ತಿಂಗಳಿಗೆ 3 ಸಾವಿರ ರೂ. ಬರ ಪರಿಹಾರ ನೀಡಲು ಮಹಿಳಾ ಕೃಷಿ ಕೂಲಿಕಾರರ ರಾಜ್ಯ ಸಮಾವೇಶದ ಆಗ್ರಹ

ಸಂಪುಟ: 
11
ಸಂಚಿಕೆ: 
13
Sunday, 19 March 2017

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೀಕರ ಬರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಡ ಕುಟುಂಬಗಳಿಗೆ ಉಚಿತ ರೇಷನ್, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 250 ದಿನಗಳ ಕೆಲಸ ಹಾಗೂ ಪ್ರತಿಯೊಂದು ಬಡ ಕುಟುಂಬಕ್ಕೆ ಪ್ರತಿತಿಂಗಳು 3 ಸಾವಿರ ರೂ. ವಿಶೇಷ ನೆರವು ನೀಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಆಗ್ರಹಿಸುವ ನಿರ್ಣಯವೊಂದನ್ನು ಅಂಗೀಕರಿಸುವುದರೊಂದಿಗೆ ಮಾಚ್ 8 ಮತ್ತು 9 ರಂದು ಮಂಡ್ಯ ನಗರದಲ್ಲಿ ನಡೆದ 2 ದಿನಗಳ ಮಹಿಳಾ ಕೃಷಿ ಕೂಲಿಕಾರರ 3 ನೇ ರಾಜ್ಯ ಸಮಾವೇಶ ಮುಕ್ತಾಯವಾಯಿತು.

ಉದ್ಘಾಟನೆ:-

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿಗಳು ಮಾಜಿ ರಾಜ್ಯ ಸಭಾ ಸದಸ್ಯರೂ ಆಗಿರುವ ಕಾಮ್ರೆಡ್ ಎ. ವಿಜಯ ರಾಘವನ್ ಅವರು ಮಾತನಾಡಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಎಲ್ಲ ರಾಜ್ಯಗಳು ಹಿಂದೆಂದೂ ಕಂಡರಿಯದ ಕ್ಷಾಮಕ್ಕೆ ತುತ್ತಾಗಿವೆ. ಬಾರೀ ಪ್ರಮಾಣದ ಬೆಳೆ ಹಾನಿಯಿಂದ ಆಹಾರದ ಕೊರತೆ ಉಂಟಾಗಿವೆ. ಕುಡಿಯಲು ನೀರು ಸಹ ಸಿಗದಂತಾಗಿದೆ. ಗ್ರಾಮೀಣ ಕೆಲಸಗಾರರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ಇಂತಹ ಗಂಭೀರ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ನೆರವಿಗೆ ಧಾವಿಸುವ ಬದಲಾಗಿ ಬಡವರ ಮುಗ್ಧತೆಯ ಲಾಭಪಡೆದು ರಾಜಕೀಯ ಅಧಿಕಾರವನ್ನು ಗಟ್ಟಿಗೊಳಿಸುವುದರಲ್ಲಿ ಮುಳುಗಿವೆ. ರೇಷನ್ ಕಾರ್ಡ್ ಕೇಳುವ ಕೂಲಿಕಾರರಿಗೆ ಮೋದಿ ಕ್ರೆಡಿಟ್ ಕಾರ್ಡ್ ಕೊಡುತ್ತಾರೆ. ಬಾಯಿ ಬಿಟ್ಟಾಗಲೆಲ್ಲ ಅಭಿವೃದ್ಧಿ ಎಂದು ಬೊಬ್ಬಿಡುವ ಅವರಿಗೆ ಬಡವರ ಅಭಿವೃದ್ಧಿ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ. ಕಾರ್ಪೋರೇಟ್ ಕಂಪೆನಿಗಳಿಗೆ ತೆರಿಗೆ ರಿಯಾಯ್ತಿ ನೀಡುತ್ತಾರೆ. ಅವರ ಬಾರೀ ಮೊತ್ತದ ಸಾಲವನ್ನು `ಹಿಂತಿರುಗದ ಸಾಲ’ ಎಂದು ಮನ್ನಾ ಮಾಡುತ್ತಾರೆ. ಆದರೆ ಬಡವರ ಒಪ್ಪತ್ತಿನ ಗಂಜಿಗೆ ಬೇಕಾಗುವ ಪಡಿತರಕ್ಕೆ ಬೇಕಾಗುವ 1.5 ಲಕ್ಷ ಕೋಟಿ ರೂ. ಗಳನ್ನು ಒದಗಿಸಲು ಹಿಂದೇಟು ಹಾಕುತ್ತಾರೆ. ಕೇರಳದ ಕಮ್ಯೂನಿಸ್ಟ್ ಸರ್ಕಾರ 60 ವರ್ಷ ತುಂಬಿದ ಕೃಷಿ ಕೂಲಿಕಾರರಿಗೆ ಬೇಷರತ್ತಾಗಿ ತಿಂಗಳಿಗೆ 1100 ರೂ. ನಿವೃತ್ತಿ ವೇತನ ನೀಡುತ್ತದೆ. ಅದು ಮುಂದಿನ 5 ವರ್ಷಗಳಲ್ಲಿ 1500 ರೂ. ಆಗಲಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೀಗೇಕೆ ಮಾಡಬಾರದು? ಎಂದು ಕಾಮ್ರೆಡ್ ವಿಜಯರಾಘವನ್ ಪ್ರಶ್ನಿಸಿದರು.

ಬರದಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವವರು ಮಹಿಳಾ ಕೂಲಿಕಾರರು ಎಂದು ವಿವರಿಸಿದ ಅವರು ಕೂಲಿಕಾರ ಮಹಿಳೆಯರು ಮಹಿಳೆಯರಾಗಿ ಅನುಭವಿಸುತ್ತಿರುವ ತಾರತಮ್ಯ, ಕೌಟುಂಬಿಕ ಹಿಂಸೆ, ಕೆಲಸದ ಸ್ಥಳದಲ್ಲಿ ಕಿರುಕುಳ, ವರದಕ್ಷಿಣೆಯ ಪಿಡುಗು, ದೌರ್ಜನ್ಯ, ಅತ್ಯಾಚಾರದಂತಹ ಸಮಸ್ಯೆಗಳಿಗೂ ಕೃಷಿಕೂಲಿಕಾರರ ಸಂಘ ಗಮನ ನೀಡಿ ಮಧ್ಯಪ್ರವೇಶಮಾಡಬೇಕೆಂದು ಸಂಘದ ನಾಯಕತ್ವಕ್ಕೆ ಕಿವಿಮಾತು ಹೇಳಿದರು.

ಆರಂಭದಲ್ಲಿ ಡಾ. ವಿ.ಡಿ. ಸುವರ್ಣ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಕೂಲಿಕಾರ ಮಹಿಳೆಯರಿಗೆ ಅತಿಥಿಗಳು ತೆಂಗಿನ ಸಸಿಗಳನ್ನು ವಿತರಣೆ ಮಾಡುವ ಮೂಲಕ ಸಮಾವೇಶಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೆ. ಪ್ರೇಮಕುಮಾರಿ, ಜೆಡಿಎಸ್‍ನ ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರು ಸಾಂದರ್ಭಿಕವಾಗಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಚಂದ್ರಪ್ಪ ಹೊಸ್ಕೇರಾ, ಪುಟ್ಟಮಾದು, ಕೆ. ಬಸವರಾಜ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಕೃಷಿ ಕೂಲಿಕಾರರ ಉಪಸಮಿತಿಯ ಸಂಚಾಲಕರಾದ ಮಲ್ಲಮ್ಮ ಕೋಡ್ಲಿ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮೊದಲು ನಗರಲ್ಲಿ ಮಹಿಳಾ ಕೃಷಿ ಕೂಲಿಕಾರರ ಬೃಹತ್ ಮೆರವಣಿಗೆ ನಡೆಯಿತು. 2000 ಕ್ಕೂ ಹೆಚ್ಚು ಮಹಿಳಾ ಕೂಲಿಕಾರರು ಭಾಗವಹಿಸಿದ್ದರು.

ಉದ್ಯೋಗ ಖಾತ್ರಿ ಕಾರ್ಯಾಗಾರ:

ಊಟದ ವಿರಾಮದ ನಂತರ ಅದೇ ವೇದಿಕೆಯಲ್ಲಿ “ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಅನುಷ್ಠಾನ ಮತ್ತು ಬಲಪಡಿಸುವ ಕುರಿತು” ಕಾರ್ಯಗಾರವನ್ನು ಎರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಎ. ವಿಜಯರಾಘವನ್ ಅವರು ಬರಗಾಲದಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಗ್ರಾಮೀಣ ಬಡವರಿಗೆ ತುಂಬಾ ನೆರವಾಗಲಿದೆ ಎಂದು ಹೇಳಿದರಲ್ಲದೆ ನಮ್ಮ ನಿರಂತರ ಹೋರಾಟದ ಮೂಲಕ ಯೋಜನೆಯನ್ನು ಉಳಿಸಲು ಮತ್ತು ಬಲಪಡಿಸಲು ಸಾಧ್ಯವಾಗಬೇಕಾಗಿದೆ ಎಂದರು. ಮಹಿಳೆಯರಿಗೇ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದ ಅವರು ಇಂತಹ ಯೋಜನೆ ಇಲ್ಲದೆ ಹೊದರೆ ಮಹಿಳೆಯರೂ ಸಹ ಪುರುಷರೊಂದಿಗೆ ವಲಸೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಇಲಾಖಾ ಅಧಿಕಾರಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೂಲಿಕಾರರ ಸಂಘವು ತೋರುತ್ತಿರುವ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸಭಿಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ನೀಡಿದರು. ಇದೇ ಸಂದರ್ಭದಲ್ಲಿ ಪ್ರೊ. ಕೆಂಪಮ್ಮ ರವರು ಅಂತರರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ಕುರಿತು ಮಾತನಾಡಿದರು.

ಪ್ರತಿನಿಧಿಗಳ ಅಧಿವೇಶನ:

ಸಂಜೆ 6 ಗಂಟೆಗೆ ಸಮಾವೇಶದ ಪ್ರತಿನಿಧಿಗಳ ಅಧಿವೇಶನ ಆರಂಭವಾಯಿತು. 5 ಜನ ಸದಸ್ಯರುಳ್ಳ ಅಧ್ಯಕ್ಷೀಯ ಮಂಡಳಿಯನ್ನು ಆಯ್ಕೆ ಮಾಡಿದ ಬಳಿಕ ಅಗಲಿದ ಹೋರಾಟಗಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನಂತರ ಉಪಸಮಿತಿಯ ಸಂಚಾಲಕಿ ಮಲ್ಲಮ ಕೋಡ್ಲಿ ಪ್ರತಿನಿಧಿಗಳ ಚರ್ಚೆಗಾಗಿ ಕರಡು ವರದಿಯನ್ನು ಮಂಡಿಸಿದರು. ಚರ್ಚೆಯನ್ನು ಮರುದಿನಕ್ಕೆ ಮುಂದೂಡಲಾಯಿತು.

ಮಾರ್ಚ್ 9 ರಂದು ಬೆಳಿಗ್ಗೆ 10-30 ಕ್ಕೆ ವರದಿಯ ಮೇಲೆ ಚರ್ಚೆ ಆರಂಭವಾಯಿತು. 11 ಜಿಲ್ಲೆಗಳಿಂದ 200 ಮಂದಿ ಮಹಿಳಾ ಕೃಲಿಕಾರ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದು ಅವರ ಪೈಕಿ 15 ಜನ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಚರ್ಚೆಗೆ ಸಂಚಾಲಕಿ ಉತ್ತರ ನೀಡಿದ ನಂತರ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ನಡುವೆ ರೈತ ಸಂಘದಿಂದ ಯಶವಂತ, ಮಹಿಳಾ ಸಂಘದಿಂದ ದೇವಿ, ದಲಿತ ಹಕ್ಕುಗಳ ಸಮಿತಿಯಿಂದ ರಾಜೇಂದ್ರ, ಅಂಗವಿಕಲರ ಸಂಘದಿಂದ ದೊಡ್ಡಮರೀಗೌಡ ಮತ್ತು ಸಿಐಟಿಯುವಿನಿಂದ ಚಂದ್ರು ಸಮಾವೇಶಕ್ಕೆ ಶುಭಕೋರಿ ಮಾತನಾಡಿದರು.

ನೂತನ ಸಮಿತಿ ಆಯ್ಕೆ :

ಸಮಾವೇಶದ ಒಂದು ಮುಖ್ಯ ಕಲಾಪ ನೂತನ ಉಪಸಮಿತಿ ಆಯ್ಕೆ. 32 ಮಂದಿ ಸದಸ್ಯರುಳ್ಳ ನೂತನ ಉಪಸಮಿತಿಯನ್ನು ಸಮಾವೇಶ ಸರ್ವಾನುಮತದಿಂದ ಆಯ್ಕೆಮಾಡಿತು. ಆಯ್ಕೆಯಾದ ಸದಸ್ಯರು ಪ್ರತ್ಯೇಕವಾಗಿ ಸಭೆ ಸೇರಿ ಮಲ್ಲಮ್ಮ ಕೋಡ್ಲಿ ಅವರನ್ನು ರಾಜ್ಯ ಸಂಚಾಲಕಿಯಾಗಿ ಪುನರಾಯ್ಕೆ ಮಾಡಿದರಲ್ಲದೆ ಸರೋಜಮ್ಮ (ಮಳವಳ್ಳಿ), ನಾಗರತ್ನ ನಾಡ (ಕುಂದಾಪುರ), ಜಗದೇವಿ (ಚಿಂಚೋಳಿ) ಮತ್ತು ಬಾಗಮ್ಮ (ಗಂಗಾವತಿ) ಅವರನ್ನು ಸಹಸಂಚಾಲಕರಾಗಿ ಆಯ್ಕೆ ಮಾಡಿದರು.

ಕೊನೆಯಲ್ಲಿ ಮುಕ್ತಾಯ ಸಮಾರಂಭ. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಐಟಿಯು ಮುಖಂಡರಾದ ಸಂಗಾತಿ ರಾಮಕೃಷ್ಣ ಅವರು ಮಾತನಾಡಿ ಕೃಷಿ ಕೂಲಿಕಾರ ಮಹಿಳೆಯರ ಹೋರಾಟಕ್ಕೆ ಕಾರ್ಮಿಕ ವರ್ಗ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿದರು. ಹಾಡುಗಳೊಂದಿಗೆ ಹಾಗೂ ಘೋಷಣೆಗಳೊಂದಿಗೆ ಸಮಾವೇಶ ಯಶಸ್ವಿಯಾಗಿ ಮುಕ್ತಾಯವಾಯಿತು.

ಚಂದ್ರಪ್ಪ ಹೊಸ್ಕೇರಾ