``ವೈಯಕ್ತಿಕ ನೆಮ್ಮದಿ ಎನ್ನುವ ಭ್ರಮೆ ಬಿಟ್ಟು ಸಾಮಾಜಿಕ ಹೋರಾಟಕ್ಕೆ ಅಣಿಯಾಗಿ'': ಆರ್. ಇಂದಿರಾ

ಸಂಪುಟ: 
11
ಸಂಚಿಕೆ: 
13
Sunday, 19 March 2017

`ಬೆಚ್ಚಿಬಿದ್ದು ಕೇಳಿ ನೀವು,
ಹೆಣ್ಣು ತೊಡೆತಟ್ಟಿ ನಿಂತಾಗಿದೆ...
ತೊಟ್ಟಿಲು ತೂಗುವ ಕೈ ದೂಳೆಬ್ಬಿಸಿ ಮುನ್ನುಗ್ಗಿಯಾಗಿದೆ...
- ಶಾಕಿರಾ ಬಾನು

ಇದು ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಸಮಾಜವಾದಿ ಕ್ರಾಂತಿ ಮತ್ತು ಮಹಿಳೆ" ಬಗ್ಗೆ ಮಾರ್ಚ್ 12 ರಂದು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ  ಕೇಳಿಬಂದ ಕವನದ ಸಾಲುಗಳು. ಈ ಸಂದರ್ಭದಲ್ಲಿ ``ಮಹಿಳೆ  ಮತ್ತು ಸಮಾಜವಾದಿ ಕ್ರಾಂತಿ''ಯ ಕುರಿತು 8 ಸೋವಿಯೆಟ್ ಪೊಸ್ಟರುಗಳ ಆಧಾರಿತ ಸ್ಥೂಲ ನಿರೂಪಣೆ ಇರುವ  8 ಪೋಸ್ಟ್ ಕಾರ್ಡುಗಳ ಸೆಟ್ ಒಂದನ್ನು ಖ್ಯಾತ ಲೇಖಕಿ ಡಾ.ಆರ್. ಇಂದಿರಾ ರವರು, ಈ ಪೋಸ್ಟ್ ಕಾರ್ಡುಗಳ ದೊಡ್ಡ ಸೈಜಿನ ಪೋಸ್ಟರ್ ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದರು.. ವಿಚಾರ ಸಂಕಿರಣದಲ್ಲಿ ದುಡಿಯುವ ಮಹಿಳೆಯರ ಹಲವು ವಿಭಾಗಗಳ (ವಿಮಾ, ಬ್ಯಾಂಕ್, ಕೇಂದ್ರ ರಾಜ್ಯ ಸರಕಾರಿ ನೌಕರರು, ಸ್ಕೀಂ ನೌಕರರು, ಮನೆ ಕೆಲಸಗಾರರು) ಮತ್ತು ಮಧ್ಯಮ ವರ್ಗದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ವಿಚಾರಸಂಕಿರಣದಲ್ಲಿ ಎರಡು ಗೋಷ್ಟಿಗಳಿದ್ದವು. ``ಮಹಿಳಾ ಅಸಮಾನತೆಯ ಮೂಲ ಮತ್ತು ಪರಿಹಾರದ ದಾರಿಗಳು'' ಬಗೆಗಿನ ಮೊದಲ ಗೋಷ್ಟಿ ಯನ್ನು ಡಾ. ಇಂದಿರಾ ಉದ್ಘಾಟಿಸಿ ಮಾತನಾಡಿದರು. ಡಾ. ಎನ್. ಗಾಯತ್ರಿ, ಡಾ. ಎಂ.ಎಸ್. ಆಶಾದೇವಿ, ಹೆಚ್.ಆರ್. ಸುಜಾತ ಗೋಷ್ಟಿಯಲ್ಲಿ ತಮ್ಮ ವಿಚಾರ ಮಂಡಿಸಿದರು.  ಡಾ, ಕೆ.ಶರೀಫಾ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಪ್ರಸ್ತಾವನೆಯ ಮಾತುಗಳನ್ನಾಡಿದರು.

``ಪ್ರಜಾಪ್ರಭುತ್ವ - ಲಿಂಗ ರಾಜಕಾರಣ'' ಎಂಬ ವಿಷಯದ ಬಗ್ಗೆ ಎರಡನೇ ಗೋಷ್ಟಿಯಲ್ಲಿ ಮುಕ್ತ ಸಂವಾದವಿತ್ತು. ಸಂವಾದದಲ್ಲಿ ಕಾಂಗ್ರೆಸಿನ ಮಂಜುಳಾ ನಾಯ್ಡು, ಸಿಪಿಐ(ಎಂ)ನ ಎಸ್. ವರಲಕ್ಷ್ಮಿ, ಸಿಪಿಐ ನ ರಾಧ ಸುಂದರೇಶ್, ಎಸ್.ಯು.ಸಿ.ಐ.(ಸಿ)ನ ಎಂ.ಎನ್. ಮಂಜುಳಾ ಮತ್ತು ಎಎಪಿಯ ಶಾಂತಲಾ ದಾಮ್ಲೆ ಭಾಗವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ವಿ. ಗೀತಾ ಅ ಧ್ಯಕ್ಷತೆ ವಹಿಸಿದ್ದರು.

ಸಮಾಜವಾದಿ ಕ್ರಾಂತಿಯಲ್ಲಿ ಮಹಿಳೆಯ ಪಾತ್ರ, ಮಹಿಳಾ ವಿಮೋಚನೆಯ ಹಲವು ಹಾದಿಗಳನ್ನೂ ಮೈಲಿಲ್ಲುಗಳನ್ನು ಹಾಕಿ ಕೊಟ್ಟ ಸಮಾಜವಾದಿ ಸೋವಿಯೆಟ್ ಒಕ್ಕೂಟದ ಹಾಗೂ ಕ್ಲಾರಾ ಜೆಟ್ಕಿನ್, ಅಲೆಕ್ಸಾಂಡ್ರಾ ಕೊಲಂತಾಯ್, ರೋಸಾ ಲಕ್ಸಂಬರ್ಗ್ ಅವರ ನೆನಕೆ, ಕಳೆದ ನೂರು ವರ್ಷಗಳ ಮಹಿಳಾ ಚಳುವಳೀ ನಡೆದ ಹಾದಿ, ಇಂದಿನ ಮಹಿಳೆಯರ ಸ್ಥಿತಿ, ಮುಂದಿನ ಮಹಿಳಾ ಹೋರಾಟದ ರೂಪುರೇಷೆಗಳು- ಎಲ್ಲವೂ ಎರಡೂ ಗೋಷ್ಟಿಗಳಲ್ಲಿ ಪ್ರಸ್ತಾಪಿತವಾದವು. ಗೋಷ್ಟಿಗಳ ಮಧ್ಯೆ ಹಲವಾರು ಮಹಿಳಾ ಕವಿಗಳ ಅರ್ಥಪೂರ್ಣಕವನ ವಾಚನ, ಮಾತುಗಳ ಏಕತಾನತೆಯನ್ನು ಒಡೆಯಿತು.

ವಿಚಾರ ಸಂಕಿರಣದಲ್ಲಿ ಕೇಳಿ ಬಂದ ಕೆಲವು ಗಮನಾರ್ಹ ಮಾತುಗಳು ಬಾಕ್ಸಿನಲ್ಲಿವೆ.

``ವೈಯಕ್ತಿಕ ಮಹಿಳಾ ವಿಮೋಚನೆಯೆಂಬುದು ಹಾಸ್ಯಾಸ್ಪದ''
"ಕ್ರಾಂತಿ ಎಂದರೆ ನನಗಿಷ್ಟ. ಜನರನ್ನು ಒಗ್ಗೂಡಿಸುವ ಶಕ್ತಿ ಕ್ರಾಂತಿಗಿದೆ. ಕ್ರಾಂತಿಯಿಂದ ಸಾಮಾಜಿಕ ನೆಮ್ಮದಿ ಸಾಧ್ಯ. ಬದಲಾಣೆ ಬರಬೇಕಾದರೆ ಕ್ರಾಂತಿಯಾಗಲೇಬೇಕು "
ಪುರುಷರೇ! ನೀವು ನಮ್ಮ ಜತೆ ಯಾವುದೇ ತರಹದ ದುರ್ವರ್ತನೆಗಳನ್ನು ಮಾಡುವಂತಿಲ್ಲ. ಮಾಡಿದರೆ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸುವ ಜವಾಬ್ದಾರಿ ಮಹಿಳಾ ಚಳವಳಿಗಳಿವೆ'
`ನಮ್ಮೆದುರಿಗೆ ಹೋರಾಟದ ಆಯ್ಕೆ, ಹೊಂದಾಣಿಕೆ ಆಯ್ಕೆ ಎರಡೂ ಇವೆ. ವೈಯಕ್ತಿಕ ನೆಮ್ಮದಿ ಎನ್ನುವ ಭ್ರಮೆಯನ್ನು ಬಿಟ್ಟು ಸಾಮಾಜಿಕ ಹೋರಾಟಕ್ಕೆ ಅಣಿಯಾಗಬೇಕು' - ಡಾ.ಆರ್. ಇಂದಿರಾ

"ಮಹಿಳೆ ಗೃಹ ಬಂದನದಿಂದ ಬಿಡುಗಡೆಯಾಗಿ ಮಾನವೀಯ ಹಕ್ಕುಗಳು ಸಿಗಬೇಕು. ಮಹಿಳೆ ಅಂಗಾಂಗಗಳನ್ನು ಮಾರಾಟದ ಸರಕನ್ನಾಗಿಸುತ್ತಿದ್ದಾರೆ. ಇದಕ್ಕೆ ಗಟ್ಟಿ ಹೋರಾಟ ಅಗತ್ಯವಿದೆ. ಅದಕ್ಕಾಗಿ ತತ್ವ ಮತ್ತು ಸಿದ್ಧಾಂತ ಒಂದಾಗಬೇಕು'' -ಡಾ. ಕೆ. ಷರೀಫಾ, ಲೇಖಕಿ

ವೈಯಕ್ತಿಕ ಮಹಿಳಾ ವಿಮೋಚನೆಯೆಂಬುದು ಹಾಸ್ಯಾಸ್ಪದ. ಜಾತಿ-ವಗ-ಧರ್ಮ-ಲಿಂಗಗಳ ಆ ಧಾರದ ಮೇಲೆ ನಡೆಯುತ್ತಿರುವ ತಾರತಮ್ಯಗಳು ಪರಸ್ಪರ ಹೆಣೆದುಕೊಂಡಿವೆ.
ದೀಪಿಕಾ ಅವರ ಮೈ ಛಾಯ್ಸ್ ಎಂಬ ವಿಡಿಯೋ, ಮುತ್ತು ಕಟ್ಟಿದ ಕೊಪ್ಪಳದ ದೇವದಾಸಿ ಹುಡುಗಿ `ನನ್ನ ದೇಹದ ಮೇಲೆ ದಾಳಿ ಇನ್ನು ಸಹಿಸಲಾರೆ' ಎಂದಾಗ `ನನ್ನ ದೇಹ ನನ್ನ ಹಕ್ಕು' ಘೋಷಣೆ ಅರ್ಥವಾಗುತ್ತದೆ.. - ಡಾ.ಎನ್. ಗಾಯತ್ರಿ

ಸ್ತ್ರೀವಾದದ ಸತ್ವದಲ್ಲಿ ಮಾನವತಾವಾದವಿದೆ. ಆದರೆ ನಮ್ಮ ಗ್ರಹಿಕೆಗಳು ಬದಲಾಗದ ಹೊರತು ಕಾನೂನುಗಳು ಏನೂ ಮಾಡುವುದಿಲ್ಲ. ಕಾನೂನು ಎಂಬುದು ಮೂಲಭೂತವಾದ ಬದಲಾವಣೆಯನ್ನು ತರುವುದಿಲ್ಲ. ಅದು ಬರಿಯ ಒಂದು ಅಸ್ತ್ರವಷ್ಟೇ.- ಡಾ.ಎಂ.ಎಸ್. ಆಶಾದೇವಿ

ಸಮಾಜವಾದಿ ಕ್ರಾಂತಿಯಾದ ತಕ್ಷಣ ವೇ ಸೋವಿಯತ್ ರಷ್ಯಾದಲ್ಲಿ ಮಹಿಳಾ ಸಮಾನತೆಯ ಕಲ್ಪನೆ ಸಾಕಾರಗೊಂಡಿದ್ದು ಲೆನಿನ್ ನೇತೃತ್ವ ದಲ್ಲಿ.  ಸಮಾಜವಾದಿ ವ್ಯವಸ್ಥೆ ಎಲ್ಲರಿಗೂ ಸಮಾನ ಅವಶ್ಯಕತೆಯನ್ನು ಪೂರೈಸುತ್ತದೆ.  ಬಂಡವಾಳಶಾಹಿಯ ಮೇಲುಗೈ ಇರುವಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. - ಎಂ.ಎನ್ ಮಂಜುಳಾ

ಅನ್ಯಾಯದ ವಿರುದ್ಧ ಒಗ್ಗಟ್ಟಿನ ಹೋರಾಟದ ಮೂಲಕ ಸಮಾನತೆ ಸಾಧಿಸೋಣ. - ರಾಧಾ ಸುಂದರೇಶ್

ಮಹಿಳಾ ಪ್ರಾತಿನಿಧ್ಯ ನಮ್ಮ ಗುರಿಯಾಗಿರಬೇಕು. ಮೀಸಲಾತಿ ಪ್ರಾತಿನಿಧ್ಯ ಸಾಧಿಸಲು ಒಂದು ತಂತ್ರವೆಂದು ತಿಳಿಯಬೇಕು. - ಶಾಂತಾ ದಾಮ್ಲೆ

ಪೋಸ್ಟ್ ಕಾರ್ಡುಗಳಲ್ಲಿ ಏನಿದೆ?

ಎಂಟು ಪೊಸ್ಟ್ ಕಾರ್ಡುಗಳಲ್ಲಿ ಒಂದು ಕಡೆ ಒಂದು ವಿಷಯದ ಮೇಲೆ ಸೋವಿಯೆಟ್ ಆಳ್ವಿಕೆಯ ಕಾಲದ ಆಯ್ದ ಮಹಿಳೆಗೆ ಸಂಬಂಧಿಸಿದ ಪೊಸ್ಟರುಗಳಿವೆ. ಪೊಸ್ಟ್ ಕಾರ್ಡಿನ ಇನ್ನೊಂದು ಮಗ್ಗುಲಲ್ಲಿ ಸಮಾಜವಾದಿ ಕ್ರಾಂತಿಯಲ್ಲಿ ಮಹಿಳೆಯರ ಪಾಲು, ಸೋವಿಯೆಟ್ ಒಕ್ಕೂಟದಲ್ಲಿ  ಮಹಿಳಾ ವಿಮೋಚನೆಯ ವಿವಿಧ ಕ್ರಮಗಳ ಸಾಧನೆಗಳು ಹಾಗೂ ಮಹಿಳೆಗೆ ಇಂದು ಸಮಾಜವಾದಿ ಕ್ರಾಂತಿಯ ಪ್ರಸ್ತುತತೆಯನ್ನು ನಿರೂಪಿಸುವ ಕಥನದ ಒಂದು ಭಾಗವಿದೆ. `ರಶ್ಯನ್ ಕ್ರಾಂತಿ ಆರಂಭಿಸಿದ ಮಹಿಳೆಯರು', `ಮಹಿಳಾ ಸಾಕ್ಷರತೆ ಮತ್ತು ಶಿಕ್ಷಣ', `ಅಡುಗೆ ದಾಸ್ಯದಿಂದ ವಿಮೋಚನೆ', `ಎಲ್ಲಾ ಉತ್ಪಾದನಾ ಕ್ಷೇತ್ರಗಳಲಲ್‍ಇ ಮಹಿಳೆಯರು', `ಆಡಳಿತದಲ್ಲಿ ಮಹಿಳೆ', ಫ್ಯಾಸಿಸಂ ವಿರುದ್ಧ ಮಹಿಳೆ', `ಶಾಂತಿಯತ್ತ ಲಗ್ಗೆ' ಮತ್ತು `ಮಹಿಳೆ ಮತ್ತು ಸೋವಿಯೆಟ್ ಒಕ್ಕೂಟ' ? ಎಂಟು ಕಾರ್ಡುಗಳಲ್ಲಿ ಅಡಕವಾದ ವಿಷಯಗಳು.