ಜನ-ವಿರೋಧಿ ಅಭಿವೃದ್ಧಿ-ವಿರೋಧಿ ಚುನಾವಣಾ-ಗಿಮಿಕ್ ಬಜೆಟ್

ಸಂಪುಟ: 
11
ಸಂಚಿಕೆ: 
13
Sunday, 19 March 2017

ಸಿದ್ಧರಾಮಯ್ಯ ಅವರ ಈ ಅವಧಿಯ ಕೊನೆಯ ಬಜೆಟ್ ಹೊರಬಿದ್ದಿದೆ. ಈ ಬಜೆಟ ದುಡಿಯುವ ಜನರ ಮತ್ತು ಜನತೆಯ ಪ್ರಮುಖ ವಿಭಾಗಗಳ - ಕಾರ್ಮಿಕರು, ರೈತರು, ಕೃಷಿ-ಕೂಲಿಕಾರರ, ವಿದ್ಯಾರ್ಥಿಗಳ ಮತ್ತು ಮಹಿಳೆಯರ - ನಿರೀಕ್ಷೆಗಳಿಗೆ ನೀರೆರಚಿದೆ. ಅವರಿಗೆ ನಿರಾಶೆ ತಂದಿದೆ. ಬಜೆಟಿನ ಮುಖ್ಯ ಅಂಕೆಸಂಖ್ಯೆಗಳು ಇಲ್ಲಿವೆ. ದುಡಿಯುವ ಜನರ ಮತ್ತು ಜನತೆಯ ಪ್ರಮುಖ ವಿಭಾಗಗಳನ್ನು ಪ್ರತಿನಿಧಿಸುವ ಸಂಘಟನೆಗಳ ಪ್ರತಿಕ್ರಿಯೆಗಳು ಈ ನಿರಾಶೆಯನ್ನು ಪ್ರತಿಬಿಂಬಿಸುತ್ತಿವೆ.

ಕೃಷಿ ಕಾರ್ಮಿಕರ ಗಾಯದ ಮೇಲೆ ಕೃಷಿ ಯಾಂತ್ರೀಕರಣದ ಬರೆ

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2017-18ನೇ ಸಾಲಿನ ಮುಂಗಡಪತ್ರವು ದುಡಿಮೆಗಾರರಿಗೆ, ಮುಖ್ಯವಾಗಿ ರಾಜ್ಯದ ಜನಸಂಖ್ಯೆಯ 20% ರಷ್ಟಿರುವ ಕೃಷಿ ಕಾರ್ಮಿಕರಿಗೆ ತೀವ್ರ ನಿರಾಸೆಯನ್ನು ಉಂಟು ಮಾಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಅವರು ಸಿದ್ದರಾಮಯ್ಯನವರು ಇದುವರೆಗೆ ಮಂಡಿಸಿದ ಯಾವುದೇ ಒಂದು ಮುಂಗಡ ಪತ್ರದಲ್ಲಿಯೂ ಕೃಷಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಲ್ಲ ಎಂದು ಆರೋಪಿಸಿದ್ದಾರೆ.

ಮುಂಗಡ ಪತ್ರದ `ಕೃಷಿ’ ಕುರಿತಾದ ಭಾಗದಲ್ಲಿ `ಕೃಷಿ ಉತ್ಪಾದನಾ ವೆಚ್ಚ ತಗ್ಗಿಸಲು ಮತ್ತು ಕೃಷಿ ಕಾರ್ಮಿಕರ ಕೊರತೆ ನಿವಾರಿಸಲು ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಲಾಗಿದೆ. ಸೇವಾ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ 10.5 ಲಕ್ಷ ರೈತರಿಗೆ ಕೃಷಿ ಯಂತ್ರಗಳು ಮತ್ತು ಕೃಷಿ ಸಂಸ್ಕರಣೆ ಸಲಕರಣೆಗಳನ್ನು ವಿತರಿಸಲಾಗಿದೆ. ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲು 305 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು 4.3 ಲಕ್ಷ ರೈತರು ಈ ಕೇಂದ್ರಗಳ ಸೇವೆ ಪಡೆದಿರುತ್ತಾರೆ.’ ಎನ್ನಲಾಗಿದ್ದು ಮುಂದುವರೆದು `ಕೃಷಿ ಯಂತ್ರಧಾರೆ ಕಾರ್ಯಕ್ರಮ’ದಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಪ್ರಯೋಜನವಾಗಿರುವುದರಿಂದ ಈ ಕಾರ್ಯಕ್ರಮವನ್ನು ಉಳಿದ ಹೋಬಳಿಗಳಿಗೂ ವಿಸ್ತರಿಸಲಾಗುವುದು. ಹೋಬಳಿಗಳಲ್ಲಿ 250 ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 122 ಕೋಟಿ ರೂ. ಗಳನ್ನು ಮೀಸಲಿರಿಸಿದೆ. ಎಂದು ಹೇಳಲಾಗಿದೆ. ಮುಂದುವರೆಯುತ್ತಾ `ಗ್ರಾಮೀಣ ಯುವಕರನ್ನು ಕೃಷಿಯ ಕಡೆಗೆ ಆಕರ್ಷಿಸಲು ಮತ್ತು ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಒಂದರಂತೆ 174 `ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರಗಳನ್ನು’ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದ್ದು ಪ್ರತಿ ಕೇಂದ್ರದ ಸ್ಥಾಪನೆಗೆ ಬ್ಯಾಂಕ್ ಲಿಂಕೇಜ್‍ನೊಂದಿಗೆ 5 ಲಕ್ಷ ರೂ. ಗಳ ಸಹಾಯಧನ ಅಥವ ಗರಿಷ್ಠ ಶೇ. 50 ರಷ್ಟು ಮೊತ್ತವನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ಕೃಷಿಯಲ್ಲಿ ಯಾಂತ್ರೀಕರಣದ ಈ ಧೋರಣೆಯಿಂದಾಗಿ ರಾಜ್ಯದ ಕೃಷಿ ಕಾರ್ಮಿಕರು ಈಗಾಗಲೇ ಸಾಕಷ್ಟು ಅನಾಹುತವನ್ನು ಅನುಭವಿಸಿದ್ದಾರೆ. ಅನುಕೂಲಸ್ಥ ರೈತರು ಕೃಷಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕೃಷಿ ಕೆಲಸಗಳಿಗೆ ಹೆಚ್ಚೆಚ್ಚಾಗಿ ಯಂತ್ರಗಳನ್ನೇ ಬಳಸುತ್ತಿದ್ದಾರೆ. ಕೃಷಿಯಲ್ಲಿನ ಯಾಂತ್ರೀಕರಣ ಕೃಷಿ ಕಾರ್ಮಿಕರ ಕೂಲಿಯನ್ನು ಕದಿಯುತ್ತದೆ. ಅವರ ಕೆಲಸದ ದಿನಗಳನ್ನು ಕುಗ್ಗಿಸುತ್ತದೆ. ಇದರೊಂದಿಗೆ ಕೃಷಿಯಲ್ಲಿ ಸರ್ಕಾರ ಅನುಸರಿಸುತ್ತಿರುವ ಉದಾರೀಕರಣದ ನೀತಿಗಳಿಂದಾಗಿ ಕೃಷಿ ಒಂದು ಲಾಭದಾಯಕ ವೃತ್ತಿಯಾಗಿ ಉಳಿದಿಲ್ಲ. ಸಣ್ಣ ಮತ್ತು ಮಧ್ಯಮ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯಿಂದಾಗಿ ಕೃಷಿ ಕೂಲಿಕಾರರಿಗೆ ಕೃಷಿ ರಂಗದಲ್ಲಿ ನೆಲೆ ಇಲ್ಲದಂತಾಗಿದೆ. ಇದರ ಜತೆಯಲ್ಲೆ ರಾಜ್ಯದಲ್ಲಿ ನಿರಂತರವಾಗಿ ಬರಗಾಲ ಆವರಿಸುತ್ತಿರುವುದರಿಂದ ಕೃಷಿ ಕಾರ್ಮಿಕರರಿಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸವೇ ಸಿಗದಂತಾಗಿದೆ. ಉದ್ಯೋಗ ಅರಸಿಕೊಂಡು ನಗರಪ್ರದೇಶಗಳಿಗೆ ವಲಸೆ ಹೋಗುವುದು ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಎದ್ದು ಕಾಣುತ್ತದೆ. ಆದರೆ ಸಿದ್ದರಾಮಯ್ಯನವರು ಕೂಲಿಕಾರರ ಕೊರತೆಗೆ ಸೂಚಿಸುವ ಪರಿಹಾರ ಸಮಸ್ಯೆಗಿಂತಲೂ ಕ್ರೂರವಾಗಿದೆ. ಶ್ರೀಮಂತ ರೈತರು ಕೃಷಿ ಯಂತ್ರೋಪಕರಣಗಳನ್ನು ಬಳಸಿ ಲಾಭ ಮಾಡಿಕೊಳ್ಳಬಹುದು. ಆದರೆ ಅದರಿಂದ ಕೆಲಸ ಕಳೆದುಕೊಳ್ಳದ ಕೃಷಿ ಕಾರ್ಮಿಕರ ಗತಿಯೇನು? ಕೃಷಿ ಕಾರ್ಮಿಕರ ಮತ್ತು ಒಟ್ಟಾರೆ ಅಸಂಘಟಿತ ವಲಯದ ದುಡಿಮೆಗಾರರ ಆದಾಯ ಹೆಚ್ಚಾಗದೆ, ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳ ಮಾರಾಟ ಸಾಧ್ಯವಾಗದು. ದೇಶದ ನೈಜ ಅಭಿವೃದ್ಧಿ ಈ ವಿಭಾಗದ ಜನರ ಆದಾಯ ಹೆಚ್ಚಾಗುವುದನ್ನೇ ಅವಲಂಭಿಸಿದೆ. ರೈತರಿಗೆ ಯಂತ್ರೋಪಕರಣಗಳನ್ನು ಒದಗಿಸುವುದಕ್ಕಿಂತಲೂ ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ದುಡಿಮೆಗಾರರ ಕುಶಲತೆ, ಪರಿಣತಿಯನ್ನು ಹೆಚ್ಚಿಸಲು ಅವರಿಗೆ ಪ್ರಯೋಜನಕಾರಿಯಾಗುವ ಯಂತ್ರೋಪಕರಣಗಳನ್ನು ಒದಗಿಸುವುದು ಹೆಚ್ಚು ಸೂಕ್ತ. ಸ್ವಂತ ಆಸ್ತಿ ಇಲ್ಲದೆ ಈ ಕೃಷಿ ಕಾರ್ಮಿಕರು ಬಹುತೇಕವಾಗಿ ಸಿದ್ದರಾಮಯ್ಯನವರು ತಮ್ಮ ಆದ್ಯತೆಯ ವಿಭಾಗವೆಂದು ಹೇಳಿಕೊಳ್ಳುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರೇ ಆಗಿದ್ದಾರೆ. ಆದರೆ ಇವರನ್ನು ಸಬಲೀಕರಣಗೊಳಿಸುವುದು ಸಿದ್ದರಾಮಯ್ಯ ಸರ್ಕಾರದ ಆಧ್ಯತೆ ಆಗಿಲ್ಲ.

ದೇಶದಲ್ಲಿ ಗಿಡ ಮರಗಳಿಗೆ, ಪಶುಪಕ್ಷಿಗಳಿಗೆ ರಕ್ಷಣೆ ಒದಗಿಸುವ ಕಾನೂನುಗಳಿವೆ. ಆದರೆ ಕೃಷಿ ಕಾರ್ಮಿಕರ ಹಿತ ಕಾಪಾಡುವ ಒಂದು ಕಾನೂನು ಸಹ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಪಾಸ್ ಮಾಡಿಲ್ಲ. ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಬಹಳ ಹಿಂದೆಯೇ ಕೃಷಿ ಕಾರ್ಮಿಕರಿಗಾಗಿ ಒಂದು ಕಲ್ಯಾಣ ಕಾಯ್ದೆ ಮತ್ತು ಕಲ್ಯಾಣ ನಿಧಿಯನ್ನು ಸ್ಥಾಪಿಸಿ ಕೃಷಿ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷೆಯನ್ನು ಒದಗಿಸುತ್ತದೆ. ಕೃಷಿ ಕಾರ್ಮಿಕನಾಗಿ ಕೆಲಸಮಾಡಿ 60 ವರ್ಷದಾಟಿದವರಿಗೆ ಪ್ರಸಕ್ತ ಕಮ್ಯೂನಿಸ್ಟ್ ಸರ್ಕಾರ ರೂ. 1100 ರಂತೆ ಮಾಸಿಕ ನಿವೃತ್ತಿ ವೇತನ ನೀಡುತ್ತದೆ. ಮುಂದಿನ 5 ವರ್ಷಗಳಲ್ಲಿ ಅದು ತಿಂಗಳಿಗೆ 1500 ರೂ. ಆಗಲಿದೆ. ಕೇರಳದಂತಹ ಒಂದು ಸಣ್ಣ ರಾಜ್ಯಕ್ಕೆ ಇದು ಸಾಧ್ಯವಾಗುವುದಾದರೆ ಕರ್ನಾಟಕ ಸರ್ಕಾರಕ್ಕೆ ಏಕೆ ಸಾಧ್ಯವಾಗುವುದಿಲ್ಲ?

ಸಾಲಮನ್ನಾ ಮಾಡದ ಬರಪರಿಹಾರವಿಲ್ಲದ ತೀವ್ರ ನಿರಾಶೆಯ ರೈತ-ಕೂಲಿಕಾರರ ವಿರೋಧಿ ರಾಜ್ಯ ಬಜೆಟ್

ಮುಖ್ಯಮಂತ್ರಿ ಸಿಧ್ಧರಾಮಯ್ಯನವರು ಮಂಡಿಸಿದ 2017-18ರ ಸಾಲಿನ ಕರ್ನಾಟಕದ ಬಜೆಟ್ ರೈತ ಹಾಗೂ ಕೃಷಿಕೂಲಿಕಾರರ ವಿರೋಧಿ ಹಾಗೂ ರಾಜ್ಯದ ಅಭಿವೃಧ್ಧಿಯ ವಿರೋಧಿ ಬಜೆಟ್ ಆಗಿದ್ದು, ರಾಜ್ಯದ ರೈತರು- ಕೂಲಿಕಾರರು ಮತ್ತು ನಾಗರೀಕರು ಈ ಜನವಿರೋದಿ ಅಗ್ಗದ ಪ್ರಚಾರದ ಚುನಾವಣಾ ಬಜೆಟ್‍ನ್ನು ತಿರಸ್ಕರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ರಾಜ್ಯದ ಜನತೆಗೆ ಕರೆ ನೀಡಿದೆ.

ಕರ್ನಾಟಕ ರಾಜ್ಯವು ಕಳೆದ 6-7 ವರ್ಷಗಳಿಂದ ನಿರಂತರವಾದ ಬರಗಾಲಕ್ಕೆ ತುತ್ತಾಗುತ್ತಿದೆ. ಈ ವರ್ಷವೂ ಮಲೆನಾಡು ಮತ್ತು ಕರಾವಳಿ ಪ್ರದೇಶವೂ, ಹಾಗೂ ನೀರಾವರಿ ಪ್ರದೇಶವೂ ಮಳೆಯ ಕೊರತೆಯಿಂದ ತೀವ್ರ ಬರಗಾಲವನ್ನು ಅನುಭವಿಸಿದೆ. ಅದೇ ರೀತಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಗಿಲ್ಲದೇ ಜಾರಿಗೆ ತರುತ್ತಿರುವ ಜಾಗತೀಕರಣದ ನೀತಿಗಳು, ಒಟ್ಟಾರೆ ರಾಜ್ಯದ ಹಾಗೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮೇಲೆ ತೀವ್ರ ತೆರನಾದ ದಾಳಿ ನಡೆಸಿವೆ. ರಾಜ್ಯದಲ್ಲಿ ರೈತರು ಬೆಳೆದ ಯಾವುದೇ ಅಲ್ಪಸ್ವಲ್ಪ ಬೆಳೆಗೆ ನ್ಯಾಯವಾದ ಬೆಲೆಗಳು, ಒಂದೆಡೆ ಅಗ್ಗದರದ ಆಮದು ದಾಸ್ತಾನುಗಳಿಂದ ಮತ್ತು ಇನ್ನೊಂದೆಡೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ನಿಗಧಿಸದ ಕಾರಣಕ್ಕೆ ಮತ್ತು ಅಂತಹ ವೈಜ್ಞಾನಿಕವಾಗಿ ಬೆಲೆ ನಿಗದಿಸಿ, ಮಾರುಕಟ್ಟೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡದ ಕಾರಣಕ್ಕೆ ಈ ಅವಧಿಯಲ್ಲಿ ರೈತರು ಭಾರೀ ಸಾಲಗಾರರಾಗಿದ್ದಾರೆ.

ಕಳೆದ ವರ್ಷದಲ್ಲಿ 1,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಇಳಿದಿದ್ದಾರೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 125ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಜೆಟ್‍ನಲ್ಲಿ ಸಾಲಮನ್ನಾದ ನಿರೀಕ್ಷೆಯಿಂದ ಟಿವಿ ವೀಕ್ಷಣೆ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ  ಹೆಚ್ ಮಲ್ಲಿಗೆರೆ ಪ್ರಕಾಶ್ ಎಂಬ ಯುವ ರೈತ, ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಇಲ್ಲವೆಂಬ ಅಂಶವನ್ನು ನೋಡಿ ವಿಷ ಕುಡಿದ ಧಾರುಣ ಘಟನೆ ಸಂಬವಿಸಿದ ವರದಿ ಬಂದಿದೆ.

ಸತತ ಬರಗಾಲ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಿಗದ ಉದ್ಯೋಗದ ಕಾರಣದಿಂದಲೂ, ಕೂಲಿಕಾರರೂ ಸಾಲಬಾಧಿತರಾಗಿದ್ದಾರೆ. ಸಾರ್ವಜನಿಕ ಬ್ಯಾಂಕುಗಳು, ಸಹಕಾರ ಸಂಘಗಳು, ಖಾಸಗೀ ಸಾಲ ನೀಡಿಕೆಯ ಸಂಸ್ಥೆಗಳು ಮತ್ತು ಖಾಸಗಿ ಬಡ್ಡಿ ವ್ಯಾಪಾರಿಗಳು, ಗೊಬ್ಬರ- ಕ್ರಿಮಿನಾಶಕ ವ್ಯಾಪಾರಿಗಳು ತಾವು ನೀಡಿದ ಸಾಲ ಮತ್ತು ದುಬಾರಿ ಬಡ್ಡಿಗಾಗಿ ಸತತ ಒತ್ತಡವನ್ನು ಹೇರುತ್ತಿವೆ ಮತ್ತು ಇದ್ದ ಬದ್ದ ಆಸ್ತಿ ಪಾಸ್ತಿಗಳನ್ನು ಅಗ್ಗದರದಲ್ಲಿ ಸಾಲ ಮತ್ತು ಬಡ್ಡಿಗಾಗಿ ಜಮಾ ಮಾಡಿಕೊಳ್ಳುತ್ತಿವೆ. ವ್ಯವಸಾಯ ಮತ್ತು ಜೀವನ ಮುನ್ನಡೆಸಲು ಹೊಸ ಸಾಲ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶ ಮತ್ತು ವ್ಯವಸಾಯ ರೈತಾಪಿ ಜನತೆ ತೀವ್ರ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿದೆ.

ಇಂತಹ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಜೆಟ್ ನೀಡುವ ರೈತರು ಹಾಗೂ ಕೂಲಿಕಾರರ ಸಾಲ ಮನ್ನಾದ ಮೇಲೆ ಮತ್ತು ಬರಪರಿಹಾರದ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದ ಗ್ರಾಮೀಣ ಜನತೆಗೆ ಕಳೆದ ತಿಂಗಳು ಮಂಡಿಸಿದ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಬಜೆಟ್ ತೀವ್ರ ನಿರಾಶೆಯನ್ನು ಮೂಡಿಸಿತ್ತು. ಅದೇ ರೀತಿ, ಕೇಂದ್ರ ಸರಕಾರ ಸಾಲ ಮನ್ನಾ ಮಾಡಲಿ ಬಿಡಲಿ, ರಾಜ್ಯ ಸರಕಾರ ಸಾಲ ಮನ್ನಾ ಮಾಡಲಿದೆಯೆಂದು ಹೇಳುವ ಮೂಲಕ ಅಪಾರ ನಿರೀಕ್ಷೆಯನ್ನು ಮರಳಿ ಹುಟ್ಟು ಹಾಕಿದ್ದ ಸಿದ್ದರಾಮಯ್ಯನವರು, ತಮ್ಮ ಬಜೆಟ್‍ನಲ್ಲಿ ಆ ಕುರಿತು ಪ್ರಸ್ತಾಪ ಮಾಡದೇ ಹೋದುದು, ರಾಜ್ಯದ ಗ್ರಾಮೀಣ ಜನತೆ ಮತ್ತು ರೈತರಲ್ಲಿ ಭಾರೀ ನಿರಾಶೆಯನ್ನುಂಟು ಮಾಡಿದೆ. ಮಾತ್ರವಲ್ಲಾ ಅವರನ್ನು ಅಪಾರ ಬಿಕ್ಕಟ್ಟಿನಲ್ಲಿ ಸಂಕಷ್ಟದಲ್ಲಿ ತೊಡಗಲು ಬಿಟ್ಟಿರುವುದು ಅಕ್ಷಮ್ಯ ಮತ್ತು ತೀವ್ರ ಖಂಡನೀಯ ವಿಚಾರವಾಗಿದೆ. ಅದೇ ರೀತಿ, ಈ ಜನತೆಯನ್ನು ತೀವ್ರ ಸಂಕಷ್ಠದಲ್ಲಿ ಬಿಟ್ಟು ಮುಂಬರುವ ಚುನಾವಣೆಯಲ್ಲಿ ಓಟುಗಳನ್ನು ಪಡೆಯಲು ಅಗ್ಗದ ಪ್ರಚಾರದಲ್ಲಿ ತೊಡಗುವಂತಹ ಬಜೆಟ್ ಮಂಡಿಸಿರುವುದು ಸರಕಾರದ ಕುಹಕವನ್ನು ಬಯಲಿಗಿಟ್ಟಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಕಟುವಾಗಿ ಠೀಕಿಸಿದೆ.

ಸಾಲ ಮನ್ನಾದ ವಿಚಾರವೂ ಮಾತ್ರವೇ ಅಲ್ಲಾ, ವ್ಯವಸಾಯವನ್ನು ಬಿಕ್ಕಟ್ಟಿನಿಂದ ಹೊರ ತರಲು ಮತ್ತು ಅದನ್ನು ಲಾಭದಾಯಕ ಗೊಳಿಸಲು ಯಾವುದೇ ಒಂದು ಸಣ್ಣ ಕ್ರಮಗಳಿಲ್ಲವಾಗಿದೆ. ಆದ್ದರಿಂದ ಇದೊಂದು ರೈತ- ಕೂಲಿಕಾರರ ವಿರೊಧಿ ಮತ್ತು ಗ್ರಾಮೀಣಾಭಿವೃಧ್ಧಿ ಹಾಗೂ ರಾಜ್ಯದ ಅಭಿವೃಧ್ಧಿ-ವಿರೋಧಿ ಬಜೆಟ್ ಆಗಿದ್ದು ಇದನ್ನು ತಿದ್ದುಪಡಿ ಮಾಡುವಂತೆ ಮತ್ತು ರೈತರು- ಕೂಲಿಕಾರರ ಸಾಲ ಮನ್ನಾ ಮತ್ತು ಬರ ಪರಿಹಾರ ಘೋಷಷಿ ಬರಪರಿಹಾರದ ಬಜೆಟ್ ಆಗಿ ಪರಿವರ್ತಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದೆ.

ಮಹಿಳೆಯರ ಸಬಲೀಕರಣದತ್ತ ಗಮನವಿರದ ನಿರಾಶಾದಾಯಕ ಬಜೆಟ್

ರಾಜ್ಯದ 2017-18 ರ ಸಾಲಿನ ಬಜೆಟ್ ಮಂಡನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಘೋಷಿಸಿದ ಬಜೆಟ್‍ನಲ್ಲಿ ಅತ್ಯಂತ ಮಹತ್ವ ಪೂರ್ಣ ಅಂಶಗಳು ಮೇಲ್ನೋಟಕ್ಕೆ ಕಾಣುತ್ತಿಲ್ಲ. ರಾಜ್ಯದ 30 ಜಿಲ್ಲೆಗಳಿಗೆ ‘ಮಾತೃ ಪೂರ್ಣ’ ಯೋಜನೆಯನ್ನು ವಿಸ್ತರಿಸಿರುವುದನ್ನು ಬಿಟ್ಟರೆ ವಿಶೇಷವಾದ ಯಾವ ಸೌಲಭ್ಯಗಳೂ ಪ್ರಸ್ತಾಪಿತವಾಗಿಲ್ಲದಿರುವುದರಿಂದ, ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣದತ್ತ ಗಮನ ಹರಿಸುವ ಯಾವ ಪ್ರಯತ್ನಗಳೂ ಕಂಡು ಬರುತ್ತಿಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಡುತ್ತದೆ.

ಅಂಗನವಾಡಿಯಲ್ಲಿ ದಣಿವರಿಯದ ಕೆಲಸ ಮಾಡುತ್ತಿರುವ ನೌಕರರ ಪಾಲಿಗೆ ಇದು ಆಶಾದಾಯಕವಾಗಿಯೇನೂ ಇಲ್ಲ. ಕನಿಷ್ಟ ವೇತನವೂ ಇಲ್ಲದೇ ಕೆಲಸ ಮಾಡುವ ಈ ವಲಯಕ್ಕೆ ಕನಿಷ್ಟ ಜೀವನಾವಶ್ಯಕ ವೇತನವನ್ನಾದರೂ ನಿಗದಿ ಮಾಡುವ ಬದಲು ಗೌರವಧನ ಹೆಚ್ಚಳವನ್ನು ಮಾಡಲಾಗಿದೆ. ಅವರಿಂದ ತೆಗೆಯುತ್ತಿರುವ ಕೆಲಸ ಮತ್ತು ಕೊಡುತ್ತಿರುವ ‘ಗೌರವ ಧನ’ ಕ್ಕೆ ತಾಳಮೇಳವಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸುವಾಗ ಇರುವ ಕಾಳಜಿ ಮಹಿಳೆಯರ ಮತ್ತು ಮಕ್ಕಳ ಯೋಗಕ್ಷೇಮದ ಸಂಪೂರ್ಣ ನಿರ್ವಹಣೆ ಮಾಡುವ ಅಂಗನವಾಡಿ ಬಿಸಿಯೂಟದ ಕಾರ್ಯಕರ್ತರ ವೇತನದ ಬಗ್ಗೆ ಕಂಡು ಬರುತ್ತಿಲ್ಲ. ಅಸಂಘಟಿತ ವಲಯದ ದುಡಿಮೆಗಾರರ ಬದುಕಿಗೆ ಅಗತ್ಯವಾದ ವೇತನ ಹೆಚ್ಚಳ ಮಾಡದ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸುತ್ತದೆ.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಮಹಿಳೆಯರ ಬದುಕು ದುರ್ಭರವಾಗುತ್ತಿದೆ. ಆದರೆ ಅದನ್ನು ನಿವಾರಿಸಲು ಅಗತ್ಯವಾದ ಉದ್ಯೋಗ ಖಾತ್ರಿಯಂಥಹ ಯಾವ ಭರವಸೆಗಳೂ ಬಜೆಟ್ ನಲ್ಲಿ ಪ್ರತಿಫಲಿತವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಕುಸಿಯುತ್ತಿರುವ ಆರ್ಥಿಕತೆಯನ್ನು ತಡೆಗಟ್ಟದಿದ್ದರೆ ದಿಕ್ಕೆಟ್ಟ ಜನ ನಗರಗಳತ್ತ ವಲಸೆ ಬರುವುದು ಅನಿವಾರ್ಯವಾಗುತ್ತದೆ. ನಗರಗಳಲ್ಲಿ ಕೂಡ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು ಜನ ಜಾನುವಾರುಗಳು ತೊಂದರೆಗೆ ಒಳಗಾಗುತ್ತಿವೆ. ಇದರ ದುಷ್ಪರಿಣಾಮಕ್ಕೆ ಮಹಿಳೆಯರು ನೇರ ಬಲಿಯಾಗುತ್ತಾರೆ. ಬಜೆಟ್ ನಲ್ಲಿ ಈ ವಲಯಕ್ಕೆ ವಿಶೇಷ ಗಮನ ನೀಡಬೇಕಾದ ಅಗತ್ಯವನ್ನು ಸರ್ಕಾರ ಪರಿಗಣಿಸಿಲ್ಲ.

ಇಡೀ ರಾಜ್ಯದಲ್ಲಿರುವ ಹಲವಾರು ಕೆರೆ ಕುಂಟೆಗಳು ಭೂಗಳ್ಳರ ಪಾಲಾಗುತ್ತಿದ್ದು ಅವುಗಳನ್ನು ಕಾಪಾಡುವ ಕೆಲಸ ಈ ಕ್ಷಣದ ತುರ್ತಿನ ಅಗತ್ಯವಾಗಿದೆ. ಅಲ್ಲೊಂದಿಲ್ಲೊಂದು ಕೆರೆಗಳ ಪುನಶ್ಚೇತನ ಮಾಡುವ ಪ್ರಸ್ತಾಪ ಬಿಟ್ಟು ಇಡೀ ರಾಜ್ಯದಲ್ಲಿರುವ ಜೀವಂತ ಕೆರೆಗಳು ಮತ್ತು ಪುನಃಶ್ಚೇತನಗೊಳಿಸುವ ಕೆರೆಗಳಾಗಿ ಪರಿವರ್ತಿಸುವತ್ತ ಯುದ್ಧೋಪಾದಿಯಲ್ಲಿ ಕೆಲಸ ನಡೆಯಬೇಕಿದೆ. ನೀರಿನ ಅಲಭ್ಯತೆಯ ತೀವ್ರತೆ ಕೂಡ ಮಹಿಳೆಯರನ್ನೇ ಹೆಚ್ಚು ಬಾಧಿಸುತ್ತದೆ. ಆದರೆ ಅತಿ ಹೆಚ್ಚು ಗಮನವನ್ನು ನೀಡಬೇಕಿದ್ದ ಕ್ಷೇತ್ರವಿದಾಗಿದ್ದು ಇದನ್ನು ಕಡೆಗಣಿಸಿರುವುದನ್ನು ಸಂಘಟನೆ ಟೀಕಿಸುತ್ತದೆ.

ಸ್ತ್ರೀ ಶಕ್ತಿ ಸಂಘಗಳ ಮೂಲಕ ‘ಸವಿರುಚಿ’ ಕ್ಯಾಂಟೀನ್ ಪ್ರಾರಂಭಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಕೌಶಲ್ಯ ತರಬೇತಿ, ಪ್ರೋತ್ಸಾಹ ಧನ, ಮತ್ತು ಉತ್ಪಾದನೆಗೆ ಮಹತ್ವ ನೀಡಿ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಎಷ್ಟೋ ವರ್ಷಗಳಿಂದ ಕೇಳುತ್ತಲೇ ಇದ್ದೇವೆ. ಆದರೆ ಅಂಥಹ ಯಾವುದೇ ಪ್ರಸ್ತಾಪವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿಲ್ಲ.

ಮಹಿಳೆಯರು ಮತ್ತು ಮಕ್ಕಳ ಮೇಲೆ ವಿವಿಧ ಸ್ವರೂಪಗಳಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನಷ್ಟು ನಿರ್ದಾಕ್ಷಿಣ್ಯ ಕ್ರಮಗಳ ಅಗತ್ಯವಿತ್ತೆಂದು ಜನವಾದಿ ಮಹಿಳಾ ಸಂಘಟನೆ ಭಾವಿಸುತ್ತದೆ. ಮಹಿಳೆಯರ ಸುರಕ್ಷೆಗಾಗಿ ಆಪ್ ಪ್ರಸ್ತಾಪ ಬಜೆಟ್ ನಲ್ಲಿ ಬಂದದ್ದು ಆಘಾತಕಾರಿಯಾಗಿದೆ. ಸಿ.ಸಿ.ಟೀವಿ, ಆಪ್ ಗಳ ಮೂಲಕ ಸುರಕ್ಷತೆಯನ್ನು ಪಡೆಯುವುದಕ್ಕಿಂತ ಜನರ ನಡವಳಿಕೆಗಳನ್ನು ತಿದ್ದುವ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಬಗ್ಗೆ ಖಾತ್ರಿ ನೀಡುವ ಬಗ್ಗೆ ಸರ್ಕಾರ ಜಾರಿಗೆ ತರುವ ಅಗತ್ಯವಿದೆ ಎಂದು ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಡುತ್ತದೆ.

ದುಡಿಯುವ ಮಹಿಳೆಯರ ಹಾಸ್ಟೆಲ್ ನಿರ್ಮಾಣದ ಪ್ರಸ್ತಾಪವನ್ನು ಸ್ವಾಗತಿಸುತ್ತೇವೆ. ಇದು ರಾಜ್ಯದಾದ್ಯಂತ ವಿಸ್ತರಣೆಯಾಗಬೇಕೆಂದು ಅಭಿಪ್ರಾಯ ಪಡುತ್ತೇವೆ.

ಇ.ಎಸ್.ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಹೊರಗುತ್ತಿಗೆಯ ಮೂಲಕ ನಿರ್ವಹಣೆಯನ್ನು ಜನಾವಾದಿ ಮಹಿಳಾ ಸಂಘಟನೆ ವಿರೋಧಿಸುತ್ತದೆ.

ಒಟ್ಟಾರೆಯಾಗಿ ಜೆಂಡರ್ ಬಜೆಟ್ ಬಗ್ಗೆ ವಿಸ್ತಾರವಾದ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತು ಆರ್ಥಿಕತೆಗೆ ತನ್ನ ಮಹತ್ತರ ಕೊಡುಗೆಯನ್ನು ಮಹಿಳೆಯರು ಕೊಡುತ್ತಿರುವುದನ್ನು ಪರಿಗಣಿಸಿ ಇದಕ್ಕಿಂತ ಉತ್ತಮವಾದ ಲಿಂಗ ಸ್ನೇಹೀ ಬಜೆಟ್‍ನ್ನು ನಿರೀಕ್ಷಿಸುತ್ತಿದ್ದ ರಾಜ್ಯದ ಜನರಿಗೆ ನಿರಾಶಾದಾಯಕ ಬಜೆಟ್‍ನ್ನು ಕೊಡಲಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಡುತ್ತದೆ.

‘ದುಡಿಯುವ ಜನರ ನಿರೀಕ್ಷೆ ಹುಸಿಗೊಳಿಸಿದ’ ರಾಜ್ಯ ಬಜೆಟ್-ಸಿಐಟಿಯು

ರಾಜ್ಯದ ಮುಖ್ಯಮಂತ್ರಿಯಾಗಿ ಶ್ರೀ ಸಿದ್ದರಾಮಯ್ಯನವರು ಮಂಡಿಸಿದ 4ನೇ ಬಜೆಟ್‍ನಲ್ಲಿ ಈ ರಾಜ್ಯದ ದುಡಿಯುವ ಜನರ ಹಲವು ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿಯು ಟೀಕಿಸಿದೆ.

2009ರಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಹಣಕಾಸು ನಿಧಿಯನ್ನು ನೀಡುವ ಮೂಲಕ ಕರ್ನಾಟಕ ರಾಜ್ಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ ಮಾಡದೆ ಕೇಂದ್ರ ಸರ್ಕಾರದ ಬಜೆಟ್ ಹಾದಿಯನ್ನೇ ರಾಜ್ಯ ಸರ್ಕಾರ ಮುಂದುವರಿಸಿದೆ. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆಯನ್ನು ಪಶ್ಚಿಮ ಬಂಗಾಳ ಮಾದರಿಯಲ್ಲಿ ನೀಡುವ ಕರಡು ಮಸೂದೆಯನ್ನು ಸಿದ್ದಪಡಿಸಿದ್ದರೂ ಸಹಾ ಅದನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳು ತೋರಿಸಿಲ್ಲ. ಬದಲಾಗಿ ಮನೆಕೆಲಸಗಾರರು, ಹಮಾಲಿಗಳು, ಬೀದಿ ಬದಿ ಮಾರಾಟಗಾರರು ಹಾಗೂ ಚಿಂದಿ ಆಯುವವರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆ ಮೂಲಕ ಅಪಘಾತ ಪರಿಹಾರ ಯೋಜನೆಯೊಂದಿಗೆ ಭವಿಷ್ಯನಿಧಿ ಪಿಂಚಣಿ ಅನುಕೂಲವನ್ನು ಕಲ್ಪಿಸಿರುವುದು ಕೇವಲ ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ. ಪರಿಣಾಮಕಾರಿ ಸಮಗ್ರ ಭವಿಷ್ಯನಿಧಿಯನ್ನು ಅದು ಒಳಗೊಂಡಿಲ್ಲ. ಅದಕ್ಕಾಗಿ ಮೀಸಲಿಟ್ಟಿರುವ 10 ಕೋಟಿ ರೂ.ಗಳು ಸಾಕಾಗುವುದಿಲ್ಲ ಎನ್ನುವುದು ಸಿಐಟಿಯು ಅಭಿಪ್ರಾಯ. ಸಿಐಟಿಯುವಿನ ಹೋರಾಟಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದರೂ ಸಹಾ ಅದು ನೆಪ ಮಾತ್ರಕ್ಕೆ ಎಂಬಂತಿದೆ. ಎಲ್ಲಾ ಅಸಂಘಟಿತ ಕಾರ್ಮಿಕರ ಸಮಗ್ರ ಭವಿಷ್ಯ ನಿಧಿಯನ್ನು ರೂಪಿಸಲು ಅಗತ್ಯವಾದ ಹಣಕಾಸು ನಿಧಿಯನ್ನು ಮೀಸಲಿಡಲು ವಿಫಲವಾಗಿರುವ ರಾಜ್ಯ ಸರ್ಕಾರವು ತನ್ನ ಇಚ್ಛಾಶಕ್ತಿಯ ಕೊರತೆಯನ್ನು ಪ್ರದರ್ಶಿಸಿದೆ. ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ರೂಪಿಸುವ ಕ್ರಮ ಸ್ವಾಗತಾರ್ಹಾವಾಗಿದ್ದು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ನಿಧಿಯನ್ನು ಸಮರ್ಥವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲು ಅಗತ್ಯವಿರುವ ಮುನ್ನೋಟವನ್ನು ಬಜೆಟ್ ಪ್ರತಿಫಲಿಸಿಲ್ಲ. ಇದನ್ನು ಖಂಡಿಸಿ ರಾಜ್ಯಾದ್ಯಂತ ಮಾರ್ಚ 18 ರಂದು ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಂಗನವಾಡಿ ನೌಕರರ ಗೌರವಧನ ರೂ.10 ಸಾವಿರಕ್ಕೆ ಹೆಚ್ಚಿಸಲು ಸಹಾಯಕಿಯರ ಗೌರವ ಧನ ರೂ.7500ಕ್ಕೆ ಹೆಚ್ಚಿಸಲು ಪ್ರಸ್ತಾಪ ಇದ್ದರೂ ಸಹ ಕೇವಲ ರೂ.1,000 ಹಾಗೂ ರೂ.500 ಹೆಚ್ಚಿಸಿರುವ ಕ್ರಮ ಏನೇನು ಸಾಲದು. ವೇತನದ ಹೆಚ್ಚಳಕ್ಕಾಗಿ ಅಂಗನವಾಡಿ ನೌಕರರ ಹೋರಾಟ ಮಾರ್ಚ್ 20 ರಿಂದ ನಡೆಯಲಿದೆ. ಬಿಸಿ ಊಟ ನೌಕರರ ವೇತನದ ಬಗ್ಗೆ ತುಟಿ ಬಿಚ್ಚದ ಸರ್ಕಾರದ ಕ್ರಮವನ್ನು ಸಿಐಟಿಯು ಸಂಘಟನೆಯು ಖಂಡಿಸಿ ಆ ವಿಭಾಗದ ಕಾರ್ಮಿಕರು ನಡೆಸುವ ಮಾರ್ಚ 17 ಹೋರಾಟಕ್ಕೂ ಬೆಂಬಲ ವ್ಯಕ್ತಪಡಿಸಿದೆ. ಖಾಸಗಿ ಕೈಗಾರಿಕ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಿಸಿರುವ ಕ್ರಮವನ್ನು ಮತ್ತು ಆಶಾ ನೌಕರರಿಗೆ 1000 ಗೌರವಧನ ಹೆಚ್ಚಿಸಿರುವ ಕ್ರಮವನ್ನು ಸಿಐಟಿಯು ಸ್ವಾಗತಿಸುತ್ತದೆ.  ಆದರೆ ಕಾರ್ಮಿಕ ಸಂಘ ಮಾನ್ಯ ಮಾಡಲು ತಯಾರಾಗಿರುವ ಕರಡು ಮಸೂದೆ, ಗುತ್ತಿಗೆ ಹಾಗೂ ಖಾಯಮೇತರರ ಖಾಯಂಗೆ ಸಿದ್ದವಾಗಿರುವ ಕರಡು ಮಸೂದೆ ಅಂಗೀಕರಿಸುವ ಯಾವುದೇ ಪ್ರಸ್ತಾಪ ಮಾಡದೆ ಕಾರ್ಮಿಕರಿಗೆ ಇದ್ದ ನಿರೀಕ್ಷೆಗಳನ್ನು ಬಜೆಟ್ ಸಂಪೂರ್ಣವಾಗಿ ಹುಸಿಗೊಳಿಸಿದೆ.

47 ಅನುಸೂಚಿತ ಹುದ್ದೆಗಳಿಗೆ ಕನಿಷ್ಟ ವೇತನ ಪರಿಷ್ಕರಣೆ ಆಗಿದ್ದರೂ ಉಳಿದ 27 ಉದ್ದಿಮೆಗಳ ವೇತನ ಪರಿಷ್ಕರಣೆ ಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈಗಾಗಲೇ ಪರಿಷ್ಕರಿಸಿರುವ ಕನಿಷ್ಟ ವೇತನ 01.04.2015 ರಿಂದ ಜಾರಿಯಾಗಬೇಕಿದ್ದು ಅದನ್ನು 01-01-2017 ರಿಂದ ಜಾರಿಗೊಳಿಸುವ ಮತ್ತು ತುಟ್ಟಿಭತ್ಯೆಯನ್ನು 01-04-2016 ರಲ್ಲಿದ್ದಂತೆ ವಿಲೀನಗೊಳಿಸುವ ಮೂಲಕ ಮಾಲೀಕರಿಗೆ ಸಾವಿರಾರು ಕೋಟಿ ರೂಗಳ ಲಾಭ ಮಾಡಿಕೊಟ್ಟು ಕಾರ್ಮಿಕರಿಗೆ ರಾಜ್ಯ ಸರ್ಕಾರವು ಭಾರಿ ವಂಚನೆಯನ್ನು ಎಸಗಿದೆ.

2016ರ ಅಕ್ಟೋಬರ್ 26 ರಂದು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಹಾಗೂ ಹೊರಮೂಲ ನೌಕರರಿಗೆ ಜಾರಿಗೊಳಿಸಿ ಮಾದರಿಯಾಗಿರಬೇಕಾದ ರಾಜ್ಯ ಸರ್ಕಾರ ತನ್ನ ಬಜೆಟ್‍ನಲ್ಲಿ ಅದರ ಬಗ್ಗೆ ಚಕಾರ ಎತ್ತದಿರುವುದು ಹಾಗೂ ಅಗತ್ಯ ಹಣಕಾಸು ಮೀಸಲಿಡದೆ ಇರುವುದು ಸರ್ಕಾರದ ನೌಕರ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಅಂತೆಯೇ ಕೇಂದ್ರ ಸರ್ಕಾರದ ಹಾದಿಯಲ್ಲಿ ಯೋಜನೆ ಹಾಗೂ ಯೋಜನೇತರ ವೆಚ್ಚಗಳನ್ನು ವಿಲೀನಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಬಂಡವಾಳಗಾರರ ಪರ ಹಾದಿಯನ್ನು ರಾಜ್ಯ ಸರ್ಕಾರ ಸಹ ಅನುಸರಿಸಿದೆ. ಈ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳ ಮಾಲೀಕ ಪರ ಧೋರಣೆಗಳಲ್ಲಿ ವ್ಯತ್ಯಾಸವಿಲ್ಲ ಎನ್ನುವುದನ್ನು ತೋ ರುತ್ತ ಬಂಡವಾಳಗಾರರ ಓಲೈಕೆಗೆ ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಪೈಪೋಟಿಗಿಳಿದಿದೆ. ರಾಜ್ಯದಲ್ಲಿರುವ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುವ ಹುನ್ನಾರವನ್ನು ಮೋದಿ ನೇತೃತ್ವದ ಸರಕಾರ ಕೈಗೊಳ್ಳುತ್ತಿರುವ ಸನ್ನಿವೇಶದಲ್ಲಿ ರಾಜ್ಯದಲ್ಲಿರುವ ಸಾರ್ವಜನಿಕ ಉದ್ಯ್ಯಮಗಳ ರಕ್ಷಣೆಗಾಗಿ ರಾಜ್ಯ ಸರಕಾರ ಯಾವ ಕ್ರಮ ವಹಿಸಲಿದೆ ಎನ್ನುವ ಬಗೆಗೆ ಮೌನ ವಹಿಸಿರುವುದು ಸರಿಯಲ್ಲ.

ಹೆಚ್ಚುತ್ತಿರುವ ಕೈಗಾರಿಕಾ ವಿವಾದಗಳ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ಸ್ಥಾಪನೆಗೆ ಕ್ರಮವಹಿಸಿಲ್ಲ. ಇಎಸ್‍ಐ ಆಸ್ಪತ್ರೆಗಳಲ್ಲಿ ಐಸಿಯು ಮುಂತಾದ ಸೇವೆಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಇಎಸ್‍ಐ ಆಸ್ಪತ್ರೆಗಳ ಖಾಸಗೀಕರಣಕ್ಕೆ ಬಜೆಟ್ ನಾಂದಿ ಹಾಡಿದೆ.

ಬರಗಾಲ ಹಾಗೂ ನೋಟ್ ರದ್ಧತಿಯಿಂದ ಸಂಕಷ್ಟಕ್ಕೆ ರೈತರು ಈಡಾಗಿರುವ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡದೇ ಕೇಂದ್ರದ ಬಿಜೆಪಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ರೈತ ವಿರೋಧಿ ಬಜೆಟನ್ನು ಮಂಡಿಸಿರುವ ಕ್ರಮವನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ.

ವಿದ್ಯಾರ್ಥಿಗಳಿಗಿಲ್ಲ ಬಜೆಟ್ ಭಾಗ್ಯ, ಗಾಳಿ ತುಂಬಿದ ಬಲೂನ್ ನಂತಿರುವ ಬಜೆಟ್

ಮುಖ್ಯಮಂತ್ರಿ ಹಾಗೂ ಹಾಣಕಾಸು ಸಚಿವರಾಗಿರುವ ಮಾನ್ಯ ಶ್ರೀ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಡಿಮೆ ಹಣ ನೀಡುವ ಮೂಲಕ ನಿರ್ಲಕ್ಷ ಮಾಡಲಾಗಿದೆ. ಬಜೆಟ್ ಭಾಗ್ಯದಿಂದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವ ರಾಜ್ಯ ಸರಕಾರದ ಬಜೆಟ್ ಗಾಳಿ ತುಂಬಿದ ಬಲೂನ್ ನಂತಿದೆ. ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವು ಸರಕಾರದ ನೀತಿಯನ್ನು SFI ವಿರೋಧಿಸುತ್ತದೆ.
ಹಣ ಕಡಿತ:

2016_17ನೇ  ಸಾಲಿನ ಒಟ್ಟು ಬಜೆಟ್ ಗಾತ್ರ 1,63,419 ಕೋಟಿ ಇತ್ತು. ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 17,373 ಕೋಟಿ (10,63%). ಉನ್ನತ ಶಿಕ್ಷಣಕ್ಕೆ 4651 ಕೋಟಿ (2,84%) ನೀಡಲಾಗಿತ್ತು. ಒಟ್ಟಾರೆ ಶಿಕ್ಷಣಕ್ಕೆ12% ಹಣ ನೀಡಲಾಗಿತ್ತು. ಈ ಬಾರಿಯ ಬಜೆಟ್ ಗಾತ್ರ 1,86,596 ಕೋಟಿ ಇದ್ದು, ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 18,266 ಕೋಟಿ (9,78%). ಕಾಲೇಜು ಶಿಕ್ಷಣಕ್ಕೆ 4401 ಕೋಟಿ (2,35%) ಒಟ್ಟಾರೆ 12% ಹಣ ಮೀಸಲಾಡಿಲಾಗಿದೆ. ಕಳೆದ ಬಾರಿಯ ಬಜೆಟ್ ಗೆ ಹೋಲಿಕೆ ಮಾಡಿದರೆ ಪ್ರಾಥಮಿಕ ಶಿಕ್ಷಣಕ್ಕೆ 0.85% ಹಣ ಕಡಿತ ಮಾಡಲಾಗಿದೆ. ಉನ್ನತ ಶಿಕ್ಷಣಕ್ಕೆ 0.49% ಹಣವನ್ನು ಕಡಿತ ಮಾಡಲಾಗಿದೆ. ಹಣ ಕಡಿತ ಮಾಡಿರುವ ಸರಕಾರದ ನಡೆಯನ್ನು SFI ವಿರೋಧಿಸುತ್ತದೆ.

ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲೀಷ ಭಾಷೆಯನ್ನು ಕಲಿಸಲು ಆಸಕ್ತಿ ತೋರಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು ಅದನ್ನು ಬಿಸಿಯೂಟಕ್ಕೂ ವಿಸ್ತರಿಸಬೇಕಿತ್ತು. ಐಟಿ ಸ್ಕೂಲ್ ಬಗ್ಗೆ ಆಲೋಚಿಸಿರುವ ಸರಕಾರ ಸೌಲಭ್ಯಗಳಿಲ್ಲದೆ ನರಳುತ್ತಿರುವ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು, ಕಟ್ಟಡ ಇತ್ಯಾದಿಗಳ ಬಗ್ಗೆ ನಿರ್ದಿಷ್ಟ ಪ್ರಸ್ಥಾಪಗಳಿಲ್ಲ.

ಕೌಶಲ್ಯಾಭಿವೃದ್ಧಿ ಬಗ್ಗೆ ಹೇಳಿರುವ ಸರಕಾರ ಶಾಲೆ ಬಿಟ್ಟ ಮಕ್ಕಳನ್ನು ವಾಪಸ್ಸು ಕರೆ ತರುವುದು ಹೇಗೆ ಎಂಬುದನ್ನು ಪ್ರಸ್ತಾಪಿಸಿಲ್ಲ. ಜನಸಾಮಾನ್ಯರಿಗೆ ಅನುಕೂಲಕ್ಕಾಗಿ ಕ್ಯಾಂಟೀನ್ ತೆರೆಯಲು ಮುಂದಾಗಿರುವ ಸರಕಾರಕ್ಕೆ ಶಾಲಾ_ಕಾಲೇಜ್_ವಿ.ವಿ ಕ್ಯಾಂಪಸ್ ಗಳಲ್ಲಿ ಕ್ಯಾಂಟೀನ್ ಆರಂಭಿಸುವ ಚಿಂತನೆ ನಡೆಸಿಲ್ಲ.

ಹಾಸ್ಟಲ್ ವಿದ್ಯಾರ್ಥಿಗಳ ನಿರ್ಲಕ್ಷ್ಯ:

ಹಾಸ್ಟೇಲ್ ವಿದ್ಯಾರ್ಥಿಗಳನ್ನು ಬಜೆಟ್ ನಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಕೇವಲ 100ರೂ ಆಹಾರ ಭತ್ಯೆ ಹೆಚ್ಚಳ ಮಾಡಿದೆ. ಮೆಟ್ರಿಕ್ ಪೂರ್ವ ಹಾಸ್ಟೇಲ್ ಗಳಿಗೆ ಈ ಮುಂಚೆ 1300ರೂ ನೀಡಲಾಗುತ್ತಿತ್ತು 100ರೂ ಹೆಚ್ಚಳದೊಂದಿಗೆ 1300 ರೂ ಆಗುತ್ತದೆ. ಮೆಟ್ರಿಕ್ ನಂತರದ ಹಾಸ್ಟೇಲ್ ಗಳಿಗೆ ಈ ಮುಂಚೆ 1400ರೂ ನೀಡಲಾಗುತ್ತಿತ್ತು. 100ರೂ ಹೆಚ್ಚಳ ದೊಂದಿಗೆ 1500 ರೂ ಆಗಿದೆ. ಬೆಲೆ ಏರಿಕೆಯ ಈ ಸಂಧರ್ಭದಲ್ಲಿ ಕಡಿಮೆ ಹಣದಲ್ಲಿ ಮಕ್ಕಳಿಗೆ ಗುಣ ಮಟ್ಟದ, ಪೌಷ್ಟಿಕಾಂಶದಿಂದ ಕೂಡಿರುವ ಆಹಾರವನ್ನು ಕೊಡಲು ಸಾಧ್ಯವಿಲ್ಲ.

ಹುಸಿಯೋಜನೆ: ಪ್ರತಿ ಭಾರಿಯಂತೆ ಈ ಬಾರಿಯು ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಕಳೆದ ಬಾರಿಯ ಯೋಜನೆಗಳು ಹಳ್ಳ ಹಿಡದಿರುವುದನ್ನು ಮರೆತಿರುವ ಸರಕಾರ "ಶಿಕ್ಷಣ ಕಿರಣ, ವಿಶ್ವಾಸ ಕಿರಣ, ಶರಣರ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸವುದಾಗಿ ಪ್ರಸ್ಥಾಪಿಸಲಾಗಿದೆ. ಇದನ್ನಾದರೂ ಜಾರಿ ಮಾಡಲು ಸರಕಾರ ಮುಂದಾಗಬೇಕಿದೆ. ಹೊಸದಾಗಿ IಖಿI ಮತ್ತು ಪಾಲಿಟೆಕ್ನಿಕ್, ಎಂಜನೀಯರಿಂಗ್, ಮೆಡಿಕಲ್ ಕಾಲೇಜ್, ಹಾಸ್ಟೇಲ್ ಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಸೌಲಭ್ಯವನ್ನು ನೀಡಿ ಇವಗಳನ್ನು ಆರಂಭಿಸದಿದ್ದಲ್ಲಿ ಮತ್ತೆ ಮುಚ್ಚುವ ಹಂತ ತಲುಪುತ್ತವೆ. ಬರಗಾಲವಿರುವ ಕಾರಣ ಎಲ್ಲಾ ಹಂತದ ಶಿಕ್ಷಣವನ್ನು ಉಚಿತವಾಗಿ ನೀಡುವ ಬಗ್ಗೆ ಪ್ರಸ್ಥಾಪಿಸಿದ್ದರೆ ಉತ್ತಮವಾಗಿರುತ್ತಿತ್ತು. ರೈತರ ಸಾಲ ಮನ್ನಾ ಮಾಡದ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿರುವ "ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಪ್ರಸ್ತಾಪದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಋಣವನ್ನು ತೀರಿಸಿದೆ.

ಒಟ್ಟಾರೆ ರಾಜ್ಯ ಸರಕಾರ ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯ ಮಾಡುವ ಮೂಲಕ ವಿದ್ಯಾರ್ಥಿ ವಿರೋಧಿ ಬಜೆಟ್ ಆಗಿದ್ದು ಮುಂಬರುವ ಚುನಾವಣೆಯ ಪ್ರಣಾಳಿಕೆಯಂತೆ ಕಾಣುತ್ತಿದೆ ಎಂದು  SFI ಆರೋಪಿಸುತ್ತಿದೆ.

ಬಜೆಟ್ - ಮುಖ್ಯ ಅಂಕೆ ಸಂಖ್ಯೆಗಳು

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ

                                                  2015-16(%)           2017-18(%)    
ರಾಜ್ಯ ಜಿಡಿಪಿ ಬೆಳವಣಿಗೆ ದರ                   7.3                          6.9                       ಇಳಿಕೆ
ಕೃಷಿ ವಲಯ ಬೆಳವಣಿಗೆ ದರ                                                   1.5    
ಕೈಗಾರಿಕೆ  ವಲಯ ಬೆಳವಣಿಗೆ ದರ            4.9                          2.2                       ಇಳಿಕೆ
ಸೇವಾ ವಲಯ ಬೆಳವಣಿಗೆ ದರ                10.4                        8.5                        ಇಳಿಕೆ

                            ಬಜೆಟ್ ಸ್ವೀಕೃತಿ ಮತ್ತು ವೆಚ್ಚ 2017-18
ಸ್ವೀಕೃತಿಗಳು                ಕೋಟಿ ರೂ.                 ವೆಚ್ಚ                                  ಕೋಟಿ ರೂ
ರಾಜಸ್ವ                        1,44,892                 ರಾಜಸ್ವ                              1,44,755
ಸಾಲ                              37,092                 ಸಾಲ ಮರುಪಾವತಿ                 33,630
ಬಂಡವಾಳ                            135                 ಬಂಡವಾಳ                              8,176
ಒಟ್ಟು ಸ್ವೀಕೃತಿಗಳು          1,82,119                ಒಟ್ಟು ವೆಚ್ಚಗಳು                    1,86,561

ಒಟ್ಟು ಸಾಲ 2.08 ಲಕ್ಷ ಕೋಟಿ ರೂ., ಮುಂದಿನ ವರ್ಷದ ಹೊತ್ತಿಗೆ 2.42 ಲಕ್ಷ ಕೋಟಿ ರೂ.
ವಿತ್ತೀಯ ಕೊರತೆ 33,359 ಕೋಟಿ ರೂ. -  ರಾಜ್ಯದ ಆಂತರಿಕ ಉತ್ಪನ್ನದ ಶೇ. 2.61
2017-18ರ ಕೊನೆಯಲ್ಲಿ 2,42,420 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.18.93
(ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ 2017-18ಕ್ಕೆ ನಿಗದಿಪಡಿಸಿರುವ ಶೇ.25 ರ ಮಿತಿಯೊಳಗಿದೆ)