ಜನ ಹಾಗೂ ಅಭಿವೃಧ್ಧಿ-ವಿರೋಧಿ, ಕಾರ್ಪೋರೇಟ್-ಪರ ಚುನಾವಣಾ ಗಿಮಿಕ್ ಬಜೆಟ್ : ಸಿಪಿಐ(ಎಂ)

ಸಂಪುಟ: 
11
ಸಂಚಿಕೆ: 
13
Sunday, 19 March 2017

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಮಂಡಿಸಿದ 2017-18ರ ಸಾಲಿನ ರಾಜ್ಯ ಬಜೆಟ್ ಜನವಿರೋಧಿ ಹಾಗೂ ರಾಜ್ಯದ ಅಭಿವೃಧ್ಧಿ ವಿರೋಧಿ, ಕಾರ್ಪೋರೇಟ್ ಪರ ಮತ್ತು ಚುನಾವಣಾ ಗಿಮಿಕ್ ಆಲ್ಲದೆ ಜನತೆಯ ಮೇಲೆ ವ್ಯಾಪಕವಾದ, ಅಕಾರಣವಾದ ಸಾಲದ ಹೊರೆಯನ್ನು ಹೇರಿದ ಬಜೆಟ್ ಎಂದು ಸಿಪಿಐ(ಎಂ) ಕನಾಟಕ ರಾಜ್ಯ ಸಮಿತಿ ಖಂಡಿಸಿದೆ. ಕೂಡಲೇ ಅದಕ್ಕೆ ಜನಪರವಾಗಿ ಮತ್ತು ಅಭಿವೃಧ್ದಿ ಪರವಾದ ದಿಶೆಯನ್ನು ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಸಿಪಿಐ(ಎಂ) ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ತೀವ್ರ ಬರಗಾಲದಲ್ಲಿ ಬಳಲುತ್ತಿದೆ ಅದೇ ರೀತಿ, ಗ್ರಾಮೀಣ ಪ್ರದೇಶ ತೀವ್ರ ಕೃಷಿ ಬಿಕ್ಕಟ್ಟಿನಲ್ಲಿದೆ. ಇದರಿಂದಾಗಿ, ರಾಜ್ಯದ ಒಟ್ಟು ಬೆಳವಣಿಗೆಯ ದರ ಕಳೆದ ವರ್ಷಕ್ಕೆ ಹೋಲಿಸಿದರೂ, ಶೇ 0.5 ರಷ್ಟೂ ಕುಸಿತಗೊಂಡಿದೆ. ರೈತರು, ಕೂಲಿಕಾರರು, ಕಸುಬುದಾರರು, ಮಹಿಳೆಯರು ಬರಗಾಲ ಮತ್ತು ಬಿಕ್ಕಟ್ಟಿನಿಂದಾಗಿ, ಸಾಲ ನೀಡಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ತೀವ್ರ ದೌರ್ಜನ್ಯಕ್ಕೆ ಮತ್ತು ಇದ್ದ ಬದ್ದ ಆಸ್ತಿಗಳ ನಷ್ಠಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ 125ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 8 ದಲಿತರು ಕೊಲೆಗೀಡಾಗಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ.

ಇಂತಹ ಸಂದರ್ಭದಲ್ಲಿ ಬರಗಾಲ ಮತ್ತು ಸಾಲದ ಬಾಧೆ ಮತ್ತು ದೌರ್ಜನ್ಯಗಳಿಂದ ಹೊರಬರಲು ಅವರ ಸಾಲ ಮನ್ನಾ ಮತ್ತು ಬರಪರಿಹಾರ ಘೋಷಿಸುವ ಬಜೆಟ್ ಮಂಡಿಸಿ ಕಿಂಚಿತ್ತಾದರೂ ಸಹಾಯ ನೀಡಬಲ್ಲ ಕೆಲಸವನ್ನು ಸಿದ್ಧರಾಮಯ್ಯನವರ ಸರಕಾರ ಮಾಡಬಹುದಿತ್ತು. ಆದರೇ ಹಾಗೆ ಮಾಡದೆ ಬಹುರಾಷ್ಠ್ರೀಯ ಸಂಸ್ಥೆಗಳ ಅಗತ್ಯದಂತೆ ಬೇಜವಾಬ್ದಾರಿಯುತವಾಗಿ ವರ್ತಿಸಿ, ಜನ ಕೊಟ್ಟ ತೆರಿಗೆ ಹಣ ಮತ್ತು ಅಧಿಕಾರವನ್ನು ದುರುಪಯೋಗ ಮಾಡಿದೆ ಎಂದು ಸಿಪಿಐ(ಎಂ) ಕಟುವಾಗಿ ವಿಮರ್ಶಿಸಿದೆ.

ರಾಜ್ಯಾದಾದ್ಯಂತ ವ್ಯಾಪಿಸಿರುವ ಅಸಂಘಟಿತ ಮತ್ತು ಗುತ್ತಿಗೆ ಮತ್ತಿತರೇ ಕಾರ್ಮಿಕರು ಕನಿಷ್ಠ ವೇತನ ಮಾಸಿಕ ರೂ. 18,000 ನೀಡುವಂತೆ ನಿರಂತರವಾಗಿ ಚಳುವಳಿಯಲ್ಲಿ ತೊಡಗಿ ಸತತವಾಗಿ ಒತ್ತಾಯಿಸುತ್ತಿದ್ದರೂ ಆ ಕುರಿತು ಪ್ರಸ್ಥಾಪವೇ ಇಲ್ಲ. ಅಂಗನವಾಡಿ, ಬಿಸಿಯೂಟ, ಪಂಚಾಯತ್ ಹಾಗೂ ಇತರೆಡೆ ಖಾಯಂ ಆಗಿ ಕಾರ್ಯ ನಿರ್ವಹಿಸುವ ಗುತ್ತಿಗೆ ಮತ್ತಿತರೇ ಕಾರ್ಮಿಕರ ಉದ್ಯೋಗವನ್ನು ಖಾಯಂ ಮಾಡುವ ಕೇಳಿಕೆಯನ್ನು ಕಿವಿಯೊಳಗೆ ಹಾಕಿಕೊಂಡಿಲ್ಲ. ತೀವ್ರ ಬೆಲೆ ಏರಿಕೆಯ ಈ ಕಾಲದಲ್ಲಿ ಆಶಾ ಹಾಗೂ ಅಂಗನವಾಡಿ ಕೆಲಸಗಾರರಿಗೆ 1000 ರೂ ಘೋಷಿಸಿರುವುದು ಯಾತಕ್ಕೂ ಸಾಲುವುದಿಲ್ಲ.

ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಲೇ ಇದೆ. ಅದಕ್ಕನುಗುಣವಾಗಿ ಉದ್ಯೋಗ ಸೃಷ್ಟಿಸುವ ವಿಚಾರ ಹೋಗಲೀ, ಕನಿಷ್ಠ ನಿರುದ್ಯೋಗ ಭತ್ಯೆಯನ್ನಾದರೂ ಘೋಷಿಸಿಲ್ಲ. ಸುಮಾರು 3 ಕೋಟಿಗೂ ಅಧಿಕ ಬಡವರಿರುವ ಗ್ರಾಮೀಣ ಪ್ರದೇಶದಲ್ಲಿ ಈ ವರ್ಷ ಕೇವಲ 12 ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡುವ ಉದ್ಯೋಗ ಖಾತ್ರಿ ಯೋಜನೆಯ ಗುರಿ ಹೊಂದಲಾಗಿದೆ. ಶಿಕ್ಷಣಕ್ಕೆ ಒದಗಿಸಲಾದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೇ ಶೇ 0.85ರಷ್ಟು ಕಡಿತಗೊಳಿಸಿದೆ.

ಬಡವರ ರೇಷನ್‍ಕಾರ್ಡಗಳಿಗೆ ತಲಾ 02 ಕೇಜಿ ಧಾನ್ಯ ಹೆಚ್ಚಳ ಮತ್ತು ಒಂದು ಕೇಜಿ ಬೇಳೆ ನೀಡಿಕೆ ಮತ್ತು ನಮ್ಮ ಕ್ಯಾಂಟೀನ್ ಹಾಗೂ ಹಂಚಿಕೆಗೊಳಪಡಿಸಬಹುದಾದ ಆಯವ್ಯಯದ ಶೇ 24.1 ರಷ್ಠು ಹಣವನ್ನು ಪರಿಶಿಷ್ಠಜಾತಿ ಮತ್ತು ಪಂಗಡಗಳ ಉಪಯೋಜನೆಗೆ ಮೀಸಲಿಟ್ಟಿರುವ ಮುಂತಾದ ಘೋಷಣೆಗಳಷ್ಠೇ ಸ್ವಾಗತಾರ್ಹವಾಗಿವೆ. ಅಲ್ಲಿಯೂ ಆಧಾರ್ ಕಾರ್ಡ ಕಾರಣಕ್ಕೆ ರೇಷನ್ ಕಾರ್ಡ ಬಹಳಷ್ಟು ಬಡವರಿಗೆ ಸಿಕ್ಕಿಲ್ಲ. ಈ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಅದೇ ರೀತಿ, ಕಳೆದ 3 ವರ್ಷಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಉಪಯೋಜನೆಗಳಿಗೆ ನಿಗದಿಸಲಾದ ಸುಮಾರು 13.164 ಕೋಟಿ ರೂಗಳನ್ನು ಉಪಯೋಗಿಸಿಲ್ಲ. ಖರ್ಚು ಮಾಡಲಾದ ಹಣದಲ್ಲಿ ವ್ಯವಸಾಯದಲ್ಲಿ ತೊಡಗಲಿಚ್ಚಿಸುವ ದಲಿತರಿಗೆ ಭೂಮಿ ಒದಗಿಸಲು ನಿಗದಿಸಿದ ಮೊತ್ತ ಕೇಳಿಕೆಯ ಅಂಚನ್ನು ತಲುಪಿಲ್ಲ.

ಕೇಂದ್ರ ಸರಕಾರದ ಉನ್ನತ ಮೌಲ್ಯದ ನೋಟುಗಳ ವರ್ಗಾವಣೆಯ ಕಾರಣದಿಂದ ರಾಜ್ಯದ ಬೊಕ್ಕಸಕ್ಕುಂಟಾದ ನಷ್ಠವನ್ನು ಕೇಂದ್ರದಿಂದ ಪಡೆಯುವ ಪ್ರಸ್ಥಾಪವನ್ನು ಹೊಂದಿಲ್ಲ. ಅಲ್ಲದೇ ಬಹುತೇಕ ಬಹಿರಂಗ ಮಾರುಕಟ್ಟೆ ಮತ್ತು ಕೇಂದ್ರ ಸರಕಾರ ಮತ್ತಿತರೇ ಕಡೆಯಿಂದ ಜಮೆಯಾಗುವ ಸಾಲದ ಪ್ರಮಾಣವೇ ಸುಮಾರು ರೂ. 37,000 ಕೋಟಿಯಾಗಿದೆ. ಇದು ರಾಜ್ಯದ ಜನತೆಯ ಬಹಳ ಮುಖ್ಯವಾಗಿ ಬಡವರ ತಲಾ ಆದಾಯವನ್ನ ಹೆಚ್ಚಿಸುವ ಯಾವುದೇ ಉದ್ದೇಶವಿಲ್ಲದೇ ಇರುವ ಸಾಲವಾಗಿದ್ದು ಅಕಾರಣವಾಗಿ ಜನತೆಯ ಮೇಲೆ ಸಾಲದ ಹೊರೆಯನ್ನು ಹೇರಿದೆ. ಒಟ್ಟು ಸಾಲವನ್ನು ರೂ. 2.40ಲಕ್ಷ ಕೋಟಿಗೆ ಹೆಚ್ಚಿಸಿದ ಸಾದನೆಯು ಈ ಬಜೆಟ್‍ನದಾಗಿದೆ. ಅದೇ ರೀತಿ, ಬಜೆಟ್ ಕೊರತೆ ರೂ. 4,442 ಕೋಟಿ ಯಾಗಿದೆ. ಸಾಲ ಮತ್ತು ಖೋತಾ ಬಜೆಟ್, ಇದೆಲ್ಲದರ ಜೊತೆ ನಿಗದಿಸಲಾದ ಮೊತ್ತವನ್ನು ಖರ್ಚು ಮಾಡದ ಇಲಾಖೆಗಳು ಈ ಎಲ್ಲವೂ ಬಡವರು, ಸಾಮಾಜಿಕ ತಾರತಮ್ಯ ನಿವಾರಣೆಗಾಗಿ ದಲಿತರಿಗೆ ಹಾಗೂ ಬಹುತೇಕ ಕೃಷಿಗೆ ನಿಗದಿಸಲಾದ ಮೊತ್ತವನ್ನು ಸಿಗುವಂತೆ ಮಾಡುವವೇ ಎಂಬ ಅನುಮಾನವಿದೆ.

ಒಟ್ಟಾರೇ, ಈ ಬಜೆಟ್‍ನ ದಿಶೆಯು ರಾಜ್ಯದ ಕೃಷಿ ಹಾಗೂ ಕೈಗಾರಿಕಾ ಬಿಕ್ಕಟ್ಟಿನ ನಿವಾರಣೆಗೆ ಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲ, ಈ ಬಿಕ್ಕಟ್ಟನ್ನು ಮತ್ತಷ್ಟು ಆಳಗೊಳಿಸಲು ತನ್ನದೇ ಕಾಣಿಕೆ ನೀಡಲಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲದ ಬಜೆಟ್ ಜನತೆಯ ಮೇಲೆ ಮತ್ತಷ್ಠು ಸಾಲದ ಹೊರೆಯನ್ನು ಹೇರಿದೆ. ಆದ್ದರಿಂದ ಜನತೆ ಈ ಬಜೆಟನ್ನು ರಾಜ್ಯದ ಜನತೆಯ ತಲಾ ಆದಾಯ ಹೆಚ್ಚಳಗೊಳ್ಳಲು ಮತ್ತು ಗ್ರಾಮೀಣ ಸಾಲಬಾದಿತ ರೈತರು, ಕೂಲಿಕಾರರು, ಮಹಿಳೆಯರು, ದಲಿತರಿಗೆ ನೆರವಾಗುವಂತೆ ಮತ್ತು ಆ ದಿಶೆಯಲ್ಲಿ ರಾಜ್ಯದ ಅಭಿವೃದ್ದಿಗೆ ಪೂರಕವಾಗುವಂತೆ ಬದಲಾಯಿಸಲು ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಸಿಪಿಐ(ಎಂ) ರಾಜ್ಯ ಸಮಿತಿ ಕರೆ ನೀಡಿದೆ.