ಕೋಮುವಾದಿ ಧ್ರುವೀಕರಣ ಮತ್ತು ಜಾತಿ ನೆಲೆಯ ಸಾಮಾಜಿಕ ತಂತ್ರಗಾರಿಕೆಯ ಬಿಜೆಪಿ ವಿಷಮಿಶ್ರಣ

ಸಂಪುಟ: 
11
ಸಂಚಿಕೆ: 
13
date: 
Sunday, 19 March 2017
Image: 

- ಸೀತಾರಾಮ್ ಯೆಚುರಿ -

ಉತ್ತರಪ್ರದೇಶ ಚುನಾವಣೆಗಳಲ್ಲಿ ಭರ್ಜರಿ ವಿಜಯ ನೋಟುರದ್ಧತಿಗೆ ಮತ್ತು ತನ್ನ ಉತ್ತಮ ಆಳ್ವಿಕೆಗೆ ಜನರು ವ್ಯಕ್ತಪಡಿಸಿದ ಅನುಮೋದನೆ ಎಂಬ ಬಿಜೆಪಿಯ ದಾವೆ ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಅದು ಪಡೆದಿರುವ ಫಲಿತಾಂಶಗಳನ್ನು ನೋಡಿದಾಗ ಸಂಪೂರ್ಣವಾಗಿ ಅಸಮರ್ಥನೀಯ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅದರ ವಿಜಯಕ್ಕೆ ಕಾರಣವಾಗಿರುವ ಅಂಶಗಳು ಹಲವು, ಮುಖ್ಯವಾಗಿ, ಕೋಮುವಾದಿ ಧ್ರುವೀಕರಣ ಮತ್ತು ಜಾತಿ-ಆಧಾರಿತ ಸಾಮಾಜಿಕ ತಂತ್ರಗಾರಿಕೆಯ ಪರಿಣಾಮಕಾರಿ ಬೆರಕೆ ಅದಕ್ಕೆ ಕಾರಣ.

ವಿಧಾನಸಭಾ ಚುನಾವಣೆಗಳ ಪ್ರಸಕ್ತ ಸುತ್ತಿನಲ್ಲಿ ಬಿಜೆಪಿ ಬೆರಗುಗೊಳಿಸುವ ಜಯಭೇರಿ ಬಾರಿಸಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ 2014 ರ ಚುನಾವಣಾ ಸಾಧನೆಯನ್ನು ಉಳಿಸಿಕೊಳ್ಳುವುದು ಅದಕ್ಕೆ ಸಾಧ್ಯವಾಗಿದೆ.

2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅದಕ್ಕೆ ಉತ್ತರಪ್ರದೇಶದಲ್ಲಿ 42.3ಶೇ ಮತ್ತು ಉತ್ತರಾಖಂಡದಲ್ಲಿ 55.3ಶೇ. ಮತಗಳು ದಕ್ಕಿದ್ದವು. ಈ ವಿಧಾನಸಭಾ ಚುನಾವಣೆಗಳಲ್ಲಿ ಅದಕ್ಕೆ ಉತ್ತರಪ್ರದೇಶದಲ್ಲಿ 39.7 ಶೇ. ಮತ್ತು ಉತ್ತರಾಖಂಡದಲ್ಲಿ 46.5ಶೇ. ಸಿಕ್ಕಿದೆ.

ಆದರೆ ಪಂಜಾಬಿನಲ್ಲಿ ಅದಕ್ಕೆ ಶೋಚನೀಯ ಸೋಲು ಎದುರಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಕಾಲಿದಳ-ಬಿಜೆಪಿ ಸರಕಾರವನ್ನು ದೊಡ್ಡ ಅಂತರದಲ್ಲಿ ಪಲ್ಲಟಗೊಳಿಸಲು ಸಾಧ್ಯವಾಗಿದೆ.

ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ, ಆದರೆ ಬಹುಮತ ಪಡೆಯಲಾಗಿಲ್ಲ. ಬಿಜೆಪಿ ಈ ಎರಡೂ ರಾಜ್ಯಗಳಲ್ಲಿ ಹೇಗೋ ಸರಕಾರಗಳನ್ನು ರಚಿಸಿದೆ. ಇಲ್ಲಿ ಅದು ಬೆದರಿಕೆ, ಭ್ರಷ್ಟಾಚಾರ ಮತ್ತು ಸಂಪುಟ ಸ್ಥಾನಗಳ ಮೂಲಕ ತುಷ್ಟೀಕರಣ ಮತ್ತು ಹಣಬಲದ ವಿಷಮಿಶ್ರಣವನ್ನು ವಿಧ್ವಂಸಕಾರಿ ರೀತಿಯಲ್ಲಿ ಬಳಸಿಕೊಂಡು ಬಹುಮತಗಳನ್ನು ಸೃಷ್ಟಿಸಿಕೊಂಡಿದೆ, ಆಮೂಲಕ ಜನತೆಯ ತೀರ್ಪಿನ ನಿರಾಕರಣೆ ಮಾಡಿದೆ.

ಈ ವಿಜಯ ನೋಟುರದ್ಧತಿಗೆ ಮತ್ತು ತನ್ನ ಉತ್ತಮ ಆಳ್ವಿಕೆಗೆ ಜನರು ವ್ಯಕ್ತಪಡಿಸಿದ ಅನುಮೋದನೆ ಎಂಬ ಬಿಜೆಪಿಯ ದಾವೆ ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಅದು ಪಡೆದಿರುವ ಫಲಿತಾಂಶಗಳನ್ನು ನೋಡಿದಾಗ ಸಂಪೂರ್ಣವಾಗಿ ಅಸಮರ್ಥನೀಯ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅದರ ವಿಜಯಕ್ಕೆ ಕಾರಣವಾಗಿರುವ ಅಂಶಗಳು ಹಲವು, ಮುಖ್ಯವಾಗಿ, ಕೋಮುವಾದಿ ಧ್ರುವೀಕರಣ ಮತ್ತು ಜಾತಿ-ಆಧಾರಿತ ಸಾಮಾಜಿಕ ತಂತ್ರಗಾರಿಕೆಯ ಪರಿಣಾಮಕಾರಿ ಬೆರಕೆ ಅದಕ್ಕೆ ಕಾರಣ.

ಈಗ ಲೋಕಸಭೆಯಲ್ಲಿ ಬಿಜೆಪಿಯ ಒಬ್ಬರಾದರೂ ಮುಸ್ಲಿಮ್ ಸದಸ್ಯರಿಲ್ಲ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅದು ಒಬ್ಬರಾದರೂ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇದರ ಸಂದೇಶ ಯಾರೂ ನಿರಾಕರಿಸಲಾರದಷ್ಟು ಸ್ಪಷ್ಟ. ಅದು 2014ರಲ್ಲಿ ತನ್ನ ‘ಯಶಸ್ವಿ ಗುಜರಾತ್ ಮಾದರಿ’ಯ ಪ್ರಚಾರದ ಮೂಲಕ ನೀಡಿದ ಸಂದೇಶ. ಈ ಮಾದರಿಯ ಬಗ್ಗೆ ಮುಂದಿಟ್ಟ ದಾವೆಗಳೆಲ್ಲ ಶುದ್ಧ ಸುಳ್ಳುಗಳು ಎಂದು ಕಂಡುಬಂದರೂ, ಆಮೂಲಕ ನೀಡಿದ  ದುಷ್ಟ ಸಂದೇಶವೆಂದರೆ  ಗುಜರಾತಿನ ಯಶಸ್ಸು 2002 ರ ಕೋಮುವಾದಿ ಹತ್ಯಾಕಾಂಡದ ನಂತರ ಆ ರಾಜ್ಯವನ್ನು ಮುಸ್ಲಿಮರಿಂದ ಶುದ್ಧೀಕರಿಸಲಾಯಿತು ಎಂಬುದೇ- ಅಂದರೆ ಕೋಮುವಾದಿ ಧ್ರವೀಕರಣವನ್ನು ತೀಕ್ಷ್ಣಗೊಳಿಸುವ ಘಾತಕ ಪ್ರಚಾರ ತಂತ್ರ.

ಪ್ರಧಾನ ಮಂತ್ರಿಗಳ ‘ಕಬ್ರಿಸ್ತಾನ್’ ಮತ್ತು ‘ಶಂಶಾನ್‍ಘಾಟ್’, ಈದ್ ಮತ್ತು ದೀಪಾವಳಿಯ ಕುಟುಕು ನುಡಿಗಳೊಂದಿಗೆ ಈ ದುಷ್ಟ ಕೋಮುವಾದಿ ಪ್ರಚಾರವನ್ನು ಹರಿಯಬಿಡಲಾಯಿತು. ಬಿಜೆಪಿ ಅ ಧ್ಯಕ್ಷರು ಇದಕ್ಕೆ ‘ಕಸಬ್’ ಎಂಬ ಹೊಸ ಪದ ಸೇರಿಸಿ ಕಾಂಗ್ರೆಸ್-ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಮುಸ್ಲಿಮ್ ತುಷ್ಟೀಕರಣದ ಪ್ರತಿಪಾದಕರು ಎಂದು ಬಿಂಬಿಸಿದರು. ತಕ್ಷಣವೇ ಇದು ಬಿಜೆಪಿಯ ಪ್ರಧಾನ ಪ್ರತಿದ್ವಂದ್ವಿ ಪಕ್ಷಗಳು ಪಾಕಿಸ್ತಾನ ಪ್ರಾಯೋಜಿಸುವ ಗಡಿಯಾಚೆಯ ಭಯೋತ್ಪಾದನೆಯೊಡನೆ ಬಲವಾದ ಕೊಂಡಿ ಉಳ್ಳವರು ಎಂದೂ ಬಿಂಬಿಸಿತು.

ತದ್ವಿರುದ್ಧವಾಗಿ, ಬಿಜೆಪಿ  ತನ್ನ ‘ಮಿಂಚಿನ ಪ್ರಹಾರ’ಗಳು ಯಶಸ್ವಿಯಾಗಿವೆ ಎನ್ನುತ್ತ ತನ್ನ ಪಾಕಿಸ್ತಾನ-ವಿರೋಧವನ್ನು , ಆಮೂಲಕ ಮುಸ್ಲಿಮ್-ವಿರೋಧವನ್ನು ಟಾಂಟಾಂ ಮಾಡಿತು(ಇಂತಹ ದಾವೆಗಳೂ ಸುಳ್ಳು ಎಂಬುದು ಈಗಾಗಲೇ ಕಂಡುಬಂದಿದೆ, ಏಕೆಂದರೆ ಈ ‘ಮಿಂಚಿನ ಪ್ರಹಾರ’ಗಳ ನಂತರದ ಮೂರು ತಿಂಗಳಲ್ಲಿ  ಭಯೋತ್ಪಾದಕ ದಾಳಿಗಳಲ್ಲಿ ಪ್ರಾಣ ಕಳಕೊಂಡ ನಮ್ಮ ವೀರ ಯೋ ಧರ ಸಂಖ್ಯೆ ಅದಕ್ಕೆ ಹಿಂದಿನ ಮೂರು ತಿಂಗಳಿಗಳಿಗೆ ಹೋಲಿಸಿದರೆ ಎರಡು ಪಟ್ಟಾಗಿದೆ).

ಇಂತಹ ಕೋಮುವಾದಿ ಪ್ರಚಾರಗಳು ಮುಸ್ಲಿಂ ಜನಸಂಖ್ಯೆ ಗಮನಾರ್ಹವಾಗಿರುವ ರಾಜ್ಯಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಈ ಸಂಗತಿಯೇ ಇತರ ಮೂರು ರಾಜ್ಯಗಳಲ್ಲಿ ಅದು ಅಂತಹ ಮ್ಯಾಜಿಕ್ ಏಕೆ ಮಾಡಲಾಗಲಿಲ್ಲ ಎಂಬುದಕ್ಕೆ ವಿವರಣೆ ಕೊಡುತ್ತದೆ. ಆರೆಸ್ಸೆಸ್‍ನ ವದಂತಿ ಹರಡುವ ತಂಡಗಳು ಒಂದು ‘ಮುಸ್ಲಿಮ್ ಸರಕಾರ’ ಬರುತ್ತಿದೆ ಎಂಬ ಮಂತ್ರದ ಮೂಲಕ ಜನಗಳನ್ನು ಉತ್ತರಪ್ರದೇಶದ ಜಾತ್ಯತೀತ ಪಕ್ಷಗಳ ವಿರುದ್ಧ ಅಣಿನೆರೆಸಿದವು.

ಎಸ್‍ಪಿ-ಕಾಂಗ್ರೆಸ್ ಮತ್ತು ಬಿಎಸ್‍ಪಿ ಎರಡೂ ಒಂದು ಪ್ರತಿ-ಕಥನವನ್ನು ಮುಂದಿಡುವ ಬದಲು ಈ ಕಥನದ ಬಲೆಗೆ ಬಿದ್ದವು. ಬಿಎಸ್‍ಪಿ ಮುಖ್ಯಸ್ಥರು ತಾವು ನೂರು ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ, ಎಸ್‍ಪಿ-ಕಾಂಗ್ರೆಸ್ ಕೂಟಕ್ಕೆ ಮತ ಹಾಕಬೇಡಿ, ಏಕೆಂದರೆ ತನ್ನ ಮುಸ್ಲಿಮ್‍ಪರತೆ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದೇ  ಸತತವಾಗಿ ಜನರಿಗೆ ನೆನಪಿಸುತ್ತ ಹೋದರು. 

ಇದರೊಂದಿಗೇ ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬಹುಪಾಲು ಯಾದವ ಜಾತಿ ನೆಲೆಯೇ ಇರುವ ಎಸ್‍ಪಿ ಮತ್ತು ಜಾಟವ್ ಜಾತಿಯ ಮಧ್ಯೆಯೇ ಪ್ರಧಾನ ಬೆಂಬಲ ನೆಲೆ ಹೊಂದಿರುವ ಬಿಎಸ್‍ಪಿಗೆ ಪ್ರತಿಯಾಗಿ ಯಾದವೇತರ ಒಬಿಸಿಗಳನ್ನು ಮತ್ತು ಜಾಟವೇತರ ಪರಿಶಿಷ್ಟ ಜಾತಿಗಳವನ್ನು ಅಣಿನೆರೆಸುವ ಒಂದು ಸಾಮಾಜಿಕ ತಂತ್ರಗಾರಿಕೆಯನ್ನು ಪರಿಪೂರ್ಣಗೊಳಿಸಿತು.

ಜಾತ್ಯಾತೀತ ಪ್ರತಿಪಕ್ಷಗಳಿಂದ ಒಂದು ಪ್ರತಿ-ಕಥನದ ಕೊರತೆ ಬಿಜೆಪಿಯ ಯಶಸ್ಸನ್ನು ಸುಲಭಗೊಳಿಸಿತು. ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಮೂಡಿಬಂದಂತೆ ಉತ್ತರಪ್ರದೇಶದಲ್ಲೂ ಒಂದು ‘ಮಹಾಜೋತ್’ ಏರ್ಪಟ್ಟಿದ್ದರೆ ಖಂಡಿತವಾಗಿ ಬಿಜೆಪಿಯನ್ನು ತಡೆದು ನಿಲ್ಲಿಸಬಹುದಿತ್ತು ಎಂದು ಈಗ ವಾದಿಸಲಾಗುತ್ತಿದೆ. ಎಸ್‍ಪಿ, ಕಾಂಗ್ರೆಸ್, ಬಿಎಸ್‍ಪಿ ಮತ್ತು ಆರ್‍ಎಲ್‍ಡಿ ಗಳಿಸಿದ ಮತಗಳನ್ನು ಜೋಡಿಸಿದರೆ ಈ ‘ಮಹಾಜೋತ್’ 311 ವಿಧಾನಸಭಾ ಸ್ಥಾನಗಳನ್ನು ಗಳಿಸುತ್ತಿತ್ತು, ಬಿಜೆಪಿಗೆ ಕೇವಲ 90 ಉಳಿಯುತ್ತಿತ್ತು ಎಂದು ಚುನಾವಣಾ ಅಂಕಿ-ಅಂಶಗಳನ್ನು ತೋರಿಸಲಾಗುತ್ತಿದೆ.

ದುರದೃಷ್ಟವಶಾತ್, ರಾಜಕೀಯ ಎಂಬುದು ಅಂಕಗಣಿತವಲ್ಲ. ಬಿಜೆಪಿ ಮುಂದಿಟ್ಟ ಕೋಮುವಾದಿ ಯೋಜನೆಗೆ ಒಂದು ಪರ್ಯಾಯ, ಬಿಜೆಪಿ ಮತ್ತು ಪ್ರಧಾನಿ ಮೋದಿ ಪ್ರತಿಪಾದಿಸಿರುವ ಕಥನಗಳಿಗೆ ವಿರುದ್ಧವಾದ ಒಂದು ಕಥನವನ್ನು ಮುಂದಿಡುವ ಮೂಲಕ ಮಾತ್ರವೇ ಮೂಡಿ ಬರಲು ಸಾಧ್ಯ. ಇಂತಹ ಒಂದು ಜನಪರ ಪರ್ಯಾಯ ಕಥನವನ್ನು ಪ್ರಸ್ತುತಪಡಿಸುವ ಸಾಧ್ಯತೆಗಳು ಇದ್ದವು, ನಿರ್ದಿಷ್ಟವಾಗಿ ಬಹುಪಾಲು ಬಡಜನರು ಮತ್ತು ಅಂಚಿಗೆ ತಳ್ಳಲ್ಪಟ್ವ ವಿಶಾಲ ವಿಭಾಗಗಳ ಮೇಲೆ ನೋಟುರದ್ಧತಿ ಹೇರಿದ ಅಭೂತಪೂರ್ವ ಆರ್ಥಿಕ ಸಂಕಟಗಳ ನಂತರದ  ಸಂದರ್ಭದಲ್ಲಿ.

ನಮ್ಮ ಜಿಡಿಪಿಗೆ 40ಶೇ.ಕ್ಕಿಂತ ಹೆಚ್ಚು ಕಾಣಿಕೆ ನೀಡುವ ಮತ್ತು 80ಶೇ.ಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳನ್ನು ನಿರ್ಮಿಸುವ ಅನೌಪಚಾರಿಕ ಆರ್ಥಿಕ ವ್ಯವಸ್ಥೆಯನ್ನು ನೋಟು ರದ್ಧತಿ ಸಂಪೂರ್ಣವಾಗಿ ಧೂಳೀಪಟ ಮಾಡಿದೆ ಎಂಬುದೀಗ ಸ್ವಯಂವೇದ್ಯ. ಉತ್ತರಪ್ರದೇಶದಲ್ಲಿ ಗ್ರಾಮೀಣ ಬದುಕು ಚಿಂದಿಯಾಗಿದೆ, ಈಗಲೂ ಹಾಗೆಯೇ ಮುಂದುವರೆದಿದೆ. ರೈತರು ಕರೆನ್ಸಿ ನೋಟುಗಳಿಲ್ಲದೆ ಹತಾಶರಾಗಿ, ಸರಕಾರ ಪ್ರಕಟಪಡಿಸಿದ ಕನಿಷ್ಟ ಬೆಲೆಗಳ ಅರ್ಧಬೆಲೆಗಳಿಗೇ ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದರು. ಇಂತಹ ವಿಭಾಗಗಳನ್ನು ತಲುಪಿ ಅವರನ್ನು ಬಿಜೆಪಿಯ ಆರ್ಥಿಕ ಧೋರಣೆಗಳ ವಿರುದ್ಧ ಮತ್ತು ಪ್ರಧಾನ ಮಂತ್ರಿಗಳ ನೋಟುರದ್ಧತಿಯ ವಿರುದ್ಧ ಹೋರಾಟಗಳತ್ತ ಆಕರ್ಷಿಸುವ ಬದಲು ಎಸ್‍ಪಿ-ಕಾಂಗ್ರೆಸ್ ಮತ್ತು ಬಿಎಸ್‍ಪಿ ಎರಡೂ ಬಿಜೆಪಿಯ ಕಥನದ ಬಲೆಗೆ ಬಿದ್ದವು. ಇದು ನೋಟುರದ್ಧತಿ ಶ್ರೀಮಂತ-ವಿರೋಧಿ ಮತ್ತು ಬಡವರ ಪರವಾದ ಕ್ರಮ ಎಂಬ ಬಿಜೆಪಿ ಪ್ರಚಾರಕ್ಕೆ ಇನ್ನಷ್ಟು ಅನುಕೂಲ ಕಲ್ಪಿಸಿತು. ಆದರೆ ವಾಸ್ತವತೆ ತದ್ವಿರುದ್ಧವಾಗಿತ್ತು ತಾನೇ?

ಈ ಪಕ್ಷಗಳ ಇಂತಹ ನಿಲುವು ಈ ಮೊದಲು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಸ್ಪಷ್ಟವಾಗಿತ್ತು. ಸಂಸತ್ತಿನ ಹದಿನಾರು ಪ್ರತಿಪಕ್ಷಗಳು ಈ ನೋಟುರದ್ಧತಿಯನ್ನು ವಿರೋಧಿಸಲು ಒಂದುಗೂಡಿದ್ದವು. ಎಡಪಕ್ಷಗಳ ಒತ್ತಾಯದಿಂದಾಗಿ ನವಂಬರ್ 28, 2016ರಂದು ಒಂದು ದೇಶವ್ಯಾಪಿ ಹರತಾಳಕ್ಕೆ ಕರೆ ನೀಡಲಾಯಿತು. ಪ್ರಮುಖ ಜಾತ್ಯತೀತ ಪ್ರತಿಪಕ್ಷಗಳು ಈ ಕರೆಗೆ ಬಾಯಿ ಮಾತಿನ ಬೆಂಬಲ ಸೂಚಿಸಿದರೇ ಹೊರತು ಜನಗಳ ಅಸಂತೃಪ್ತಿಯನ್ನು ಸಕ್ರಿಯವಾಗಿ ಅಣಿನೆರೆಸಲು ನಿರಾಕರಿಸಿದರು. ಈ ವಿಫಲತೆಯಿಂದಾಗಿ ನೋಟು ರದ್ಧತಿಯ ಕುರಿತ ಬಿಜೆಪಿ ಕಥನವೇ ಪ್ರಬಲ ಕಥನವಾಗಿ ಬಿಟ್ಟಿತು. ಈ ಕಥನದ ಬಲೆಗೆ ಬಿದ್ದ ಬೂಜ್ರ್ವಾ ಪ್ರತಿಪಕ್ಷಗಳು ಚುನಾವಣಾ ಬೆಂಬಲಕ್ಕೆ ಜನಗಳನ್ನು ಐಡೆಂಟಿಟಿ ಮತ್ತು ಜಾತಿ ಆಧಾರದಲ್ಲೇ ಅಣಿನೆರೆಸುವ ಪ್ರಯತ್ನದಲ್ಲಿ ತೊಡಗಿದವು.

ಹೀಗೆ ಬೂಜ್ರ್ವಾ ಮಾಧ್ಯಮಗಳಲ್ಲಿ ಬಿಜೆಪಿ ಡಂಗುರ ಬಾರಿಸುವವರ ಸಮರ್ಥ ನೆರವು ಮತ್ತು ಹಣಬಲದ ಅಭೂತಪೂರ್ವ ಪ್ರದರ್ಶನದಿಂದಾಗಿ ಜನಗಳ ಮುಂದೆ ಬಂದ ಏಕೈಕ ಕಥನವೆಂದರೆ ಬಿಜೆಪಿ ಕಥನ ಮಾತ್ರವೇ. ಪರ್ಯಾಯ ಕಥನವನ್ನು ಸ್ಥಾಪಿಸಲು ಪ್ರಯತ್ನಿಸಿದ್ದು ಎಡಪಕ್ಷಗಳು ಮಾತ್ರವೇ. ಆದರೆ ಎಡಪಕ್ಷಗಳ ಬಲವಾದ ಅಸ್ತಿತ್ವ  ಕೇರಳ ಮತ್ತು ಇತರ ರಾಜ್ಯಗಳಲ್ಲಿರುವಂತೆ ಈ ರಾಜ್ಯದಲ್ಲಿ ಇಲ್ಲ. ಬಿಜೆಪಿ ಒಂದು ಪರಿಣಾಮಕಾರಿ ಪರ್ಯಾಯದ ಅಭಾವದ ಪ್ರಯೋಜನವನ್ನು ಪಡೆದಿದೆ.

ಬಿಜೆಪಿ ಚುನಾವಣೆಗಳ ವೇಳೆಯಲ್ಲಿ ಪಕ್ಷಗಳ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಕಾಳಜಿ ಪ್ರದರ್ಶಿಸಿತು. ಈ ಚುನಾವಣೆಗಳು ಅದನ್ನೂ ಆಮೂಲಾಗ್ರವಾಗಿ ಬಯಲಿಗೆಳೆದಿದೆ. ಬಿಜೆಪಿಯ ಹಣಬಲದ ಪ್ರದರ್ಶನವಂತೂ ಅಭೂತಪೂರ್ವವಾಗಿತ್ತು. ಇದು ಗೋವಾ ಮತ್ತು ಮಣಿಪುರದಲ್ಲಿ ಏಕೈಕ ದೊಡ್ಡಪಕ್ಷವಾಗಿ ಮೂಡಿ ಬರದಿದ್ದರೂ ಬಹುಮತಗಳನ್ನು ಹೇಗೋ ಜೋಡಿಸಿಕೊಂಡಿರುವಲ್ಲಿ ಒಂದು ಪ್ರಧಾನ ಪಾತ್ರ ವಹಿಸಿದೆ ಎಂದು ವರದಿಯಾಗಿದೆ.

ಹಣಬಲದ ಬಳಕೆಯನ್ನು ಹತ್ತಿಕ್ಕಲು ಆಳವಾದ ಚುನಾವಣಾ ಸುಧಾರಣೆಗಳು ತುರ್ತಾಗಿ ತಕ್ಷಣವೇ ಆರಂಭವಾಗಬೇಕಾಗಿದೆ. ಬಿಜೆಪಿ ಮತ್ತು ಪ್ರಧಾನ ಮಂತ್ರಿ  ಮೋದಿಯವರ ಕಥನಕ್ಕೆ ಪ್ರತಿಯಾದ ಕಥನದ ಶಕ್ತಿಯೇ ಈ ದೇಶದಲ್ಲಿ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಂದುಗೂಡಿಸುವ ಅತ್ಯಂತ ನಂಬಲರ್ಹ ಬುನಾದಿ. ಇದು ಬಿಜೆಪಿ ಹರಿಯ ಬಿಟ್ಟಿರುವ ತೀಕ್ಷ್ಣ ಕೋಮುವಾದಿ ದಾಳಿಯ ವಿರುದ್ಧ ಕೋಟೆಯಾಗಿ ನಿಲ್ಲುತ್ತದೆ ಮತ್ತು ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಪ್ರಭುತ್ವ ಬುನಾದಿಯನ್ನು ಕಾಯ್ದುಕೊಳ್ಳುತ್ತದೆ.

ಕೊನೆಗೂ, ಈ ಕೋಮುವಾದಿ ಪೆಡಂಭೂತವನ್ನು ಜನತೆಯ ಹೋರಾಟಗಳ ಬಲದ ಮೂಲಕ ಮಾತ್ರವೇ ಸೋಲಿಸಲು ಸಾಧ್ಯ.


ಉತ್ತರಪ್ರದೇಶ - ಒಟ್ಟು 403

ಬಿಜೆಪಿ             312          39.7%
ಅಪ್ನಾ ದಲ್          9          1.0
ಎಸ್‍ಬಿಎಸ್‍ಪಿ       4          0.7
ಎಸ್‍ಪಿ              47          21.8
ಕಾಂಗ್ರೆಸ್            7          6.2
ಬಿಎಸ್‍ಪಿ          19          22.2
ಆರ್‍ಎಲ್‍ಡಿ          1          1.8
ಇತರರು              4


ಉತ್ತರಾಖಂಡ-ಒಟ್ಟು70

ಬಿಜೆಪಿ               57          46.5%
ಕಾಂಗ್ರೆಸ್          11          33.5
ಪಕ್ಷೇತರರು          2    
ಬಿಎಸ್‍ಪಿ             0          7

 


ಮಣಿಪುರ-ಒಟ್ಟು 60

ಕಾಂಗ್ರೆಸ್          28          35.1%
ಬಿಜೆಪಿ              21          36.3
ಎಲ್‍ಜೆಪಿ            1          2.5
ಎನ್‍ಪಿಎಫ್        4          7.2
ಎನ್‍ಪಿಪಿ           4          5.1
ಟಿಎಂಸಿ             1          1.4
ಪಕ್ಷೇತರ           1

 


ಗೋವ-ಒಟ್ಟು 40

ಕಾಂಗ್ರೆಸ್          17          28.4%
ಬಿಜೆಪಿ              13          32.5
ಎಂಜಿಪಿ             3          11.3
ಜಿಎಫ್‍ಪಿ            3          3.3
ಎನ್‍ಸಿಪಿ           1          2.3
ಪಕ್ಷೇತರರು        3

 


ಪಂಜಾಬ್-ಒಟ್ಟು 117

ಕಾಂಗ್ರೆಸ್              77          38.5%
ಎಎಪಿ                  20           23.7
ಅಕಾಲಿ ದಳ          15           25.2
ಬಿಜೆಪಿ                   3           5.4
ಎಲ್‍ಐಪಿ                2          1.2