವರದಿಗಳ ವಿರುದ್ಧ ತಡೆಯಾಜ್ಞೆ ನೀಡಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಾ. 6ರಂದು ಸುದ್ದಿ ತಾಣ ರಾಜೀವ್ ಚಂದ್ರಶೇಖರ್ ಕುರಿತು ಪ್ರಕಟಿಸಿದ ಎರಡು ವರದಿಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ.

ಏನೀ ವರದಿಗಳು?:

`ದಿ ವೈರ್' ಜನವರಿ 25ರಂದು ಅರ್ನಾಬ್ ಗೋಸ್ವಾಮಿ ನೇತೃತ್ವದಲ್ಲಿ ಆರಂಭವಾಗಲಿರುವ `ರಿಪಬ್ಲಿಕ್' ಮಾಧ್ಯಮದಲ್ಲಿ ಹೂಡಿಕೆಗಳ ಕುರಿತು ವರದಿ ಮಾಡಿತ್ತು. `ರಿಪಬ್ಲಿಕ್' ಪ್ರಚಾರ ಸಭೆಗಳಲ್ಲಿ ಪತ್ರಕರ್ತ ಅರ್ನಾಬ್ ಗೋ ಸ್ವಾಮಿ ಸ್ವತಂತ್ರ ಮಾಧ್ಯಮವನ್ನು ಕಟ್ಟುತ್ತಿರುವುದಾಗಿ ಘೋಷಿಸಿದ್ದರು. ಅದರಲ್ಲಿ ರಾಜೀವ್ ಚಂದ್ರಶೇಖರ್ ಹೂಡಿಕೆ ಮಾಡುತ್ತಿರುವುದರಿಂದ ಸಹಜವಾಗಿಯೇ `ಸ್ವತಂತ್ರ' ಮಾಧ್ಯಮದ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿಶ್ಲೇಷಣಾತ್ಮಕ ವರದಿಯೊಂದನ್ನು `ದಿ ವೈರ್' ಪ್ರಕಟಿಸಿತ್ತು.

ಇದೇ ಸುದ್ದಿ ತಾಣದಲ್ಲಿ ಫೆ. 17ರಂದು ಮತ್ತೊಂದು ವರದಿ ಪ್ರಕಟಗೊಂಡಿತ್ತು. ಕೇರಳ ಮೂಲದ ಉದ್ಯಮಿ, ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್ ಚಂದ್ರಶೇಖರ್ ಮಿಲಿಟರಿಗೆ ಸಂಬಂಧಪಟ್ಟ ಕಂಪನಿಗಳಲ್ಲಿ ಹೂಡಕೆ ಮಾಡಿದ್ದಾರೆ. ಇದೇ ವೇಳೆ ಅವರು ಸೇನೆಯ ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ. ಇದು `ಹಿತಾಸಕ್ತಿಗಳ ಸಂಘರ್ಷ'ವಾಗುತ್ತಿದೆ ಎಂದು `ದಿ ವೈರ್' ವರದಿ ಪ್ರತಿಪಾದಿಸಿತ್ತು.

ಸದ್ಯ ಈ ಎರಡೂ ವರದಿಗಳಿಂದ ತಮ್ಮ `ಘನತೆ'ಗೆ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿರುವ ರಾಜೀವ್ ಚಂದ್ರಶೇಖರ್ ವರದಿಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ವಿಶೇಷ ಅಂದರೆ ಮಾ. 2 ರಂದು ನ್ಯಾಯಾಲಯ ತಡೆಯಾಜ್ಞೆ ಆದೇಶವನ್ನು ನೀಡಿದ ನಂತರವೇ `ದಿ ವೈರ್' ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಅದಕ್ಕೂ ಮುಂದೆ ಎರಡೂ ಕಡೆಯವರ ವಾದಗಳನ್ನು ಆಲಿಸದಿರುವುದು ಅನಿರೀಕ್ಷತ ನಡೆಯಾಗಿದೆ ಎಂದು `ಸ್ಕ್ರಾಲ್ ಡಾಟ್ ಇನ್' ವರದಿ ಪ್ರಕಟಿಸಿದೆ.

ಇದೇ ಸುದ್ದಿತಾಣದಲ್ಲಿ ಪ್ರತಿಕ್ರಿಯೆ ನೀಡಿರುವ `ದಿ ವೈರ್' ಸಂಪಾದಕ ಸಿದ್ದಾರ್ಥ್ ವರದರಾಜನ್, ``ವಿಚಾರಣೆ ಸಮಯದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ರಾಜೀವ್ ಚಂದ್ರಶೇಖರ್ ಕಡೆಯ ವಕೀಲರು ನೋಟಿಸ್ ನೀಡಿದ ನಂತರವೇ ಮಾಹಿತಿ ಗೊತ್ತಾಯಿತು. ಈ ಕುರಿತು ಕಾನೂನು ಹೋರಾಟ ಮುಂದುವರಿಸಲಾಗುವುದು,'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಹೇಳಿಕೆಯನ್ನು `ದಿ ವೈರ್' ತನ್ನೆರಡು ವರದಿಗಳ ಕೆಳಗೂ ಈಗ ಪ್ರಕಟಿಸಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ನ್ಯಾಯಾಲಯದಲ್ಲಿ ದಾವೆ ಹೂಡಿದ ಕುರಿತು ಪ್ರತಿಕ್ರಿಯಸಿರುವ ರಾಜೀವ್ ಚಂದ್ರಶೇಖರ್, ``ನನ್ನ ವಿರುದ್ಧ ಕಾಂಗ್ರೆಸ್ ಮತ್ತು ಅವರ ಜತೆ ಸಂಬಂಧ ಹೊಂದಿರುವ ಮಾಧ್ಯಮಗಳಿಂದ ಅಪಪ್ರಚಾರ ನಡೆಯುತ್ತಿದೆ,'' ಎಂದು ಆರೋಪಿಸಿದ್ದಾರೆ.

``ಬೆಂಗಳೂರಿನ ನ್ಯಾಯಾಲಯ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಪ್ರಶ್ನಿಸಬೇಕಿದೆ. ಇಲ್ಲವಾದರೆ, ಅಧಿಕಾರ ಕೇಂದ್ರದಲ್ಲಿರುವ ಜನರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಇಂತಹ ನಡೆಗಳು ಹೆಚ್ಚಾಗುತ್ತವೆ,'' ಎಂದು ಸಿದ್ದಾರ್ಥ್ ವರದರಾಜನ್ ಹೇಳಿದ್ದಾರೆ ಎಂದು `ಸ್ಕ್ರಾಲ್' ಪ್ರಕಟಿಸಿದೆ.

(ಕೃಪೆ: ಸಮಾಚಾರ. ಕಾಮ್)